ಕಾವ್ಯ ಸಂಗಾತಿ
ಗಾಂಧಿ ಎಂಬ ಬಯಲು
ಹರಿವ ನದಿ ಆ ಬದಿಗೆ
ನಿಂತ ಸಂತ ಈ ಬದಿಗೆ
ಇದ್ದೀತು ಹರಿವ ನದಿಯೊಳಗೂ
ಬೀಳುವ ತಾರೆಗಳೆದೆಯ ನೋವು!
ಅಕಟಕಟಾ!
ಆಡಲೇ ಬೇಕೆಂದಿದ್ದರೆ ನಾಟಕ
ಡರ್ಬಾನಿನಲ್ಲಿ,ಇಂಗ್ಲೆಂಡಿನಲ್ಲಿ,
ಇಂಡಿಯಾದ ಹಳ್ಳಿಹಳ್ಳಿಗಳ ಸುತ್ತ ಸುತ್ತಬೇಕಿರಲಿಲ್ಲ ಹೀಗೆ;
ನೆನೆದಾಗಲೆಲ್ಲ ಮೂಡುತಿರಲಿಲ್ಲ
ಎದೆಯ ಬಾಯಲ್ಲಿ ಫಕೀರನ ಚಿತ್ರ
ಬೆಂದ ಅಡಿಗೆಯ ಬಡಿಸುವುದಕೂ ಮುನ್ನ
ಬೇಯುವ ದುಃಖ ಕುಡಿದ ಅವ್ವನ ಹಾಗೆ
ತಾಯಿಯಾಗಬೇಕು
ನೀವು,
ಇಳಿಯಬೇಕೆಂದಿದ್ದರೆ ಎದೆಗೆ ಗಾಂಧಿ!
***************
ಹೊಡೆವವರದೆ ಸಾವು
ನಗುವ ಗಾಂಧಿ
ನಿಂತ ಗಾಂಧಿ
ನಡೆವ ಗಾಂಧಿ
ಕೋಲಿನಜ್ಜ ಗಾಂಧಿ
ಬರಿದೆದೆಯ ಬಡವ ಗಾಂಧಿ
ಪ್ರತಿಮೆಗಳು ನೂರು
ಊರ ಹಾದಿ ಬೀದಿಯುದ್ಧಕೂ
ಹೊಡೆದೇ ಹೊಡೆವರು ನಿತ್ಯವೂ ತೋಪು
ಎದೆಯಿಂದ ಸುರಿದ ದ್ರವ ಆರಿಲ್ಲ ಇಂದಿಗೂ
ಹೊಡೆವವರದೆ ಸಾವು ನಿತ್ಯವೂ!
ಅಗೋ ನೋಡಿ ಇರುವೆ ಸಾಲು!
ಗಾಂಧಿ ಸಾಯುವುದಿಲ್ಲ ಎಂದಿಗೂ!
ಬಿ.ಶ್ರೀನಿವಾಸ
ನಿಮ್ಮ ಕವಿತೆಗಳು ಓದುವುದೇ ಕಾವ್ಯಾನಂದ ಸರ್
ಸೂಕ್ಷ್ಮ ಮತ್ತು ಎದೆಗಿಳಿವ ಸಾಲುಗಳು.
ಹೌದು..
“;ಗಾಂಧೀ ಸಾಯುವುದಿಲ್ಲ ಎಂದಿಗೂ “.
ತಾಯಿಯಂತೆ ಮನವಿದ್ದಲ್ಲಿ ಅರ್ಥವಾಗುವ
ಮಹಾತ್ಮ ಗಾಂಧೀಜಿ,
ಅವರನ್ನು ಅರಿಯದವರಿಂದ ದೂರವಾಗುತ್ತಾ
ಸಾಗುತ್ತಾರೆ.
ಚೆನ್ನಾಗಿದೆ.
Very Nice