ಬಂದಿ

ಕಾವ್ಯ ಸಂಗಾತಿ

ಬಿ.ಶ್ರೀನಿವಾಸ

ಮಾತು ಬರುವ ಮುನ್ನವೇ
ಹೊತ್ತೊಯ್ದು ಬಿಡುತ್ತವೆ
ತೇಲಿ ಬಂದೆರಗುವ ಅಲೆಗಳು

ಯಾರ ಜಪ್ತಿಗೂ ಸಿಗದ ಸೂರ್ಯ ಚಂದ್ರರೇ ಪುಣ್ಯವಂತರು

ಕಾಲೊದೆತ…
ಕೈದುಂಬಿದ ಸುಟ್ಟ ಗಾಯ
ಸುಳ್ಳೆಂದು ಸಾಬೀತಾಗಿ ಇನ್ನಷ್ಟೇ ಅರಳಬೇಕಿದೆ ನ್ಯಾಯ
ಘಮಘಮಿಸಲೇಬೇಕೆಂದೇನಿಲ್ಲ

ಬಾಯಾರಿದ ಎದೆಯಲಿ
ಕನಸುಗಳು ಬತ್ತಿಹೋಗುತ್ತವೆ.

ಭೂಮಿ,ಬಾನು,ಸೂರ್ಯ ಚಂದ್ರ ತಾರೆಯರಿಗೂ ಬೇಕಿಲ್ಲಿ ಬೆಳಕು!

ಒಂದು ಕಾಲದ ಪ್ರಿಯ
ಆ ಬದಿಗೆ,
ಪ್ರಿಯತಮೆ
ಈ ಬದಿಗೆ…
ನಡುವೆ
ಮಲಗಿದೆ ಬದುಕು
ನಿಟ್ಟುಸಿರು ಚೆಲ್ಲುತ

ಕೆಲವೊಮ್ಮೆ
ಬರೆಯುವಾಗ ಪೆನ್ನಿನೊಳಗೂ
ಏನೂ ಮೂಡುವುದಿಲ್ಲ ಕಣ್ಣ ನೀರು ಸೇರಿ
ಮತ್ತೊಮ್ಮೆ….
ರಕ್ತ ಸೇರಿ
ಕೆಂಪಾಗುತ್ತವೆ ಅಕ್ಷರ

ಕಟಕಟೆಯಲಿ ನಿಂತ ಹುಡುಗನಿಗೂ
ಪಾಠಹೇಳುವ ಮೇಷ್ಟರಿಗೂ
ಹೂ ಮಾರುವ ಮುದುಕಿಗೂ
ಡಾಕ್ಟರಿಗೂ…..ಒಂದೇ ಪಾಠ!

ಒಂದೊಂದು ಮೆಟ್ಟಿಲ ಮೇಲೂ ಏಸೊಂದು ಬಿಕ್ಕುಗಳ ಸದ್ದು!

ಕೋರ್ಟಿನ ಮೆಟ್ಟಿಲೇರುವಾಗಲೇ ಹರಳುಗಟ್ಟಿರುತ್ತವೆ ಕಣ್ಣ ಹನಿಗಳು!

ಬದುಕು ಉಳಿದು
ಕೋರ್ಟಿಗೆ
ದೂರವಾದ ದಿನ
ಯುದ್ಧಗಳಿರುವುದಿಲ್ಲ

ಕಟಕಟೆಗಳ ಬಾಹುಗಳಲಿ ಬಂದಿಯಾಗಿವೆ
ಎಷ್ಟೋ ಜನರ ನಗು

ಗೋಡೆಯಲಿ
ನೇತು ಬಿದ್ದ ಗಾಂಧಿ
ಕೂಡ
ಇಲ್ಲಿ
ನಿತ್ಯ ಬಂದಿ!


2 thoughts on “ಬಂದಿ

  1. ನೈಜತಯಲಿ ಸುಳ್ಳುಗಳ
    ಅಲೆಗಳಲಿ ತೇಲುವ
    ಮೆಟ್ಟಿಲುಗಳ ಮೇಲಿಂದ ….

    ಸುಂದರವಾಗಿದೆ ಸರ್

Leave a Reply

Back To Top