ನಶೆಯೆಂದರೆ….

ಕಾವ್ಯ ಸಂಗಾತಿ

ನಶೆಯೆಂದರೆ….

ಶಿವಲೀಲಾ ಹುಣಸಗಿ

4 Love Art

ನಶೆಯೆಂದರೆ ಇದೆ ಇರಬೇಕು
ಮರಿಚೀಕೆಯ ಬೆವರಿಗೆ
ಹುಸಿಮುನಿಸ ಕರುಳಿಗೆ
ಕಣ್ಣಾಮುಚ್ಚಾಲೆಯ ಆಟಕೆ
ಮತ್ತಿನಲಿ ಮೈಮರೆತದ್ದೆ ಬಂತು
ನೀರಿಗೆಯ ತೊಡರಿನಲೆಲ್ಲ
ಬಿಗಿಯಾದ ಕುಪ್ಪಸದ ಕಂಪಿಗೆ
ಹೊತ್ತು ಸರಿದದ್ದು ಅರಿವಾಗಿಲ್ಲ
ಎಲ್ಲವೂ ನಿನ್ನ ಲೀಲೆಯೇ
ನಾಚಿನೀರಾಗುವ ಮನ್ವಂತರಕೆ
ಯುಗಗಳು ನಾಚಿದ್ದು ಮರೆತಿಲ್ಲ
ರುಚಿಸದ ಕಂಗಳು ಅರಸುತ್ತಿದೆ
ನಿನ್ನ ಎದೆಯ ಗೂಡನು
ಬೆಚ್ಚನೆಯ ಮರಿಗುಬ್ಬಿಯಂತೆ
ಆಲಿಂಗನದಿ ತಬ್ಬಲಾತುರವೆನಗೆ
ಕಂಕುಳಲಿ ಕಚಗುಳಿಯಿಟ್ಟು
ಬರಸೆಳೆದ ಒರಸೆಗೆ ನಡುಕ ಹುಟ್ಟಿ
ಎದೆಯ ಹದ ತಪ್ಪಿದ ಹಳಿಯಂತೆ
ಹಳದಿ ಜಲಧಾರೆಗೆ ಕಳವಳಗೊಂಡು
ಕಣ್ಮನ ಸೆಳೆವ ನಿನ್ನೆದೆಯ ಹರಿವು
ಮಲ್ಲಿಗೆಯ ಮೆಲ್ ಹೊದಿಕೆಯಾಗಿ
ಮೌನದಿ ರೋಧಿಸುತ್ತಿದೆ ಮನಸು
ಬತ್ತಿಯಂತೆ ಹೊಸೆದವನು
ಮುತ್ತಿನ ಮಳೆ ಸುರಿಸಿದವನು
ಅದರದಂಗಳಕೆ ಲಗ್ಗೆಯಿಟ್ಟವನು
ನಿದ್ದೆಗೆಡಿಸಿ ಮರೆಯಾದೆಯೆತ್ತ?
ಬರಿ ಕನವರಿಕೆಗಳೆ ಕಾಡಿದಷ್ಟು
ಕಂಗಳ ಹಣತೆಯಲ್ಲಿ ನಕ್ಷತ್ರಗಳು
ವಿರಹದಾಗ್ನಿಯಲಿ ಬೆಂದು ನರಳಿ
ಉರಿದುರಿದು ನೆಲಕುರುಳುತ್ತ
ಎದೆಯಂಗಳ ಬರಿದಾಗಿದೆ
ಶಶಿಯಾಗಮನದ ನಿರೀಕ್ಷೆಯಲಿ
ಮುಂಗುರುಳ ಮುಂಗಾರಿಗೆ
ಪ್ರೀತಿಯ ಮಿಂಚ ಸಿಡಿಸಿರುವೆ
ಬರಡಾದ ಪ್ರೇಮವ ಕೊನರಿಸಲು
ನಶೆಯ ನತ್ತ ಮುಡಿಸುಬಾರಾ
——————————-

12 thoughts on “ನಶೆಯೆಂದರೆ….

  1. ತುಂಬ ಅರ್ಥಗರ್ಭಿತ ಕವನ…ನಶೆಯ ಆಯಾಮಗಳು ಮನತಟ್ಟಿದವು‌..ನೈಸ್

  2. ನಶೆಯ ಕಂಪು ತಂಪಾದ ಪದ ಬಳಕೆ ಗಟ್ಟಿಯಾದ ಬಿಗುವಿನ ಒಡನಾಟ ಕಾವ್ಯದಲಿ ಮನೋಹರವಾಗಿದೆ

  3. ಪ್ರೇಮದ ಅಂತರ್ ಬಾಹ್ಯ ದ ಸುಂದರ ತಲ್ಲಣಗಳು ಮನೋಲ್ಲಾಸ ನೀಡುತ್ತದೆ.ತಮ್ಮ ಬರವಣಿಗೆ ಕೌಶಲ್ಯ ಕ್ಕ ಶರಣು ಶರಣು

  4. ವಿಶೇಷವಾದ ಭಾವಲಹರಿಯೊಳು ಹೊರಹೊಮ್ಮುವ ತಮ್ಮ ಬರೆವಣಿಗೆಯೇ ವಿಭಿನ್ನ ಪ್ರತಿಮಾತ್ಮಕತೆಯಲ್ಲಿ ಓದುಗರ ಸೆಳೆಯುವುದು ಮೇಡಂ….
    ಸೂಪರ್ ….

  5. ಹೌದು ಎಲ್ಲರಿಂದ ಇದು ಸಾಧ್ಯವಿಲ್ಲ ಇದಕ್ಕೆ ಗಂಡೆದೆಯೇ ಬೇಕು.ನಿಮ್ಮ ಕವನಗಳಿಗೆ ಮೆಚ್ಚುಗೆ ಸೂಚಿಸಲು ನಮಗೆ ಶಬ್ದಗಳ ಬರಗಾಲ.

  6. ಅನುರಾಗದ ಮಿಡಿತವನ್ನು ಪದಗಳಲ್ಲಿ ಹಿಡಿದಿಟ್ಟ ಪರಿ ಬಹಳ ಸುಂದರವಾಗಿದೆ ಅಕ್ಕಾ

  7. ವಿಭಿನ್ನವಾದ ಕವನ, ವಿಶಿಷ್ಟ ಭಾವ ಲೋಕವನ್ನು ತೆರೆಸಿತು..ಸೂಪರ್ ಮೇಡಂ

  8. ನಶೆ ಕವನ ನಶೆಯೆರಿಸಿದೆ. ಭಾವ ಲೋಕದಲ್ಲಿ ವಿಹರಿಸುವಂತೆ ಮಾಡಿದೆ. ಅಭಿನಂದನೆಗಳು

  9. ನಶೆ ಎಂದರೆ ಹೀಗೂ ಇರುತ್ತೆ ಅಂತಾ ಮನಸ್ಸಿಗೆ ಒರೆ ಹಚ್ಚುವಂತಾ ಸಾಲುಗಳು….ತುಂಬಾ ಚೆನ್ನಾಗಿದೆ

Leave a Reply

Back To Top