ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.

ಗಾಂಧಿವಾದಿ, ಸಾಮಾಜಿಕಕಾರ್ಯಕರ್ತೆ, ಸ್ವತಂತ್ರ್ಯಹೋರಾಟಗಾರ್ತಿ

ಪುಷ್ಪಲತಾದಾಸ್ (1915-2003)

 ಪುಷ್ಪಲತಾದಾಸ್ ಅವರು ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಮತ್ತು ಅಸ್ಸಾಂನ ಶಾಸಕಿಯೂ ಕೂಡ ಆಗಿದ್ದರು.

ಪುಷ್ಪಲತಾ ಅವರು 27 ಮಾರ್ಚ್ 1915ರಂದು ಜನಿಸಿದರು. ಇವರ ತಂದೆ ರಾಮೇಶ್ವರ ಸೈರೆಯಾ, ತಾಯಿ ಸ್ವರ್ಣಲತಾ. ಪುಷ್ಪಲತಾ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪನ ಬಜಾರ ಗಲ್ರ್ಸ್ ಪ್ರೌಢ ಶಾಲೆಯಲ್ಲಿ ಪಡೆದರು. ಶಾಲಾದಿನಗಳಲ್ಲಿಯೇ ಮುಕ್ತಿ ಸಂಘ ಎಂಬ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಪುಷ್ಪಲತಾರವರು ಮತ್ತು ಅವರ ಸಹಚರರು ಸೇರಿ ಬ್ರಿಟೀಷ್ ಸರ್ಕಾರವು ಕ್ರಾಂತಿಕಾರಿ ಭಗತ್‍ಸಿಂಗ್ ಅವರನ್ನು ನೇಣಿಗೆ ಹಾಕಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಮಾಡಿದ್ದರಿಂದ ಇವರನ್ನು ಶಾಲೆಯಿಂದ ಹೊರಹಾಕಲಾಯಿತು. ಹಾಗಾಗಿ ಇವರು ವೈಯಕ್ತಿಕವಾಗಿ ಓದಿಕೊಂಡು 1934ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡು ಇಂಟರ್ ಮೀಡಿಯೇಟ್ ಕೋರ್ಸನ್ನು ಪೂರ್ಣಗೊಳಿಸಿದರು. ನಂತರ ಆಂಧ್ರ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡು ಪದವಿ ಶಿಕ್ಷಣ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಗುಹಾಟಿಯ ಅರ್ಲೆ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನಕ್ಕೆ ಸೇರಿಕೊಂಡರು. ಲಾ ಓದುತ್ತಿರುವಾಗಲೇ ರಾಜಕೀಯ ಪ್ರವೇಶ ಪಡೆದುಕೊಂಡರು.

1940ರಲ್ಲಿ ಕಾಲೇಜು ಒಕ್ಕೂಟದ ಕಾರ್ಯದರ್ಶಿಯಾಗಿದ್ದ ಅದೇ ಸಮಯದಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಯ ಭಾಗವಾಗಿ ಕಾನೂನು ಅಸಹಕಾರ ಚಳುವಳಿಯನ್ನು ವೈಯಕ್ತಿಕ ಮಟ್ಟದಲ್ಲಿ ಸತ್ಯಾಗ್ರಹಕ್ಕೆ ಕರೆಕೊಟ್ಟರು. ಎರಡು ವರ್ಷದ ನಂತರ ಕ್ವಿಟ್ ಇಂಡಿಯಾ ಚಳುವಳಿಯು ಪ್ರಾರಂಭವಾಯಿತು. ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ ಪುಷ್ಪಲತಾರವರು ಬಂಧಿಸಲ್ಪಟ್ಟರು. ಇವರು ಜೈಲಿನಲ್ಲಿ ಇದ್ದ ಕಾರಣದಿಂದ ಕಾನೂನು ಅಧ್ಯಯನವನ್ನು ಪರಿಣಾಮಕಾರಿಯಾಗಿ ಮಾಡಲು ಆಗದೇ ಅರ್ಧಕ್ಕೆ ನಿಲ್ಲಿಸಿದರು.

ನಂತರದ ದಿನಗಳಲ್ಲಿ ಪುಷ್ಪಲತಾರವರು ಮಹಿಳಾ ಉಪ ಸಮಿತಿಯ ಸದಸ್ಯರಾಗಿ, ರಾಷ್ಟ್ರೀಯ ಯೋಜನಾ ಸಮಿತಿಯೊಂದಿಗೆ ಒಡನಾಟ ಹೊಂದಿದ್ದರು. ಹಾಗಾಗಿ ಪುಷ್ಪಲತಾರವರು ಎರಡು ವರ್ಷಗಳ ಕಾಲ ಮುಂಬೈಯಲ್ಲಿ ಉಳಿದರು. ಇವರ ಕ್ರಿಯಾಶೀಲತೆ ಮತ್ತು ಕಾರ್ಯವೈಖರಿಗಳೇ ಮೃದುಲಾ ಸಾರಾಭಾಯಿ, ವಿಜಯಲಕ್ಷ್ಮಿ ಪಂಡಿತ, ಒಮೀ ಕುಮಾರ್ ದಾಸ್ ಇವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಕಿಸಿದಂತಾಯಿತು.

    1942 ರಲ್ಲಿ ಒಮಿಯಾ ಕುಮಾರ ದಾಸ್ ಅವರೊಂದಿಗೆ ವಿವಾಹವಾಗಿ ಮರಳಿ ಅಸ್ಸಾಂಗೆ ಬಂದರು. ನಂತರ ಇವರು ಎರಡು ಸಂಘಟನೆಗಳನ್ನು ಸ್ಥಾಪಿಸಿದರು. ಅವುಗಳೆಂದರೆ 1) ಶಾಂತಿ ಬಹಿನಿ 2) ಮೃತ್ಯು ಬಹಿನಿ. 1942 ರಲ್ಲಿ ಪುಷ್ಪಲತಾದಾಸ್ ರವರು ಮತ್ತು ಮೃತ್ಯು ಬಹಿನಿಯ ಕಾಂಬ್ರೆಡ್ಸ್‍ಗಳು ಸೇರಿಕೊಂಡು ರಾಷ್ಟ್ರೀಯ ಧ್ವಜವನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಸಮಯದಲ್ಲಿ ಪೋಲಿಸರು ಗುಂಡು ಹಾರಿಸಿದರು. ಅದರಲ್ಲಿ ಪುಷ್ಪಲತಾರವರ ಸಹದ್ಯೋಗಿಯಾಗಿದ್ದ ಕನಕಲತಾ ಬಾರೊ ಅವರಿಗೆ ಗುಂಡುತಾಗಿ ಸಾವನ್ನಪ್ಪಿದರು. ಈ ಸಮಯದಲ್ಲಿಯೇ ಪುಷ್ಪಲತಾರವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. ಹಾಗೆಯೇ ಅಸ್ಸಾಂ ಕಾಂಗ್ರೆಸ್ ಸಮಿತಿಯ ಮಹಿಳಾ ವಿಭಾಗದ ಕನ್ವಿಯನರ್ ಆಗಿ ಕಾರ್ಯ ನಿರ್ವಹಿಸಿದರು.

1947ರಲ್ಲಿ ಭಾರತದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಒಮಿಯಾ ದಾಸ ಅಸ್ಸಾಂನ ಧೇಕಿಜುಲಿ ಎಂಬ ಪ್ರದೇಶದಿಂದ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾದರು. ಇವರು 1951 ರಿಂದ 1967 ರವರೆಗೆ ವಿಧಾನಸಭಾ ಸದಸ್ಯರಾಗಿದ್ದರು. ಪುಷ್ಪಲತಾರವರು 1951 ರಲ್ಲಿ ರಾಜ್ಯಸಭಾಗೆ ನಾಮ ನಿರ್ದೇಶನ ಗೊಂಡು, 1961 ರವರೆಗೆ ಅದರ ಸದಸ್ಯರಾಗಿದ್ದರು. ಬೇರೆಯವರಿಗಾಗಿ ಚುನಾವಣಾ ಪ್ರಚಾರ ನಡೆಸಿದರು. ಪುಷ್ಪಲತಾರವರು ಗಂಡನ ಸಾವಿನ ನಂತರ ರಾಜಕೀಯದಿಂದ ನಿರ್ಗಮಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.

ಪುಷ್ಪಲತಾರವರು ಅಸ್ಸಾಂನ ಖಾದಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಭೂದಾನ ಮತ್ತು ಗ್ರಾಮದಾನ ಉಪಕ್ರಮಗಳ ರಾಜ್ಯ ಮಂಡಳಿಗಳ ಅಧ್ಯಕ್ಷರಾಗಿದ್ದರು. ಹಾಗೇಯೆ ಕೇಂದ್ರ ಸಮಾಜ ಕಲ್ಯಾಣ ಮಂಡಳಿಯೊಂದಿಗೆ ನಿರಂತರ ಸಂಬಂಧವನ್ನು ಹೊಂದಿದ್ದರು. ಕಾಂಗ್ರೆಸ್ ಯೋಜನಾ ಸಮಿತಿಯ ಮಹಿಳಾ ವಿಭಾಗದ ಸದಸ್ಯರಾಗಿದ್ದರು. ಭಾರತ ಮತ್ತು ಪೂರ್ವ ಭಾರತ ವಿಭಾಗದ ಸೆನ್ಸಾರ್ ಮಂಡಳಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.

 ಪುಷ್ಪಲತಾರವರು ಅಸ್ಸಾಮೀಸ್ ನಿಯತಕಾಲಿಕೆಯನ್ನು ಸಂಪಾದಿಸುವುದರ ಜೊತೆಗೆ ಅಸ್ಸಾಂನ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮತ್ತು ಜಯಂತಿ ಶಾಖೆಯ ನಿರ್ದಿಷ್ಟಾವಧಿಯವರೆಗೆ ಮುಖ್ಯಸ್ಥರಾಗಿದ್ದರು. ಹಾಗೇಯೆ ಇವರು ಒಂದು ಪುಸ್ತಕವನ್ನು ಕೂಡ ಪ್ರಕಟಿಸಿದರು. ಅದು “ರಾಜರಾಮ ಸುಕ್ಲ ರಾಷ್ಟ್ರೀಯಾತ್ಮ ವರ್ಕಾಸ್ಟಾ ಇವಾಮ್ ಕೃತಿತ್ವಾ ಸ್ಯಾನ್” ಎಂಬುದಾಗಿದೆ.

ಭಾರತ ಸರ್ಕಾರವು ಇವರಿಗೆ ತಾಮ್ರಪತ್ರ ಸ್ವಾತಂತ್ರ್ಯ ಹೋರಾಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿತು. ಪುಷ್ಪಲತಾರವರು ‘ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇ ಹೊರೆತು ಅದರಿಂದ ಯಾವುದೇ ಪ್ರತಿಫಲ ಅಥವಾ ಆದಾಯವನ್ನು ನಿರೀಕ್ಷಿಸಿ ಕೆಲಸ ಮಾಡಿಲ್ಲವೆಂದು’ ಪ್ರಶಸ್ತಿಯನ್ನು ನಿರಾಕರಿಸಿದರು. 1999 ರಲ್ಲಿ ಭಾರತ ಸರ್ಕಾರವು ಭಾರತದ ಮೂರನೆಯ ಅತ್ಯುತ್ತಮ ನಾಗರೀಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ನೀಡಿತು. ಇವರು 2003ರಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪಿದರು.

…….

ಡಾ.ಸುರೇಖಾ ರಾಠೋಡ್. ‌

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top