ಗಜಲ್
ಸಖಿ ನಿನ್ನ ಮರೆಯಲಾಗದೇ ಸೋತು ಮಧು ಶಾಲೆಯಲೇ ಮಂಚ ಹಾಕಿ ಮಲಗಿರುವೆ
ಇಂದಲ್ಲ ನಾಳೆ ಒಲವಲಿ ಬಳಿ ಕರೆದಾಳೆಂದು ಅದೇ ಮಧುರ ಕನಸಲಿ ತೇಲುತಿರುವೆ
ಆ ಮತ್ತಿಗೂ ಸಹ ನಿನ್ನ ನೆನಪು ಪ್ರೀತಿ ಪ್ರೇಮ ಮರೆಸಲಾಗದೇ ಸೋತು ಬಸವಳಿದಿದೆ
ಇದೇನು ಮಾಡಿದೆ ಹೃದಯ ಒಡೆದು ಚೂರಾಗಿ ಚೆಲ್ಲಾಪಿಲ್ಲಿಯಾಗಿವೆ
ಕಣ್ಣರಿಯದ್ದು ಕರುಳರಿತದಂತೆ ಅದೆಂತಹ ಕಠೋರ ಕರುಳೇ ನಿನ್ನದು ಸಖಿ
ಸುಪುಷ್ಟ ಅಂಗಸೌಷ್ಟವ ಒಲವು ಕಾಳಜಿ ತುಂಬಿದ ನಿನ್ನ ಆ ಮನಸು ಮರೆಯದಂತೆ ಕಾಡುತಿವೆ
ಕಣ್ಣಲ್ಲಿ ಕಣ್ಣು ಬೆರೆಸದೇ ಪುಸ್ತಕದಲಿ ಮುಖ ಮುಚ್ಚಿಕೊಳ್ಳೋದು ಯಾವ ನ್ಯಾಯ
ಸೋಲೋ ಭಯ ನಿನಗೆ ಬಲ್ಲೆ ನಾನೇನು ಅರಿಯದ್ದಲ್ಲ ಮನವ ಪೂರ್ತಿ ಅರಿತಿರುವೆ
ನಿನ್ನ ಮೇಲೆ ಮರಣಪತ್ರ ಬರೆದಿಟ್ಟು ನಾ ಸಾಯಲಾರೆ; ಸತ್ತರು ಅಪವಾದ ಕೊಡಲಾರೆ
ಮನವರಿಯದ ಸತ್ಯವಿಲ್ಲ; ಬದುಕಿಸಿಕೊಳ್ಳದೆ ನನ್ನ ನಿನಗೆ ನೆಮ್ಮದಿಯಿಲ್ಲ ತಿಳಿದಿರುವೆ
ನನ್ನ ದೂರಾಗಿಸಿ ನೀ ಮನಸಾರೆ ಸುಖದಿ ಬಾಳಲಾರೆ ಬಲ್ಲೆ ನಿನ್ನ ಹೃದಯವನ್ನು
ಒಂದೇ ದಿನವಾದರೂ ಜೊತೆ ಬಾಳಿದರೆ ಈ ಜನ್ಮ ಪರಿಪೂರ್ಣವೆಂದು ನಂಬಿರುವೆ
ಈ ಬದುಕೇ ನಿನಗಾಗಿ ಮೀಸಲಿಟ್ಟು ಮುಂದಿನ ದಿನಗಳಿಗೆ ಹಂಬಲಿಸುತ್ತಾ ಬೆಂದಿರುವೆ
ಹೊನ್ನಸಿರಿ’ಯ ಬದುಕಿಸುವಿಯೋ ವ್ಯರ್ಥ ಕೊಲ್ಲುವಿಯೋ ನಿನಗೇನೇ ಬಿಟ್ಟಿರುವೆ.
ಸಿದ್ಧರಾಮ ಹೊನ್ಕಲ್