ಸಂಕ್ರಾಂತಿ
ನಿರ್ಮಲಾ ಹೆಗಡೆ
ದಿಶೆಯಿದೀ ಸಂಕ್ರಾಂತಿಯೊಸಗೆಯು
ಯಶವನೈತಂದಿರುತಿರೆ||
ಕುಶದ ಅಂಚಿಗೆ ಮಿರುಗೆಯಿಬ್ಬನಿ
ವಶಕೆ ಮರುಳಾಗೀ ಧರೆ||
ಪಥವ ಬದಲಿಸಿ ರವಿಯು ರಶ್ಮಿಯ
ಗತಿಯ ಸಾರುವ ಭುವಿಯಲಿ|
ಉತ್ತರಾಯಣ ಪರ್ವಕಾಲದಿ
ಸುತ್ತ ಸಂತಸ ಸವಿಯಲಿ||
ನವ್ಯದೇಳಿಗೆ ಸಿರಿಯ ಸುಗ್ಗಿಯು
ದಿವ್ಯ ಷಡುರಸ ಧರಣಿಗೆ|
ಭವ್ಯ ಬಾನಂಗಣದ ಚೆಲುವಿಕೆ
ಕಾವ್ಯಸಂಚಯ ಭರಣಿಗೆ||
ಮಾಗಿ ಚಳಿಯನ್ನೋಡಿಸುವ ಬಗೆ
ಬೀಗಿ ಸಂಭ್ರಮ ಮಕರಕೆ|
ನೀಗಿ ಕಹಿಘಳಿಗೆಗಳ ಸಿಹಿಯನು
ಬಾಗಿ ಬಾಚುತ ಹಂಚಿಕೆ||
ತೂಗಿ ತೊನೆಯುವ ಹೊಂಗೆಗರಿಗಳು
ಕೋಗಿಲೆಯ ಸ್ವರದಿಂಚರ|
ರಾಗದೊಲವಿಗೆ ತಾಳ ತಟ್ಟುವ
ಭಾಗವಿದುವೇ ಸುಮಧುರ||