ಧಾರಾವಾಹಿ

ಆವರ್ತನ

ಅದ್ಯಾಯ-46

.ಆವತ್ತು ದೇವರಕಾಡಿನಲ್ಲಿ ನೆರೆದ ಭಕ್ತಾದಿಗಳೆದುರು ತಮ್ಮ ಚಮತ್ಕಾರವನ್ನು ಪ್ರದರ್ಶಿಸಿ ಜೀರ್ಣೋದ್ಧಾರಕ್ಕೆ ನಾಂದಿ ಹಾಡಿ ಬಂದಿದ್ದ ಗುರೂಜಿಯವರು ಅಲ್ಲಿನ ನಾಗ ಭವನ ನಿರ್ಮಾಣದ ಕಾಮಗಾರಿಯನ್ನು ಶಂಕರನಿಗೆ ಒಪ್ಪಿಸಲು ಇಚ್ಛಿದರು. ಆದ್ದರಿಂದ ಅಂದು ಬೆಳಿಗ್ಗೆ ಅವನನ್ನು ತಮ್ಮ ಬಂಗಲೆಗೆ ಬರಹೇಳಿದರು. ಗುರೂಜಿಯವರು ದೇವರಕಾಡಿನ ದೊಡ್ಡ ಪ್ರಾಜೆಕ್ಟ್‍ನ್ನು ಕೈಗೆತ್ತಿಕೊಂಡಿರುವುದು ಶಂಕರನಿಗೂ ಗೊತ್ತಿತ್ತು. ಅಲ್ಲದೇ ಅದರ ಕೆಲಸವನ್ನು ಅವರು ತನಗೇ ಕೊಡುತ್ತಾರೆಂಬುದೂ ಅವನಿಗೆ ಖಚಿತವಿತ್ತು. ಹಾಗಾಗಿ,‘ಶಂಕರಾ ನಿನ್ನ ಹತ್ತಿರ ಒಂದು ಮುಖ್ಯ ವಿಷಯ ಮಾತಾಡಲಿಕ್ಕಿದೆ ಮಾರಾಯಾ, ಬೇಗ ಬಂದುಬಿಡು!’ ಎಂದು ಗುರೂಜಿಯವರು ಆಪ್ತವಾಗಿ ಕರೆದಾಗ ಅವನೂ ಅಷ್ಟೇ ನಮ್ರತೆಯಿಂದ, ‘ಆಯ್ತು ಗುರೂಜಿ. ಇನ್ನೊಂದು ಅರ್ಧ ಗಂಟೆಯಲ್ಲಿ ನಿಮ್ಮ ಮುಂದಿರುತ್ತೇನೆ!’ ಎಂದವನು ಕೂಡಲೇ ಸ್ನಾನ ಮಾಡಿ ಬಿಳಿಯ ಮಡಿಯುಟ್ಟು ಅವರ ಬಂಗಲೆಗೆ ಹೊರಟು ಬಂದಿದ್ದ. ಶಂಕರ ತಮ್ಮನ್ನು ಕಂಡಾಗಲೆಲ್ಲ ತೋರಿಸುತ್ತಿದ್ದ ವಿಶೇಷ ಗೌರವವನ್ನೂ ಮತ್ತವನ ಈ ಹೊತ್ತಿನ ವೇಷಭೂಷಣನ್ನೂ ಕಂಡ ಗುರೂಜಿಯವರಿಗೆ ಅವನ ಬಗ್ಗೆ ಹೆಮ್ಮೆಯೆನಿಸಿತು. ಅಷ್ಟೊತ್ತಿಗೆ ಕೆಲಸದವಳು ತಂದಿಟ್ಟ ಕಾಫಿಯನ್ನು ಶಂಕರನಿಗೆ ಕುಡಿಯಲು ಹೇಳುತ್ತ ಮಾತಿಗಾರಂಭಿಸಿದರು.

‘ಶಂಕರ, ಆ ನಾಗದೇವನ ದಯೆಯಿಂದ ನಿನ್ನ ಭಾಗೀವನದ ಸಮೀಪದ ದೇವರಕಾಡನ್ನು ಜೀರ್ಣೋದ್ಧಾರ ಮಾಡುವ ದೊಡ್ಡ ಜವಾಬ್ದಾರಿಯೊಂದು ನಮ್ಮ ಮೇಲೆ ಬಿದ್ದಿದೆ ಮಾರಾಯಾ. ಈ ಪ್ರಾಜೆಕ್ಟು ಕಡಿಮೆಯೆಂದರೂ ಮೂವತ್ತು ಕೋಟಿಗೂ ಮೀರಿದ್ದು ಮಾತ್ರವಲ್ಲದೇ ನಮ್ಮ ಜೀವಮಾನದಲ್ಲೇ ಅದು ಬಹಳ ದೊಡ್ಡ ವ್ಯವಹಾರ ಮಾರಾಯಾ! ಹಾಗಾಗಿ ನಮಗೆ ನಿನ್ನ ಸಂಪೂರ್ಣ ಸಹಕಾರ ಬೇಕು. ಅದರ ಕೆಲಸಕಾರ್ಯಗಳು ನಾಳೆಯಿಂದಲೇ ಶುರುವಾಗುತ್ತವೆ! ಎಂದು ಹೆಮ್ಮೆಯಿಂದ ಹೇಳಿದರು. ಗುರೂಜಿಯವರು ತಮ್ಮ ಬುದ್ಧಿಶಕ್ತಿ ಮತ್ತು ಚಾಣಾಕ್ಷತೆಯಿಂದ ತನಗಿಂತಲೂ ವೇಗವಾಗಿ ಮೇಲೇರಿದುದನ್ನು ಕಾಣುತ್ತ ಬಂದಿದ್ದ ಶಂಕರ ಮೊದಮೊದಲು ಅವರ ಮೇಲೆ ತೀವ್ರ ಮಸ್ಸರಗೊಂಡಿದ್ದನಾದರೂ ಕೊನೆಕೊನೆಗೆ ಅವರ ಸಾಮಥ್ರ್ಯಕ್ಕೆ ವಿಧಿಯಿಲ್ಲದೆ ಶರಣಾಗಿಬಿಟ್ಟಿದ್ದ. ಹಾಗಾಗಿ ಅವರು ತನ್ನ ಶಾಲಾ ಸಹಪಾಠಿ ಎಂಬುದೂ ಅವನಲ್ಲಿ ಗೌಣವಾಗಿ ಅವರ ಮೇಲೆ ಎಲ್ಲರಂತೆ ಭಯಮಿಶ್ರಿತ ಗೌರವಾದರಗಳು ಮೂಡಿದ್ದವು. ಆದ್ದರಿಂದ ಇವತ್ತು ಅವರೆದುರು ನಮ್ರನಾಗಿ ಕುಳಿತಿದ್ದವನು, ‘ಅಲ್ಲ, ಗುರೂಜಿ ನಿಮ್ಮ ಶಕ್ತಿ, ಸಾಮಥ್ರ್ಯದ ಬಗ್ಗೆ ಯಾರಾದರೂ ಮಾತಾಡಲಿಕ್ಕುಂಟಾ ಹೇಳಿ? ನೀವು ಮನಸ್ಸು ಮಾಡಿದರೆ ಯಾವ ಕಾರ್ಯವನ್ನಾದರೂ ಚಿಟಿಕೆ ಹೊಡೆದಂತೆ ಸಾಧಿಸಬಲ್ಲಿರಿ ಅಂತ ಇಡೀ ಊರಿಗೇ ಗೊತ್ತಿರುವ ಸಂಗತಿಯವಲ್ಲವಾ! ಬಹುಶಃ ಆ ಗುಣ ನಿಮ್ಮ ರಕ್ತದಲ್ಲೇ ಬಂದಿರಬೇಕು. ಹಾಗಾಗಿಯೇ ಅಲ್ಲವಾ ನೀವು ನನ್ನ ಹಳೆಯ ದೋಸ್ತಿ ಎನ್ನುವುದನ್ನೂ ಮರೆತು ನಾನು ನಿಮ್ಮ ಭಕ್ತನಾಗಿರುವುದು…!’ ಎಂದು ನಗುತ್ತ ಹೊಗಳಿದ. ಅವನ ಆ ಮಟ್ಟದ ಪ್ರಶಂಸೆಗೆ ಗುರೂಜಿಯವರು ಉಬ್ಬಿದರು.

ಆದರೂ ಗಂಭೀರವಾಗಿ,‘ಅದೆಲ್ಲ ಸರಿ ಮಾರಾಯಾ. ಈಗ ಮುಖ್ಯ ವಿಷಯಕ್ಕೆ ಬರುವ. ಏನೆಂದರೆ, ಆ ನಾಗ ಪರಿವಾರ ದೈವಗಳ ದೇವಸ್ಥಾನ ನಿಮಾರ್ಣದ ಕೆಲಸವನ್ನು ನಿನಗೇ ಒಪ್ಪಿಸಬೇಕೆಂದಿದ್ದೇವೆ. ಅದು ನಿನ್ನಿಂದ ಸಾಧ್ಯವಾಗುತ್ತದಾ ಹೇಳು…?’ ಎಂದು ಸಂಶಯದಿಂದ ಪ್ರಶ್ನಿಸಿದರು.

ಅಷ್ಟು ಕೇಳಿದ ಶಂಕರನಿಗೆ ಅವರು ರಪ್ಪನೆ ತನ್ನ ಕೆನ್ನೆಗೆ ಹೊಡೆದಂತಾಯಿತು. ಸ್ವಲ್ಪಹೊತ್ತು ಮಂಕಾಗಿ ಕುಳಿತುಬಿಟ್ಟ. ಏಕೆಂದರೆ ಕಟ್ಟಡ ಕಾಮಗಾರಿಯ ವಿಷಯದಲ್ಲಿ ಶಂಕರನಷ್ಟು ನಿಪುಣರೂ, ಅನುಭವಸ್ಥರೂ ಆವಾಗ ಈಶ್ವರಪುರದ ಸುತ್ತಮುತ್ತ ಯಾರೂ ಇರಲಿಲ್ಲ. ಆದರೂ ಅವನು ಈವರೆಗೆ ಸಣ್ಣಪಟ್ಟ ಮನೆಗಳನ್ನು ಮತ್ತು ಕೆಲವು ಬಂಗಲೆಗಳನ್ನು ಹೆಚ್ಚೆಂದರೆ ಐದಾರು ಅಂತಸ್ತಿನ ಕಟ್ಟಡಗಳನ್ನೂ ಕಟ್ಟುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದನಾದರೂ ಅವೆಲ್ಲಕ್ಕಿಂತ ಭಿನ್ನವಾದ ಹಾಗೂ ಬೃಹತ್ತಾದ ಕಾಮಗಾರಿಯನ್ನೆಂದೂ ಮಾಡುವ ಅವಕಾಶ ಅವನಿಗೆ ದೊರಕಿರಲಿಲ್ಲ. ಆದ್ದರಿಂದ ಎಂದಾದರೊಂದು ದಿನ ತನ್ನೂರಿನ ಕಟ್ಟಡ ಕಾಮಗಾರಿ ಕ್ಷೇತ್ರವೇ ತನ್ನನ್ನು ಕಂಡು ಹುಬ್ಬೇರಿಸುವಂಥ ದೊಡ್ಡ ನಿರ್ಮಾಣವೊಂದನ್ನು ತಾನು ಮಾಡಿ ತೋರಿಸಬೇಕು! ಎಂಬ ಹೆಬ್ಬಯಕೆಯೊಂದೂ ಅವನನ್ನು ಸದಾ ಕಾಡುತ್ತಿತ್ತು. ಹೀಗಿರುವಾಗ ಇಂದು ಗುರೂಜಿಯವರು ಅವನ ಸಾಮಥ್ರ್ಯದ ಮೇಲೆಯೇ ಅಪನಂಬಿಕೆ ತೋರಿಸಿದ್ದು ಅವನಿಗೆ ಬೇಸರವನ್ನು ತರಿಸಿತ್ತು.

‘ಇದೇನೀದು ಗುರೂಜಿ… ನಿಮ್ಮಿಂದ ಇಂಥ ಮಾತಾ? ಕಟ್ಟಡದ ಕೆಲಸದಲ್ಲಿ ನನ್ನ ಅನುಭವ ಯಾವ ಮಟ್ಟದ್ದು ಅಂತ ನಿಮಗಿನ್ನೂ ತಿಳಿದಿಲ್ಲವಾ!’ ಎಂದು ಅಸಹನೆಯಿಂದ ಕೇಳಿದ. ಆಗ ಗುರೂಜಿಯವರಿಗೆ ತಮ್ಮ ತಪ್ಪಿನರಿವಾಯಿತು.

‘ಛೇ,ಛೇ! ಹಾಗಲ್ಲ ಮಾರಾಯಾ ನಾವು ಹೇಳಿದ್ದು. ನಿನ್ನ ಕೆಲಸದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಇದು ಬಹಳ ದೊಡ್ಡ ಕೆಲಸ ಮತ್ತು ನಾವಿಬ್ಬರು ಈತನಕ ಮಾಡಿ ಅನುಭವವೇ ಇಲ್ಲದ ವ್ಯವಹಾರವಲ್ಲವಾ? ಹಾಗಾಗಿ ನಮ್ಮ ಬಾಯಿಂದ ಹಾಗೆ ಬಂತಷ್ಟೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಈ ಪ್ರಾಜೆಕ್ಟನ್ನು ನೀನೇ ಯಶಸ್ವಿಯಾಗಿ ನಡೆಸಿಕೊಡುತ್ತಿ ಅಂತ ಭರವಸೆಯಿದೆ ನಮಗೆ! ನಾಳೆ ಪುಷ್ಯ ನಕ್ಷತ್ರ, ಮಕರಸಂಕ್ರಮಣ. ಶುಭಕಾರ್ಯಕ್ಕೆ ಪ್ರಶಸ್ತವಾದ ದಿನ. ಬೆಳಿಗ್ಗೆ ಬೇಗನೇ ಬಂದು ಬಿಡು. ದೇವರ ಪೂಜೆ ಮುಗಿಸಿ ನಿನಗೆ ಪ್ರಸಾದವನ್ನೂ ಸ್ವಲ್ಪ ಮುಂಗಡವನ್ನೂ ಕೊಡುತ್ತೇವೆ. ಕೂಡಲೇ ಕೆಲಸ ಆರಂಭಿಸು. ಹ್ಞಾಂ! ಇನ್ನೊಂದು ಮಾತು. ಆ ಪ್ರದೇಶದ ಕಾಡು ಕಡಿಸುವ ಕೆಲಸವನ್ನೂ ನೀನೇ ವಹಿಸಿಕೊಳ್ಳಬೇಕು ಮಾರಾಯಾ. ಆ ದರಿದ್ರ ಹಾಡಿಯೊಳಗೆ ಸಿಕ್ಕಾಪಟ್ಟೆ ಮೃಗಗಳಿವೆ ಅಂತ ಮೊನ್ನೆ ಬನ ಜೀರ್ಣೋದ್ಧಾರದ ನಾಂದಿ ಮಾಡಲು ಹೋದಾಗ ತಿಳಿಯಿತು. ಆವತ್ತು ಶೀಂಬ್ರಗುಡ್ಡೆಯ ನಿನ್ನ ಲೇಔಟು ಮಾಡುವಾಗ ಅದ್ಯಾರೋ ನಿನ್ನ ಪುರಂದರಣ್ಣನ ತಂಡದ ಕಾಡು ಮನುಷ್ಯರು ಬಂದಿದ್ದರು ಅಂತ ಹೇಳಿದ್ದೆಯಲ್ಲ, ಅವರನ್ನೇ ಕರೆಯಿಸಿ ಅವರ ಹೊಟ್ಟೆಯನ್ನು ಚೆನ್ನಾಗಿ ತುಂಬಿಸಿಬಿಡು…!’ ಎಂದು ಜೋರಾಗಿ ನಕ್ಕಾಗ ಶಂಕರನೂ ಧ್ವನಿಗೂಡಿದ.

‘ಅಂದಹಾಗೆ ಕಾಡು ಕಡಿಸುವ ಕೆಲಸವನ್ನು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಬಿಟ್ಟು ಶುರು ಮಾಡು. ಅದಕ್ಕೂ ಒಂದು ಒಳ್ಳೆಯ ದಿನವನ್ನು ಗೊತ್ತುಪಡಿಸಿದ್ದೇವೆ!’ ಎಂದ ಗುರೂಜಿಯವರು ತಟ್ಟನೆ ಗಂಭೀರವಾದರು. ಬಳಿಕ, ‘ಶಂಕರಾ, ಈಗ ಬಹಳ ಮುಖ್ಯವಾಗಿ ದೇವಸ್ಥಾನದ ಕಟ್ಟಡಕ್ಕೆ ಬೇಕಾಗುವ ಉತ್ತಮವಾದೊಂದು ದೊಡ್ಡ ಬಂಡೆಯನ್ನು ಹುಡುಕುವುದು ನಮ್ಮ ಮೊದಲ ಕೆಲಸ ನೋಡು! ಯಾಕೆಂದರೆ ನಾವು ಹಮ್ಮಿಕೊಂಡಿರುವ ಆ ದೇವಸ್ಥಾನದ ನಿರ್ಮಾಣವು ಏಕಶಿಲೆಯಿಂದಲೇ ಆಗಬೇಕೆಂಬ ನಿಯಮವಿದೆ. ಹಾಗಾಗಿ ಮೊದಲು ನೀನು ಅದನ್ನು ಹುಡುಕಬೇಕು! ಆನಂತರ ದೇವಸ್ಥಾನದೊಳಗಿನ ಕಾಷ್ಠಶಿಲ್ಪಕ್ಕೆ ಉತ್ತಮವಾದ ಮರಮುಟ್ಟುಗಳೂ ಬೇಕಾಗುತ್ತವೆ. ಅದಕ್ಕೆ ಸ್ವಲ್ಪ ಮಟ್ಟದ ಮರಗಳು ಆ ಕಾಡಿನಲ್ಲಿಯೇ ಸಿಗುತ್ತವೆ. ಉಳಿದದ್ದನ್ನು ಬೇರೆಡೆಯಿಂದ ಹೊಂದಿಸಿಕೊಂಡರಾಯ್ತು’ ಎಂದರು. ಗುರೂಜಿಯವರ ಮಾತು ಕೇಳಿದ ಶಂಕರನಲ್ಲಿ ಉತ್ಸಾಹ ಚಿಮ್ಮಿತು. ‘ಆಯ್ತು, ಆಯ್ತು ಗುರೂಜಿ. ನೀವು ಹೇಗೆ ಹೇಳುತ್ತೀರೋ ಹಾಗೆ. ನಾಳೆ ಬರುತ್ತೇನೆ. ಕೆಲಸ ಆದಷ್ಟು ಬೇಗ ಶುರು ಮಾಡುವ!’ ಎಂದವನು ಉಗುರುಸುತ್ತಿನಿಂದ ಊದಿಕೊಂಡಿದ್ದ ಅವರ ಬಲಗಾಲ ದಪ್ಪ ಹೆಬ್ಬೆರಳನ್ನು ಭಕ್ತಿಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡು ಹಿಂದಿರುಗಿದ. ಆಗ ಗುರೂಜಿಯವರ ತುಟಿಯಂಚಿನಲ್ಲಿ ಹೆಮ್ಮೆಯ ನಗುವೊಂದು ಹೊಮ್ಮಿತು. ಮರುದಿನ ಮುಂಜಾನೆ ಶಂಕರ ಸಮಯಕ್ಕೆ ಸರಿಯಾಗಿ ಗುರೂಜಿಯವರ ಬಂಗಲೆಗೆ ಬಂದ. ಅವರು ಅವನನ್ನು ವರಾಂಡದಲ್ಲಿ ಕುಳ್ಳಿರಿಸಿ ತಮ್ಮ ಮನೆ ದೇವರ ಪೂಜೆಗೆ ಕುಳಿತವರು, ಬರೋಬ್ಬರಿ ಅರ್ಧ ಗಂಟೆಯ ವಿಶೇಷ ಪೂಜೆಯೊಂದನ್ನು ನೆರವೇರಿಸಿದ ಬಳಿಕ ಬೆಳ್ಳಿಯ ಹರಿವಾಣದಲ್ಲಿ ಗಂಧಪ್ರಸಾದವನ್ನೂ ಎರಡು ಸಾವಿರ ಮುಖಬೆಲೆಯ ನೋಟಿನ ಐದು ಕಟ್ಟುಗಳನ್ನೂ ಇರಿಸಿ ತಂದು ನಗುತ್ತ ಶಂಕರನಿಗೆ ನೀಡಿದರು. ಅದನ್ನವನು ಭಕ್ತಿಯಿಂದ ಸ್ವೀಕರಿಸಿ, ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿ ತನ್ನ ಕಾರು ಹತ್ತಿದ.

ತಮ್ಮಿಂದ ನಿರ್ಮಾಣಗೊಳ್ಳಲಿರುವ ನಾಗನ ಇಡೀ ದೇವಸ್ಥಾನವು ಏಕಶಿಲೆಯಿಂದಲೇ ಅರಳಬೇಕು. ಆ ಶಿಲೆಗಳಲ್ಲಿ ಮತ್ತು ಒಳಗಿನ ಕಾಷ್ಠಶಿಲ್ಪಗಳಲ್ಲಿ ನಾಗಪುರಾಣಕ್ಕೆ ಸಂಬಂಧಿಸಿದ ಮತ್ತು ನಾಗಾರಾಧನೆಯ ಪ್ರಾಚೀನತೆಯನ್ನು ಸಾರುವಂಥ ಸಹಸ್ರಾರು ಬಗೆಯ ಕಲಾಕೃತಿಗಳು ಅದ್ಭುತವಾಗಿ ಕೆತ್ತನೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ವಿಶೇಷ ಭಯಭಕ್ತಿಯನ್ನು ಮೂಡಿಸುವಂತಿರಬೇಕು. ಆ ಮಟ್ಟದ ತಮ್ಮ ಸಾಧನೆಯನ್ನು ಕಂಡು ಊರಿನ ಇನ್ನಿತರ ದೇವಸ್ಥಾನಗಳ ಮುಖ್ಯಸ್ಥರೆಲ್ಲರೂ ವಿಸ್ಮಯದಿಂದ ಮೂಗಿನ ಮೇಲೆ ಬೆರಳಿಡುವಂತಾಗಬೇಕು! ಎಂಬುದು ಗುರೂಜಿಯವರ ಹೆಬ್ಬಯಕೆಯಾಗಿತ್ತು. ಆದ್ದರಿಂದ ಶಂಕರನೂ ಅವರ ಮಹದಾಸೆಯನ್ನು ನೆರವೇರಿಸಲು ಹೊರಟವನು, ಮೊದಲನೆಯದಾಗಿ ದೊಡ್ಡ ಬಂಡೆಯೊಂದರ ಹುಡುಕಾಟಕ್ಕಿಳಿದ. ತನ್ನ ಕಟ್ಟಡಗಳ ಅಡಿಪಾಯ ಕೆಲಸದ ತಂಡದ ಹಲವರಲ್ಲಿ ಆ ಕುರಿತು ವಿಚಾರಿಸುತ್ತ ಬಂದ. ಆದ್ದರಿಂದ ಅವರಲ್ಲಿ ತಮಿಳುನಾಡಿನ ತಂಗವೇಲು ಎಂಬವನು ಈಶ್ವರಪುರದ ಅಂಚಿನಲ್ಲಿರುವ ಕಾರ್ಗಲ್ಲು ಎಂಬ ಗ್ರಾಮದ ಒಂದು ಕಡೆ ಅಂಥದ್ದೊಂದು ಬೃಹತ್ತ್ ಬಂಡೆ ಇರುವುದು ತನಗೆ ಗೊತ್ತಿದೆ ಎಂದು ಶಂಕರನಿಗೆ ತಿಳಿಸಿದ. ಹಾಗಾಗಿ ಶಂಕರ ಮರುದಿನ ಬೆಳಿಗ್ಗೆಯೇ ಗುರೂಜಿಯವರ ಪ್ರಸಾದವನ್ನು ತನ್ನ ಹೊಸ ಇನ್ನೋವಾ ಕಾರಿನಲ್ಲಿಟ್ಟುಕೊಂಡು ತಂಗವೇಲುವಿನೊಂದಿಗೆ ಅತ್ತ ಹೊರಟ. ತಂಗವೇಲು ಬಹಳ ವರ್ಷಗಳ ಹಿಂದೊಮ್ಮೆ ತನ್ನ ಮೊದಲಿನ ಮಾಲಿಕನೊಡನೆ ಕಾರ್ಗಲ್ಲಿನ ಯಾವುದೋ ಒಂದು ಸಣ್ಣ ಊರಿನಲ್ಲಿದ್ದ ಆ ಬಂಡೆಯನ್ನು ನೋಡಲು ಹೋಗಿದ್ದ. ಆದರೆ ಈಗ ಅವನು ಅಲ್ಲಿನ ದಾರಿಯನ್ನು ಮರೆತಿದ್ದ. ಊರು ಕಾರ್ಗಲ್ಲು ಮತ್ತು ಬಂಡೆಯ ಮಾಲಿಕ ಸುರೇಂದ್ರಯ್ಯ ಎಂಬುದು ಮಾತ್ರ ಗೊತ್ತಿತ್ತು. ಹಾಗಾಗಿ ಧೈರ್ಯ ಮಾಡಿ ಶಂಕರನನ್ನು ಕರೆದುಕೊಂಡು ಹೊರಟ. ಆದರೆ ಕಾರ್ಗಲ್ಲು ಸಮೀಪಿಸುತ್ತಲೇ ಮತ್ತೆ ಮುಂದೆ ಹೋಗಲು ಅವನಿಗೆ ದಿಕ್ಕು ಹೊಳೆಯಲಿಲ್ಲ. ಆದ್ದರಿಂದ, ‘ಇನ್ನು ಸ್ವಲ್ಪ ಮುಂದೆ ಹೋಗುವ ಸಂಗರಣ್ಣ. ಇನ್ನು, ಇನ್ನೂ ಸ್ವಲ್ಪ ಹೋಗುವ…!’ ಎನ್ನುತ್ತ ತನಗೆ ತಿಳಿಯದ ದಾರಿಯನ್ನೇ ಅವನಿಗೂ ತೋರಿಸುತ್ತ ಕೊನೆಯಲ್ಲಿ ಅವನ ದಾರಿಯನ್ನೂ ತಪ್ಪಿಸಿಬಿಟ್ಟ. ಅಷ್ಟೊತ್ತಿಗೆ ಶಂಕರ ಅಳಂದೂರು ಚರ್ಚಿನ ರಸ್ತೆ ಹಿಡಿದಿದ್ದವನು ಇನ್ನು ಇವನನ್ನು ನಂಬಿದರಾಗದು ಎಂದುಕೊಂಡು ಅಲ್ಲೇ ಎದುರಿಗೆ ಸಿಕ್ಕಿದ ಗೂಡಂಗಡಿಯೊಂದರ ಮುಂದೆ ಕಾರು ನಿಲ್ಲಿಸಿದ ಹಾಗೂ ಕಾರಿನೊಳಗೆ ಕುಳಿತುಕೊಂಡೇ ತಾನು ಹೋಗಬೇಕಾದ ಬಂಡೆಯ ವಿಳಾಸವನ್ನು ಗತ್ತಿನಿಂದ ಅಂಗಡಿಯವನಲ್ಲಿ ವಿಚಾರಿದ. ಆದರೆ ಅಂಗಡಿಯವನು ಇವನ ಅಹಂಕಾರವನ್ನು ಕಂಡು ತಾನೂ ಎದ್ದು ಬಾರದೆ, ‘ಅಯ್ಯಯ್ಯಾ… ನೀವು ಎಂಥದು ಮಾರಾಯ್ರೇ ತುಂಬಾ ಮುಂದೆ ಬಂದು ಬಿಟ್ಟಿದ್ದೀರಲ್ಲಾ…! ಆ ಊರಿನ ಹೆಸರು ಗೋಳಿಬೆಟ್ಟು ಅಂತ. ಒಂದು ಕೆಲ್ಸ ಮಾಡಿ. ಈಗ ಬಂದ ದಾರಿಯಲ್ಲೇ ಸುಮಾರು ಹಿಂದೆ ಹೋಗಿ. ಆಗ ಕುಂಟಲಪಾಡಿ ಅಂತ ಸಿಗುತ್ತದೆ. ಅಲ್ಲಿ ಒಂದುಕಡೆ ಮಣ್ಣಿನ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಆ ವಿಳಾಸ ಸಿಗುತ್ತದೆ ನೋಡಿ…’ ಎಂದು ತನ್ನ ಹಲ್ಲಿಲ್ಲದ ಬೊಚ್ಚು ಬಾಯಿಬಿಟ್ಟು ನಗುತ್ತ ವಿವರಿಸಿದ.

ಅವನ ನಗುವನ್ನು ಕಂಡ ಶಂಕರನಿಗೆ ಅವನು ತನ್ನನ್ನು ಗೇಲಿ ಮಾಡಿದನೆಂದೇ ಅನ್ನಿಸಿ ಮೈಯೆಲ್ಲ ಉರಿಯಿತು. ಆದ್ದರಿಂದ ಅವನನ್ನು ತಿರಸ್ಕಾರದಿಂದ ದಿಟ್ಟಿಸುತ್ತ ಸರ್ರನೆ ಕಾರು ತಿರುಗಿಸಿದ. ಶಂಕರನ ಕೊಬ್ಬು ಕಂಡು ಅಂಗಡಿಯವನಿಗೂ ಸಿಟ್ಟು ಬಂತು. ಅವನು ಥೂ! ಬೇವರ್ಸಿ ನಿನ್ನ ಚರ್ಬಿಯೇ…! ಎಂದು ಉಗಿಕೊಂಡ. ಆದರೆ ಶಂಕರನ ಕೋಪ ಹಾಗೆಯೇ ಕೊರೆಯುತ್ತಿದ್ದುದು ತಟ್ಟನೇ ತಂಗವೇಲುವಿನ ಮೇಲೆ ತಿರುಗಿತು.‘ಹೇ, ತಂಗವೇಲು ಇದೆಂಥದನಾ ನಿನ್ನ ಕರ್ಮ? ಎಡ್ರಸ್ ಗೊತ್ತಿಲ್ಲದಿದ್ದರೆ ಇಲ್ಲ ಅಂತ ಹೇಳಬೇಕು. ಅದನ್ನು ಬಿಟ್ಟು, ‘ಸ್ವಲ್ಪ ಹೋಗುವ, ಸ್ವಲ್ಪ ಹೋಗುವ ಅಂತ ಎಲ್ಲಿಗೆ ನಿನ್ನ ಅಪ್ಪನ ಮನೆಗೆ ಕರ್ಕೊಂಡು ಹೋದದ್ದಾ…? ಸುಮ್ಮನೆ ನಾಯಿ ಸುತ್ತಿದ ಹಾಗೆ ಸುತ್ತಿಸಿದೆಯಲ್ಲ ಮಂಡೆ ಸಮ ಉಂಟಾ ನಿಂಗೆ…? ಎಂದು ಕೆಟ್ಟದಾಗಿ ಬೈದುಬಿಟ್ಟ. ಅದನ್ನು ಕೇಳಿದ ತಂಗವೇಲು ಪೆಚ್ಚಾಗಿ ಹಲ್ಲುಗಿಂಜುತ್ತ ಕುಳಿತ. ಅಷ್ಟರಲ್ಲಿ ಕುಂಟಲಪಾಡಿ ಎದುರಾಯಿತು. ಅಲ್ಲಿ ಸುಮಾರು ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕುಂಟಾಲ ಹಣ್ಣಿನ ಮರಗಳಿಂದ ತುಂಬಿದ ದಟ್ಟ ಹಾಡಿಗಳಿದ್ದವು. ಅಲ್ಲೇ ಬಲಕ್ಕೊಂದು ಮಣ್ಣಿನ ಒಳದಾರಿ ಕಾಣಿಸಿತು. ಆ ಪ್ರದೇಶವನ್ನು ನೋಡಿದ ತಂಗವೇಲುವಿಗೆ ಹಿಂದೆ ತಾನು ಬಂದಿದ್ದ ನೆನಪು ಈಗ ತಟ್ಟನೆ ಮರುಕಳಿಸಿತು. ‘ಓಹೋ… ಸಂಗರಣ್ಣಾ ಇದೇ ದಾರಿ, ಇದೇ ದಾರಿ. ಈಗ ತಿಳೀತು ಬಿಡಿ!’ ಎಂದು ತನ್ನ ಎಣ್ಣೆಗಪ್ಪಿನ ಮೂತಿಯನ್ನು ಊರಗಲ ಮಾಡಿಕೊಂಡು ಸಂಜೆಯ ಮಬ್ಬು ಬಾನಿನಲ್ಲಿ ಮಿಂಚುವ ಶುಕ್ರಗ್ರಹದಂಥ ನಗುವಿನಿಂದ ಹೇಳಿದ.

ಆಗ ಶಂಕರನಿಗೆ ನೆಮ್ಮದಿಯಾಯಿತು. ಆದರೂ,‘ಹೌದೌದು, ಅಂಗಡಿಯವನು ಹೇಳಿದ ಮೇಲೆ ನಿನಗೆ ಗೊತ್ತಾಗದೆ ಏನು? ಆದರೆ ಆವಾಗ ಎಲ್ಲಿ ಸತ್ತು ಹೋಗಿತ್ತು ನಿನ್ನ ನೆನಪು…?’ ಎಂದು ಮತ್ತೆ ಸಿಡುಕಿದ. ಆಗ ತಂಗವೇಲುವಿನ ಶುಕ್ರಗ್ರಹಕ್ಕೆ ಮೆಲ್ಲನೇ ಮೋಡ ಕವಿದು ಮಂಕಾಯಿತು. ಆ ಮಣ್ಣಿನ ದಾರಿಯಲ್ಲಿ ಸುಮಾರು ದೂರ ಬಂದವರಿಗೆ ಎದುರುಗಡೆ ಸ್ವಲ್ಪದೂರದ ಎತ್ತರದ ಪ್ರದೇಶದಲ್ಲಿ ಬೃಹತ್ ಬಂಡೆಗಳ ಸಮೂಹವೊಂದು ಎದ್ದು ಕಾಣಿಸಿತು.

‘ಸಂಗರಣ್ಣ… ನೋಡಿ, ನೋಡಿ. ನಾನು ಹೇಳಿದ ಬಂಡಿಗಲ್ಲು ಅದೇ…! ಅದಕ್ಕೊಂದು ಒಳ್ಳೆಯ ಗಿರಾಕಿ ಮಾಡಿಕೊಡು ಮಾರಾಯಾ. ನಿನಗೂ ಕಮ್ಷನ್ (ಕಮಿಷೆನ್) ಕೊಡ್ತೇವೆ!’ ಅಂತ ಸುಘೇಂದ್ರಯ್ಯ (ಸುರೇಂದ್ರಯ್ಯ) ಎಷ್ಟು ಸಲ ಹೇಳಿದ್ದರು ಗೊತ್ತುಂಟಾ? ಅದಿಕ್ಕೆ ಇವತ್ತು ದಿನ ಬಂತು ನೋಡಿ!’ ಎಂದು ತಂಗವೇಲು ಹೆಮ್ಮೆಯಿಂದ ನಕ್ಕ. ಕಮಿಷನ್ ಎಂದ ಕೂಡಲೇ ಶಂಕರ ಅವನನ್ನು ದುರುಗುಟ್ಟಿ ನೋಡಿದ. ಆಗ ತಂಗವೇಲುವಿಗೂ ಸ್ವಲ್ಪ ಸಿಟ್ಟು ಬಂತು. ‘ನೀವೆಂಥದು ಸಂಗರಣ್ಣ ನನ್ನನ್ನು ಹಾಗೆ ನೋಡುವುದು…! ನೀವು ಕೊಡದಿದ್ದರೆ ಮತ್ತ್ಯಾರು ಕೊಡ್ತಾರೆ…?’ ಎಂದು ಮುಖ ಹಿಂಜಿ ನುಡಿದ.

‘ಆಯ್ತು, ಆಯ್ತು ಮಾರಾಯಾ ಕೊಡುವ. ಯಾವುದಕ್ಕೂ ಒಮ್ಮೆ ವ್ಯಾಪಾರ ಮುಗಿಸಲು ಬಿಡು!’ ಎಂದು ಶಂಕರನೂ ಸಿಡುಕಿದಾಗ ತಂಗವೇಲುವಿನ ಮುಖ ಮತ್ತೆ ಅರಳಿತು. ಅಷ್ಟೊತ್ತಿಗೆ ಅವರು ಆ ಬಂಡೆಗಳ ಸಮೀಪಕ್ಕೆ ಬಂದಿದ್ದರು. ದಟ್ಟ ಕುರುಚಲು ಕಾಡುಗಳ ನಟ್ಟನಡುವೆ ಆಕಾಶದೆತ್ತರಕ್ಕೆ ಸಿಡಿದು ನಿಂತಿದ್ದ ಆ ದೊಡ್ಡ ಬಂಡೆಯ ಸಮೂಹವು ಸೂರ್ಯನ ಪ್ರಕಾಶಕ್ಕೆ ಫಳಫಳ ಹೊಳೆಯುತ್ತ ಮನೋಹರವಾಗಿ ಕಾಣುತ್ತಿತ್ತು. ಅದನ್ನು ಕಂಡ ಶಂಕರ, ‘ಅಬ್ಬಾ! ಪಂಜುರ್ಲಿಯೇ! ಎಂಥ ದೊಡ್ಡ ಬಂಡೆಗಳು ಮಾರಾಯ ಇವು!.

ಎಂದು ಉದ್ಗರಿಸಿದವನು, ‘ಅಲ್ಲಾ ಮಾರಾಯಾ ಈ ಬಂಡೆಗಳಿನ್ನೂ ಕಲ್ಲು, ಜಲ್ಲಿ ಕಡಿಯುವ ಕ್ರಶರ್ ಮಾಲಿಕರ ಕಣ್ಣಿಗ್ಯಾಕೆ ಬೀಳಲಿಲ್ಲಾಂತ…?’ ಎಂದ ಅಚ್ಚರಿಯಿಂದ.

‘ಬೀಳದೆ ಏನು ಸಂಗರಣ್ಣ… ಆದರೆ ಸುಘೇಂದ್ರಯ್ಯನೇ ಕೊಡಲಿಲ್ಲ. ಈ ಬಂಡಿಗಲ್ಲು ಯಾವುದಾದರೂ ಕೋವಿಲ್‍ಕ್ಕೆ (ದೇವಸ್ಥಾನಕ್ಕೆ) ಬಳಕೆಯಾಗಬೇಕು ಅಂತ ಅವರ ಹಿರಿಯರ ಆಸೆಯಂತೆ!’ಎಂದ ತಂಗವೇಲು.

‘ಓಹೋ ಹೌದಾ…? ಇದೆಂಥ ವಿಚಿತ್ರ ಮಾರಾಯ! ಇದೆಲ್ಲ ನಾಡಿದ್ದು ನಾವು ಕಟ್ಟುವ ದೇವಸ್ಥಾನದಲ್ಲಿ ನೆಲೆಯಾಗುವಂಥ ಆ ನಾಗದೇವರ ಕಟಾಕ್ಷವಲ್ಲದೆ ಮತ್ತೇನು ಹೇಳು! ಇಲ್ಲವಾದರೆ ಕೆಲಸ ಶುರುಮಾಡಲು ಗುರೂಜಿಯವರಿಂದ ಸೂಚನೆ ಸಿಕ್ಕಿದ ಮರುದಿನವೇ ಅದಕ್ಕೆ ಬೇಕಾದ ಮುಖ್ಯ ವಸ್ತುವೂ ಸಿಗುವುದೆಂದರೆ ಆಶ್ಚರ್ಯ ವಲ್ಲವಾ…?’ ಎಂದ ಶಂಕರ ವಿಸ್ಮಯದಿಂದ.

‘ಹೌದೌದು ಸಂಗರಣ್ಣ, ಇದೆಲ್ಲಾ ನಮ್ಮ ನಾಗಣದೇ ಮಯಿಮೆ ನೋಡಿ…! ಎಂದ ತಂಗವೇಲು ಕಣ್ಣುಮುಚ್ಚಿ ಕೈಮುಗಿದ.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ ಸನೀಲ್ ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top