ಗಜಲ್
ರೆಕ್ಕೆ ಬಲಿಯದ ಮರಿ ಪಕ್ಷಿಗೆ ನಭಕೆ ಜಿಗಿಯುವ ಚಿಂತೆ
ಬಳ್ಳಿಗೆ ಮರವ ತಬ್ಬಿ ಹುಲುಸಾಗಿ ಬೆಳೆಯುವ ಚಿಂತೆ
ಕರಿಮುಗಿಲು ಬೆಟ್ಟ ಚುಂಬಿಸಿ ಸುರಿಸುತಿದೆ ಜಲ ಮುತ್ತು
ಹನಿಗೆ ಕಡಲು ಸೇರಲು ನದಿಯಾಗಿ ಹರಿಯುವ ಚಿಂತೆ
ಸುಂದರ ಕನಸು ಹೊತ್ತ ಹಕ್ಕಿ ಹಾರುತಿದೆ ಬಾನಲಿ
ನೀರಲಿ ನಿಂತ ಕೊಕ್ಕರೆಗೆ ಮೀನು ಹಿಡಿಯುವ ಚಿಂತೆ
ಮರಳಲಿ ಮೊಟ್ಟೆ ಹುದುಗಿಟ್ಟು ತೊರೆದು ಹೋಯಿತು ಜೀವ
ಆಮೆಯ ಮರಿಗೆ ತೆವಳುತ ಸಮುದ್ರಕೆ ಇಳಿಯುವ ಚಿಂತೆ
ಹಗಲಿನಲಿ ಬೆವರು ಸುರಿಸುತಾ ಚಡಪಡಿಸಿತು ಉಸಿರು
ಕತ್ತಲೆಯ ಅನುರಾಗದಲಿ ಮೌನ ಮುರಿಯುವ ಚಿಂತೆ
ಮುಗಿಲಲಿ ಬಿಳಿ ಮೋಡವು ಚಿತ್ರಿಸಿದೆ ಚಿತ್ತಾರಗಳ
ಮುಂಗಾರು ಮಳೆಗೆ ನೆನೆದ ನವಿಲಿಗೆ ಕುಣಿಯುವ ಚಿಂತೆ
ಬಾಳ ಬಂಡಿ ಪಯಣ ಮುಗಿಯುತಾ ಬಂದಿದೆ ಇಹದಲಿ
ಬದುಕಲಿ ಸಿಗದ ಒಳ “ಪ್ರಭೆ” ಯನ್ನು ಪಡೆಯುವ ಚಿಂತೆ
ಪ್ರಭಾವತಿ ಎಸ್ ದೇಸಾಯಿ
ಮಕ್ತ ಆಧ್ಯಾತ್ಮಿಕ ಕತೆಯ ಹಾದಿಗೆ ಸೆಳೆಯುತ್ತದೆ..ಗಜಲ್ ಚೆಂದ ಅಮ್ಮ… ನಿಮ್ಮ ಅಬಾಟೇ.
ಚಿಂತೆಯ ಚಿತೆಮೇಲೆ ಏರಿದೆ ಜೀವ
ಒದ್ದಾಡತೈತಿ ಹುಡುಕಾಟ ದಲಿ ಶಿವ
ಶವ ವಾಗಿ ಹೋಗುವ ಮುನ್ನ ಇದಕೆ
ಅರಿಯ ಬೇಕಾಗಿದೆ ಏನೆಂಬುದು ಭವ
ಅಣ್ಣವರ ವಚನ ಓದಿದಂತೆ ಅನಿಸಿತು ಗಜಲ್ ಅಭಿನಂದನೆ ಹಾಗೂ ಧನ್ಯವಾದಗಳು ನಿಮಗೆ