ಕಾವ್ಯ ಸಂಗಾತಿ
ಈಗ ಯಾರಿದ್ದಾರೆ?
ಅಯ್ಯೋ ಪಾಪ ಎನ್ನುವ
ಪಾಪದ ಮನಸ್ಸುಗಳು
ಕಾಂಕ್ರೀಟ್ ಗೋಡೆಗಳ ಮಧ್ಯೆ
ಮಣ್ಣಲ್ಲಿ ಮಣ್ಣಾಗಿ
ಮನನೊಂದು ವಿರಮಿಸುತ್ತಿವೆಯಲ್ಲ….
ತನ್ನ ನಗುವಿಗಾಗಿ
ಇತರರ ಗೋರಿಗಳ ಮೇಲೆ
ಮಹಲುಗಳ ನಿರ್ಮಾಣ
ಮಾಡುತ್ತಿರುವ ಮನಸ್ಸುಗಳ ಒಳಗೆ
ಮಾನವೀಯತೆಯ ಹುಡುಕಬೇಕಿದೆಯಲ್ಲ
ಅನ್ಯಾಯವನ್ನೇ
ನ್ಯಾಯವನ್ನಾಗಿ ಬಿಂಬಿಸುತ್ತಾ
ಆರಾಮ ಕುರ್ಚಿಯಲ್ಲಿ
ಹಣದ ಹಾಸಿಗೆಯಲ್ಲಿ
ರಾಶಿರಾಶಿ ಸಂಪತ್ತಿನ
ಕನಸು ಕಾಣುತ್ತಿರುವ
ನಿರ್ದಯಿ ಮನಸ್ಸುಗಳಿಗೆ
ಒಲವ ಪಾಠವ ಉಣಿಸಬೇಕಿದೆಯಲ್ಲ
ಬುದ್ಧ, ಬಸವ, ಅಂಬೇಡ್ಕರರು
ಬಂದು ಹೋದರು
ಈಗ ಯಾರಿದ್ದಾರೆ?
ಏಳಿ, ಎದ್ದೇಳಿ,
ಗುರಿಮುಟ್ಟುವವರೆಗೂ ಕಣ್ಮುಚ್ಚದಿರಿ
ಎಂದು ಎಚ್ಚರಿಸಲು
ಈಗ ಯಾರಿದ್ದಾರೆ?
ಕಾಲಕಾಲಕ್ಕೆ ಬರಗಾಲ ತಪ್ಪಿಸಲು
ಸುರಿವ ಮಳೆ ಹನಿಯಂತೆ
ಧರೆಗಿಳಿದು ಇಳೆಯಪ್ಪಿ ಸಂತೈಸಿ
ಭುವಿಯ ಸ್ಮಶಾನ ಮೌನಕ್ಕೆ
ಪ್ರೇಮಾಂಕುರದ ಸಂಗೀತ ಸುಧೆಯಾಗಲು
ಈಗ ಯಾರಾದರೂ ಬೇಕಾಗಿದ್ದಾರೆ….
———
ಒಲವು