ಮುಂಜಾನೆ

ಕಾವ್ಯ ಸಂಗಾತಿ

ಮುಂಜಾನೆ

ಕೊರಳಗೆಜ್ಜೆ ಗಲ್ಲನೆನಿಸುತ ಬಸವ ಹೊಲದ ಹಾದಿತುಳಿದ
ಹಸುರು ಮುಂಜಾನೆ….

ಜಗವನೆಬ್ಬಿಸುವ ಕಾಯಕದಲಿ
ನಿರತ ಹಕ್ಕಿಗಳ
ಕಲರವದ ಮುಂಜಾನೆ….

ದೂರ ಗುಡಿಯಲ್ಲಿ
ಗಂಟೆಜಾಗಟೆಗಳ
ಓಂಕಾರ ಮುಂಜಾನೆ…..

ಕೊರೆವ ಚಳಿಯಲ್ಲಿ ನಡುಗುವ
ಅವನಿಗೆ ಬಿಸಿ ಅಪ್ಪುಗೆಯ
ಬಿಸಿಲ ಮುಂಜಾನೆ….

ಹೂ ಮೊಗ್ಗುಗಳಿಗೆ
ಮುತ್ತಿಡುವ ದುಂಬಿಗಳ
ಝೇಂಕಾರ ಮುಂಜಾನೆ….

ಮೊಲೆಯುಂಡ ಕರು
ಹರುಷದಿ ಚಂಗನೆ ಜಿಗಿವ ಮಮತೆಯ ಮುಂಜಾನೆ….

ನಲ್ಲನ ಕನವರಿಕೆಯಲಿ
ನಲ್ಲೆ ಮೈಮುರಿವ
ವಿರಹದ ಮುಂಜಾನೆ….

ಒಲವಸುಧೆಯನುಂಡು
ಹೊರಬಂದ ನವವಧುವಿನನ
ರಸಿಕ ಮುಂಜಾನೆ….

ನಿದ್ದೆ ಸರಿಸಿ ಪುಟ್ಟ ಕಂಗಳ
ಪಿಳಕಿಸಿ ನಗುವ ಕಂದನ
ಮುದ್ದು ಮುಂಜಾನೆ….

ನೆನಪಿನ ಪುಟಗಳಲ್ಲಿ ಅವಳ
ಹುಡುಕುವ ಕಣ್ಣ ಹನಿಗೊಂಡ
ಭಾವುಕ ಮುಂಜಾನೆ….

ಹೂ ಬಿಸಿಲ ಹಾದಿಯಲಿ
ಮಧುರ ನೆನಪುಗಳ
ಪರಿಮಳದ ಮುಂಜಾನೆ….

ನಿನ್ನ ನೆನಪಲ್ಲಿ ಕನಸುಗಳ
ಸಂಕಲಿಸಿ ಮನದಿ
ಮುಗುಳ್ನಗೆಯ ಮುಂಜಾನೆ…..


ಡಾ. ನಿರ್ಮಲ ಬಟ್ಟಲ

3 thoughts on “ಮುಂಜಾನೆ

Leave a Reply

Back To Top