ಧಾರಾವಾಹಿ

ಆವರ್ತನ

ಅದ್ಯಾಯ-49

10+ Best Tigress Photos · 100% Free Download · Pexels Stock Photos

ಗುರೂಜಿಯವರ ತಂಡದ ಹಲವರ ಮೇಲೆ ಚಿಟ್ಟೆಹುಲಿಗಳು ಭೀಕರ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಮಾರಣಾಂತಿಕವಾಗಿ ಗಾಯಗೊಂಡರು. ಹೆಣ್ಣು ಚಿಟ್ಟೆಹುಲಿಯ ಕೈಗೆ ಮೊದಲು ಸಿಲುಕಿದವನು ತಂಗವೇಲು. ಅದು ಅವನ ಮುಖವನ್ನೂ, ಕೆಳತುಟಿಯನ್ನೂ ಹರಿದು ಬಲಗೈಯ ಮಾಂಸಖಂಡವನ್ನು ಸೀಳಿ ಹಾಕಿತ್ತು. ಅದನ್ನು ಕಂಡರೆ ಅವನು ಮುಂದೆಂದೂ ಬಂಡೆ ಒಡೆಯುವ ಕೆಲಸಕ್ಕೆ ನಾಲಾಯಕ್ಕು ಎಂಬಂತೆ ತೋರುತ್ತಿತ್ತು. ಗಂಡು ಚಿರತೆಯ ಬಲವಾದ ಪಂಜದ ಹೊಡೆತವೊಂದು ಶಿಲ್ಪಿಗಳ ಮುಖಂಡ ಶರವಣನ ಹಿಂತಲೆಗೆ ಅಪ್ಪಳಿಸಿತ್ತು. ಅದರಿಂದ ಅವನ ಬುರುಡೆಯ ಮೇಲ್ಪದರವು ಆಮೆಯ ಚಿಪ್ಪಿನಂತೆ ಕಿತ್ತು ನೇತಾಡುತ್ತಿತ್ತು. ನಂತರ ಆ ಕ್ರೋಧ ತುಂಬಿದ ಮೃಗಗಳ ಆಕ್ರಮಣಕ್ಕೆ ಸಿಲುಕಿದ್ದು ಗುರೂಜಿಯ ಆಪ್ತ ಸಹಾಯಕ ರಾಘವ. ಆ ಪ್ರಾಣಿಗಳೆರಡೂ ಸೇರಿ ಅವನನ್ನು ಅಟ್ಟಾಡಿಸಿ ಹಿಡಿದು ಕಚ್ಚಿ ಹರಿದು ಅರೆಜೀವಗೊಳಿಸಿ ಮಾಯವಾಗಿದ್ದವು.

ಆ ಬಂಡೆ ಸಮೂಹದೊಳಗೆ ಅನಾದಿಕಾಲದಿಂದಲೂ ಹುಲಿ, ಚಿಟ್ಟೆಹುಲಿ, ಕಾಡುಹಂದಿ ಮತ್ತಿತರ ವನ್ಯಜೀವಿಗಳು ವಾಸಿಸುತ್ತಿದ್ದುದನ್ನು ಸುರೇಂದ್ರಯ್ಯ ತಮ್ಮ ಹಿರಿಯರ ಕಾಲದಿಂದಲೂ ಕೇಳುತ್ತ ಬಂದಿದ್ದರು. ಅಲ್ಲದೇ ತಾವೂ ಅನೇಕ ಬಾರಿ ನೋಡಿದ್ದರು. ಹಾಗಾಗಿ ಅವರು ಅವುಗಳ ಮೊದಲ ಗರ್ಜನೆಯಿಂದಲೇ ವಿಷಯವನ್ನು ಗ್ರಹಿಸಿ ಕಂಬಿ ಕೀಳಲಿದ್ದರು. ಆದರೆ ಅದೆಲ್ಲೋ ದೂರದಿಂದ ಕೇಳಿಸಿದಂತೆ ಭಾಸವಾಗಿದ್ದರಿಂದ ಧೈರ್ಯ ತಂದುಕೊಂಡು ನಿಂತಿದ್ದರು. ಆದರೆ ಅವುಗಳ ಎರಡನೆಯ ಆರ್ಭಟವು ಅವರನ್ನೂ, ಗುರೂಜಿಯವರನ್ನೂ ಮತ್ತುಳಿದವರನ್ನೂ ಒಂದೇ ಉಸಿರಿಗೆ ಅಲ್ಲಿಂದ ಓಡಿ ಹೋಗುವಂತೆ ಪ್ರಚೋದಿಸಿತ್ತು. ಆದ್ದರಿಂದ ಚಿಟ್ಟೆಹುಲಿಗಳ ಪ್ರಥಮ ದರ್ಶನದಿಂದಲೇ ತಾವೆಲ್ಲ ಪುನೀತರಾದೆವು ಎಂದುಕೊಂಡ ಸುಮಾರು ಮಂದಿ ಬಂದ ದಾರಿಯಲ್ಲೇ ಕಾಲ್ಕಿತ್ತಿದ್ದರು. ಸುಮಾರು ದೂರ ಓಡಿದ ಹೋದ ಅವರೆಲ್ಲ ಒಂದು ಕಡೆ ಬಯಲು ಪ್ರದೇಶದಲ್ಲಿ ಕುಳಿತು ಸಂಭಾಳಿಸಿಕೊಂಡರು. ಆಗ ಅವರಿಗೆ ತಮ್ಮ ತಂಡದಲ್ಲಿ ಮೂವರು ಕಾಣೆಯಾಗಿದ್ದುದು ಗಮನಕ್ಕೆ ಬಂತು. ಗುರೂಜಿ ಮತ್ತು ಸುರೇಂದ್ರಯ್ಯ ಗಾಬರಿಯಾದರು. ಆದರೆ ಸುರೇಂದ್ರಯ್ಯನ ಭಯವು ತಟ್ಟನೆ ಆ ಪ್ರಾಣಿಗಳ ಮೇಲಿನ ಕೋಪವಾಗಿ ಮಾರ್ಪಟ್ಟುಬಿಟ್ಟಿತು.
‘ಹೇ, ಎಲ್ಲರೂ ಇಲ್ಲಿ ಬನ್ನಿರನಾ…! ಕೂಡಲೇ ಮನೆಗೆ ಹೋಗಿ ಕತ್ತಿ, ಸೋಂಟೆ, ಹಾರೆ, ಪಿಕಾಸಿ ಅಂತ ನಿಮ್ಮ ಕೈಗೆ ಏನೇನೆಲ್ಲ ಸಿಗುತ್ತದೋ ಎಲ್ಲವನ್ನೂ ಹೊತ್ತು ತನ್ನಿ! ಈ ಇಡೀ ಜಾಗ ಎಷ್ಟೋ ತಲೆಮಾರಿನಿಂದಲೂ ನಮ್ಮದೇ ಮನೆತನಕ್ಕೆ ಸೇರಿದ್ದು! ಹೀಗಿರುವಾಗ ಆ ದರ್ವೇಶಿ ಪ್ರಾಣಿಗಳು ನಮ್ಮ ಹಂಗಿನಲ್ಲೇ ಬದುಕುತ್ತಿರುವುದಲ್ಲದೇ ನಮ್ಮ ಮೇಲೆಯೇ ದಾಳಿ ಮಾಡುವ ಮಟ್ಟಕ್ಕೆ ಬಂದುಬಿಟ್ಟವಾ…? ಇಲ್ಲ, ಇವತ್ತು ಅವುಗಳನ್ನು ಅಟ್ಟಾಡಿಸಿ ಹಿಡಿದು ಕೊಂದು ಹಾಕದಿದ್ದರೆ ನಮಗೆ ನಿದ್ರೆಯೇ ಹತ್ತಲಿಕ್ಕಿಲ್ಲ. ಹ್ಞೂಂ, ಹೊರಡಿ!’ ಎಂದು ಸುರೇಂದ್ರಯ್ಯ ರೊಚ್ಚಿಗೆದ್ದು ಅಬ್ಬರಿಸಿದರು. ಅಷ್ಟು ಕೇಳಿದ್ದೇ ತಡ ಒರಟುಗಲ್ಲಿನಂಥ ತಮಿಳು ತರುಣರ ತಂಡವು ರೋಷದಿಂದ ಸಿಡಿದೆದ್ದು ಸುರೇಂದ್ರಯ್ಯನ ಮನೆಯತ್ತ ಧಾವಿಸಿ ಹೋಗಿ ಬಗೆಬಗೆಯ ಹತ್ಯಾರುಗಳನ್ನು ಝಳಪಿಸುತ್ತ ಹಿಂದಿರುಗಿತು. ಅವರನ್ನು ಕಂಡ ಸುರೇಂದ್ರಯ್ಯನ ಕೆಚ್ಚು ಇಮ್ಮಡಿಯಾಯಿತು. ಆದ್ದರಿಂದ ಅವರೊಂದಿಗೆ ಕೂಡಿ ಬಂಡೆಗಳತ್ತ ಧಾವಿಸಿದರು. ಆದರೆ ಗುರೂಜಿ ಮತ್ತು ಶಂಕರ ತಾವು ಕುಳಿತಲ್ಲಿಂದ ಮಿಸುಕಾಡಲಿಲ್ಲ.
ಓಟದ ಹೋರಿಗಳಂತಿದ್ದ ಯುವಕರ ಗುಂಪು ಕಣ್ಮರೆಯಾಗುತ್ತಲೇ ಗುರೂಜಿಯವರು ಶಂಕರನನ್ನು ವಿಷಾದದಿಂದ ದಿಟ್ಟಿಸಿದವರು ಮೆಲ್ಲನೆ ಕಣ್ಣು ಮುಚ್ಚಿ ಧ್ಯಾನಸ್ಥರಾದರು. ಆಹೊತ್ತು ಅವರ ಮನಸ್ಸಿನಲ್ಲಿ ಹೋಮ ಕುಂಡದೆದುರು ನಡೆದ ಭೀಕರ ದೃಶ್ಯವೇ ಕುಣಿಯುತ್ತಿತ್ತು. ಆ ಮೃಗಗಳು ತಮ್ಮ ರೌದ್ರಾವತಾರದಿಂದ ಹೋಮಕುಂಡವನ್ನೂ ಮತ್ತವರು ಸಾಧಿಸಲು ಹೊರಟಿದ್ದ ಮಹತ್ಕಾರ್ಯವನ್ನೂ ಕೆಲವೇ ಕ್ಷಣದೊಳಗೆ ಧೂಳಿಪಟ ಮಾಡಿಬಿಟ್ಟಿದ್ದವು. ತಾವು ಇಷ್ಟೊಂದು ನೇಮನಿಷ್ಠೆಯಿಂದ ಕೈಗೊಂಡ ಕಾರ್ಯಕ್ಕೂ ಇಂಥ ವಿಘ್ನವೊಂದು ಬಂದಪ್ಪಳಿಸಲು ಕಾರಣವೇನು? ಎಂಬ ವಿಚಾರವು ಅವರನ್ನು ತೀಕ್ಷ್ಣವಾಗಿ ಕಾಡುತ್ತಿತ್ತು. ಆ ಕುರಿತೇ ಯೋಚಿಸಿದವರ ವ್ಯಾಪಾರ ಬುದ್ಧಿಗೆ ತಟ್ಟನೆ ಒಂದು ಸಂಗತಿಯೂ ಹೊಳೆಯಿತು. ಆದರೆ ಅದನ್ನು ತಮ್ಮದೇ ಕಾಲ್ಪನಿಕ ಲೆಕ್ಕಾಚಾರದ ಒರೆಗೆ ಹಚ್ಚುತ್ತ ಮಥಿಸತೊಡಗಿದರು. ಆದ್ದರಿಂದ ಅವರ ಆಲೋಚನೆ ಹೀಗೆ ಸಾಗಿತು: ಅಲ್ಲಾ, ತಮ್ಮ ವಿಶೇಷ ಪೂಜಾ ಕೈಂಕರ್ಯದ ಮಧ್ಯೆಯೇ ಆ ವ್ಯಾಘ್ರಗಳು ತಾಂಡವವಾಡಿದ್ದರ ಅರ್ಥವೇನು? ಅದೂ ಜೋಡಿ ಹುಲಿಗಳು! ‘ಹುಲಿ’ ಎಂದರೆ ಚಾಮುಂಡಿಯ ವಾಹನ ಅಲ್ಲವಾ? ಅಲ್ಲದೆ ಮತ್ತೇನು! ಅಯ್ಯೋ ದೇವರೇ…! ಹಾಗಾದರೆ ಅವು ಸಾಮಾನ್ಯ ಮೃಗಗಳಲ್ಲ, ದೈವಸಂಭೂತ ಶಕ್ತಿಗಳೇ! ತಾವು ಒಂದು ಕ್ಷಣವಾದರೂ ಅವುಗಳನ್ನು ಸೂಕ್ಷ್ಮವಾಗಿಯೇ ನೋಡಿದ್ದೇವೆ. ಮರಿಗಳೊಂದಿಗೆ ಇದ್ದುದು ದೊಡ್ಡ ಹುಲಿ. ಅದು ಹೆಣ್ಣು. ಇನ್ನೊಂದು ಅದಕ್ಕಿಂತಲೂ ಸ್ವಲ್ಪ ದೊಡ್ಡದು. ಅದು ಗಂಡಿರಬೇಕು ಎಂದುಕೊಂಡವರು ತಮ್ಮ ಯೋಚನೆಯನ್ನು ಮತ್ತಷ್ಟು ಹರಿಯಬಿಟ್ಟರು. ದೊಡ್ಡ ಹುಲಿ… ಸಣ್ಣ ಹುಲಿ. ಸಣ್ಣ ಹುಲಿ… ದೊಡ್ಡ ಹುಲಿ. ದೊಡ್ಡ ಹುಲಿ… ಸಣ್ಣ ಹುಲಿ…! ಎಂದು ಮನಸ್ಸಿನಲ್ಲೇ ಮರಳಿ ಮರಳಿ ಪಠಿಸತೊಡಗಿದರು. ಆಗ ಅವರಿಗೆ ತಾವು ಹುಡುಕುತ್ತಿದ್ದ ಉತ್ತರವೊಂದು ತಟ್ಟನೆ ಮಿಂಚಿಬಿಟ್ಟಿತು. ಹೌದು ಇಂದಿನ ವಿಘ್ನದ ಮೂಲವೇನೆಂಬುದು ಈಗ ಸ್ಪಷ್ಟವಾಯಿತು. ಆ ಕ್ರೂರ ಪ್ರಾಣಿಗಳು ಯಾವುದರ ಸಂಕೇತ? ಮತ್ತ್ಯಾವುದರದ್ದು, ಹುಲಿ ಚಾಮುಂಡಿಯದ್ದಲ್ಲವಾ. ಹೌದು ಅದೇ ಸರಿ. ಆದರೆ ಇನ್ನೊಂದು…? ಅದು ಚಾಮುಂಡಿಯ ಬಂಟನಲ್ಲವಾ! ಅಂದರೆ, ಪಿಲಿಚೌಂಡಿ ಮತ್ತದರ ಬಂಟ!
ಓಹೋ, ಹೀಗಾ ಕಥೆ! ಹಾಗಾದರೆ ಇವತ್ತಿನ ಅವಾಂತರಕ್ಕೆ ಬೇರೆ ಯಾರೂ ಅಲ್ಲ. ಸುರೇಂದ್ರಯ್ಯನೇ ಕಾರಣ! ಆ ದೈವಗಳಿಗೆ ಅವರೋ ಅಥವಾ ಅವರ ಕುಟುಂಬಸ್ಥರೋ ಯಾವತ್ತೋ ಹೇಳಿಕೊಂಡಿದ್ದ ಹರಕೆಯೋ ಪೂಜೆಯೋ ಬಾಕಿಯಿರಬೇಕು. ಅದಕ್ಕೇ ಇರಬೇಕು ಅವುಗಳು ನಮ್ಮ ಕಣ್ಣ ಮುಂದೆಯೇ ಮಾರಣಹೋಮಕ್ಕಿಳಿದದ್ದು! ಅಂದರೆ ಅವುಗಳ ಧಾಂದಲೆಯ ಅರ್ಥ, ದೈವ ನರ್ತನ ಸೇವೆ ಬಾಕಿಯಿದೆ ಎಂದಾ? ಅಯ್ಯೋ, ಪರಮಾತ್ಮಾ…ಅಲ್ಲದೆ ಮತ್ತೇನು? ಖಂಡಿತಾ ಹೌದು. ಆದರೆ ಆ ಮೂರ್ಖ ಸುರೇಂದ್ರಯ್ಯ ಇದನ್ನು ಒಪ್ಪದಿರಬಹುದಲ್ಲ! ಎಂದು ತುಸು ಚಿಂತಿತರಾದರು. ಕೊನೆಯಲ್ಲಿ, ಒಪ್ಪಲಿ ಬಿಡಲಿ, ತಾವು ಅವರಿಂದ ಈ ಕೆಲಸವನ್ನು ಮಾಡಿಸಲೇಬೇಕು. ಆ ಮೂಲಕ ಆ ಶಕ್ತಿಗಳ ಕೋಪವನ್ನೂ ತಣಿಸಬೇಕು. ಅದೇನಾದರೂ ತೊಂದರೆಯಿಲ್ಲ. ತಾವು ಸಂಕಲ್ಪಿಸಿಕೊಂಡಿರುವ ದೊಡ್ಡ ಯೋಜನೆಯೊಂದು ಕೈಗೂಡಲೇಬೇಕು. ಅದಕ್ಕಾಗಿ ತಾವು ಎಂಥ ಕಾರ್ಯಕ್ಕಾದರೂ ಸಿದ್ಧ! ಎಂದು ನಿರ್ಧರಿಸಿದ ಗುರೂಜಿಯವರು ನಿಧಾನವಾಗಿ ಕಣ್ಣು ತೆರೆದರು.
ಅದೇ ಹೊತ್ತು ಶಂಕರನೂ ಚಿಟ್ಟೆಹುಲಿಗಳ ದಾಳಿಯ ಬಗ್ಗೆಯೇ ಯೋಚಿಸುತ್ತಿದ್ದವನು, ಓ ದೇವರೇ…! ಒಂದುವೇಳೆ ಆ ಪ್ರಾಣಿಗಳ ಕೈ, ಬಾಯಿಗೆ ತಾನೇನಾದರೂ ಸಿಲುಕುತ್ತಿದ್ದರೆ ಗತಿಯೇನಾಗುತ್ತಿತ್ತು? ಇಡೀ ಜೀವಮಾನದ ಸಾಧನೆಯೆಲ್ಲಾ ಮಣ್ಣುಮುಕ್ಕಿ ಹೋಗುತ್ತಿತ್ತು! ಆದರೆ ಅಂಥದ್ದೊಂದು ಅನಾಹುತದಿಂದ ತನ್ನನ್ನೂ ಗುರೂಜಿಯವರನ್ನೂ ಕಾಪಾಡಿದ್ದು ಮಾತ್ರ ಬುಕ್ಕಿಗುಡ್ಡೆಯ ಆ ನಾಗದೇವನೇ ಹೊರತು ಬೇರೆ ಯಾರೂ ಅಲ್ಲ! ಎಂದುಕೊಂಡವನು ದೀನನಾಗಿ ಆಕಾಶದತ್ತ ಕೈಯೆತ್ತಿ ಮುಗಿದ. ಅಷ್ಟರಲ್ಲಿ ಗುರೂಜಿಯವರೂ ಕಣ್ಣು ಬಿಟ್ಟಿದ್ದನ್ನೂ, ಅವರ ಮಂದಹಾಸವನ್ನೂ ಕಂಡವನು ಸ್ವಲ್ಪ ಗೆಲುವಾದ.
‘ಶಂಕರ, ಈಗಿನ ಅನಾಹುತಕ್ಕೆ ಕಾರಣವೇನೆಂದು ತಿಳಿದುಬಿಟ್ಟಿತು ಮಾರಾಯಾ!’ ಎಂದು ಗುರೂಜಿಯವರು ಹೆಮ್ಮೆಯಿಂದ ಹೇಳಿದರು. ಆಗ ಶಂಕರ ತಬ್ಬಿಬ್ಬಾಗಿ, ‘ಹೌದಾ ಗುರೂಜಿ ಏನು…?’ ಎಂದ ವಿಸ್ಮಯದಿಂದ.
‘ಇದೆಲ್ಲವೂ ಆ ಸುರೇಂದ್ರಯ್ಯನಿಂದಾದ ಲೋಪದೋಷಗಳು ಮಾರಾಯಾ…! ಅವರೇ ಇದಕ್ಕೆಲ್ಲ ಹೊಣೆ!’ ಎಂದರು ಬೇಸರದಿಂದ. ಆದರೆ ಶಂಕರನಿಗೆ ಅರ್ಥವಾಗಲಿಲ್ಲ. ಅವನು ಅವರನ್ನು ಪ್ರಶ್ನಾರ್ಥಕವಾಗಿ ನೋಡಿದ.
ಅತ್ತ, ಅದೇ ಹೊತ್ತಿಗೆ ಸುರೇಂದ್ರಯ್ಯನ ತಂಡವೂ ಕ್ರೂರವಾಗಿ ಬೊಬ್ಬಿಡುತ್ತ, ಅರಚುತ್ತ ಬಂಡೆಗಳತ್ತ ತಲುಪಿತು. ಆದರೆ ಅಲ್ಲಿನ ದೃಶ್ಯವನ್ನು ಕಂಡ ಎಲ್ಲರೂ ದಿಗ್ಮೂಢರಾಗಿಬಿಟ್ಟರು. ಆದರೂ ಅವರಲ್ಲಿ ಕೆಲವರು ಸಂಭಾಳಿಸಿಕೊಂಡು, ರಕ್ತದ ಮಡುವಿನಲ್ಲಿ ಬಿದ್ದವರತ್ತ ಧಾವಿಸಿ ಆರೈಕೆಯಲ್ಲಿ ತೊಡಗಿದರು. ಉಳಿದವರು ತೀವ್ರ ಉನ್ಮತ್ತರಾಗಿ ಊಳಿಡುತ್ತ ಮೃಗಗಳನ್ನು ಹುಡುಕುತ್ತ ಬಂಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿದರು. ಆ ಜನರ ಧಾಂದಲೆಗೆ ಬಂಡೆಗಳೆಡೆಗಳಲ್ಲಿ ನಿದ್ರಿಸುತ್ತಿದ್ದ ನೂರಾರು ಬಾವಲಿಗಳೂ, ಗೂಬೆಗಳೂ ಬೆಚ್ಚಿಬಿದ್ದು ಅರಚುತ್ತ ದಿಕ್ಕುಗೆಟ್ಟು ಹಾರತೊಡಗಿದವು. ಆದರೆ ಅವರ ಅದೃಷ್ಟಕ್ಕೆ ಆ ಮೃಗಗಳು ಅದಾಗಲೇ ಅಲ್ಲಿನ ತಮ್ಮ ನಿವಾಸವನ್ನು ತೊರೆದು ದೂರದ ದಟ್ಟ ಅರಣ್ಯದತ್ತ ಹೊರಟು ಹೋಗಿಯಾಗಿತ್ತು. ಅವುಗಳನ್ನು ಹುಡುಕಾಡಿ ಸುಸ್ತಾದ ಸುರೇಂದ್ರಯ್ಯನೂ ಮತ್ತವರ ತಂಡವೂ ನಿರಾಶರಾಗಿ ಹಿಂದಿರುಗಿದರು. ನಂತರ ಗಾಯಗೊಂಡವರನ್ನು ಹೊತ್ತುಕೊಂಡು ಹೋಗಿ ಗುರೂಜಿಯವರ ಮತ್ತು ಶಂಕರನ ಕಾರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿಗೆ ಗುರೂಜಿಯವರ ಬಂಡೆ ಕಡಿಯುವ ನಾಂದಿ ಕಾರ್ಯವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.
(ಮುಂದುವರೆಯುವುದು)


ಗುರುರಾಜ್ ಸನಿಲ್


ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top