ಕಾವ್ಯ ಸಂಗಾತಿ
ಬೆಳದಿಂಗಳ ಬಳುಕು
ಅಭಿಜ್ಞಾ ಪಿ ಎಮ್ ಗೌಡ
ಬಾಂದಳದ ತುಂಬೆಲ್ಲ ಹಬ್ಬಿದೆ
ಶಶಿಯ ಪ್ರದೀಪದ ಕೀರ್ತಿ
ರಂಜಿಸುತ ನಗಿಸುತಿರುವ
ರಜನಿಗೆ ಬೆಳದಿಂಗಳೆ ಸ್ಫೂರ್ತಿ!
ಜೊನ್ನನಂಗಳ ನೋಡು
ಬಳುಕುತಿದೆ ವೈಯ್ಯಾರದ ನೀರೆಯಂತೆ
ದೀವಟಿಕೆಯ ರಾಶಿಯಲಿ
ಜೀಕುತಿಹ ಜೇನ್ಮಳೆಯು ಸೂಸಿದಂತೆ…
ಆವಾರ ತುಂಬೆಲ್ಲ ಕೌಮುದಿಯ
ಸವಿ ತೋಮ್ ತನನನಾನ
ನೋಡಿಲ್ಲಿ! ಒಸರುತಿದೆ ಕೊಸರುತಿದೆ
ಅಂತರಂಗದ ನೋವಯಾನ…
ಅವನಿಯ ಮುತ್ತಿಗೆಯಲಿ
ಮತ್ತೇರಿದೆ ಕತ್ತಲ ಮೇನೆ
ಅವನಿಲ್ಲದ ಕಸಿವಿಸಿಯ ಸಂತೆಯಲಿ
ಸುತ್ತರಿದು ನಿಂತಿದೆ ಭಾವಬೇನೆ..
ಮನವೆಂಬ ಕೇತನದಿ
ಆವರಿಸಿದ ಅಜ್ಞಾನದ ಕೊಳೆಯನು
ತೊಳೆಯಲು ಬೆಳಗಿಸಬೇಕಿದೆ ಸುಜ್ಞಾನ
ಜ್ಯೋತಿಯೆಂಬ ಸ್ವರ್ದೀಪವನು….
ಹೃದಯದ ಗಲ್ಲಿಗಲ್ಲಿಯಲು
ಮಂದಬೆಳಕಿನ ಹೊಳಪು ಕುಂದುತಿದೆ
ಇಗೋ.!ಅವನಿರದೆ ಈ ಬಾಳು
ಜಡತುಂಬಿದ ಕೃದರವಾಗುತಿದೆ…
ಮೇಣದ ಬತ್ತಿಯಂತಾಗಿ ಈ ಬದುಕು
ತನ್ನೆಲ್ಲ ನೋವ ಬಚ್ಚಿಟ್ಟು
ಮೆರೆಯುತಿದೆ ಮೆರೆಸುತಿದೆ
ಬಂಜರಾದ ಒಡಲೆಲ್ಲಾ ಸುಟ್ಟು…