ಕಾವ್ಯ ಸಂಗಾತಿ
ಆಹತಗೊಂಡವಳು
ಪುಣ್ಯಕೋಟಿಯ ನಾಡು ನಮ್ಮದು
ವಚನ ಕೀರ್ತನಗಳ ನುಡಿ ನಮ್ಮದು
ಮಾತುಕೊಟ್ಟರದುವೆ ಶಾಸನ
ಬೇಕಿಲ್ಲ ಸರಪಣಿ ಕಾಯ್ದೆ ಕಾನೂನು
ಚಂದ್ರಾರ್ಕರಿರುವರೆಗೂ ನಮ್ಮ ಗೆಳೆತನ
ಅಕ್ಕಪಕ್ಕದವರು ಸುತ್ತಲಿರುವವರು
ತದ್ವಿರುದ್ಧ ಪೋಷಾಕುಗಳು
ಮೌಲಿಕ ರುಜುವಾತುಗಳು
ರದ್ದಾಗುತ್ತವೆ, ಅಮಾನ್ಯ ವಾಗತ್ತವೆ
ದೇಶದ್ರೋಹಿಗಳ ಹೀನಕ್ಕೆ
ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದಾದರೂ
ಸ್ನೇಹದೆಳೆಗಳೆಲ್ಲ ಸಿಕ್ಕು ಸಿಕ್ಕು
ಅಮೃತಮಹೋತ್ಸವದಲ್ಲೂ
ಗಡಿಕಾಯ್ವ ಯೋಧನ ಸಂತಾಪ
ಶಾಪಗ್ರಸ್ತ ಕುಟುಂಬದ ಕಣ್ಣೀರು
ಸುದ್ದಿ ಸಮಾಚಾರದಲ್ಲೆಲ್ಲಾ
ಖಾತೆಗಳ ವಿಲೇವಾರಿ
ಶ್ರಾವಣದ ತಯಾರಿ
ಪುಟಗಟ್ಟಲೇ ಸವಾರಿ
ಸಣ್ಣ ಮೂಲೆಯಲ್ಲಿ
ಜೀವತೆತ್ತ ವೀರನಿಗೆ
ಶಹಭಾಸಗಿರಿ
ನೆತ್ತಿ ನೇವರಿಸದ
ಅನಾಮಿಕ ನೆರಳು
ತನಿವಣ್ಣ ಬಯಸಿ
ಬೊಗಸೆಯೊಡ್ಡುತ್ತಿದೆ
ಮಾನವೀಯತೆ
ಈ ಮಹೋತ್ಸವ ದಲ್ಲಿ
*****
ಏಕಾಂತರಥ
ನೀನಿಲ್ಲದ ಸಾಗರ ತೀರ
ನನಗದು ಮರುಭೂಮಿ ಯಂತೆ
ಜೀವಸೆಲೆ ತೆರೆ ತೆರೆಗಳಾಗಿ ತಾಕುತ್ತಿದ್ದರೂ
ನನಗದು ನಿರ್ಜೀವ ದ್ರವರಾಶಿಯಂತೆ
ನೀನೊಂದು ಕಡಲತಡಿಯ
ತೀರದ ಧ್ಯಾನ
ನಾನೊಬ್ಬ ಮರಳುಗಾಡಿನ
ಅಲೆಮಾರಿ ಸಂತ
ನೀ ಆಡಿದಾಗ ನಲಿದಾಡಿದಾಗ
ಕಡಲ ಒಡಲು ಹಿಗ್ಗಿ
ಆಸೆ ಮೀನುಗಳು
ಸರಸವಾಡಿ ಜಯಿಸುತ್ತವೆ
ನಾ ನಡೆದಾಗ ಓಡಿದಾಗ
ಏಕಾಂತರಥ ಮೆರವಣಿಗೆ ಹೊರಟಂತೆ
ಅದೇ ಕಾಪು ತೀರದಲ್ಲಿ
ಅದೇ ಸೋತ ವಿರಹ ಗೀತೆಯಲ್ಲಿ
ವಿಭಾ ಪುರೋಹಿತ
ಚಂದದ ಕವಿತೆಗಳು
ಧನ್ಯವಾದ ಜ್ಯೋತಿ