ಅರಳು ಹೂವ್ವಿಗೆ ಗರ್ವವಿಲ್ಲ ;ನಮಗೇಕೆ

ಕಾವ್ಯ ಸಂಗಾತಿ

ಅರಳು ಹೂವ್ವಿಗೆ ಗರ್ವವಿಲ್ಲ ;ನಮಗೇಕೆ

ಮಧುಕಾರಗಿ

man and woman kissing

ತುಟಿಯಲ್ಲಿ
ಜಿನುಗುವ ಮಕರಂದ
ನುಣುಪು ಕೆನ್ನೆಗಳಲ್ಲಿ ನಿಗಿನಿಗಿ ಹೊಳಪು
ಮೈತುಂಬ ಪರಿಮಳದ ಘಾಟು!

ಆಹಾ ..!
ಇವರೆಲ್ಲ ಯಾರೆಂದಿರಿ ,
ಧರಣಿ ಮನೆಯ ಅಂಗಳದಲ್ಲಿ
ಕಂಗೊಳಿಸುವ
ಅರಳು ನಗೆಯ ಚೆಲುವೆಯರು !

ಮಲ್ಲಿಗೆ ಕನಕಾಂಬರ
ಸೇವಂತಿಗೆ ಸಂಪಿಗೆ ಗುಲಾಬಿ
ಇನ್ನೂ ಇತ್ಯಾದಿ ಇತ್ಯಾದಿ
ಲೆಕ್ಕವಿಲ್ಲ ಬಿಡಿ ,
ಇವರ ಚಿತ್ತಸೆಳೆವ ಬಣ್ಣದಂಗಿಗಳಿಗೆ!

ಮದುವೆಗೋ ಮಸಣಕೋ
ಕರೆದಲ್ಲಿಗೆ ಬರುತ್ತಾರೆ
ಯಾರಿಗೂ ತೋರಿದ ಪ್ರತಿರೋಧವಿಲ್ಲ
ಇವರು
ಮೌನದೊಳಗೆ ಕಟ್ಟಿಕೊಡಬಲ್ಲರು
ಅಂತಃಕರಣೆಯ
ಸಾವಿರ ಹೃದ್ಯಪದ್ಯಗಳನು !

ಮೊಗ್ಗಿನಲ್ಲೇ ಚಿವುಟಿಕೊಂಡ
ಕೈಗಳ ಮೇಲೆ ಎಂದೂ
ಅಸಮಧಾನಗೊಳ್ಳುವುದಿಲ್ಲ
ಎಂದಿನಂತೆಯೇ ಅರಳುತ್ತಾರೆ
ಹೂದಾನಿಯಲ್ಲಿ ಕುಳಿತು
ತಮ್ಮಷ್ಟಕ್ಕೆ ತಾವೇ ನಗುತ್ತಾರೆ ..

ಸಂಜೆಯಾದೆಡೆ ನಿರ್ಗಮಿಸಿ
ಬಿಡುತ್ತಾರೆ
ಜನ ಜಂಗುಳಿಯ ನಡುವಿನಿಂದ ;
ಮತ್ತದೇ ,
ತುಂಬು ನಗು ಧರಿಸಿಕೊಂಡು
ಮುಂಜಾನೆ ಎದುರುಗೊಳ್ಳುವುದನ್ನು
ಎಂದಿಗೂ ಮರೆಯುವುದಿಲ್ಲ
ಈ ಚೆಂದದ ಹುಡುಗಿಯರು !

ತನ್ನ ಹುಟ್ಟಿಗೆ
ತನ್ನ ರೂಪ -ಲಾವಣ್ಯಕ್ಕೆ
ತನ್ನ ಕಾರ್ಯವ್ಯಾಪ್ತಿಗಳಿಗೆ
ಜಗತ್ತಿನಲ್ಲಿ
ಎಷ್ಟೆಲ್ಲ ವೈಭವಗಳಿದ್ದರೂ,

ಬದುಕೊಂದನು
ತೀರಾ ಇಷ್ಟು
ಸಹಜವಾಗಿ ಬದುಕಬಹುದೆಂದು
ಬದುಕುತ್ತಲೇ ತಿಳಿಸಿಕೊಡುವ
ಅರಳು ಹೂವ್ವಿಗೆ ಗರ್ವವಿಲ್ಲ ;
ನಮಗೇಕೆ ?


One thought on “ಅರಳು ಹೂವ್ವಿಗೆ ಗರ್ವವಿಲ್ಲ ;ನಮಗೇಕೆ

Leave a Reply

Back To Top