ಸಾಯಬೇಕು

ಕಾವ್ಯ ಸಂಗಾತಿ

ಸಾಯಬೇಕು

ಪಾ.ಶ್ರೀನಿವಾಸ

ಮುಂಜಾನೆ ಅರಳಿ
ಸೂರ್ಯನ ಸಖ್ಯ ಬೆಳೆಸಿ
ಮುದುಡಿ ಹೋಗುವ
ಹೂವಿನಂತೊಮ್ಮೆ
ಸಾಯಬೇಕು.

ತಾನೇ ಕಟ್ಟಿದ
ಆಸೆಗಳ ಬಲೆಯೊಳಗೆ
ಸಿಲುಕಿ ಜೇಡ
ಕೊನೆಯುಸಿರೆಳೆವಂತೊಮ್ಮೆ
ಸಾಯಬೇಕು.

ಚಿಗುರೊಡೆದು
ಗಿಡದಲ್ಲರಳಿ
ಉದುರಿ ಹೋಗುವ
ಎಲೆಯಂತೊಮ್ಮೆ
ಸಾಯಬೇಕು.

ನನ್ನೊಳಗಿನ
ಅಹಂ ಅಳಿದು, ಕತ್ತಲೆ ಕಳೆದು
ಪೂರ್ವಾಗ್ರಹ ಮುರಿದು
ಜೀವನ ಅರಿಯಲು, ಅರಿತು ಬಾಳಲೊಮ್ಮೆ
ಸಾಯಬೇಕು.


Leave a Reply

Back To Top