ತರಹಿ ಗಜಲ್..
(ಸಾನಿ ಮಿಸ್ರ:- ರವಿ ವಿಠಲ ಆಲಬಾಳ ವರದ್ದು)
ಹಕ್ಕಿಯ ದನಿ ಕರೆಯುತಿದೆ ಹೇಗೆ ಹೇಳಲಿ ನೀನಿಲ್ಲವೆಂದು
ಬಿರುಗಾಳಿಯು ಎದೆ ನುಸುಳಿದೆ ಹೇಗೆ ತಿಳಿಸಲಿ ನೀನಿಲ್ಲವೆಂದು
ಕಾಲ ಚಕ್ರದ ಸುಳಿಯೊಳಗೆ ಪಲ್ಲವಿಸಿದೆ ಕಾಣದ ರಾಗವೊಂದು
ಉಮ್ಮಳಿಸಿ ಬರುವ ಭಾವಗಳಿಗೆ ಹೇಗೆ ತಡೆ ಒಡ್ಡಲಿ ನೀನಿಲ್ಲವೆಂದು
ನಿನ್ನ ಚೆಲುವ ಅಡ್ಡಾಟವಿಲ್ಲದೆ ಮನೆ ಮನವೆಲ್ಲ ಬೋಳು ಮರದಂತೆ
ಆ ನಿನ್ನ ತುಂಟ ನಗು, ಮಾತುಗಳಿಗೆ ಹೇಗೆ ಕದ ಮುಚ್ಚಲಿ ನೀನಿಲ್ಲವೆಂದು
ಛಿದ್ರಗೊಂಡ ಎದೆಯ ಆಲಯದಿಂದ ಒಂದೊಂದೇ ನೆನಹು ನುಸುಳಿದೆ
ಆತ್ಮವಿಲ್ಲದ ಈ ನಿನ್ನ ಚಿತ್ರಪಟವನು ಹೇಗೆ ಪೂಜಿಸಲಿ ನೀನಿಲ್ಲವೆಂದು
ಹಾಡು ಹಗಲೇ ಕಣ್ಣಿಗೆ ಕಡುಕತ್ತಲು ಆವರಿಸಿ ನಡುಕ ಹುಟ್ಟಿಸಿದೆ
ನೀರು ಬತ್ತಿದ ನದಿಯಂತೆ ನಾನೀಗ ಹೇಗೆ ಜೀವಿಸಲಿ ನೀನಿಲ್ಲವೆಂದು
ಕಾಲನ ಕರೆ ಧಿಕ್ಕರಿಸಿ ಯಾರೂ ಬದುಕಲಾರರು ಮಾಯಾ ಜಗದಲಿ ಅಬಾಟೇ
ಪ್ರತಿ ಹುಣ್ಣಿಮೆಗೂ ಮೂಡುವ ಬೆಳ್ಳಿಬಿಂಬವ ಹೇಗೆ ನೋಡದಿರಲಿ ನೀನಿಲ್ಲವೆಂದು
ಅಶೋಕ ಬಾಬು ಟೇಕಲ್