ಶೋಭಾ ನಾಯ್ಕ.ಹಿರೇಕೈ ಕವಿತೆ ಖಜಾನೆ

ಶೋಭಾ ನಾಯ್ಕ.ಹಿರೇಕೈ ಕವಿತೆಗಳು

ಭೂಮಿ ಗೀತ.

ಒಡಲು ನಡುಗಿದ್ದಷ್ಟೇ ಗೊತ್ತು
ಉಳುಕಲ್ಲ ಚಳುಕಲ್ಲ
ತುಳಿದ ನೋವೆಂದು ಗೊತ್ತಾಗುವುದರೊಳಗೆ
ಹಸಿ ಕುಡಿಯೊಂದು ಹಸಿರಾಗಿ
ಎಲೆಯಾಗಿ,ಎರಡಾಗಿ, ತಲೆತೂಗಿ ತಲೆಬಾಗಿ
ನೋಡ ನೋಡುತ್ತ ಮರವಾಗಿ ಎದ್ದಾಗ
ಮೈತುಂಬಾ ಹೂ ಹಣ್ಣು ಹೊದ್ದಾಗ
ಅಂದು ಕೊಂಡಳು ಭೂಮಿ
ಮೆಟ್ಟು ಮೆಟ್ಟಿನಡಿಗೆಲ್ಲ ಇನ್ನೂ….
ಹಸಿರನ್ನೇ ಹೆರುವೆನೆನೆಂದು.

ಬಯಲ ಬಿಸಿಲಲಿ
ಸುಡುವ ಉರಿಯಲಿ
ಧಗ್ಗನೆದ್ದ ಕಾಡ್ಗಿಚ್ಚಿನ ಕಿಚ್ಚಿನಲಿ
ಕರುಳೇ ಕರಕಲಾಗುವ ಹೊತ್ತಲ್ಲಿ
ಮಾತು ಕೊಟ್ಟಿತು ಮುಗಿಲು
ಮಳೆಯಾಗಿ ಜೊತೆ ಬರುವೆನೆಂದು!

ಹೇಳಿದಷ್ಟು ಸಲೀಸೆ ಜೊತೆಯಾಗುವುದು?
ಗುಡುಗು ಸಿಡಿಲುಗಳ
ಚಾಟಿ ಸಹಿಸುವುದು
ಮತ್ತೆ ಸುಲಭವೇ?
ಕನ್ನೆಭೂಮಿಯೊಡಲಲ್ಲಿ
ಜೀವ ಜೀಕಾಡುವುದು

ಮಿಂದ ನೀರು ನಿಂತು
ಒಡಲ ಗರ್ಭ ಕಟ್ಟಿ
ಕರುಳು ಕರುಳೆಲ್ಲ ಬೆಸೆದು
ಒಮ್ಮೆ ಸತ್ತು ಒಮ್ಮೆ ಹುಟ್ಟಿ
ಮತ್ತೆ ಮರುಜನ್ಮ ಎತ್ತಿ
ಮಣ್ಣ ಕಣಕಣದಲ್ಲೂ ಹಾಲುಗೆಚ್ಚಲುಕ್ಕುವಾಗ
ಲೆಕ್ಕಕ್ಕುಂಟೇ
ಭೂಮಿ ಅತ್ತಿದ್ದು
ಹೆತ್ತಿದ್ದು.?

ಮತ್ತೂ…
ತುಳಿಸಿ ಕೊಂಡಿದ್ದು, ಒದ್ದು ನಡೆದದ್ದು
ಗುದ್ದಿ ತೆಗೆದದ್ದು, ಬಗೆದು ನೋಡಿದ್ದು
ಅಗೆದು ಮುಚ್ಚಿದ್ದು, ಒಡಲನ್ನೇ ಸುಟ್ಟಿದ್ದು
ಎಲ್ಲಾ ನೆನಪಿಟ್ಟಿದ್ದರೆ ಆಕೆ..
ಮೊಳಕೆಯೊಡೆಯುತಿತ್ತೇ.
ಉತ್ತಿದ್ದು…
ಬಿತ್ತಿದ್ದು..

*************

ನದಿ, ಕಡಲ ಹಾಗೇ

ಅಲ್ಲಿರುವ ನೀನು
ಇಲ್ಲಿರುವ ಈ ಜೀವದ
ಉಸಿರಾದುದು ಹೇಗೆ ?
ಮೋಡದೊಳಗಿನ ಬಿಂದು
ಇಲ್ಲಿ ಭೂಮಿಗೆ ಬಂದು
ಮಳೆಯಾದ ಹಾಗೇ…

ಅಲ್ಲಿ ನೆನೆದರೆ ನೀನು
ಇಲ್ಲಿ ಗಂಟಲ ತುತ್ತು
ನೆತ್ತಿಗೇರಿತು ಹೇಗೆ?
ಅದೃಶ್ಯದೆಳೆಯಲ್ಲಿ ಜೀವ ಜೀವದ
ತಂತು ಬೆಸೆದಿರುವ ಹಾಗೆ…

ಕ್ಷಣವೂ ಮರೆಯಾಗದೆ
ಕಣ್ಣ ರೆಪ್ಪೆಯ ಒಳಗೆ
ಅಡಗಿರುವೆ ಹೇಗೆ?
ಮಡಿಲ ಬಿಟ್ಟಿಳಿಯದೆ
ಎದೆಗೊರಗಿ ನಿದ್ರಿಸುವ
ಹಾಲ್ಗೂಸಿನ ಹಾಗೇ…

ಮಠ ಮಠ ಮಧ್ಯಾಹ್ನದಿ
ನಟ್ಟ ನಡು ರಾತ್ರಿಯ ಲಿ
ಕನಸಾಗುವೆ ಹೇಗೆ?
ಮಾಯೆಯೇ ನೀನಾಗಿ
ಮುಸುಕಿನೊಳಗೂ ಸೇರಿ
ಮುದ್ದಿಸುವ ಹಾಗೇ..

ಗುಬ್ಬಿ ಗೂಡೊಳಗಿಂದ
ಮೌನ ತುಂಬಿದ ಮಾತು
ಕೇಳಿತಾದರೂ ಹೇಗೆ?
ನಿನ್ನ ಇನಿದನಿಯನ್ನು
ಎಲ್ಲೂ ಸೋರದೆ ಅಲ್ಲಿ
ಬಚ್ಚಿಟ್ಟ ಹಾಗೇ…

ಆತ್ಮ ಆತ್ಮಗಳೊಂದೇ..
ಆಗಿ ಬದುಕುವುದ
ಕಲಿತೆವಾದರೂ ಹೇಗೆ?
ಬೆರೆತ ಮೇಲೆಂದೆಂದೂ ಬೇರ್ಪಡಿಸಲಾಗದ
ನದಿ ಕಡಲ ಹಾಗೇ..

ಅಲ್ಲಿರುವ ನೀನು
ಇಲ್ಲಿರುವ ಈ ಜೀವದ
ಜೀವವಾದುದು ಹೇಗೆ?
ಬಳಿ ಸುಳಿದ ಗಾಳಿ
ನವಿರಾಗಿ ಉಸುರಿತು
ಪ್ರೀತಿ ಎಂದರೆ ಹೀಗೇ….


ಶೋಭಾ ನಾಯ್ಕ.ಹಿರೇಕೈ .


3 thoughts on “ಶೋಭಾ ನಾಯ್ಕ.ಹಿರೇಕೈ ಕವಿತೆ ಖಜಾನೆ

  1. ಎರಡೂ ಕವನಗಳು ಎಂಥ ಅದ್ಭುತ ಮೇಡಂ. ಮಾರ್ಮಿಕ. ಅರ್ಥಗರ್ಭಿತ. ಮತ್ತೆ ಮತ್ತೆ ಓದಿಸಿಕೊಂಡಿತು…

  2. ಭೂಮಿ ಗೀತ…
    ಬೇಂದ್ರೆ ಅವರ ಮೊದಲಗಿತ್ತಿ ಕವನವನ್ನು ನೆನಪಿಸಿತು. ಶೋಭಾ ಬರೆದ ಈವರೆಗಿನ ಅತ್ಯುತ್ತಮ ಕವಿತೆ ಇದು. ನದಿ ಕಡಲ ಹಾಗೇ …ಸಹ ಬ್ಯುಟಿಫುಲ್ .
    ಅಭಿನಂದನೆಗಳು…

Leave a Reply

Back To Top