ಕಾವ್ಯ ಸಂಗಾತಿ
ಅದೇ ನವಿಲುಗರಿ
ಶಂಕರಾನಂದ ಹೆಬ್ಬಾಳ
ನೀ ಕೊಟ್ಟ ನವಿಲುಗರಿ
ಇನ್ನು ಹಾಗೆ ಇದೆ ಗೆಳತಿ
ಅಜ್ಜಿಕೊಟ್ಟ ವಸ್ತುವಂತೆ
ಜೋಪಾನವಾಗಿದೆ ಪುಸ್ತಕದಲ್ಲಿ,
ಬಣ್ಣಬಣ್ಣದ ಸೀರೆಯಂತೆ
ಹಳೆಯ ನೆನಪುಗಳ ಕೆದಕಲು
ಸಿಕ್ಕಿತೊಂದು ಗರಿ
ಅದೆ ನವಿಲುಗರಿ….
ಆಟವಾಡುವ ವಯಸು,
ಕಟ್ಟಿತೊಂದು ಕನಸು,
ಮರಿಹಾಕದ ನವಿಲುಗರಿಯ
ಕೊಟ್ಟಳೊಂದು ಕುವರಿ
ಅಂದ ಚಂದಕೆ ಮರುಳಾಗಿ ತಂದೆ,
ಇಟ್ಟಿದ್ದೇನೆ ಬೆಳ್ಳಿಬಂಗಾರದಂತೆ
ಭದ್ರ ಪೆಟ್ಟಿಗೆಯಲ್ಲಿ ನೋಡಿದರೆ
ಈಗ ಅದೇ ನವಿಲುಗರಿ…
ಕಾಲಚಕ್ರ ತಿರುಗಿದೆ
ನನಗೂ ಮಕ್ಕಳಾಗಿದೆ
ನನ್ನ ಎತ್ತರಕ್ಕೆ ಬೆಳೆದಿವೆ
ಹಳೆಯ ನೆನಪುಗಳನು ಎಣಿಸಿ
ಮೆಲುಕು ಹಾಕಲು ಭಾವಚಿತ್ರ
ನಾ ಸಣಕಲು ಅವಳು ಡುಮ್ಮಿ,
ಅಂದೆ ಗೆಳೆತನ ಗುರುತಿಗೆ ಕೊಟ್ಟ
ಕಾಣಿಕೆ ನೋಡು
ಅದೇ ನವಿಲುಗರಿ….
ಬಣ್ಣ ಮಾಸಿದೆ
ಪಕಳೆಗಳು ಉದುರಿಲ್ಲ
ಎತ್ತಿಕೊಂಡರೆ ಉದುರುವುದೇನೋ
ಎಂಬ ಶಂಕೆ ಮನದಲ್ಲಿ
ಆಹಾ..ಗರಿಯೇ ಏನು ನಿನ್ನಲೀಲೆ
ಎಂದು ಒಳಗೊಳಗೆ ಗುಂಯ್ ಗುಟ್ಟಿದೆ
ಅಲ್ಲೆ ಇಟ್ಟೆ ಈಗಲೂ ಮಕ್ಕಳಿಗೆ
ನಿತ್ಯವೂ ತೋರಿಸುತ್ತೇನೆ
ಮಗು ಇದೇ ನೋಡು ಅಂದಿನ
ನನ್ನ ಮರಿಹಾಕದ ಚಂದದ
ಅದೇ ನವಿಲು ಗರಿ…..