ಕಾವ್ಯ ಸಂಗಾತಿ
ಬೆಳ್ಳಕ್ಕಿ ಬೆಳಕು
ಅಕ್ಕರೆಯ ಬೆಳ್ಳಕ್ಕಿಯದು
ಸಕ್ಕರೆಯ ನಿದ್ದೆಯಲ್ಲೂ
ಉಲಿಯುವುದು ಮೆಲ್ಲಗೆ
ಮಿಸುಕಾಡುವುದು ಮಗ್ಗುಲಲ್ಲಿ
ಮೆತ್ತಗೆ ಒಮ್ಮೆ ಸ್ಪರ್ಶಿಸಿ
ಮಡಿಲ ಸೇರುವುದು
ಸುಮ್ಮನಿರಲೊಲ್ಲದು
ರಚ್ಚೆ ಹಿಡಿದು ಕಾಡುವುದು
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ
ಒಳಹೊಕ್ಕು ಸತಾಯಿಸುವುದು
ಮರುಕ್ಷಣವೇ ಎಲ್ಲ ಮರೆಸಿ
ಇನ್ನೆಲ್ಲೋ ಮರೆಯಾಗಿ
ಕಣ್ಣು ಮುಚ್ಚಾಲೆಯಾಡುವುದು
ಏನಿದು ಅಚ್ಚರಿ!
ಯಾವ ಲೋಕದ ಬೆಳಕು ನೀನು
ಹೀಗೆ ಒಮ್ಮೆ ಬಂದು
ಮಿಂಚು ಹಾಯಿಸಿ
ಜೀವ ತೋಯಿಸಿ
ಸಂಚು ಮಾಡುವ ನಿನ್ನ ಪರಿಗೆ
ಹೇಳು ಸಾಟಿ ಯಾವುದು?
*********
ಪರಮ ಅರ್ಥ
ಸುಖವೆಂದರೇನು
ಕೇಳಿದಳು ಅವಳು
ಒಂದು ಕಪ್ ಚಹಾ
ಅಂದ
ಒಲೆಯ ಮೇಲೆ
ಪಾತ್ರೆಯನ್ನಿಟ್ಟಳು
ಕುದಿಯತೊಡಗಿತು ಚಹಾ
ಕುದಿಯುವುದರಲ್ಲಿ ಸುಖವಿದೆಯೇ
ಈಗ ಅವನು ಕೇಳಿದ
ಸುಖವೆಂದರೇನು
ಅವಳು ನಿದ್ದೆ ಎಂದು
ಹೊದ್ದು ಮಲಗಿ ಬಿಟ್ಟಳು
ಅವನು ಬಿಟ್ಟ ಕಣ್ಣು ಬಿಡುತ್ತ
ಮಗ್ಗಲು ಬದಲಾಯಿಸಿದ
ಅವರಿಬ್ಬರ ಮಧ್ಯೆ ಈಗ
ಮೌನ ಮಾತಾಡುತ್ತಿತ್ತು
ಸುಖ ಓಲಾಡುತ್ತಿತ್ತು
************
ಬೇಲಿಗಳು
ನನಗೆ ಗೊತ್ತಿರಲಿಲ್ಲ
ಈ ಬೇಲಿಗಳ ಬಗ್ಗೆ
ಈಗೀಗ ಎಲ್ಲ ಕಡೆಗೂ
ಬೇಲಿಗಳದೇ ಸುದ್ದಿ
ಬೇಲಿಯೆಂದರೆ
ತನ್ನ ತಾ ಬೇರ್ಪಡಿಸಿ ಕೊಳ್ಳುವುದು
ಲೋಕದಿಂದ
ದ್ವೀಪವಾಗುವುದು ಭಯದಲ್ಲಿ
ಈ ಮನುಷ್ಯ
ಯಾಕೆ ಭಯ ಬೀಳುತ್ತಾನೆ
ತನ್ನದೇ ತಪ್ಪುಗಳ
ಜಾಲದಲ್ಲಿ ಮಿಡುಕಿ
ಸುತ್ತ ಸುತ್ತಿಕೊಂಡಿರುವ
ಸುಳಿಯಲ್ಲಿ ಸಿಲುಕಿ
ಬೇಲಿಗಳು
ಕಾಯುವವೆಂಬ ನಂಬಿಕೆಯಲ್ಲಿ
ನಯವಾಗಿ ನುಣುಚಿಕೊಳ್ಳಲು
ಬಲಹೀನ ಪ್ರದರ್ಶಿಸಿದ
ಬಲಪ್ರಯೋಗದಂತೆ
ಗೆಲ್ಲಬೇಕೆಂದರೆ
ಕಿತ್ತೆಸೆಯಬೇಕು ಎಲ್ಲ ಬೇಲಿಗಳ
ಒಂದಾಗಬೇಕು
ಜಗದ ಅಲೆಯ ಜೊತೆ
ವೀಣಾ ನಿರಂಜನ
Very nice poems
Thank you Smitha
ಚಂದ ಕವಿತೆಗಳು. ಅಭಿನಂದನೆಗಳು.
ಧನ್ಯವಾದಗಳು
ಚೆಂದದ ಕವಿತೆಗಳು
ಧನ್ಯವಾದಗಳು ಸುನೀತಕ್ಕ.
ಕುದಿಯುವುದರಲ್ಲೇ ಸುಖವಿದೆ …
ಅರ್ಥಪೂರ್ಣ ಸಾಲು
ಧನ್ಯವಾದಗಳು