ಪಿ.ಆರ್.ವೆಂಕಟೇಶ್ ಕವಿತೆ ಖಜಾನೆ

ಕಾವ್ಯ ಸಂಗಾತಿ

ಕವಿತೆಯೆ

ಕವಿತೆಯೆ
ನನ್ನೆದೆಗೆ ತಾಗಿದಾಗ
ನನ್ನ ಸುತ್ತ ಕಡುಕಷ್ಟದ ಬೆಂಕಿ
ನಿನ್ನ ಕೈ ಕುಲಿಕಿ ಸತ್ಕರಿಸಲು ಸಾಧವಿರಲಿಲ್ಲ.

ಸತುವಿಲ್ಲದೆ ಸೋತ
ಬಾಹುವಪ್ಪುಗೆಯಲ್ಲಿ ಕಳೆದು ಹೋಗಿದ್ದೆ
ಹಸಿ ಇರದ, ಮಸಿ ಇರದ ಪೆನ್ನಾಗಿದ್ದೆ
ಬರೆಸಿಕೊಳ್ಳದ, ಒಲಿಸಿಕೊಳ್ಳದ ಹಾಳೆಯಾಗಿದ್ದೆ.
ಇಷ್ಟೆಲ್ಲ ಸೋಲುಗಳನಪ್ಪಿಯೂ ನನ್ನ
ತೊರೆಯಲಿಲ್ಲ.

ನಮ್ಮಿಬ್ಬರ ಬಿಗಿಆಪ್ಪಿನೊಳಗೆ
ಕಾಳ ರಾತ್ರಿ ಕರಗಿತ್ತು
ಬಿಡದೆ ಕಾಡಿತ್ತು ಕವಿತೆ
ಅಸಹಾಯಕನಂತೆ ತಬ್ಬಿದಾಗ
ತಲೆ ಸವರಿ ಮುತ್ತಿತ್ತು
ಕೈ ಕೈ ಬೆಸೆದ ತಡಕಾಟ ತುಡಿದಾಗ
ರೆಪ್ಪಗಳು ಕುಂಚಗಳಾಗಿ
ಕತ್ತಲ ಮಸಿ ಕುಡಿದು
ಬೆಂಕಿ ಎದೆಗೆ ಬೆಳಕ ಚಿತ್ರಸಿತು
ಆ ಚಿತ್ರದಲ್ಲೂ
ಕವಿತೆ ಪ್ರೀತಿಯ ಬೆಳಕು.

ಬಿಟ್ಟೂ ಬಿಡದೆ ಬೆನ್ನಟ್ಟಿತ್ತು ಕವಿತೆ
ಹೃದಯದ ಎಲ್ಲ ಬಾಗಿಲುಗಳ ಹಾದು
ಎದೆಗೆ ಹರಿದು ಮೈದಾನದಲ್ಲೆಲ್ಲ
ಬೆರೆತು ಹರಿದಿತ್ತು.
ತವಕಿಸಿದೆ ಕವಿತೆಯು ನಕ್ಕಜಾಡಿಗೆ
ನನ್ನ ತವಕಕ್ಕೆ ಸಾವಿನ ಜೋಮು
ಕಣ್ಣೊಳಗೆ ಹೆಪ್ಪಾದ ಸಮುದ್ರ
ಉಕ್ಕಿ ನನ್ನ ಕೊಚ್ಚಿತು.
ಆಗಲೂ ಕವಿತೆ ನನ್ನನಪ್ಪಿತ್ತು
ನೋವುಗಳೊಂದಿಗೆ ಆಡುತ್ತ
ಬಯಲ ನೋವುಗಳ ಬೆರೆಸುತ್ತ
ಜಗದ ಮೈಗೆ ಬಟ್ಟೆ ತೊಡಿಸುತ್ತ
ತಾನೆಂದೂ ಗಾಯಗೊಳ್ಳದೆ
ನನ್ನ ಗಾಯಗಳ ಓಣಗಿಸಿ.

ಕವಿತೆ ನನ್ನ ಕರುಳಲಿ ಕೂತು
ಹೊಸ ಭರವಸೆ ಹಡೆದಾಗ
ಇಬ್ಬರ ನಡೆ ಒಂದಾಗಿ
ದೂರಭಾರಗಳ ಸವೆಸಿ ದಣಿವು
ಅಗ್ನಿ ಪರ್ವತ ಎರಿ ಬೆಂದೆವು
ನೋವು ನದಿಗಳ ಈಜಿ ನರಳಿದೆವು
ಯುದ್ಧವ ಹೊಕ್ಕು ಯಾತನೆಯ ತಿಂದು
ದುಖ:ಗಳ ಹೊತ್ತೆವು
ಹುಚ್ಚಾದೆವು ಪೆಚ್ಚಾದವು
ಆದರೂ
ಕವಿತೆ ನನ್ನ ಬಿಟ್ಟು ಅಗಲಲಿಲ್ಲ.
ಜಗದ ಬಟ್ಟಲ ತುಂಬ
ಚಂದ್ರ ತಾರೆಯ ಬಿಂಬ.

*******

ಪ್ರೀತಿಯ ಮಗಳಿಗೆ

ಮಗಳೆ
ನನ್ನ ಪ್ರೀತಿಯೆ ಕನಸೆ ನಿರೀಕ್ಷೆಯೆ
ನಾ ಪಟ್ಟ ಕಷ್ಟಕೋಟಲೆಯ ಬಳ್ಳಿ ಹೂವೇ
ಬದಲಾಗು.
ನಿನ್ನ ನಗುವಿಗೆ
ಈ ನೆಲದ ಬಿಗುವು ನನ್ನದು.
ಬದುಕ ಘಮ ಬಯಲ ತುಂಬಲೆಂದೆ
ನನ್ನ ಬೆವರಿನ ಹೊಳೆ.
ನನ್ನ ಮಗಳೆ
ಈಗ ನೀ ಜಗದ ಮಗಳು.

ಕ್ಷಮಿಸು ಮಗಳೆ
ನನ್ನ ನಿಷ್ಕರುಣೆಯನ್ನು
ಪ್ರೀತಿಸಿದಷ್ಟೆ ನನಗೆ ದ್ವೇಷವೂ ಗೊತ್ತು
ಅರಳುವ ನಿರೀಕ್ಷೆಗಳು ನರಳಿದಾಗ
ನಿನ್ನ ಮನಸ ದಳಗಳು
ಮುಳ್ಳಪ್ಪಿ ಮರುಳತನ ಮೆರೆವಾಗ
ಕರುಣೆಯ ಕಾತುರ ತುಂಬಿದ
ಕಠಿಣ ನಡೆ ನನ್ನದು.

ಪ್ರೀತಿಯ ಮಗಳೇ
ಜಗದಲ್ಲಿ ಬರೀ ಕತ್ತಲೆ ಇಲ್ಲ
ಅದರ ಹಿಂದೆಯೇ ಬೆಳಕಿದೆ
ನಿನ್ನ ಮುಂದೆಯೇ ಹೊಳೆಯುತ್ತಿದೆ ಚಡಪಡಿಕೆಯ ಬೆಂಕಿಯನ್ನು
ನೀನು ನುಂಗಲೇಬೇಕು ತಂಪಾಗಲು
ಬೆಳಕ ಕಾಣಲು.

ಕಟುಕ ನಾನು ಮಗಳೆ
ನೀ ಕಾಣಬೇಕಾದ ಹೊಳೆವ ನಕ್ಷತ್ರಗಳಿಗಾಗಿ
ನಿನ್ನ ಬದುಕ ಬಳ್ಳಿಯಲ್ಲಿ
ಘನತೆಯ ಹೂ ನಗುವಿಗಾಗಿ
ಕಡು ದ್ವೇಷದ ಕೆಂಡ ನಾನು.
ನಿನ್ನ ಮನಕೆ ಗಾಯಗೊಳಿಸಿದ
ದಾಳಿಕೋರ ರೋಗದ ಬೇರು ಸುಡಲು.
ಮೊನೆಚು ಚಾಕು ನಾನು
ಇರಿಯುತ್ತೇನೆ ನಿನ್ನ
ನಿನ್ನ ನಗುವನು ಕೊಂದ ಮುಳ್ಳು ಕೀಳಲು.
ಬದುಕ ಹಕ್ಕುನು ಕಸಿದ
ಅಮಾನುಷದ ಕೈ ಕತ್ತರಿಸಲು.

ಸಹಿಸಿಕೋ ಮಗಳೆ
ಸಹನೆಯ ಔಷಧಿ ಕಹಿ
ಎಲ್ಲ ಅಸಹೆನೆಗಳ ವಿಷವನ್ನಳಿಸಲು.
ಆಗಲೇ ನಿನ್ನ ನಗು ಅರಳತ್ತದೆ
ಲೋಕವೇ ಬೆರಗಾದಂತೆ.

ನೋಡು ಮಗಳೇ
ಸಮುದ್ರದ ಮುಗ್ದತೆಯನ್ನು
ಆಕಾಶದ ಸ್ವಚ್ಚ ನೀಲವನ್ನು
ಸದಾ ಬೆಳಗುವ ಸೂರ್ಯನನ್ನು
ಬೆಳದಿಂಗಳನ್ನು
ಹಗೆತನವಿಲ್ಲದ ಹಿರಿತನವನೂ ತೋರದ ಸಹಜ ಹೊಳಪನ್ನು.
ಕಹಿ ಸಾವಿನ ಅಳು ನುಂಗಿ ನಡೆವ
ಜಗದ ಧೀಮಂತ ನಡೆಯನ್ನು
ಜೀವದ ನಗೆ ನುಂಗಿದ ದುಖ:ಕ್ಕೆ
ಗುಲಾಮಳಾಗದಿರು.

ಮಗಳೆ
ನನ್ನ ಪ್ರಯತ್ನದ ಪ್ರತಿ ಹೆಜ್ಜೆಯಲ್ಲೂ
ನಿನ್ನ ಜಯದ ಗುಟ್ಟಿದೆ.
ಬದಲಾಗು ಮಗಳೆ
ಇದು ಜಗದ ನಿಯಮ
ಎಲ್ಲವೂ ಬದಲಾಗುತ್ತದೆ
ನೀನೂ ಬದಲಾಗುತ್ತಿ.


ಪಿ ಆರ್.ವೆಂಕಟೇಶ್

Leave a Reply

Back To Top