ಕಾವ್ಯ ಸಂಗಾತಿ

ಸಂಧಿಸೋಣ…!

ಹೆಬಸೂರ ರಂಜಾನ್

ನಾಳೆ ಈ ಭೇಟಿ
ಇಷ್ಟೊಂದು ಮಧುರವಾಗಿರುವುದೋ ಇಲ್ಲವೋ….
ಸಂಧಿಸಬಿಡೋಣ ಸಖಿ
ನಾಳೆ ಯಾರಾದರೂ ತುಪ್ಪ ಸವರಬಹುದು
ನಮ್ಮಿಬ್ಬರ ನಡುವೆ

ನಮ್ಮಿಬ್ಬರನು
ತುಂಡಾಗಿಸಲು ಲೋಕದ ಜೊತೆಗೂ
ಕತ್ತರಿಗಳು ಕನವರಿಸುತ್ತೀವೆ
ಖಡ್ಗಗಳ ಮಾತು ಮಸೆಯುತ್ತೀವೆ
ಅನುಮಾನದ ಹುತ್ತಗಳ ಶಯ್ಯಾಗ್ರಹಗಳು ಸಿಂಗಾರಗೊಂಡಿವೆ
ಸಖಿ ತಲುಪಿಬಿಡು ಎದೆಯನ್ನೊಮ್ಮೆ

ಕಲ್ಪಿತ ಅಕ್ಷಾಂಶ
ರೇಖಾಂಶಗಳು
ನಮ್ಮಿಬ್ಬರ ಮಧ್ಯ
ಸುಡುವ ಅಗ್ನಿದಿವ್ಯಗಳ ಬೇಲಿಗಳನು
ದಾಟಿ ಬಿಡೋಣ ಸಖಿ

ಆಡಿಕೊಳ್ಳುವವರ ನಡುವೆ
ಹಾಡುಹಗಲೆ ಬಲಿಯಾದ ರಕ್ತವನ್ನೊಮ್ಮೆ ತೀಡಿ ನೋಡು
ಅಲ್ಲಿ ಪ್ರೇಮವೊಂದು ಬಿಕ್ಕುತಿದೆ ಸಖಿ

ಪ್ರೇಮವಿಲ್ಲಿ ದೇಹಕಷ್ಟೇ…..
ಆತ್ಮಬಾಹಿರ

ಬಿಡಲಾರರು ಸಖಿ
ಆತ್ಮಗಳನ್ನು ಒಂದಾಗಿಸಲು
ಆತ್ಮಹೀನರ ಕರಾಳತೆ
ಚರಿತ್ರೆಯಲಿ ಬಣ್ಣ ಬರೆದಿದೆ

ಗರಗಸದ ಹಲ್ಲುಗಳು
ಗರಿಗೆದರಿ ಮುತ್ತಿಕ್ಕಿವೆ
ಒತ್ತಿಕೊಂಡ ತುಟಿಗಳಿಗೆ
ಹತ್ಯಾರಗಳು ಕುಣೆಯುತ್ತೀವೆ ಸಖಿ
ಅಪ್ಪಿಕೊಳ್ಳೋಣ
ತೋಳುಗಳಲಿ ಹೀಗೆ
ಜಗ ಒಪ್ಪಲಿ ಬಿಡಲಿ
ನೀಲ ಬಯಲಿಗೆ ಹಾರಿಬಿಡೋಣ ಸಖಿ…..
…………..

Leave a Reply

Back To Top