ಕಾವ್ಯ ಸಂಗಾತಿ
ಬಹಳ ವ್ಯತ್ಯಾಸವಿಲ್ಲ
ಚಿಕ್ಕ ಊರಿಗೂ
ದೊಡ್ಡ ನಗರಕ್ಕೂ
ಈಗ ಬಹಳ ವ್ಯತ್ಯಾಸವಿಲ್ಲ
ಇಲ್ಲಿಯ ಕಸರು ಅಲ್ಲಿಯ ಹಸಿರಲ್ಲಿ
ಹಳ್ಳಿಯ ಜನರಿಗೂ
ಶಹರದ ಜನರಿಗೂ
ಈಗ ಬಹಳ ವ್ಯತ್ಯಾಸವಿಲ್ಲ
ಅವರು ಮುಗ್ಧರೆಂದು ಇವರೀಗ ಒಪ್ಪುವುದಿಲ್ಲ
ಕೆಂಪು ಬಸ್ಸಿಗೂ
ಏರ್ ಬಸ್ಸಿಗೂ
ಈಗ ಬಹಳ ವ್ಯತ್ಯಾಸವಿಲ್ಲ
ಜೇಬು ಹೇಗಿದ್ದರೇನು
ಮೂಗಿಗಡ್ಡ ಮಾಸ್ಕು ತಪ್ಪಲಿಲ್ಲ
ವಿಶ್ವವಿದ್ಯಾಲಯಕ್ಕೂ
ವಿಧಾನಸೌಧಕ್ಕೂ
ಈಗ ಬಹಳ ವ್ಯತ್ಯಾಸವಿಲ್ಲ
ಹಣ, ಹೆಣ್ಣು, ಹೆಂಡ…
ಮಾಪಕಗಳೇ ಎಲ್ಲ !
ಹೆಚ್ಚೇಕೆ?
ಸ್ನೇಹಕ್ಕೂ, ದ್ವೇಷಕ್ಕೂ
ಈಗ ಬಹಳ ವ್ಯತ್ಯಾಸವಿಲ್ಲ
ಮರೆಯಲ್ಲಿ ಮಸೆತ ಕತ್ತಿಯ
ಪ್ರಹಾರ ಅಸಹಜವಲ್ಲ !
ಅಪ್ಪ- ಅಣ್ಣ
ಗಂಡ- ಗೆಳೆಯ
ಈಗ ಬಹಳ ವ್ಯತ್ಯಾಸವಿಲ್ಲ
ನಡುಮನೆಯ ಹಾದರದಲ್ಲಿ
ಅದಲು- ಬದಲು ಎಲ್ಲ
ಮೌನದಲ್ಲಿ ಮಸಲತ್ತು
ನಂಬಿಕೆಗೆ ಹತ್ತಾರು ನೆರಳುಗಳು
ಶಾಂತಿಯೆಂಬುದೀಗ ಸೆರಗ ಕೆಂಡ
ಗಾಳಿಯಲ್ಲಿ ತೂರಿ ಬರುವ
ಮಲ್ಲಿಗೆಯ ಘಮವಾದರೂ
ಒಮ್ಮೊಮ್ಮೆ ಇತ್ತ ಬರಲಿ…ದೇವರೆ!
*************
ಗಾಳಿ ಗೆರೆಗಳು
ಮನೆಯೆದುರು ಕಸ ಗುಡಿಸುವಾಗ
ಧುತ್ತನೆ ಗಾಳಿ ಗೆರೆಯೊಂದು ಮೂಡಿ
ಕೊನೆಯ ಹಾಸುಗಲ್ಲಿನ ಆಚೆಯ ಕಸವನ್ನು
ಕಸಬರಿಗೆ ಸೋಕದಂತೆ ಮಾಡಿ
ಆಚೆ ಮನೆಯಂಚಿಗೆ
ಉದುರಿದ ಹೂವು, ಹಾರಿ ಬಂದ ಎಲೆ,
ಖಾಲಿ ಬಿಸ್ಕಿಟ್ ಪೊಟ್ಟಣ…
ಅವರ ಕಸದ ಬಾಬತ್ತಿಗೆ ದೂಡಿ
ಹಬ್ಬದಲ್ಲಿ ಸಿಹಿ ಹಂಚಿದ ಕೈಗೂ
ರಸ್ತೆಯ ಗೆರೆಯ ಅಳಿಸಗೊಡುವುದಿಲ್ಲ.
ನೂತನ
Very impressed.