ಈ ಸಂಜೆಗಳು

ಕಾವ್ಯ ಸಂಗಾತಿ

ಈ ಸಂಜೆಗಳು

ಅರ್ಪಣಾ ಮೂರ್ತಿ

ಸಂಜೆಗಳೀಗ ಮೊದಲಿನಂತೆ ಭೋರ್ಗರೆಯುವುದಿಲ್ಲ,
ಕಣ್ಣ ತುದಿಗೆ ಇಷ್ಟೇ ಇಷ್ಟು ಹಸಿಕನಸುಗಳ ಮುಡಿಸಿ ತಣ್ಣಗೆ ಸರಿದುಬಿಡುತ್ತವೆ ಮಾತಾಗದಂತೆ ಮೌನವಾಗಿ,

ಬಿಗಿಹಿಡಿದ ಉಸಿರು ನಿಡಿದಾಗಿ ಕುಳಿರ್ಗಾಳಿಯ ಬೆಚ್ಚಗಾಗಿಸುವುದಿಲ್ಲ ಬದಲಿಗೆ ಮಾಗಿಯ ಸಂಜೆಗಳಿಗೆ ಶೈತ್ಯ ಹೊದಿಸುತ್ತಿದೆ ಮತ್ತೂ ಗಾಢವಾಗಿ,

ಇಳಿಯುವ ಹೊತ್ತಿನ ಬಣ್ಣಗಳು ಆಗಸದಲ್ಲಿ ತರಂಗವೆಬ್ಬಿಸುವುದಿಲ್ಲ, ಆರ್ದ್ರ ಹೃದಯದ ತಂಪು ತುಟಿಗಳಿಗೆ ಕಿರುನಗೆ ಹೊತ್ತಿಸುವ ಹೊತ್ತಿಗೆ ಚಿತ್ತಾರವಾಗುತ್ತದೆ ಓಕುಳಿಯಾಡಿದಂತೆ,

ಇಳಿಸಂಜೆ ಇರುಳ ಸಂಧಿಸುವ ಸಂಧಿ ಸಮಯ ಕವಿತೆಗಳ ಹಡೆಯುವುದಿಲ್ಲ ಬದಲಾಗಿ ಕ್ಷಣ ನಿಂತು ಮಾತು ನುಂಗುತ್ತದೆ ಕವಿತೆಯಾಗದಂತೆ,

ಸಂಜೆಗಳೀಗ ಮೊದಲಿನಂತೆ ಭೋರ್ಗರೆಯುವುದಿಲ್ಲ.


One thought on “ಈ ಸಂಜೆಗಳು

Leave a Reply

Back To Top