ಗಜಲ್

ಕಾವ್ಯ ಸಂಗಾತಿ

ಗಜಲ್

ಮುತ್ತು ಬಳ್ಳಾ ಕಮತಪುರ

ಮೋಡ ಕರಗಿ ಮಳೆಯ ಹನಿಗಳ ಕಲರವದಲಿ ನಿನ್ನ ಹೆಸರು
ನೆಲದವ್ವ ಬೆವತಾಗ ಎದೆಯ ಸುವಾಸನೆಯಲಿ ನಿನ್ನ ಹೆಸರು

ಚುಕ್ಕಿ ಚಂದ್ರ ಬೆಳಕಿನಲಿ ಹಾಡಿನ ಪಲ್ಲವಿಯಲಿ ನಿನ್ನ ಹೆಸರು
ಹರಿಯುವ ಸುಜಲದ ಜುಳು ಜುಳು ನಾದದಲಿ ನಿನ್ನ ಹೆಸರು

ಬಳಪದ ಕಲ್ಲ ಕೆತ್ತನೆಯ ನವಿರಾದ ಶಿಲೆಯಲಿ ನಿನ್ನ ಹೆಸರು
ಮನದೊಳ ಜ್ವಾಲೆ ಝಳಪಿಸೆ ಹಿಮಾಗ್ನಿಯಲಿ ನಿನ್ನ ಹೆಸರು

ಬೆಳೆದು ನಿಂತ ಬೆಳೆಗಳ ಹಸುರಿನ ಪೈರುಗಳಲಿ ನಿನ್ನ ಹೆಸರು
ಎಲೆಯ ತೊಟ್ಟಿನಲಿ ಜೀವದೊಸಗೆ ನಿಲ್ಲುವಲಿ ನಿನ್ನ ಹೆಸರು

ಬೆಳಕಿನಲಿ ಮೂಡುತ್ತಿರುವ ನೆರಳು’ಮುತ್ತು’ರೂಪ ಸೃಷ್ಟಿಸಿದೆ
ಕ್ಷಣದ ಕೋಪವ ಅರಿತು ಬಾಳ್ವೆ ಮರೆಯುವಲಿ ನಿನ್ನ ಹೆಸರು


Leave a Reply

Back To Top