ಲೇಖನ

ಕನ್ನಡ ಕನ್ನಡ ಬರ‍್ರೀ ನಮ್ಮ ಸಂಗಡ

  ನಾಡುಕಂಡ ಶ್ರೇಷ್ಠಕವಿ, ನಾಟಕಕಾರ, ಕನ್ನಡದ ಹೋರಾಟಗಾರ ಶ್ರೀ. ಚಂದ್ರಶೇಖರ ಪಾಟೀಲರು ನಮ್ಮನ್ನೆಲ್ಲಾ ಅಗಲಿದ್ದಾರೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವೆಂದೇ ಹೇಳಬೇಕು. 

 ಚಂಪಾ ಎಂದೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಪಾಟೀಲರು ಹಾವೇರಿಯ ಮುನಿಸಿಪಲ್ ಹೈಸ್ಕೂಲಿನಲ್ಲಿದ್ದಾಗಲೇ ಕವನ ಬರೆಯುವ ಆಸಕ್ತಿ ಮೂಡಿಸಿಕೊಂಡಿದ್ದರು.  ಕನ್ನಡದ ಕವಿ, ಹೋರಾಟಗಾರ ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ನಾಟಕಕಾರ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ೧೯೩೯ರ ಜೂನ್ ೧೮ ರಂದು. ಹೈಸ್ಕೂಲಿನಲ್ಲಿದ್ದಾಗ ಸಿಕ್ಕ ಗುರುಗಳಿಂದ ಪ್ರಭಾವಿತರಾಗಿ ಕವನಗಳನ್ನು ಬರೆಯುವುದನ್ನು ಪ್ರಾರಂಭಿಸಿದರು. ಮುಂದೆ ಧಾರವಾಡದ ಕಾಲೇಜಿಗೆ ಬಂದಾಗ ಅಲ್ಲಿ ನಮ್ಮ ನಾಡಿನ ಜ್ಞಾನಪೀಠ ಕವಿಗಳಾದ ವಿ.ಕೃ.ಗೋಕಾರ ನವ್ಯಕಾವ್ಯಗಳಿಂದಲೂ ಪ್ರಭಾವಿತರಾಗಿ ಬರೆದ ಹಲವಾರು ಕವಿತೆಗಳು `ಪ್ರಪಂಚ' ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.  ಮುಂದೆ ಉದಯೋನ್ಮಖರಿಗಾಗಿ ಕವನ ಮಂಡಲ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.


 ಅವರ ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಚರಿಪ ನಾದವೋ ಹಾಡು ಹಕ್ಕಿಯೋ' ಮುಂತಾದ ಕವನಗಳು ೧೯೫೭ ರಲ್ಲಿ ಪ್ರಕಟಗೊಂಡವು. ಉತ್ತರ ಕರ್ನಾಟಕದ ಧಾರವಾಡದಲ್ಲಿದ್ದಾಗಿನಿಂದಲೂ ಕನ್ನಡ ಪರ ಕಾಳಜಿ ವಹಿಸಿದ್ದರು. ಹಲವಾರು ಕನ್ನಡಪರ ಸಂಘಟನೆಗಳಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.  ರಾಜ್ಯ ಬಂಡಾಯ ಸಾಹಿತ್ಯದ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿ.. ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಯಲ್ಲಿ ಭಾಗವಹಿಸಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ೨೬ದಿನ ೨೫ರಾತ್ರಿ ಜೈಲುವಾಸವನ್ನು ಅನುಭವಿಸಿದ ಕನ್ನಡದ ಕಟ್ಟಾಳು.  

 ಇವರು ಬರೆದ ಅನೇಕ ಕವಿತೆಗಳು ಪ್ರಸಿದ್ಧ ಗಾಯಕರ ದನಿಯಲ್ಲಿ ಸುಶ್ರಾವ್ಯ ಗೀತೆಗಳಾಗಿ ಕೇಳುಗರನ್ನು ಮೆಚ್ಚಿಸಿವೆ.  ಸಿ. ಅಶ್ವತ್ಥರ ದನಿಯಲ್ಲಿ  `ಗುಪ್ತಗಾಮಿನಿ ನನ್ನ ಶಾಲ್ಮಲ' ಅತ್ಯಂತ ಜನಪ್ರಿಯಗೀತೆಯಾಗಿದೆ. `ಕನ್ನಡ ಕನ್ನಡ ರ‍್ರಿ ನಮ್ಮ ಸಂಗಡ' ಎಂದು ಮಕ್ಕಳಿಗಾಗಿ ಬರೆದ ಕವಿತೆ ಕನ್ನಡಿಗರೆಲ್ಲರಿಗೂ ಚಿರಪರಿಚಿತ. 

 ಸಂಪೂರ್ಣ ಸಾಹಿತ್ಯ ಪತ್ರಿಕೆಯನ್ನು ಹೊರತರಬೇಕಾದ ಅವಶ್ಯಕತೆ ಇದೆ ಎಂದು ಮನಗಂಡು ಸಮಾನ ಮನಸ್ಕರಾದ ಗಿರಡ್ಡಿ ಗೋವಿಂದರಾಜು, ಸಿದ್ಧಲಿಂಗ ಪಟ್ಟಣಶೆಟ್ಟಿಯವರೊಡಗೂಡಿ ೧೯೬೪ರಲ್ಲಿ `ಸಂಕ್ರಮಣ' ಪತ್ರಿಕೆಯನ್ನು ಪ್ರಾರಂಭಿಸಿದರು.  ಎಪ್ಪತ್ತರ ದಶಕದ ನಂತರ ದಲಿತ ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆ ಕಲ್ಪಿಸಿದೆ.

 ಇವರ ಕನ್ನಡಸೇವೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಮೂರು ಬಾರಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಮುಂತಾದ ಉನ್ನತಮಟ್ಟದ ಪ್ರಶಸ್ತಿಗಳು ಸಂದಿವೆ.  ೨೦೧೭ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಾನು ಭಾಗಿಯಾಗಿ ಕಾವ್ಯವಾಚನ ಮಾಡಿದ್ದು ನನ್ನ ಜೀವನದಲ್ಲಿ ಮರೆಯದ ಒಂದು ಅವಿಸ್ಮರಣೀಯ ಘಟನೆಯಾಗಿದೆ. ಇದು ನನ್ನ ಅದೃಷ್ಠವೆಂದೇ ಭಾವಿಸುವೆ. 

ಇಂತಹ ಅದ್ಭುತ ಕನ್ನಡಕ್ಕಾಗಿ ಮಿಡಿವ ಸಹೃದಯ ಕವಿ, ಹೋರಾಟಗಾರ, ನಾಟಕಕಾರ, ಪತ್ರಿಕಾ ಸಂಪಾದಕರಾಗಿದ್ದ ಚಂಪಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.  ಇಂದು ಅಂದರೆ ೧೦-೦೧-೨೦೨೨ ರ ಸೋಮವಾರ ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಇಂತಹ ಕವಿ ಮಹಾಶಯರು ಮತ್ತೆ ಮತ್ತೆ ನಾಡಿನಲ್ಲಿ ಜನ್ಮತಾಳಿ ಬರಲಿ ಎಂದು ಪ್ರಾರ್ಥಿಸಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ.
--------------------------------------------------
 

ವಿಶಾಲಾ ಆರಾಧ್ಯ


Leave a Reply

Back To Top