ಕಾವ್ಯ ಸಂಗಾತಿ
ನಂಟು
ಎಸ್. ವಿ. ಹೆಗಡೆ ..
ಒಂಟಿಕಾಲಲಿ ನಿಂತು ಬೇಟೆಗೆ
ಕಾದು ಕುಳಿತ ಬಕಪಕ್ಷಿಗೆ
ಯಾವುದೋ ಕೆರೆಯ ನಂಟು
ಸವೆದು ಹೋದ ಚಪ್ಪಲಿಗೆ
ಬೀದಿನಾಯಿಯ ನಂಟು
ರೆಕ್ಕೆ ಬಿಚ್ಹಿ ನಲಿದಾಡುವ ನವಿಲಿಗೆ
ಮೂಡಿ ಕಣ್ಮರೆಯಾಗುವ
ಮೋಡದ ಚಿತ್ತಾರದ ನಂಟು
ಕೊಕ್ಕು ಪುಕ್ಕವ ಕುಣಿಸಿ
ಇಂಚರ ಹಾಡುವ ಹಕ್ಕಿಗಳಿಗೆ
ವಿದ್ಯುತ್ ಸರಿಗೆಯ ನಂಟು ॥॥
ಯಾರದೋ ತೋಟದಲಿ ಯಾರೋ
ಬೆವರು ಸುರಿಸಿ ಬೆಳೆದ ದವಸ ದಾನ್ಯಕ್ಕೆ
ತಂದು ತಿಂದವರ ನಂಟು
ಬೆಳೆವ ಬಸಲೆ ಬಳ್ಳಿಗೆ ಬೇಲಿ ಚಪ್ಪರದ ನಂಟು ಸುಡುಬಿಸಿಲ ಡಾಂಬರು ರಸ್ತೆಯಲಿ
ಕೊಯ್ದು ಮಡಗಿದ ರಾಗಿಯ ತೆನೆಗಳಿಗೆ
ಯಾರದೋ ವಾಹನದ ಟಾಯರಿನ ನಂಟು
॥॥
ಆಡುವ ಮಾತು ಬೇರಾದರೇನು ಉಡುಗೆ ತೊಡುಗೆ ಊಟ ತಿಂಡಿ ಹಲವಾದರೇನು
ಸೂರ್ಯ ಸಂಜೆ ಸೇರುವ ಸಾಗರದ ತಳವೊ ಮಂಜು ಮುಸುಕಿದ ಕಾಡು ಶಿಖರವೋ
ಯಾವುದೋ ರೇಕಾಂಶ ಅಕ್ಷಾಂಶದಲಿ ಬಿದ್ದ
ರವಿಯಕಿರಣಗಳ ಆಲಿಂಗನದ ನಂಟು .
ರಕ್ತ ಸಂಬಂಧಕ್ಕೂ ಮೀರಿ ನೆರೆಯಾಗುವ ಮರೆಯಲಾಗದ ಗೆಳೆತನದ ನಂಟು.
॥॥
ಮದುವೆಯಾರಿದಾದರೇನು ಸತ್ತವರ ಆತ್ಮ ಎಲ್ಲಿ ಹೋದರೇನು. ಮೃಷ್ಠಾನ್ನ ಭೋಜನದ
ನಂಟು ಹೋಗಿ ಉಂಡವರಿಗುಂಟು. ॥॥
ನಿಂತ ನೀರಿನ ಕೆಸರು ಕೊಳದೊಳಗೆ ತಾವರೆಯ ನಂಟು. ಹರಿದು ಸಾಗರವ ಸೇರುವ ಹೊಳೆ ಹಳ್ಳಕ್ಕೆ ಕಲ್ಲು
ಬಂಡೆಗಳ ನಂಟು.
ನನ್ನೊಳಗೆ ನಾ ಸೇರಿದರೆ
ಜೀವಕ್ಕೆ ಆತ್ಮದ ನಂಟು. ನಿನ್ನ ನೀ ಮರೆತಾಗ ಸಂಸಾರದ ನಂಟು॥॥