ಕಾವ್ಯ ಸಂಗಾತಿ
ಸ್ನೇಹಿತನಷ್ಟೇ ಆಗಬಲ್ಲೆಯ….?
ನಾಗರತ್ನ ಎಂ ಜಿ
ಸ್ನೇಹಿತನಷ್ಟೇ ಆಗಬಲ್ಲೆಯ….?
ಹದಿನಾರರ ಹರೆಯದಲಿ
ಮೂಡಿತ್ತು ಮೊದಲ ಪ್ರೇಮ
ಪ್ರತಿಯಾಗಿ ಮಿಡಿದಿತ್ತು
ನನ್ನವನ ಹೃದಯ
ಕಾರಣವಿಲ್ಲದೆ ದೂರಾದಾಗ
ತಿರಸ್ಕರಿಸಿ ಒಲವ
ಚಡಪಡಿಸಿ ನಲುಗಿತ್ತು
ತಾಳಲಾರದೆ ನೋವ
ಆದರೆ….
ನನಗಾಗಿ ಮಿಡಿಯುವ
ಜೀವವೊಂದಿದೆ ಇಲ್ಲಿ
ಈ ಮುಗ್ಧ ಪ್ರೇಮವ
ಪಡೆಯಲಾರೆ ನಾನಲ್ಲಿ
ಬರಡಾಗಿರಲು ಒಲವಿನ ಭಾವ
ಕಳೆದುಹೋದ ಪ್ರೀತಿಯಲಿ
ಅಳುತಿರೆ ಎರಡು ಹೃದಯಗಳು
ವಿಭಿನ್ನ ನೋವಿನಲಿ
ಸ್ನೇಹವೊಂದೇ ಉಳಿಯಲಿ
ನೆನಪಿನಲಿ
ನನಗಾಗಿ ಮುಡಿಪಾಗಿಟ್ಟೆ ನೀ
ಅಗಾಧ ಒಲವ
ಭಗ್ನ ಹೃದಯ
ಬೆಂದ ಮನದಲ್ಲಿ
ಮೂಡುತ್ತಿದೆ ಅಪರಾಧಿ ಭಾವ
ಮುಡಿಸಲು ಬಂದೆ ನೀ
ಪ್ರೇಮದ ಹೂವ
ಹೇಳಲಿ ಹೇಗೆ ನಿನಗೆ
ಈ ಮೂಕ ನೋವ
ದಿನ ದಿನಕ್ಕೆ ದ್ವಿಗುಣವಾಗುತ್ತಿದೆ
ಈ ನಿನ್ನ ಪ್ರೀತಿ
ಕವಿಯುತ್ತಿದೆ ನನ್ನ
ಮನದಲ್ಲಿ ಕಾಣದ ಭೀತಿ
ತಡೆ ಹಿಡಿಯಲಾರದೇ ನಿನ್ನನು
ಯಾವುದೇ ನೀತಿ..?
ನೋಯುತಿರುವೆ ಬದಲಿಸಲಾಗದೆ
ನಿನ್ನ ಪ್ರೀತಿಯ ರೀತಿ
ಕಾಯಬಲ್ಲೆ ನಿನಗಾಗಿ
ಎಂದೆ ನೀ ಗೆಳೆಯ
ಚಿರವಾಗಿರುವುದೇ ಈ ನಮ್ಮ ಹರೆಯ..?
ವಿಶಾಲ ಜಗದಲ್ಲಿ ಇರುವುದೆಲ್ಲೋ
ನಿನ ಪ್ರೀತಿಸುವ ಹೃದಯ
ಧಾರೆಯೆರೆ ಆ ಹೃದಯದೊಡತಿಗೆ
ನಿನ್ನ ಪವಿತ್ರ ಪ್ರೀತಿಯ!!
ಬಯಸಿದೆ ನಿನ್ನಿಂದ ನಿರ್ಮಲ ಸ್ನೇಹ
ಬಿಟ್ಟುಬಿಡು ಹುಡುಗ
ನೀ ನನ್ನ ಮೇಲಿನ ಮೋಹ
ದೇವರಾಣೆ ನಿನ್ನಲ್ಲಿ
ನನಗಿಲ್ಲ ಪ್ರೇಮ
ಸ್ನೇಹಿತನಷ್ಟೇ ಆಗಬಲ್ಲೆಯ
ನೀ ನನಗೆ ಗೆಳೆಯ??
ಮನ ಮೋಹಕ ಭಾವಲಹರಿ ಮೇಡಮ್
ತುಂಬ ಚನ್ನಾಗಿ ಮೂಡಿಬಂದಿದೆ
ಕವನ ತುಂಬಾ ಚೆನ್ನಾಗಿದೆ ಮೇಡಂ
ಅಂತರಾಳದ ನೋವಿನಲ್ಲೂ ಒಲುಮೆಯ ಚಿಲುಮೆ
ಚಂದದ ಸಾಲುಗಳು ಮೇಡಂ