ಅಂಕಣ ಸಂಗಾತಿ

ನೆನಪಿನದೋಣಿಯಲಿ

ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ

ಜನವರಿ ಒಂದು ಕ್ಯಾಲೆಂಡರ್ ವರ್ಷಾರಂಭದ ದಿನ. ಈ ದಿನ ಬಂದರೆ ತಲೆಯಲ್ಲಿ ನೂರಾರು ನೆನಪುಗಳ ದಿಬ್ಬಣ ಹೊರಡುತ್ತದೆ. ಆರು ಏಳು ವರ್ಷಗಳವರೆಗಿನದು ನೆನಪಿಲ್ಲ . ಮೂರನೇ ಕ್ಲಾಸಿಗೆ ಸೇರಿದ್ದು ಸೆಂಟ್ ಥಾಮಸ್ ಶಾಲೆಗೆ .ಆಗ ಎಂಟು ವರ್ಷ ಇರಬಹುದು ನನಗೆ .ಕ್ರಿಸ್ಮಸ್

ಮತ್ತು ಹೊಸ ವರ್ಷಗಳ ಪರಿಕಲ್ಪನೆ ಬಂದದ್ದೇ ಆಗ . ಹೇಳಿ ಕೇಳಿ ಮಲೆಯಾಳಿ ಕ್ರಿಶ್ಚಿಯನ್ನರ ಶಾಲೆ . ಡಿಸೆಂಬರ್ ಇಪ್ಪತ್ತೆರಡು ಇಪ್ಪತ್ಮೂರನೆಯ ತಾರೀಖಿಗೆ ಒಂದು ಸಮಾರಂಭ .ಹೆಚ್ಚಿನಂಶ ಈಗಿನ ಸ್ಕೂಲ್ ಡೇಗಳ ತರಹ. ವಿವಿಧ ಕ್ರೀಡಾ ಸ್ಪರ್ಧೆಗಳು ಬಹುಮಾನ ಗಳಿಸಿದವರಿಗೆ ವಿತರಣೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿ ಜನವರಿ ಎರಡು ರವರೆಗೆ ರಜಾ ಘೋಷಣೆ .ಅದೇ ಖುಷಿಯ ವಿಷಯ.   ಮೂರನೆಯ ತರಗತಿಯಿಂದ ಏಳನೆಯ ತರಗತಿಯ ತನಕ ಹತ್ತು ದಿನಗಳ ಆ ವರ್ಷಾಂತ್ಯದ ರಜೆ ತುಂಬಾ ಖುಷಿ ಕೊಡುತ್ತಿತ್ತು . ಮೊದಲ ಬಾರಿಗೆ ಈ ಕ್ರಿಸ್ಮಸ್ ಸಂಭ್ರಮಾಚರಣೆ ದಿನ ಸಾಂತಾಕ್ಲೂಸ್ ನನ್ನು ಕಂಡಾಗ ಖುಷಿಯೋ ಖುಷಿ. ನಮ್ಮ ಮಧ್ಯದಿಂದ ಹಾದು ಹೋಗುವಾಗ ನನ್ನ ಕೈಗೆ 1ಚಾಕಲೇಟ್ ಕೊಟ್ಟು ಹೋದಾಗ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಮುಂದಿನ ದಿನಗಳಲ್ಲಿ ತಿಳಿದದ್ದು ನಮ್ಮ ಜಾರ್ಜ್ ಸರ್ ಅವರೇ ಸಾಂತಾ ತಾತನ ವೇಷ ಹಾಕಿಕೊಂಡು ಬರುತ್ತಿದ್ದುದು ಎಂದು.  ಮುಂದುಗಡೆ ಬೀದಿಯಲ್ಲಿದ್ದ ಆಂಟಿ ಅವರ ಹೆಸರೇ ನೆನಪಿಲ್ಲ ಅವರೊಬ್ಬರನ್ನೇ ಆಂಟಿ ಎಂದು ಆ ದಿನಗಳಲ್ಲಿ ಕರೆಯುತ್ತಿದ್ದದ್ದು . ಅವರ ಮನೆಯಲ್ಲೂ ಕ್ರಿಸ್ ಮಸ್ ಹಬ್ಬದ ಹಿಂದಿನ ದಿನ 1ಸಣ್ಣ ಸಮಾರಂಭ ಎಲ್ಲರ ಬಳಿ ಅವರಿಗೆ ತಿಳಿದ ಹಾಡು ಡ್ಯಾನ್ಸು ಅಂಥವುಗಳನ್ನು ಮಾಡಿಸಿ ಸಣ್ಣಪುಟ್ಟ ಪೆನ್ನು ಪೆನ್ಸಿಲ್ ಕ್ಲಿಪ್ ಅಂತಹವುಗಳನ್ನು ಬಹುಮಾನವಾಗಿ ಕೊಡುತ್ತಿದ್ದರು . ಮೊಟ್ಟೆ ಹಾಕಿ ಇರುತ್ತದೆಂದು ನಮಗೆ ಕೇಕ್ ಕೊಡಬಾರದೆಂದು ಅಮ್ಮಂದಿರು ತಾಕೀತು ಮಾಡಿ ಇರುತ್ತಿದ್ದುದರಿಂದ ಬರಿ ಬಾಳೆಯಹಣ್ಣು ಕೊಡುತ್ತಿದ್ದುದನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ .

1ವರ್ಷ ಮಾತ್ರ ನಮ್ಮೆಲ್ಲರಿಂದ 1ಗ್ರೂಪ್ ಡ್ಯಾನ್ಸ್ ಮಾಡಿಸಿದ್ದರು.ಯಾವುದೋ ಕಾಡು ಜನಗಳ ಡ್ಯಾನ್ಸ್ ಅಂತಷ್ಟೇ ನೆನಪು ಈಗ .  ಎಗ್ ಲೆಸ್ ಕೇಕ್ ಗಳು ಸಿಗಲು ಆರಂಭವಾದ ಮೇಲೆ ಅಣ್ಣ ಪ್ರತಿ ವರ್ಷವೂ ಅದನ್ನು ತೆಗೆದುಕೊಂಡು ಬರುತ್ತಿದ್ದುದು ನಾವು ಕ್ರಿಸ್ಮಸ್ ಆಚರಿಸುತ್ತಿದ್ದೆವು ಎಂದೆನಿಸುತ್ತಿತ್ತು .   

ಹೆಚ್ಚಿನ ಗುಲ್ಲು ಗಲಾಟೆ ಎಬ್ಬಿಸದೆ ಹೊಸ ವರ್ಷದ ಸ್ವಾಗತ ನಡೆದು ಹೋಗಿಬಿಡುತ್ತಿತ್ತು. ಆಗೆಲ್ಲಾ ಮನೆಯ ಬಳಿ ಗೆಳೆಯರು ಸಹ ಸೇರಿ ಆಚರಿಸಿದ ನೆನಪಿಲ್ಲ

.

ನಂತರ ಪ್ರೌಢಶಾಲೆಯಲ್ಲಿ ಆ ದಿನ ರಜೆ ಇರುತ್ತಿರಲಿಲ್ಲ. ಆದರೆ ಆ ದಿನ ಸಮವಸ್ತ್ರ ಬಿಟ್ಟು ಬೇರೆ ಬಣ್ಣದ ಬಟ್ಟೆ ಹಾಕಲು ಅನುಮತಿ ಇತ್ತು .ಅದೊಂದು ತರಹ ಖುಷಿ. ಒಬ್ಬರಿಗೊಬ್ಬರು ಎದುರು ಸಿಕ್ಕವರಿಗೆ ಹ್ಯಾಪಿ ನ್ಯೂ ಇಯರ್ ಎಂದು ಹೇಳಿ ಕೈ ಕುಲುಕುವ ಪರಿಪಾಠ (ಬರಿ ಹುಡುಗಿಯರಿಗೆ ಮಾತ್ರಾಪ್ಪಾ)ಆಮೇಲಾಮೇಲೆ ತಿಳಿದದ್ದು ಕೆಲವು ಹುಡುಗರು ತಾವು ಲೈನ್ ಹೊಡೆಯುವ ಹುಡುಗಿಯರಿಗೆ ತಮ್ಮ ಪ್ರೀತಿ ತಿಳಿಸಲು ಹೊಸ ವರ್ಷದ ಶುಭಾಶಯ ಪತ್ರ ಕೊಡ್ತಿದ್ದರು ಅಂತ. ಆಗ ಗೊತ್ತಿರಲಿಲ್ಲ ಬಿಡಿ .ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಕನ್ನಡದ ಪುಷ್ಪಾ ಮೇಡಂ ಎಲ್ಲರೂ ಡೈರಿ ಬರೆಯುವ ಹವ್ಯಾಸ ಬೆಳೆಸಿಕೊಳ್ಳಿ ಡೈರಿಯೇ ಬೇಕು ಅಂತಲ್ಲ ನೋಟ್ ಪುಸ್ತಕದಲ್ಲಿ ದಿನಾಂಕ ಹಾಕಿ ಬರೆಯಿರಿ ಎಂಬ ಸಲಹೆ ಇತ್ತಿದ್ದರು .ಅದರಂತೆ ಬಹಳ ವರ್ಷದವರೆಗೆ ಬರೆದಿದ್ದೆ .

ಕಾಲದ ಈ ಪ್ರವಾಹದಲ್ಲಿ ಮರೆಯಾದ ಅನೇಕ ಸದಭ್ಯಾಸ ಗಳಂತೆ ಈ ಅಭ್ಯಾಸವೂ ಮರೆಯಾಯಿತು .

ಪಿಯುಸಿಗೆ ಬಂದ ಮೇಲೆ ಹೊಸ ವರ್ಷಾಚರಣೆಗಾಗಿ ಸಣ್ಣ ಪಾರ್ಟಿ ಒಂದನೇ ತಾರೀಕು ಕಾಲೇಜಿನ ಮುಂದಿನ ಗಾಡಿಯಲ್ಲಿ ಚುರುಮುರಿ ಅಬ್ಬಬ್ಬಾ ಅಂದ್ರೆ ಹತ್ತಿರದ ಬೇಕರಿಯ ದಿಲ್ಕುಶ್. ಆ ದಿನದ ಸಂತೋಷ ಇಂದಿನ ಪಂಚತಾರಾ ಹೋಟೆಲಿನ ಊಟದಲ್ಲೂ ಸಿಗಲ್ಲ. ಅಮ್ಮ ಅಂತೂ ಜನವರಿ ಒಂದರಂದು ಸಿಹಿ ಮಾಡಿ ವಿಶೇಷ ತಿಂಡಿ ಮಾಡೇ ಮಾಡುತ್ತಿದ್ದರು. ರುಚಿಯಾಗಿ ಮಾಡಿ ತಿನ್ನಲು ಒಂದು ನೆಪ ಎಂದು ಅವರ ವಾದ .

ಪದವಿಗೆ ಓದುವಾಗ ಮೊದಲೇ ಪ್ಲಾನ್ ಮಾಡಿ ಯಾವುದಾದರೂ ಹೋಟಲಿಗೆ ಹೋಗಿ ತಿಂಡಿ ತಿಂದರೆ ಮುಗಿಯಿತು ನಮ್ಮ ಪಾರ್ಟಿ. ಒಂದು ವರ್ಷ ಚಾಮುಂಡಿ ಬೆಟ್ಟಕ್ಕೆ ಭೇಟಿ ಇತ್ತು. ಅಮ್ಮ ಅಣ್ಣ ಸಂಜೆ ದೇವಸ್ಥಾನಕ್ಕೆ ತಪ್ಪದೆ ಕರೆದೊಯ್ಯುತ್ತಿದ್ದರು ನಿಜಕ್ಕೂ ಎಷ್ಟು ಸುಂದರ ಸರಳ ಆಚರಣೆಗಳು ಅವು. ಒಟ್ಟಿಗೆ ಕಾಲ ಕಳೆಯಲು ನಲಿಯಲು ಸಿಕ್ಕಂತಹ ಸಂದರ್ಭದ ಸದ್ಬಳಕೆಯಾಗುತ್ತಿತ್ತು.

ಇನ್ನು ದೂರದರ್ಶನ ಬಂದ ಮೇಲೆ ರಾತ್ರಿ ಹನ್ನೆರಡರವರೆಗೂ ಬರುತ್ತಿದ್ದ ವಿಶೇಷ ಕಾರ್ಯಕ್ರಮಗಳ ವೀಕ್ಷಣೆ. ಆಗ ಇದ್ದ ಒಂದೇ ಒಂದು ಡಿಡಿ ಒಂದು ರಲ್ಲಿನ ಕಾರ್ಯಕ್ರಮಗಳನ್ನೇ ಮನೆಯವರೆಲ್ಲ ಕೂತು ನೋಡುತ್ತಿದ್ದೆವು. ಈಗ ಎಷ್ಟೊಂದು ವೈವಿಧ್ಯವಿದ್ದರೂ ಯಾವುದೂ ಮನ ಆಕರ್ಷಿಸಲು ಸಫಲವಾಗುತ್ತಿಲ್ಲ. ಆಯ್ಕೆ ಹೆಚ್ಚಿದಷ್ಟೂ ಆರಿಸುವುದು ಕಷ್ಟವೇನೋ?

ಕೆಲಸಕ್ಕೆ ಸೇರಿದ ಮೇಲೆ ಕಚೇರಿಯಲ್ಲಿ ಮಧ್ಯಾಹ್ನ ವಿಶೇಷ ಊಟದ ವ್ಯವಸ್ಥೆ ಇರುತ್ತಿತ್ತು. ಸಾಮಾನ್ಯ ಅಂದು ಹೊಸ ಬಟ್ಟೆ ಧಾರಣೆ ಇದ್ದೇ ಇದೆ. ಊಟದ ವ್ಯವಸ್ಥೆ ಇಲ್ಲದಿದ್ದರೆ ಗೆಳತಿಯರೊಂದಿಗೆ ಹೊರಗೆ ಊಟ .ಇಲ್ಲಿಗೆ ಮುಗಿಯಿತು ಹೊಸ ವರ್ಷಾಚರಣೆ .

ಆದರೆ ಈಗ ಏರ್ಪಾಡಾಗುತ್ತಿರುವ ಕಾರ್ಯಕ್ರಮಗಳು ಅದಕ್ಕೆ ವಿಧಿಸುವ ಶುಲ್ಕಗಳು ಕೆಲವೊಮ್ಮೆ ಆ ತಡರಾತ್ರಿ ಪಾನಕೂಟಗಳು ಅದರಿಂದಾಗುವ ದುಷ್ಪರಿಣಾಮಗಳು! ಅಬ್ಬಬ್ಬಾ ಎಲ್ಲಿಗೆ ಸಾಗಿದೆ ನಮ್ಮ ಸಂಸ್ಕೃತಿ ಅನ್ನಿಸುತ್ತೆ. ಹುಡುಗರು ಮಾತ್ರವಲ್ಲ ಹುಡುಗಿಯರೂ ನಶೆಯಲ್ಲಿ ನಿಶೆಯಲ್ಲಿ ಉನ್ಮತ್ತರಂತೆ ವರ್ತಿಸುವುದನ್ನು ಕಂಡರೆ ಈ ಅಧೋಗತಿಗೆ ಕಾರಣರ್ಯಾರು ಎಂದು ಚಿಂತಿಸುವಂತಾಗುತ್ತದೆ. ಪೋಷಕರು ಮಕ್ಕಳಿಗೆ ಕೊಡುತ್ತಿರುವ ಸ್ವೇಚ್ಛೆಯೇ ಅಥವಾ ಈ ರೀತಿಯ ವರ್ತನೆ ಸೊಫೆಸ್ಟಿಕೇಟೆಡ್ ಸಮಾಜದ ಲಕ್ಷಣ ಎನ್ನುವ ಭಾವನೆಯೇ ಅರಿಯಲಾಗುತ್ತಿಲ್ಲ. ಯುವಜನತೆಯ ಕೈಯಲ್ಲಿ ಓಡಾಡುತ್ತಿರುವ ಹಣದ ಪ್ರಭಾವವೇ ಇದು. ಜವಾಬ್ದಾರಿಯಿಲ್ಲದೆ ಹೆಚ್ಚಿನ ಹಣಗಳಿಕೆ ಅವರನ್ನು ಹೀಗೆ ದಾರಿ ತಪ್ಪಿಸುತ್ತಿರುವಂತಿದೆ.

ಸಂಪ್ರದಾಯ ಸಂಸ್ಕೃತಿಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಬೋಧಿಸುವ ಮೊದಲು ನಾವು ಪಾಲಿಸುವುದರಿಂದ ಒಳ್ಳೆಯ ಉದಾಹರಣೆಗಳಾದರೆ ತಂದೆ ತಾಯಿ ಮಕ್ಕಳನ್ನು ತಿದ್ದಬಹುದು.

ಆದರೂ ೧೯೭೦ ರಿಂದ ೨೦೨೦ ರ ತನಕದ ನಾ ಕಂಡ ಈ ಸಂಸ್ಕೃತಿಯ ಪಾತಾಳದೆಡೆಗಿನ ಅಧಃಪತನವನ್ನು ವೀಕ್ಷಿಸುವಾಗ ಮನ ಚುರ್ ಎನ್ನುತ್ತದೆ .ಇದೇ ತಲೆಮಾರುಗಳ ನಡುವಿನ ಅಂತರವೇ ? ಬದಲಾವಣೆ ಸಾಧ್ಯವಿಲ್ಲವೇ ?

ಈ ಸಂದರ್ಭದಲ್ಲಿ ತಿಮ್ಮ ಗುರುವಿನ ಈ ಕಗ್ಗ ಯಾಕೋ ನೆನಪಾಯಿತು .

ವಿಷಯ ಸನ್ನಿಧಿ ಗಿಂತ ಮಸಣ ಸನ್ನಿಧಿ ಲೇಸು 

ವಿಷದೂಟಕಿಂತುಪೋಷಿತವೇ ಲೇಸಲ್ತೆ

ತೃಷೆ ಕನಲೆ ಜೀವ ಬಿಸಿ ಬಾಣಲೆಗೆ ಬಿದ್ದ ಹುಳು 

ಶಿಶು ಪಿಶಾಚಿಯ ಕೈಗೆ _ ಮಂಕುತಿಮ್ಮ 

ಈ ಮೋಹ ಲೋಕದ ಆಕರ್ಷಣೆಗೆ ಬಿದ್ದರೆ ಅದು ಕೊನೆಗೊಳ್ಳುವುದು ಸಾವಿನಲ್ಲೇ . ಹಾಗಾಗಿ ವಿಷಯದ ಆಸೆಗೆ ಬೀಳುವುದಕ್ಕಿಂತ ಮರಣವೇ ಲೇಸು. ವಿಷದ ಊಟ ತಿನ್ನುವುದಕ್ಕಿಂತ ಉಪವಾಸವೇ ಒಳ್ಳೆಯದಲ್ಲವೇ? ಈ ಮೋಹಕ್ಕೆ ಬಿದ್ದವನು ಕಾದೆಣ್ಣೆಗೆ ಬಿದ್ದ ಹುಳುವಿನಂತೆ ಒದ್ದಾಡುತ್ತಾನೆ .ಪಿಶಾಚಿಯ ಕೈಗೆ ಸಿಕ್ಕ ಮಗುವಿನಂತೆ ನಲುಗುತ್ತಾನೆ. ಆದರೆ ಇದು ತಪ್ಪು ಎಂದು ತಿಳಿಯುವ ಹೊತ್ತಿಗೆ ತಿರುಗಿ ಬರಲಾರದಷ್ಟು ದೂರ ಹೋಗಿರುತ್ತೇವೆ. ರಿಪೇರಿಯಾಗದಷ್ಟು ಹಾನಿ ಉಂಟಾಗಿ ಬಿಟ್ಟಿರುತ್ತದೆ .


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಪ್ರಕಟಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸಂಪಾದಕರಿಗೆ

    ಸುಜಾತಾ ರವೀಶ್

Leave a Reply

Back To Top