ಕಾವ್ಯ ಸಂಗಾತಿ
ಭಾವನೆ…. ನಮಗೂ ಇದೆ..
ಸುಮಾ, ಪಡುಬೆಳ್ಳೆ
ಹರಿದ ಬಟ್ಟೆ ಬಡಕಲು ದೇಹ ತೋರಿತು,
ಮಣ್ಣಿನ ಕಾಯ; ಹಸಿ ನೆತ್ತರ ಗಾಯ
ಅಸ್ಪ್ರಶ್ಯತೆ ತಂದಿತು
ಇದ ನೋಡಿಯು ನೋಡದ ಹೆತ್ತವರ
ಮಾತು ಮೂಕವಿಸ್ಮಿತವಾಯಿತು
ಸುತ್ತಲೂ ಮೌನ, ವ್ಯರ್ಥ ಮಾತಿನ್ನೇಕೆ?
ಸಹಾಯ ಮಾಡಬಯಸುವ ಕೆಲವೊಂದು ಜೀವ,
ಅದ ಹಿಂಜರಿಸಿತು ಅವರ ನಾಚಿಕೆಯ ಸ್ವಭಾವ
ಶ್ರೀಮಂತಿಕೆ ಇದ್ದರೇನು ಬಂತು,
ನಮ್ಮನ್ನು ಕಾಣುವ, ತಲೆಗೆಟ್ಟ ವರ್ತನೆ ಅವರದ್ದಂತೂ
ಎಲ್ಲೋ ಪುಸ್ತಕದ ಭಂಡಾರ ಹೊರುವರು
ನಮ್ಮದೆಂತ ಪರಿಸ್ಥಿತಿ, ಪರಿಸ್ಥಿತಿ….?
ಹೆತ್ತವರ ಅನಕ್ಷರತೆ ಮುಳ್ಳಾಯಿತೆ ನಮಗೆ?
ನಮ್ಮೆಲ್ಲಾ ಕನಸುಗಳು ಸುಳ್ಳಾಯಿತೆ ಕೊನೆಗೆ?
ಯಾರದ್ದೋ ಹರಕಲು ಬಟ್ಟೆ, ನಮ್ಮ ಹೊಸಬಟ್ಟೆ
ಅಂದೇ ಯುಗಾದಿ, ದೀಪಾವಳಿ!
ಖುಷಿಯಲ್ಲೇ ತುಂಬಿತೀ
ಪುಟ್ಟಹೊಟ್ಟೆ
ಅಂತಸ್ತಿನ ಮನೆಯ ತಂಗಳೂಟ
ಅದೇ ಮೃಷ್ಟಾನ್ನವೆಂದು ನಮ್ಮ ಓಟ
ಇದ ಕಂಡು ಸುರಿಯುತಿದೆ ಕಂಬನಿ ನಿರ್ಜೀವಿಗಳಿಂದ
ಯಾರಂದರು ಮನುಷ್ಯರು ನಾವಲ್ಲವೆಂದು?
ಎಲ್ಲರಂತೆ ನಮಗೂ ಭಾವನೆಗಳಿವೆ
ಈ ಯಾತನೆ ಎಲ್ಲಿ ಮುಟ್ಟುವುದೋ; ಮುಟ್ಟದಿರುವುದೋ?
ಎಂತಹ ಆಲೋಚನೆ ನಿನ್ನಲ್ಲಿ ಮೂಡಿತೋ ದೇವರೆ
ಇಂತಹ ಜೀವನ ಸೃಷ್ಟಿಸಲು, ನಮ್ಮಂತಹ ಮಕ್ಕಳಿಗೆ .
(ವಲಸೆ ಕಾರ್ಮಿಕರ ಮಕ್ಕಳ ಬಗೆಗೆ)