ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ

ಕಾವ್ಯ ಸಂಗಾತಿ

ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ

ಅಶೋಕ ಹೊಸಮನಿ

ಎನ್ನರ್ಧ ದಾರಿಯನು ಉಣ್ಣ ಬಲ್ಲೆಯಾದರೆ
ನನ್ನ ಕುರಿತು ಮಾತಾಡು

ಎನ್ನಾತ್ಮದ ಅಶ್ವದ ಕೀವು ಕುಡಿವೆಯಾದರೆ
ನನ್ನ ನಡಿಗೆ,ಓಟದ ಕುರಿತು ಮಾತಾಡು

ಎನ್ನ ದನಿಯನ್ನು ನುಂಗುವೆಯಾದರೆ
ನನ್ನ ಕುರಿತು ಮಾತಾಡು

ಎನ್ನ ದೀರ್ಘ ದಾರಿಗಳು ನೀನಾದರೆ
ನನ್ನ ಕುರಿತು ಮಾತಾಡು

ಎನ್ನ ಸವೆ ಸವೆದ ಮಂಡಿಗಳು ನೀನಾದರೆ
ನನ್ನ ಕುರಿತು ಮಾತಾಡು

ಎನ್ನ ಕಡು ಕತ್ತಲ ಗುಡಿಸಲು ನೀನಾದರೆ
ನನ್ನ ಕುರಿತು ಮಾತಾಡು

ಎನ್ನ ಕರುಳ ಮಾಲೆ ನೀನಾದರೆ
ನನ್ನ ಅಸಹಾಯಕತೆ ಕುರಿತು ಮಾತಾಡು

ಎನ್ನ ಕಮಟು ಪ್ಯಾಂಟ್ ನೀನಾದರೆ
ನನ್ನ ಹರಿದ ಕಿಸೆಯ ಕುರಿತು ಮಾತಾಡು

ಎನ್ನ ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ
ನನ್ನ ಕುರಿತು ಮಾತಾಡು

ಎನ್ನ ಇರುವೆ ಸಾಲು ನೀನಾದರೆ
ನನ್ನ ಅನ್ನದ ಕುರಿತು ಮಾತಾಡು

ಎನ್ನ ಪುರಾತನ ಶಿಲ್ಪವು ನೀನಾದರೆ
ನನ್ನ ಉಳಿ ಪೆಟ್ಟುಗಳ ಕುರಿತು ಮಾತಾಡು

ಎನ್ನ ಮೊಟಕುಗೊಂಡ ಭಾಷಣ ನೀನಾದರೆ
ನನ್ನ ಕುರಿತು ಮಾತಾಡು

ಎನ್ನ ಕಂಪಿಸೊ ಗಾಯಗಳು ನೀನಾದರೆ
ನನ್ನ ಕುರಿತು ಮಾತಾಡು

ಎನ್ನ ಬಿರುಕಿನ ತಟ್ಟೆ ನೀನಾದರೆ
ಒಡಲು ಸುಟ್ಟುಕೊಂಡ ನನ್ನ ಪೂರ್ವಜರ ಕುರಿತು ಮಾತಾಡು

ಮಾತಾಡುವಿಯಾದರೆ ಮಾತಾಡು
ಆತ್ಮದ ಬಾಗಿಲನ್ನೂ ತಟ್ಟು


Leave a Reply

Back To Top