ಚಳಿಯ ಜೊತೆಯಲ್ಲಿ

ಕಾವ್ಯಯಾನ

ಚಳಿಯ ಜೊತೆಯಲ್ಲಿ

ಸಂತೆಬೆನ್ನೂರು ಫೈಜ್ನಟ್ರಾಜ್

ಆತ್ಮಹತ್ಯೆ ಮಾಡಿಕೊಂಡ ಎಷ್ಟೋ
ಹಣ್ಣೆಲೆಗಳು
ಮರದ ಬುಡದಿ ಚಳಿಯ ದೂರಿ
ಮೌನ ಮುರಿದಿವೆ

ಅವಳು ಅಷ್ಟೇ
ಕಾಲ ಕಿರು
ಬೆರಳ
ಸತ್ತ ಉಗುರಿನ ಮಾಸಲು ಬಣ್ಣಕ್ಕೆ
ಎದೆಯ ಹಾಡು ಸಾಕೆಂದು
ಮಾಲೀಸು ಮಾಡುತ್ತಿದ್ದಾಳೆ ಚಳಿ ಮೌನ!

ಬಾಚಿ ತಳುಕಾದ
ದೇಹಗಳು
ಮರೆತ ಮಗ್ಗಿಯ ಮತ್ತೆ
ತಪ್ಪು ತಪ್ಪಾಗಿ ಉರು ಹೊಡೆಯುತ್ತಿವೆ

ನಕ್ಕ ಚಳಿಯೂ ಕೈ ಕಟ್ಟಿ ದೂರ!
ನೀರೊಳಗಿನ ಕಪ್ಪೆ ಕೂಡ
ಒಲವ ಕಾಯುವ ತೆರದಿ ಬಿಸಲ ಬಂಡೆ
ಹುಡುಕುತಿದೆ
ಮುಲಾಜಿನ ಚಳಿ ಒಳಗೇ ಮುಸು ಮುಸು!

ಗೆಳತೀ
ಈಗಾದರೂ ಬಿಡು ಮುನಿಸು
ಅರ್ಧ ಮೌನವ ಪೂರ್ಣ ಮಾಡಿ
ಮಾತು ಮರೆತ
ಋತುವಿಗಿದೋ ಪ್ರೀತಿ ಕವುದಿ ಹೊದ್ದಿಸುವ
ಬಾ

ಚಳಿ ಅಗಲಿಕೆಗಲ್ಲ ಎಂಬುದು

ಅಗ್ಗಿಷ್ಟಿಕೆಯಾಣೆಗೂ ಸತ್ಯ

ಒಲವಿದೆ
ಕವಿತೆಯಿದೆ
ಬೆರಳ ಬಂಧ ಬೇಕು ಚಾಚು
ಚಳಿಗೆ ಓಡೋ ನದಿಯ ವಿಳಾಸ ನೀಡುವ

ಚಳಿಯೆಂದರೆ ಇಷ್ಟೇ
ನಾನು , ನೀನು ಮತ್ತು ಯಾರೂ ಓದದ ಪದ್ಯ


7 thoughts on “ಚಳಿಯ ಜೊತೆಯಲ್ಲಿ

  1. ಚಳಿ ಓಡಿಸುವಂತಹ ಕವಿತೆ ಚೆನಾಗಿದೆ ಅಣ್ಣಾ

  2. ಚಂದದ ಕವನ ಮೇಷ್ಟ್ರೇ….
    ಮಾಗೀ ಚಳಿಯಲ್ಲಿ ಬೆಂಕಿ ಹಾಕಿ , ಹೊತ್ತಿದೆ ಉರಿಗೆ ಕೈ ಕಾಸಲು ಚಾಚಿದ ಬಾಹುಗಳ ಆಲೋಚನೆಯಂತೆ

Leave a Reply

Back To Top