ಕಾವ್ಯ ಸಂಗಾತಿ
ಈ ರಕ್ಕಸ ಕೆಂಗಾಳಿ
ಶಂಕರಾನಂದ ಹೆಬ್ಬಾಳ
ಬಂತೈ ಬಂತೈ…
ಸಾವಿನ ಸುಳಿಯಿದು
ಕಾಲನ ಕೂಪವಿದು
ಬಡವರ ಒಡಲಿನ
ಬಡಬಾನಲವಾಗಿ
ನೆತ್ತರು ಕಕ್ಕಿ ಸಾಗುತ್ತಿದೆ
ಈ ರಕ್ಕಸ ಕೆಂಗಾಳಿ…..!!
ಕಾಲಗ್ನಿ ರುದ್ರನಾಗಿ
ಉರಿಉರಿ ಕಣ್ಣಾಗಿ
ತನ್ನೊಡಲ ತೆಕ್ಕೆಗೆ
ಸಿಕ್ಕಿದ್ದನ್ನು ಸೆಳೆಯುತ್ತ
ರೋಷದಗ್ನಿಯನು
ಹುಡಿಯಂತರಚಿದೆ
ಈ ರಕ್ಕಸ ಕೆಂಗಾಳಿ…!!
ಗಗನದೆತ್ತರ ಆಕಾರ,
ಭೂಮ್ಯಾಕಾಶವನು
ಒಂದಾಗಿಸಿ
ನಯನದಿ ಮಾಸದ
ಚಿತ್ರವ ಮೂಡಿಸಿ
ಭುರ್ ಭುರ್ ಎನ್ನುತ
ಬೀಸುತ ನಿಂತಿದೆ
ಈ ರಕ್ಕಸ ಕೆಂಗಾಳಿ…!!
ಬುಗುರಿಯ ತೆರದಲಿ
ತಿರುಗುತಿದೆ
ಹಗುರ ವಿಮಾನದಂತೆ
ತೇಲುತಲಿದೆ
ರಂಗನರ್ತಕಿಯಂತೆ
ಗೆಜ್ಜೆ ಕಟ್ಟಿ ತಕಥೈತಂತೆ
ತಕ್ಕಿಟ ಧರಿಕಿಟವೆನ್ನುತ
ತಾಳಹಾಕುತಿದೆ
ಈ ರಕ್ಕಸ ಕೆಂಗಾಳಿ…!!
ಊರನು ಮಸಣವಾಗಿಸಿ
ತೇರುಬೀದಿಯೊಳ್
ಕುಣಿಕುಣಿದು
ಹರಿವ ನೀರಲ್ಲಾಡುತ್ತ
ಭಯಂಕರ ಕಾಳರಾತ್ರಿಯ
ಕೆಂಗುರಿಗಣ್ಣಲಿ ಗರ್ವದಿ
ಮೆರೆಯುವ ಮದಗಜದಂತೆ
ಬರುತ್ತಿದೆ ಆಹಾ…ಆಹಾ…!
ಈ ರಕ್ಕಸ ಕೆಂಗಾಳಿ….!!