ಗಜಲ್
ಮಂಡಲಗಿರಿ ಪ್ರಸನ್ನ
ಅವಳು ಬರುವ ಹಾದಿಯಲಿ ಹೂವು ಅರಳಲಿ
ಸೂರ್ಯನು ಕೆಲಕಾಲ ಬದಿಗೆ ನಗುತ ನಿಲಲಿ
ಮೃದುವಾದ ಪಾದಗಳು ಮಲ್ಲೆ ತೂಕದ ನಡಿಗೆ
ಮುಳ್ಳು ದಾರಿಗೂ ಒಂದಷ್ಟು ಮಲ್ಲಿಗೆ ಸುರಿಯಲಿ
ವೈಶಾಖ ಬಿರುಬಿಸಿಲ ನೆಲ ಅಗ್ನಿಕುಂಡದ ಹಾಗೆ
ರಸ್ತೆ ಇಕ್ಕೆಲದಿ ಗಿಡಮರ ತಂಪನೆ ಗಾಳಿ ಬೀಸಲಿ
ಮೃದುಕೆನ್ನೆ ಹೊಳಪುಗಣ್ಣು ಶ್ವೇತವರ್ಣದ ನೀರೆ
ಅವಳ ಹಣೆಗೆ ಬೆವರ ಮಣಿಸಾಲು ಕಾಣದಿರಲಿ
ಮುಂಗುರುಳ ಮೃದುಲಾಸ್ಯ ನೀಳವೇಣಿ ಚೆಲುವೆ
ಗಾಳಿಯು ಮೋಡವನು ನಿಲಿಸಿ ಮಳೆ ಸುರಿಸಲಿ
ಹಕ್ಕಿಪಿಕ್ಕಿ ಅರೆಕ್ಷಣ ತಮ್ಮೊಲವ ಸುಧೆ ಮರೆತು
ಅವಳು ಬರುವತನಕ ಇಂಪಾದ ರಾಗ ಹಾಡಲಿ
ಅವಳೆನ್ನ ಸೇರುತಲೆ ಹಗಲು ಇರುಳಾಗಲಿ ‘ಗಿರಿ’
ಇರುಳು ಮುಗಿಯದಂತೆ ಚಂದ್ರ ತಡೆದುಬಿಡಲಿ
ಸೊಗಸಾದ ಪದ್ಯ ಸಂದರ ಕಲ್ಪನೆ
ಸೊಗಸಾದ ಪದ್ಯ ಸಂದರ ಕಲ್ಪನೆ
ಶಾಂತಲಾ ಮಧು