ಮೋಹ-ವ್ಯಾಮೋಹ

ಕಾವ್ಯ ಸಂಗಾತಿ

ಮೋಹ-ವ್ಯಾಮೋಹ

ಶಾಲಿನಿ ಕೆಮ್ಮಣ್ಣು

ಬಾಲ್ಯದಲ್ಲಿ ಅಮ್ಮ ಎಂದರೆ ಅದೇನೋ ಅತಿ ಮೋಹ
ಅಪ್ಪ-ಅಮ್ಮ ನನ್ನ ಹೆಚ್ಹು ಪ್ರೀತಿಸಬೇಕೆಂಬ ವ್ಯಾಮೋಹ

ಶಾಲೆಯಲ್ಲಿ ಎಲ್ಲರ ಮುಂದೆ ಶಹಭಾಷ್ ಅನಿಸಿಕೊಳ್ಳುವ ಆತುರ
ಎಲ್ಲರಿಗಿಂತ ಮೊದಲು ಟೀಚರ್ ಪ್ರಶ್ನೆಗೆ ಉತ್ತರಿಸುತ್ತಿದ್ದೆ ಸರಸರ
ಹೊಸ ಬಟ್ಟೆ ಚಪ್ಪಲಿ ಬ್ಯಾಗ್ ಬಂದ ದಿನ ಏನೋ ಹೆಮ್ಮೆಯ ಅಬ್ಬರ

ಉತ್ತರ ಪತ್ರಿಕೆಯಲ್ಲಿ ಗೆಳೆಯರ ಮಾರ್ಕ್ ಇಣುಕುವ ಗೀಳು
ಅವರಿಗಿಂತ ಹೆಚ್ಚು ಗಳಿಸಿದರೆ ಹರ್ಷದ ಹೊನಲು
ಅರೆ ಅಂಕ ಕಡಿಮೆಯಾದರೂ ಆತಂಕ, ದಿಗಿಲು

ಬೆಳೆಯುತ್ತಾ ಎಲ್ಲದರಲ್ಲೂ ಮುನ್ನುಗ್ಗುವ ಛಲ
ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ಸಿಂಗರಿಸಿಕೊಳ್ಳುವ ಚಪಲ
ಯುವಕರ ಕುಡಿನೋಟ ವ ಸೆಳೆಯುವ ಹಂಬಲ

ಕೆಲಸದಲ್ಲಿ ಮೇಲ್ಪಂಕ್ತಿ ಸಾಧಿಸಲು ಬಿರುಸಿನ ಮೇಲಾಟ
ಕಾರ್ಯದಲ್ಲಿ ಉತ್ತಮ ಎನಿಸಿಕೊಳ್ಳಲು ಪರದಾಟ
ಪ್ರಗತಿ ರೇಖೆಯ ದಾಟಲು ಎಲ್ಲಿಲ್ಲದ ಹುಚ್ಚು ಹೋರಾಟ

ಬದುಕು ಕೊಟ್ಟ ಅನುಭವಗಳು ಸಾಲದೆ ಆತಂಕ
ಪ್ರೇಮದ, ಕಾಮದ ಪರಾಕಾಷ್ಠೆಯ ತವಕ
ಇನ್ನೂ ಬೇಕು ಮತ್ತೂ ಬೇಕು ಎಂಬ ಸ್ವಾರ್ಥ ಅನೇಕ

ಸಂಬಂಧಗಳ ಸೆಳೆತ, ಭಾವಗಳಿಗೆ ಸಿಗದ ತುಡಿತ
ಭಾವನೆಗಳಿಗೆ ಕನ್ನಡಿಯಾಗುವ ಜೊತೆಗಾರನ ಬೇಟೆ ಸತತ
ನಾನೊಂದು ಬಗೆದರೆ ಬೇರೆ ಬರೆದಿರುವ ಹಣೆಬರಹ ಆತ

ಎಲ್ಲದರಲ್ಲಿ ಸ್ಪರ್ಧೆ,ಯಶಸ್ಸಿಗಾಗಿ ಜುಗಲ್ಬಂದಿ ಮೇಳ
ಗಳಿಕೆಯಲ್ಲಿ ಅತೃಪ್ತಿ, ಸರಿ ತಪ್ಪುಗಳ ಗೊಂದಲ
ಅವಮಾನ ಅಪಮಾನಗಳ ಡೋಲಾಯಮಾನ ಜಾಲ

ತನ್ನಿಷ್ಟದಂತೆ ರಚಿಸಿದರೂ ಪರಮಾತ್ಮಎಲ್ಲವ ಕರುಣಿಸಿದನು
ಈ ಬರಿದಾಗದ ಮೋಹದ ಬುತ್ತಿಯ ಹರಸಿ ಕೊಟ್ಟಿಹನು
ಇದ್ದದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಜೀವನವನು


Leave a Reply

Back To Top