ಕಾವ್ಯ ಸಂಗಾತಿ
ಗಜಲ್
ಅಶೋಕ ಬಾಬು ಟೇಕಲ್.
ಕಣ್ಣ ಮುಂದೆ ಮಿನುಗಿದ್ದ ತಾರೆಯೊಂದು ಮರೆಯಾಯಿತು
ಊರ ಮುಂದೆ ಜಿನುಗಿದ್ದ ಹೊಳೆಯೊಂದು ಬತ್ತಿ ಹೋಯಿತು
ಹೃದಯ ಹೃದಯ ಬೆಸದ ಭಾವಗಳೇ ಮೌನವಾಯಿತು ಈಗ
ಅರೆ ಘಳಿಗೆಯಲ್ಲಿ ಎದೆಗೆ ಗುಂಡೊಂದು ಸಿಡಿದಂತಾಯಿತು
ನೂರು ನೋವುಗಳೇ ಎದುರಿಗೆ ಬರಲಿ ಅಂಜದ ಗಂಡು ಅವ
ಗಾವುದ ಓಟಕ್ಕೆ ಮುಗ್ಗರಿಸಿ ಜೀವವೊಂದು ತೇಲಿ ಹೋಯಿತು
ಜಂಗಮ ವಾಣಿಯ ಕೊನೆ ಸವಿ ಮಾತುಗಳು ಇನ್ನೂ ಗುನುಗುತ್ತಿವೆ
ಇಂದೇಕೋ ಬದುಕಿನ ಬಣ್ಣದ ಕನ್ನಡಿಯೊಂದು ಚೂರಾಯಿತು
ತೊಟ್ಟ ಅರಿವೆಗೂ ನಂಟು ಸೇರದಾದೆ ಯಾರ ದೃಷ್ಟಿ ತಾಗಿತ್ತೋ
ಗಂಧ ಪರಿಮಳ ಸೂಸುವಲ್ಲೂ ಕಥೆಯೊಂದು ಬರೆದಾಯಿತು
ಊರ ಎದೆ ಎದೆಯಲ್ಲೂ ಪ್ರೀತಿ ದೀಪ ಬೆಳಗ ಹೊರಟಿದ್ದವನು
ಕೇಡುಗಾಲದ ಕಿಸೆಯೊಳಗೆ ಆರತಿ ತಟ್ಟೆಯೊಂದು ಭಗ್ನವಾಯಿತು
ಸಾವಿರ ಸ್ವಪ್ನಗಳು ಮನೆ ಮನದಲಿ ನಕ್ಕು ನಲಿಯುತ್ತಿವೆ ಅಬಾಟೇ
ಮಾಗಿ ಹಣ್ಣಾಗುವ ಮುನ್ನವೇ ಗೋರಿಯೊಂದು ಸೃಷ್ಟಿಯಾಯಿತು.