ಲಲಿತ ಪ್ರಬಂಧ

ನಿದ್ರಾಲಿಂಗನ

Sleeping baby Painting by Shamsi Jasmine

  ನಿದ್ರೆ ಎಂಬುದು ನಮಗೆ ಆ ದೇವರು ಕೊಟ್ಟ ಅದ್ಭುತ ವರ. ನಿದ್ರೆ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿದ್ರಾಲಿಂಗನ  ಎಂಬ ಪದ ಕಿವಿಗೆ ಬಿದ್ದೊಡನೆಯೆ ನಿದ್ರೆಯು ವ್ಯಕ್ತಿಯನ್ನು ಅಪ್ಪಿಕೊಂಡಿದೆ ಎಂಬ ದೃಶ್ಯಾವಳಿ ನಮ್ಮ ಕಣ್ಣಿದುರು ಸುಳಿದರೆ  ಸಾಕು ಮನಸ್ಸು ಮುದಗೊಳ್ಳುತ್ತದೆ. ಕವಿಕಾವ್ಯದಲ್ಲಿ ವರ್ಣಮಯವಾಗಿ ವರ್ಣಿಸಿಕೊಂಡಿರುವ ನಿದ್ರಾಲಿಂಗನ ಜೀವಿಗಳ ದೈನಿಕದಲ್ಲಿ ಬಹಳ ಪ್ರಮುಖವಾದುದು. ನಿದ್ರೆ ಇಲ್ಲದ ವ್ಯಕ್ತಿ ಹುಚ್ಚು ಹತ್ತಿದ ಪ್ರಾಣಿಯಂತೆ , ರೊಚ್ಚಿಗೆದ್ದ ಕ್ರೂರ ಮೃಗಗಳಂತೆ ವರ್ತಿಸುವುದನ್ನು ನೆನಪಿಸಿಕೊಂಡಾಗ ನಮಗೆ ನಿದ್ರೆಯ ಮಹಿಮೆ ತಿಳಿಯುತ್ತದೆ .

ನಿದ್ರೆಯು ಎಲ್ಲ ಜೀವಿಗಳ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ನಿದ್ರೆಯು ಕೂಡ ಅಂಥದ್ದೇ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ನಾವು ನಿದ್ರೆಯನ್ನು ವಿಶ್ರಾಂತಿಗಾಗಿ ಮಾಡಬೇಕೇ ವಿನಹ ಅದನ್ನು ಹವ್ಯಾಸವಾಗಿ, ಗೀಳಾಗಿ, ಚಟವನ್ನಾಗಿ, ಮಾಡಿಕೊಳ್ಳಬಾರದು ಎ೦ಬ ಆರೋಗ್ಯ ಸಮೀಕ್ಷೆಗಳು ಜಡ್ಡು ಹಿಡಿದು ನಿದ್ರಿಸುವ ಜನರಿಗೆ ಕಿವಿ ಹಿಂಡಿ  ಎಚ್ಚರಿಸುವುದನ್ನು ನಾವು ಅಲ್ಲಗಳೆಯುವಂತಿಲ್ಲ.

ನಮ್ಮ ದೇಹವೆಂಬ ಯಂತ್ರವು ಬೆಳಗಿನಿಂದ ದುಡಿದು ದಣಿದಾಗ ವಿಶ್ರಾಂತಿಯನ್ನು ಬಯಸುತ್ತದೆ. ಅದರ ಮೂಲವೆಂದರೆ ನಿದ್ರೆ. ವಿಶ್ರಾಂತಿಯ ಆಳವಾದ ರೂಪವೇ ನಿದ್ರೆ .ನಮಗೆ ಕಾಯಕದ ತತ್ಪರಿಣಾಮ ಆಯಾಸವಾಗಿ ಮಲಗಿ ನಿದ್ರಿಸಬೇಕೆ ಹೊರತು ನಿದ್ರೆಗೆ ಉತ್ತೇಜಿಸುವ, ನಿರ್ದೇಶಿಸುವ ಅವಶ್ಯಕತೆ ಇರುವುದಿಲ್ಲ ಎಂಬ ಯೋಗ ಪ್ರವೀಣರ  ಮಾತನ್ನು ಕಡೆಗಣಿಸುವಂತಿಲ್ಲ. ಇದರಿಂದ ಮನಸ್ಸಿಗೆ ನಿರಾಳ ಭಾವ ಮೂಡಿದರೆ, ದೇಹಕ್ಕೆ ಚೈತನ್ಯ ತುಂಬುತ್ತದೆ. ನಿದ್ರೆ ಒಂದು ನಿಗದಿತ ಚೌಕಟ್ಟಿನೊಳಗೆ ಬೆಸೆದುಕೊಂಡರೆ ಎಲ್ಲರಿಗೂ ಬಹಳ ಪ್ರಿಯ ಹಾಗೂ ಆಪ್ತವೆನಿಸುತ್ತದೆ.

ವಿಪರ್ಯಾಸ ಎಂದರೆ ಇಂದಿನ ಜಂಜಡಗಳ ವರ್ತುಲದಲ್ಲಿ ಸಿಲುಕಿದ ಮಂದಿ ಕಾರ್ಯಭಾರ ಒತ್ತಡದಿಂದ ಅನಿಯಂತ್ರಿತವಾಗಿ ನಿದ್ರೆ ಮಾಡುವುದು ರೂಢಿಗತ ಮಾಡಿಕೊಂಡಿರುವುದನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯದಂತೆ ತ್ರಿಶಂಕು ಸ್ಥಿತಿಗೆ ನಮ್ಮನ್ನು ಕರೆದೊಯ್ಯುತ್ತದೆ.

ನಿದ್ರೆಯೊಂದಿಗೆ ಬೆಸೆದುಕೊಂಡ ಕೆಲವು ಸನ್ನಿವೇಶಗಳನ್ನು ಹೆಕ್ಕಿ ತರೋಣ ಬನ್ನಿ. “ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ” ಎಂಬ ನಮ್ಮ ಜನಪದರ ಮಾತು ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಅದು ಸುಳ್ಳೆಂದು ಹೇಳಲಾಗದು ಕೆಲವರು ಅಪಾರ ಜನಜಂಗುಳಿಯ ನಡುವೆ, ಗಲಾಟೆ ಗದ್ದಲಗಳ ನಡುವೆ, ಸಭೆ ಸಮಾರಂಭಗಳ ಜನಸ್ತೋಮದಲ್ಲಿ ನಿರಾತಂಕವಾಗಿ ನಿದ್ರಿಸುವುದನ್ನು ನೋಡಿದರೆ ಸುಖ ಪುರುಷರು ಇವರೆ ಎಂದು ಸಾರಿ ಹೇಳುವಂತೆ ಭಾಸವಾಗುತ್ತದೆ. ಅವೆಲ್ಲಕ್ಕಿಂತ ವಿಸ್ಮಯ ಹಾಗೂ ವಿಚಿತ್ರ ಎಂದರೆ ಇಂತಹ ಅಪರೂಪದ ದೃಶ್ಯಗಳನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ವಿವಿಧ ಮಾಧ್ಯಮಗಳಲ್ಲಿ,

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಮಾಡುವುದು, ಟ್ರೋಲ್ ಮಾಡುವುದನ್ನು ಮರೆಯುವಂತಿಲ್ಲ. ಇಂತಹ ಘಟನೆಗಳು ನಿದ್ರೆ ಸಹಜವೆಂದು ಸಾರಿದರೂ,  ಸತ್ಯವಾದರೂ ನಿದ್ರಾರ್ಥಿಗಳಿಗೆ ಮುಜುಗರ ತಂದೊಡ್ಡುತ್ತವೆ .

“ಹೊಟ್ಟೆ ತುಂಬ ಉಂಡು, ಮೈತುಂಬ ಹೊದ್ದವನಿಗೆ ನಿದ್ರೆಗೆ ಏನು ಬರವೆ”? ಎಂಬ ಜನವಾಣಿ ಕೇಳುತ್ತಲೇ ಬೆಳೆದ ನಮಗೆ ತಿಳಿದ ಅಂಶವೆಂದರೆ  ಸುಖಾಸನಕ್ಕೂ, ಸುಖ ನಿದ್ರೆಗೂ ಕಿಂಚಿತ್ತು ಸಂಬಂಧವಿಲ್ಲ ಎಂಬುದು ಆಧುನಿಕ ಯುಗದ ಜನರ ಬದುಕಿನಿಂದ ಸಾಬೀತಾಗಿದೆ. ಹತ್ತಿಯ ಹಾಸಿಗೆ, ರೇಷ್ಮೆಯ ಹೊದಿಗೆ, ಮೆತ್ತನೆಯ ದಿಂಬು ಇದ್ದರೂ ಕಂಗಳ ತಣಿಸುವಂತಹ ನಿದ್ರೆ ಬಾರದೆ ಇರುವುದು ವಿಪರ್ಯಾಸವೇ ಸರಿ. ಇಂತಹ ಸಂದರ್ಭದಲ್ಲಿ “ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ” ಎಂಬ ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರ ಜೋಗುಳ ಗೀತೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ಪತಿ ಪತ್ನಿಯರ ನಡುವೆ ಸಂಭಾಷಣೆಯಲ್ಲಿ ಪತಿಯು ಸರಸಕೆ ನೀ ಬಾರದಿದ್ದರೆ ನನ್ನೊಟ್ಟಿಗೆ ನಿದ್ರಾದೇವಿ ಬರುತ್ತಾಳೆ ಎನ್ನುತ್ತಾ ಪತ್ನಿಯನ್ನು ಚೇಡಿಸಿ  ಹುಸಿ ಮನಸು ತರಿಸುವ ಪ್ರಸಂಗಗಳಿಗೆ ಏನು ಕೊರತೆಯಿಲ್ಲ.  ದೇವತೆಯಾಗಿ ಹೆಣ್ಣಿನ ರೂಪವನ್ನು ನಿದ್ರೆ ಧರಿಸುತ್ತದೆ.

 ನಿದ್ರಾ ದೇವತೆ ನನ್ನನ್ನು ಆಲಂಗಿಸುವ ಮುನ್ನ ಬಂದು ನನ್ನ ಬಾಹುಬಂಧನದ ಒಳಗೆ ಬೆಚ್ಚಗೆ ಸೇರಿಕೋ ಎನ್ನುವ ರಸಿಕ ಪತಿಯ ಮಾತುಗಳಿಗೆ ಹೆಣ್ಣು ನಿದ್ರೆಯೇನು ನನ್ನ  ಸವತಿಯೆ ಎಂಬ ಪ್ರಶ್ನೆ ಕಾಡದಿರದು  ನಾನಿರುವಾಗ ಅವಳು ನಿಮ್ಮ ಬಳಿ ಹೇಗೆ ಬರುತ್ತಾಳೆ ನೋಡೋಣಾ ಎನ್ನುತ  ರಮಿಸುವ ಪತ್ನಿಯ ಸರಸ ಸಲ್ಲಾಪದ ಮಾತುಗಳು ಶೃಂಗಾರ ಮಯವಾಗಿರುತ್ತವೆ.  ನಿದ್ರೆಯನ್ನು  ಇಲ್ಲಿಯೂ ಸುಖಾನುಭವದ ದೃಷ್ಟಿಯಿಂದ ಪ್ರತಿಬಿಂಬಿಸಲಾಗುತ್ತದೆ.

ನಿದಿರೆ ಮಾಡುವ ವಿಧಾನವನ್ನು ಬಗೆ ಬಗೆಯಲ್ಲಿ ವರ್ಣಿಸಲಾಗುತ್ತದೆ. ಒಬ್ಬ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂದರೆ ಅವನು “ನಿದ್ದೆ ಹೊಡೆಯುತ್ತಿದ್ದಾನೆ” ಎನ್ನುತ್ತೇವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಅವಳು ಈಗ ತಾನೆ “ನಿದ್ದೆಗೆ ಜಾರಿದ್ದಾಳೆ” ಎಂದು ಹೇಳುವ ಮಾತುಗಳಿಗೇನು ಕೊರತೆ ಇಲ್ಲ. ಇಂದು ನನಗೆ ಬಹಳ “ನಿದ್ರೆ ಆವರಿಸುತ್ತಿದೆ” ನಿನ್ನೆ ತಡವಾಗಿ ಮಲಗಿದ್ದೆ ಅದಕ್ಕೆ ಇರಬೇಕು ಎನ್ನುತ್ತ ನಿದ್ರೆ ಇಂದು ನನ್ನನ್ನು ಬಹಳ ಬೇಗ ಹಾಸಿಗೆಗೆ ಕರೆಯುತ್ತಿದ್ದಾಳೆ ಎಂದು ನಿದ್ರೆಯ ಮೇಲೆ ಗೂಬೆ ಕೂಡಿಸುವ ಗಂಡು ಮಕ್ಕಳು ಉಂಟು ಎಂದರೆ ಅತಿಶಯೋಕ್ತಿಯೇನಲ್ಲ. ಇದೆಲ್ಲ  ತತ್ ಕ್ಷಣದ ಕೆಲಸದಿಂದ ಜಾರಿಕೊಳ್ಳಲು ಹೂಡುವ ಕುಂಟು ನೆಪವೆಂದರೆ ನಗು ಬಾರದಿರದು.

ನಿದ್ರೆ ಮಾಡಲು ಸ್ಥಳದ ಪರಿಮಿತಿ ಏನಿಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ. ಅವರ ಸೌಲಭ್ಯ ಅನುಸಾರ ನಿದ್ರೆ ಮಾಡುತ್ತಾರೆ. ನಿಮಗೆ ತಿಳಿದಿರಬಹುದು ನಿಜವಾದ ನಿದ್ರೆ ಬರೆದಿದ್ದರೂ ಆ ಕಳ್ಳ ನಿದ್ರೆ ನಿದ್ರೆ ಬರುವಂತೆ ನಟಿಸುವ ನಾಟಕಕಾರರಿಗೆ ಏನು ಕಡಿಮೆ ಇಲ್ಲವೆನ್ನಬಹುದು. ಹೆಂಡತಿ ಕೆಲಸ ಹೇಳುವಳೆಂದು ತಿಳಿದಾಗ ಪತಿರಾಯ ನಿದ್ರೆ ಬಂದವನಂತೆ ನಟಿಸಿದರೆ, ಬೆಳಗ್ಗೆ ಬೇಗ ಎದ್ದು ತಿಂಡಿ ಮಾಡು ಎಂದು ಗಂಡ ಹೇಳಿದಾಗ ಹೆಂಡತಿ ನಟಿಸುವುದು. ಮಕ್ಕಳು ಓದು ಎಂದಾಗ, ಊಟ ಮಾಡಿಸಲು ಹೋದಾಗ, ತಪ್ಪಿಸಿಕೊಳ್ಳಲು ನಿದ್ರೆ ಬಂದಂತೆ ನಟಿಸುತ್ತಾರೆ. ಅಂದರೆ ನಿದ್ರೆ ನಟನಾಗಿ ಕೆಲಸ ಮಾಡುತ್ತದೆ ಎಂಬುದು ಇದರಿಂದ ಮನವರಿಕೆಯಾಗುತ್ತದೆ.

ಅದೇನೋ ಗೊತ್ತಿಲ್ಲ ಕಣ್ರೀ ನಿದ್ರೆಗೂ ಸರಸ್ವತಿಗೂ ಬಹುಶಃ ಸ್ಪರ್ಧೆ ನಡೆಯುತ್ತಿರುತ್ತದೆ ಎನಿಸುತ್ತೆ. ನೀವು ಇಡೀ ರಾತ್ರಿ ಟಿ.ವಿ. ಮುಂದೆ ಕೂತರೂ ಬಾರದ,  ಮೊಬೈಲ್ ಹಿಡಿದು ತಡರಾತ್ರಿಯವರೆಗೂ ಎದ್ದಿದ್ದರೂ ಬಾರದ  ಗೆಳೆಯ ಗೆಳತಿಯರೊಂದಿಗೆ ಕಾಡು ಹರಟೆ ಹೊಡೆಯುತ್ತಿದ್ದಾಗಲು , ಮೋಜು ,ಮಸ್ತಿ, ಪಾರ್ಟಿಗಳಲ್ಲಿ ಕುಣಿಯುವಾಗ ಬಾರದಿದ್ದ ನಿದ್ರೆ ಪುಸ್ತಕಗಳನು ಕೈಗೆತ್ತಿಕೊಂಡರೆ ಸಾಕು  ಅದೆಲ್ಲಿರುತ್ತಾಳೊ ತಿಳಿಯದು ಧುತ್ತನೆ ಪ್ರತ್ಯಕ್ಷಳಾಗಿ ಬಿಡುವಳು. ಬಿಳಿ ಹಾಳೆಯ ಮೇಲಿನ ಅಕ್ಷರಗಳು ಮಂಜಾಗಿ ಕಣ್ಣನ್ನು ಪಿಳಪಿಳ ಬಿಡುವಂತೆ ಮಾಡಿ ನಮ್ಮನ್ನು ಹೈರಾಣ ಮಾಡುವ ಅನುಭವವಂತೂ ಶಾಲೆ ಕಲಿತ ಪ್ರತಿಯೊಬ್ಬರಿಗೂ ಇರುತ್ತದೆ ಎಂದರೆ ಉತ್ಪ್ರೇಕ್ಷೆ ಏನಲ್ಲ.

ಪ್ರೇಮಿಗಳ ಲೋಕದಲ್ಲಿ ನಿದ್ರೆಯ ಪರಿ ತುಸು ವಿಭಿನ್ನ ಎನ್ನಬಹುದು. ಪ್ರಿಯತಮೆ ಕನಸಿನಲ್ಲಿ ಬರಲಿ ಪ್ರೇಮಗೀತೆ ಹಾಡಲಿ ಎಂದು ಪ್ರಿಯತಮ ಬಯಸಿದರೆ, ನನ್ನನ್ನು ಕನಸಿನಲ್ಲಿ ಬಂದು ನಲ್ನ ನನ್ನೊಂದಿಗೆ ಪ್ರೇಮನಿವೇಧನೆ ಮಾಡುತ್ತಾನೆ ಎಂದು ಕಲ್ಪಿಸಿಕೊಂಡು ಬಲವಂತದ ನಿದ್ರೆ ಮಾಡಲು ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ಬಡಪಾಯಿ ಹಾಸಿಗೆ ದಿಂಬುಗಳು ಅವನಿಗೆ  ಹರಕೆ ಕುರಿಗಳಾಗುತ್ತವೆ. ಮನೆ ತುಂಬಾ ಚೆಲ್ಲಿ  ಅನಾಥವಾಗಿ ಬಿದ್ದಿರುತ್ತವೆ.

ಬೆಳಗಾದ ಮೇಲೆ ರೂಮು ಸ್ವಚ್ಚ  ಮಾಡಲು ಬಂದ ಅಮ್ಮನ ಯೋಚನಾ ಲಹರಿ ಬೇರೆ ರೀತಿ ಹರಿಯುತ್ತದೆ. ಅಯ್ಯೋ ಪಾಪ ಮಗ ಅಥವಾ ಮಗಳು ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದುವ ತರಾತುರಿಯಲ್ಲಿ ಹಾಸಿಗೆ ದಿಂಬುಗಳು ಚೆಲ್ಲಾಪಿಲ್ಲಿಯಾಗಿವೆ ಎನ್ನುವ ಭಾವ ಹರಿದು ಸರಿಪಡಿಸುವ ಜೊತೆಗೆ ಮಕ್ಕಳ ಬಗ್ಗೆ ಹೆಮ್ಮೆಯಿಂದ ಬೀಗುವ ಅಮ್ಮಂದಿರಲ್ಲಿ ನೀವು ಒಬ್ಬರು ಆಗಿರಬಹುದಲ್ಲವೇ? .

ನಿದ್ರೆ ಎಂದರೆ ಕೆಲವೊಮ್ಮೆ ಖುಷಿ ಮತ್ತೆ ಕೆಲವೊಮ್ಮೆ ಮುಜುಗರ ತರಿಸುತ್ತದೆ ಹೇಗಿದ್ದೀರಾ ನಿದ್ರೆ ಮಾಡುವಾಗ ಕೆಲವರು ನಿಶಬ್ದವಾಗಿ ನಿದ್ರಿಸಿದರೆ  ಮತ್ತೆ ಕೆಲವರು ಜೋರಾಗಿ ಪಟಾಕಿ ಸಿಡಿಯುವಂತೆ, ಬಾನಲಿ ಗುಡುಗು  ಆರ್ಭಟಿಸುವಂತೆ, ಅಕ್ಕ ಪಕ್ಕದವರ ಕರ್ಣ ತಮಟೆಗಳು ಹರಿಯುವಂತೆ, ಪಕ್ಕದಲ್ಲಿ ಮಲಗಿದವರು ತಲೆ ಚಚ್ಚಿ ಕೊಳ್ಳುವಂತೆ, ಮಕ್ಕಳು ಬೆಚ್ಚಿ ಬೀಳುವಂತೆ ಗೊರಕೆ ಹೊಡೆಯುವ ಉದಾಹರಣೆಗಳಿಗೆ ಏನೂ ಕೊರತೆ ಇಲ್ಲ ಎನ್ನಬಹುದು.

ಎಲ್ಲವನ್ನು ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಹೀಗೂ ಉಂಟೆ ಅಂತ ಮೂಗಿನ ಮೇಲೆ ನೀವು ಬೆರಳಿಟ್ಟುಕೊಂಡು  ಕೇಳುವ ಅಥವಾ ನೋಡಿದ ಡಿವೋರ್ಸ್ ಕೇಸುಗಳು ಗೊರಕೆ ಹೊಡೆಯುವ ಪತಿಗಳನ್ನು ಬೆಚ್ಚಿಬೀಳಿಸುತ್ತದೆ .ನನ್ನ ಪತಿ ಅಥವಾ ಪತ್ನಿ ತುಂಬಾ ಗೊರಕೆ ಹೊಡೆಯುತ್ತಾರೆ ಇದರಿಂದ ನಾನು ಮಾನಸಿಕವಾಗಿ ಸಾಕಷ್ಟು ಕಿರಿಕಿರಿ ಪಟ್ಟಿದ್ದೇನೆ ಹಾಗೂ ನಿದ್ರೆಯ ಕೊರತೆಯಿಂದ ದೈಹಿಕವಾಗಿ ಬಳಲಿದ್ದೇನೆ  ದಯಮಾಡಿ ನನಗೆ ಗೊರಕೆ ವ್ಯಕ್ತಿಯಿಂದ ಬಿಡುಗಡೆ ಕೊಡಿಸಿ ಎಂದು ಕೋರ್ಟಿನ ಕಟೆ ಕಟೆ ಹತ್ತುವ ದಂಪತಿಗಳ ವಿಚಾರ ಕೇಳಿ ಮೂಗು ಮುರಿಯಬೇಡಿ ಇದು ಹಾಸ್ಯವೆನಿಸಿದರು ಕಟುಸತ್ಯ ಎಂಬುದಕ್ಕೆ ಸಾಕ್ಷಿಯಾಗಿ ಡಿವೋರ್ಸ್ ಕೇಸುಗಳು ದಾಖಲಾಗಿರುವದರ ಬಗ್ಗೆ ಮಾಧ್ಯಮಗಳಲ್ಲಿ ನಾವು ನೋಡಿದ ಪ್ರಸಂಗಗಳೆ ಸಾಕ್ಷಿ .

ನಿದ್ರೆಯ ವೈಶಿಷ್ಟ್ಯಗಳನ್ನು ಹೊಗಳಲು ಪದಗಳೇ ಸಾಲದು. ಕೆಲವರು ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಇದ್ದರೆ ಅವರ ಪಕ್ಕದಲ್ಲಿ ಮಲಗುವವರಿಗೆ ಗಂಡೆದೆ ಇರಬೇಕು  ಯಾಕಂತೀರಾ ಅವರು ಜಾಗೃತಾವಸ್ಥೆಯಲ್ಲಿ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳನ್ನು  ನಿದ್ರಾವಸ್ಥೆಯಲ್ಲಿದ್ದ ಸುಪ್ತ  ಮನಸ್ಸಿನಿಂದ ಹೊರಬಂದು ಪುಂಕನು ಪುಂಕವಾಗಿ ಹೊರಹೊಮ್ಮಿಸುವ ವಿಧಾನ ಪಕ್ಕದಲ್ಲಿದ್ದವರನ್ನು ಬೆಚ್ಚಿ ಬೀಳಿಸುತ್ತದೆ. ಉದಾಹರಣೆಗೆ ಕ್ರಿಕೆಟ್ ಹುಚ್ಚು ಇರುವವರು ಬೆಳಗಿನಿಂದ ಕ್ರಿಕೆಟ್ ನೋಡಿ ಪಕ್ಕದಲ್ಲಿ ರಾತ್ರಿ ಮಲಗಿದಾಗ ಪಕ್ಕದಲ್ಲಿ ಇರುವವರನ್ನು ಬಾಲ್ ಎಂದು ಭ್ರಮಿಸಿ ಬಾಲ್ ಬಂತು ಬಂತು ಎಂದು ಉತ್ಸಾಹದಿಂದ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ಘಟನೆಗಳು ಇಲ್ಲದಿರಲಾರವು.  ಕಂಡಕ್ಟರ್ ಕೆಲಸ ಮಾಡುವವರು ಟಿಕೆಟ್ ಟಿಕೆಟ್ ಎನ್ನುತ  ಕಿರಿಕಿರಿ ತರಿಸಿದರೆ ಇನ್ನು ಪೋಸ್ಟ್ ಮಾರ್ಟಮ್ ಮಾಡುವ ವೈದ್ಯರ ಪಕ್ಕದಲ್ಲಿರುವವರ ಕಥೆಯನ್ನು ನೆನಪಿಸಿಕೊಳ್ಳಿ. ಅವರೇನಾದರೂ ನಿದ್ರೆಯಲ್ಲಿ ಮಾತನಾಡುವಂತಿದ್ದರೆ ಅವರ ಸಂಗಾತಿಯ ಪರಿಸ್ಥಿತಿಯನ್ನು ನೀವು ಊಹಿಸಿಕೊಳ್ಳಿ .ಅವರು ಬೆಳಗ್ಗೆ ಮಾಡಿದಂತಹ ಪೋಸ್ಟ್ಮಾರ್ಟಮ್  ವಿಚಾರಗಳನ್ನು ಹಾಸಿಗೆಯಲ್ಲಿ ಏನಾದರೂ ಉಚ್ಚರಿಸಿದರೆ ಹೇಗಿರಬಹುದು ಬಾಡಿ ಎಲ್ಲಿದೆ  ಕೊಡಿ, ಚಾಕು ಕೊಡಿ ಎನ್ನುವ ಶಬ್ದಗಳನ್ನು ಕೇಳಿ ಹೌಹಾರದಿರಲು ಸಾಧ್ಯವೆ .

ಇನ್ನು ನಿದ್ರೆಯಲ್ಲಿ ನಡೆಯುವ ಪುರಾಣ ಬೇರೆ ತರನೇ ಇರುತ್ತೆ ನಿದ್ದೆಯಲ್ಲಿ ಎದ್ದು ಹೋದವರು ವಾಪಸ್ ಅವರ ಮನೆಯವರ ರೂಮಿಗೆ ಮರಳಿ ಬಂದರೆ ಪುಣ್ಯ, ಅಪ್ಪಿ ತಪ್ಪಿ ಬೇರೆಯವರ ಮನೆಗೆ ಹೋದರೆ, ಅಲ್ಲಿರುವವರ ಕಥೆ ಏನಾಗಬಹುದು ಎಂದು ನೀವೇ ಕಲ್ಪಿಸಿಕೊಳ್ಳಿ.

ಬಸ್ ಹತ್ತಿದವರಿಗೆ ಒಂದು ಕೆಟ್ಟಚಾಳಿ ಇರುತ್ತದೆ ಸೀಟ್ ಸಿಕ್ಕ ತಕ್ಷಣ ನಿದ್ರೆ ಮಾಡುವ ಅಭ್ಯಾಸ .ಇದರಿಂದ ಉಂಟಾಗುವ ಕಿರಿಕಿರಿ ಹೇಳಲಾಗದು. ಕೆಲವರಿಗೆ ಜರ್ನಿ ನಿದ್ರೆಯನ್ನು ತರಿಸಿದರೆ, ಮತ್ತೆ ಕೆಲವರಿಗೆ ಆಯಾಸ ನೀಗಿಸಲು ನಿದ್ರೆ ಆವರಿಸುತ್ತದೆ .ಆದರೆ ಇವೆಲ್ಲವನ್ನೂ ಮೀರಿದ ಮತ್ತೊಂದು ವಿಶಿಷ್ಟ ವರ್ಗವಿದೆ ಯಾರು ಎಂದು ಆಶ್ಚರ್ಯ ಪಡುತ್ತೀರಾ ?  ಗೊತ್ತಿಲ್ಲ ಬಸ್ಸಿನಲ್ಲಿ ಹುಡುಗಿಯರು ಅಥವಾ ಹೆಣ್ಣುಮಕ್ಕಳು ಕುಳಿತ ಸೀಟಿನಲ್ಲಿ ಕುಳಿತು ಶೋಕಿ ಮಾಡುವುದು ಹಾಗೂ ನಿದ್ರೆಯಂತೆ ತೂಕಡಿಸಿ ಪಕ್ಕದ ಹೆಣ್ಣುಮಕ್ಕಳ ,ಭುಜ  ಆನಿಸಿ ಮಲಗುವುದು, ನಿಮಗೇನು ನಿದ್ರೆ ಮಾಡಲು ಮನೆ ಇಲ್ಲವಾ ಹೆಣ್ಣು ಮಕ್ಕಳ ಪಕ್ಕ ಕುಳಿತರೆ ಸರಿಯಾಗಿ ಕೂರಲು ಆಗಲ್ಲವೇ ನಿದ್ದೆಯ ನಾಟಕ  ಮಾಡುತ ಹೆಣ್ಣುಮಕ್ಕಳನ್ನು ಮುಜುಗರ ಪಡಿಸುತೀರಾ ಎಂದು ಸಹಸ್ರನಾಮ ಅರ್ಚನೆ ಅಷ್ಟೇ   ಮಾಡಿದರೆ ಪುಣ್ಯವಂತರು ನೀವು. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕಪಾಳಮೋಕ್ಷ ಸೇವೆಯನ್ನು ಮಾಡಿರುವಂತಹ ಘಟನೆಗಳು ನಮ್ಮ ಕಣ್ಣ ಮುಂದಿವೆ.

ನಿದ್ರೆಯ ಬಗ್ಗೆ ಇಷ್ಟೆಲ್ಲಾ ಹೇಳಿ ನಿದ್ರೆ ಎಲ್ಲಿ ಜೊತೆಯಾಗುವ ಸಂಗತಿಗಳ ಬಗ್ಗೆ ಚರ್ಚಿಸದಿದ್ದರೆ ಹೇಗೆ ಹೇಳಿ.

 ಅವುಗಳಿಗೆ ನಾವು ಅವಮಾನ ಮಾಡಿದಂತೆ ಆಗುವುದಿಲ್ಲವೇ ? ಹಾಗಾದರೆ ಅಂಥ ವಿಶೇಷ ಮಿತ್ರರು ಯಾರು ಎಂದು ತಲೆಕೆರೆದುಕೊಳ್ಳುತ ಯೋಚಿಸುತ್ತಿದ್ದೀರಾ ಅಥವಾ ಕುತೂಹಲಭರಿತವಾಗಿ ಕಣ್ಣರಳಿಸಿ ನೋಡುತ್ತಿದ್ದೀರಾ. ಅವೆಲ್ಲ ನಿಮಗೂ ತಿಳಿದ ಸ್ನೇಹಿತರೆ ಕಂಡ್ರಿ. ಪ್ರತಿದಿನ ನಿಮ್ಮಿಂದ ರಕ್ತದಾನ ಮಾಡಿಸಿ, ನಿಮಗೆ ಅದರ ಕ್ರೆಡಿಟ್ ಕೊಡಿಸುವ ಮೂಲಕ, ನಿಮ್ಮನ್ನು ಕೊಡುಗೈ ದಾನಿ ಗಳನ್ನಾಗಿ ಬಿಂಬಿಸುವ ಸೊಳ್ಳೆ ತಿಗಣೆ ಗಳಲ್ಲಿದೆ ಮತ್ತೆ  ಯಾರಿರಲು ಸಾಧ್ಯ. ಆಗಾಗ ಮೈಕೈಗಳಿಗೆ ಇಂಜೆಕ್ಷನ್ ಕೊಟ್ಟು ನಮ್ಮನ್ನು ಉಜ್ಜಿ ಕೊಳ್ಳುವಂತೆ ಮಾಡುವ ಅವರ ತುಂಟಾಟದಿಂದ ಜಾಗರಣೆ ಮಾಡುತ ಬೆಳಕಾಗಿಸಿದ ರಾತ್ರಿಗಳ ಸಂಕಟ ಏನೆಂದು ಅನುಭವಿಸಿದವರಿಗೆ ಮಾತ್ರ ಅದರ ಪಡಿಪಾಟಲು ಏನೆಂದು ಗೊತ್ತಿರುತ್ತದೆ.

ನಿದ್ರೆಯಲ್ಲಿ ಮುಗ್ಧ ಮಕ್ಕಳ ಮಂದಸ್ಮಿತ ನಗು. ಜಗತ್ತಿನ ಯಾವುದೇ ಪರಿವೇ ಇಲ್ಲದೆ ತಂತಾನೆ ಕಿಲಕಿಲನೆ ನಿದ್ರೆಯಲ್ಲಿ ನಗುವುದನ್ನು ನೋಡಲು ನಯನ ಮನೋಹರ ದೃಶ್ಯ. ಅಂತಹ ಅವಕಾಶ ಬಳಸಿಕೊಂಡರೆ ಭಾಗ್ಯವಂತರು. ಅಂತಹ ವಿಸ್ಮಯ ನೋಡುವುದೇ ರೋಮಾಂಚನ. ಆ ಸನ್ನಿವೇಶಗಳಲ್ಲಿ ನಾವು ಯಾಕೆ ಮತ್ತೆ ಬಾಲ್ಯಕ್ಕೆ ಹೋಗಬಾರದು ಈ ಹಸು ಗೂಸಿನಂತೆ ನಿರಾಳವಾದ, ನಿರಾತಂಕವಾದ, ಸುಖನಿದ್ರೆಯನ್ನು ಏಕೆ ಸವಿಯಬಾರದು ಎಂಬ ಆಲೋಚನೆ ಎಲ್ಲರ ಮನಃಪಟಲದಲ್ಲಿ ಸುಳಿದು ಹೋಗುತ್ತದೆ.

ನಿದ್ರೆ ಮಾಡಲು ಕೆಲವರಿಗೆ ಆರ್ ಸಿ ಸಿ ಕಟ್ಟಡ, ಸುಸಜ್ಜಿತ ಹವಾನಿಯಂತ್ರಿತ ಕೊಠಡಿ  ಬೇಕು. ಆದರೂ ಈ ಎಲ್ಲ ಸೌಲಭ್ಯಗಳು ಇದ್ದರೂ ಕೂಡ ನಿದ್ರೆಯನ್ನು ಕೊಳ್ಳಲು ಸಾಧ್ಯವಿಲ್ಲ. ಕಾರಣ ಅದು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವಾಗ ನಮ್ಮ ಮನಸ್ಸು ಪ್ರಶಾಂತವಾಗಿ, ನಿರಾತಂಕವಾಗಿ ಎಲ್ಲಾ ಚಿಂತನೆಗಳಿಂದ ಹೊರಬಂದಾಗ ಮಾತ್ರ ನಮಗೆ ನಿದ್ದೆ ಬರಲು ಸಾಧ್ಯ .ಇಲ್ಲದಿದ್ದರೆ ಅತ್ತಿಂದಿತ್ತ ಹೊರಳಾಡಿ ಯೋಗಾಸನದ ಎಲ್ಲ ಭಂಗಿಗಳ ಪ್ರಯೋಗವಾದ ಮೇಲೆ ನಿದ್ದೆ ಹತ್ತುವುದು.

ಇನ್ನು ವಿಚಿತ್ರ ಅಂದರೆ ಕುಡುಕರ ನಿದ್ರೆ ಅಲ್ವೇನ್ರಿ. ಬಾರ್ ಇಂದ ಹೊರಬಂದ ಮೇಲೆ ಮುಗಿಯಿತು. ಭೂಮಿ ತಾಯಿಯ ಅವರಿಗೆ ಹಾಸಿಗೆಯಂತೆ. ಭಾಸವಾದರೆ, ಮುಗಿಲೆ ಸೂರು  ಎಂದು ಕಲ್ಪಿಸಿಕೊಳ್ಳುತ್ತಾರೆ. ಹಾಗೆಯೇ ಸುತ್ತಮುತ್ತ ಝೇಂಕಾರ ಮಾಡುವ ಸೊಳ್ಳೆ, ನೊಣಗಳು, ರಭಸವಾಗಿ ಬೀಸುವ ಗಾಳಿಗಳು  ಜೋಗುಳ ವಾಡುತಿರುತ್ತವೆ. ಇನ್ಯಾವುದೇ ಭೇದಭಾವ ಎಣಿಸದೆ ರಸ್ತೆ ಬದಿಯಲ್ಲಿ ಮಲಗಿದರೆಂದರೆ ಬಹುಶಃ ಸ್ವರ್ಗದ ಬಾಗಿಲು ತಟ್ಟಿ ಬರುತ್ತಾರೆ.  ಅಂತಹ ಸುಖಮಯ ನಿದ್ರೆ ಅವರದಾಗಿರುತ್ತದೆ. ಬೆಳಗ್ಗೆ ಮನೆಯವರು ಹುಡುಕಿಕೊಂಡು ಬಂದರೆ ಪರವಾಗಿಲ್ಲ. ಇಲ್ಲದಿದ್ದರೆ ಅವರನ್ನು ಎಬ್ಬಿಸಲು ಆ ದಿನಕರ ನೂತನ ಪ್ರಬಲ ಕಿರಣಗಳಿಂದ ಮುಖಕ್ಕೆ ಮುತ್ತಿಟ್ಟು ರಮಿಸಬೇಕು.

ಇನ್ನು ಅಸಹಾಯಕರು ನಿರ್ಗತಿಕರ ಪಾಡು ಹೇಳತೀರದು. ಸಿಕ್ಕ ಸಿಕ್ಕಲ್ಲೆಲ್ಲಾ ದೇವಸ್ಥಾನದ ಜಗಲಿ, ಪುಟ್ಬಾತ್, ರಸ್ತೆ , ಪಾರ್ಕಿನ  ಕಲ್ಲುಗಳ ಮೇಲೆ ಲೋಕದ ಪರಿವೆಯೇ ಇಲ್ಲದಂತೆ, ನಾಳೆಯ ಚಿಂತೆಯು ಮಾಡದಂತೆ, ಸುಖನಿದ್ರೆ ಮಾಡುವ ಸುಖಿ ಪುರುಷರು ಎಂದರೆ ಇವರೆ. ಸಂತೃಪ್ತ ನಿದ್ರೆ ಅವರ ಹಕ್ಕು ಎನ್ನಬಹುದು. ಇನ್ನು ಕೆಲವರಿರುತ್ತಾರೆ ಅವರಿಗೆ ಪರೀಕ್ಷೆಗೆ ಕೋಡ್ ವರ್ಡ್  ಕೊಡುವಂತೆ ದಿನ ಮಲಗುವ ಜಾಗವೇ ಬೇಕು . ನಿದ್ರೆ  ಹತ್ತಿರ ಸುಳಿಯುವುದಿಲ್ಲ . ಹವ್ಯಾಸದ ಬಲಿಪಶುಗಳನ್ನು ನಾವು ಕಾಣಬಹುದು

ಒಟ್ಟಾaaರೆ ನಿದ್ರೆ ನಿದ್ರಾದೇವತೆಯಾಗಿ ಎಲ್ಲರ ಮನೆಗೆ ಬಂದು ಅವರ ಆಯಾಸ  ತೊರೆದು ಮನಶಾಂತಿ ಕರುಣಿಸಿ ಅವರ ಬದುಕು ಹಸನಾಗಿಸಲಿ . ಅದರ ಹೊರತು ನಿದ್ರೆ ರಾಕ್ಷಸ ರೂಪದಲ್ಲಿ ಪ್ರವೇಶಿಸಿ ಯಾರ ಬದುಕನ್ನು ಸಾಧನೆ ರಹಿತವಾಗಿ ಮಾಡದಿರಲಿ ಎಂದು ಆಶಿಸೋಣ


ಅನುಸೂಯ ಯತೀಶ್

.

2 thoughts on “

  1. ನಿದ್ರೆಯ ವಿವಿಧ ಪ್ರಕಾರಗಳನ್ನು ,ಅದು ನೀಡುವ ಮೋಜು ಮಸ್ತಿ ಯನ್ನು, , ದಣಿವಾರಿಸುವ ಸುಖದ ಅನುಭವಗಳನ್ನು, ,ನಿದ್ರೆಯೇ ಇಲ್ಲದ ಜಗತ್ತಿನ ಕಲ್ಪನೆಯಲ್ಲ ನಿಜದ ಸ್ಥಿತಿಯನ್ನು , ವಿಚಿತ್ರ ನಿದ್ರೆಯ ಹಲವು ನಿದರ್ಶನಗಳನ್ನು ಅದೆಷ್ಟು ಸೊಗಸಾಗಿ , ಸ್ವಾರಸ್ಯಕರವಾಗಿ ಲಾಲಿತ್ಯವಾಗಿ ಬರೆದಿದ್ದೀರಿ ! ಅಭಿನಂದನೆಗಳು ಮೇಡಂ. ಹಾಗೆಯೇ ಬರೆಯುತ್ತಿರಿ

    1. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
      ಹೃನ್ಮನದ ಧನ್ಯವಾದಗಳು

Leave a Reply

Back To Top