ಕಾವ್ಯ ಸಂಗಾತಿ
ಬುದ್ಧನಂತೆ ಬದ್ಧನಾಗುವೆಯಾ
ಅನುಸೂಯ ಯತೀಶ್
ಓ ಅದಮ್ಯ ಚೇತನವೆ
ನಿನ್ನೊಳಗೆ ಅದೆಷ್ಟು ಬದ್ಧತೆಯಿತ್ತು
ಮತ್ತಾರಿಗೋ ಪಾಲಿಸಲು ಆಗದಷ್ಟು
ಎಲ್ಲರ ಮನದೊಳಗಿನ ಒಗಟು ನೀನು
ಜೀವನ್ಮುಕಿ ನಡೆಯ ಗುಟ್ಟೇನು
ನನ್ನೊಳಗೂ ಕಾಡುವ ಒಂದಷ್ಟು ಪ್ರಶ್ನೆಗಳಿವೆ
ಮೋಹಪಾಶದಲ್ಲಿ ಬಂಧಿಯಾಗಿ ತೊಳಲಾಡುತ್ತಿರುವೆ
ಹೊರಬರಲು ದಾರಿ ಕಾಣದೆ ಹಪಹಪಿಸುತ್ತಿರುವೆ
ಸುತ್ತಲೂ ಆಸೆಯೆಂಬ ಸುವರ್ಣ ಜಿಂಕೆಗಳು
ಅತ್ತಿಂದಿತ್ತ ಸುಳಿದಾಡುತ್ತಿರುವಾಗ
ಚಂಚಲ ಚಿತ್ತಕೆ ಕಡಿವಾಣ ಹೇಗೆ ಹಾಕಲಿ
ಅದೊಂದು ಭ್ರಮಾಲೋಕ
ದೂರ ದೂರ ಸಾಗಿದಷ್ಟು ಮತ್ತಷ್ಟು ಸೆಳೆತ
ಕಬಂಧ ಬಾಹುಗಳ ಚಾಚಿ ಆಲಂಗಿಸುವಂತೆ ಕೈಬೀಸಿ ಕರೆಯುತ್ತಿದೆ
ನಾನೇಗೆ ವಶವಾಗದಿರಲಿ
ಅರಿಷಡ್ವರ್ಗಗಳ ಪೀಠದ ಎದುರಿಗೆ ಹರಕೆಯಾಗಿರುವೆ
ಓ ಜ್ಞಾನದ ಪ್ರದೀಪ ನೇ
ನೀ ಬಯಸಿದ
ಆಶಿಸಿದ ಜಗತ್ತನ್ನೊಮ್ಮೆ ಮನಸಾರೆ ಕಣ್ಣರಳಿಸಿ ನೋಡಿದೆ
ನೀ ಕಟ್ಟಿದ ಶಾಂತಿ ಸ್ತೂಪದ ಮೇಲೆ
ಅಶಾಂತಿಯ ಮಹಲು ರಾರಾಜಿಸುತ್ತಿತ್ತು
ಅಚ್ಚರಿಯಿಂದ ಬಾನಿನೆಡೆ ದೃಷ್ಟಿ ಹರಿಸಿದೆ
ಬೆಚ್ಚಿಬೀಳುವ ದೃಶ್ಯವದು ಹಸಿಮಾಂಸ ಬಿಸಿ ರಕ್ತಕೆ
ಹಾತೊರೆದು ಕುಕ್ಕಿ ಕುಕ್ಕಿ ತಿನ್ನುವ ರಣ ಹದ್ದುಗಳ
ಸಾಲು ಸಾಲು ಮೆರವಣಿಗೆ ಸಾಗುತಿತ್ತು
ಬಾ ಪ್ರಭುವೆ ಮತ್ತೊಮ್ಮೆ ಹುಟ್ಟಿ ಬಾ
ಅನ್ಯಾಯ ಅನಾಚಾರ ವ್ಯಾಮೋಹ ಕ್ರೌರ್ಯದ ಚಕ್ರವ್ಯೂಹದಲ್ಲಿ
ಸಿಲುಕಿರುವ ನಿರ್ಭಾಗ್ಯ ನರಜಂತುಗಳ ಪೊರೆಯಲು
ಭವ ಬಂಧನದ ರೋಷದ ಸಂಕೋಲೆಯಿಂದ ಬಿಡಿಸಿ
ದ್ವೇಷ ಅಸೂಯೆಗಳನು ನಿಗ್ರಹಿಸಿ
ಮನದ ತುಂಬಾ ಶಾಂತಿಯ ಬೆಳಕು ಹರಿಸಲು ಬಾ
ಚೆಂದದ ಕವನ ಬಹು ಅರ್ಥ ಪೂರ್ಣ