ಗಜಲ್
ದುಡಿವ ಅಪ್ಪನ ಬೆವರ ಹಸಿರ ನೆನಪೆ ಈ ಬಾಳಿನ ಆಧಾರವಾಗಿರುವದು
ಬಾಗಿದ ಬೆನ್ನಿನ ಅವ್ವನ ಉಸಿರ ನೆನಪೆ ಈ ಬದುಕಿನ ಆಧಾರವಾಗುವುದು
ಎಳೆಯ ಬಾಲನ ಕೈಹಿಡಿದು ಬಿತ್ತಿದ ಅಕ್ಕರದ ಬೀಜಗಳು
ಹೆಮ್ಮರವಾಗಿ ಇಂದು ಇತ್ತಿರುವ ಫಲವೇ ದೈನಂದಿನ ಆಧಾರವಾಗುವುದು
ಹರಕು ಪಾಟಿ ಚೀಲ ಮುರಿದ ಪಾಟಿ ಅಂದ ಕಳೆದ ಹೊತ್ತಗೆಯು
ಇವುಗಳೇ ಬೆಳೆಸಿದ ಬದುಕೇ ಇಂದು ಬೆಳೆದು ಅನುದಿನ ಆಧಾರವಾಗಿರುವುದು
ಅವರಿವರು ಬಿಟ್ಟ ಅಂಗಿ ವಸ್ತ್ರ ಮೈಯ ಮುಚ್ಚಿದ್ದವು
ಉಂಡ ಅವಮಾನಗಳಿಂದಲೇ ಹೆಮ್ಮರ ಈ ದಿನ ಆಧಾರವಾಗಿರುವುದು
ಜಾತಿ ಸಂಬಂಧ ಬಾಂಧವ್ಯ ಅರಸದೆಯೆ ಇತ್ತರು ಆಸರೆಯ, ಯಯಾ
ಅಂಥ ಪುಣ್ಯಾತ್ಮರ ನೆನಪೇ ಎಂದಿಗೂ ಹಸಿರು ಈ ಮನ ಆಧಾರವಾಗುವುದು