ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-3

ಬಾಲ್ಯ

110 Dr. B. R. Ambedkar ideas in 2021 | photo album quote, photo frame  gallery, b r ambedkar

[1:03 pm, 24/11/2021] ಸಂಗಾತಿ ಸಾಹಿತ್ಯ ಪತ್ರಿಕೆ: ರಾಮಜಿ ಸಕ್ಪಾಲರು ಮಗನನ್ನು ಹೆಚ್ಚು ಹೆಚ್ಚು ಓದಿಸಬೇಕು, ಸಮಾಜಕ್ಕೆ ಬೆಳಕು ನೀಡುವಂತ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಮಹಾದಾಶೆಯೊಂದಿಗೆ ಕಷ್ಟ ಪಟ್ಟು ಕಲಿಸಿದರು. “ಬೆಳೆವ ಸಿರಿ ಮೊಳಕೆಯಲ್ಲಿಯೇ ಕಾಣು”ವಂತೆ ಭೀಮನು ಶ್ರಮ ಪಟ್ಟು ಓದಿ 1907 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದನು. ನಿಮ್ನ ವರ್ಗದ ಹುಡುಗನೊಬ್ಬ ಮಾಡಿದ ಮೊದಲ ಮಹಾಸಾಧನೆ ಇದಾಗಿತ್ತು. ಅಸ್ಪೃಶ್ಯ ಬಾಲಕನು ಆ ಕಾಲದಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದ್ದು ದೊಡ್ಡ ಸುದ್ದಿಯಾಗಿದ್ದಲ್ಲದೆ. ಈ ಸಾಧನೆ ಭೀಮನಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತು. ಎಸ್.ಕೆ.ಬೊಳೆಯವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ ನಡೆಸಿ ಭೀಮನನ್ನು ಸನ್ಮಾನಿಸಿದರು. ತಂದೆಯ ಸ್ನೇಹಿತರಾದ ಕೃಷ್ಣಾಜಿ ಅರ್ಜುನ ಕೇಳುಸ್ಕರ್ ಅವರು ಸಮಾರಂಭದಲ್ಲಿ ಮಾತನಾಡುತ್ತಾ  ಭೀಮನನ್ನು ಗುಣಗಾಣ ಮಾಡಿದರು. ಚಾರ್ನಿ ರಸ್ತೆಯ ಉಧ್ಯಾನದಲ್ಲಿ ಭೀಮನನ್ನು ಆಗಾಗ ಭೇಟಿ ಮಾಡಿ ಓದಲು     

       ಪುಸ್ತಕ ತಂದುಕೊಟ್ಟಿದ್ದನ್ನು ಸ್ಮರಿಸಿದರು. ಅದೇ ಸಂದರ್ಭದಲ್ಲಿ ತಾವೇ ಬರೆದ “ಬುದ್ದನ ಜಿವನ ಚರಿತ್ರೆ” ಪುಸ್ತಕವನ್ನು ಪ್ರಶಸ್ತಿಯಾಗಿ ಭೀಮನಿಗೆ ಕೊಟ್ಟರು, ಭಗವಾನ ಬುದ್ದನ ಜೀವನ ಚರಿತ್ರೆ ಭೀಮನು ಭವ್ಯ ಭಾರತಕ್ಕೆ ಸಮಾನತೆಯ ಬೆಳಕಾಗುವ ಸೂರ್ಯನುದಯದ ಸಂಕೇತವಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೆ ಭೀಮನು ಗಣ್ಯ ವ್ಯಕ್ತಿಗಳ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ರಾಮಜಿ ನೋಡುತ್ತಾ ಆನಂದಿತರಾದರು. ಮಗನ ಈ ಸಾಧನೆ ಕಂಡು ಕಣ್ಣಂಚಿನಲ್ಲಿ ಆನಂದ ಬಾಷ್ಪ ತುಂಬಿ ಬಂತು ಅವರು ಪಟ್ಟ ಶ್ರಮ ಸಾರ್ಥಕವಾಗಿತ್ತು.

         ಬಾಲ್ಯ ವಿವಾಹ ಪದ್ದತಿ ಅಂದು ಪ್ರಚಲಿತದಲ್ಲಿತ್ತು. ಭೀಮನಿಗೆ ಹದಿನೇಳು ವರ್ಷ ತುಂಬಿದ್ದರಿಂದ ಮಗನ ಮದುವೆ ಮಾಡಲು ರಾಮಜಿ ನಿರ್ಧರಿಸಿದರು, ದಾಪೋಲಿಯಲ್ಲಿ ವಾಸವಿದ್ದ ಬಿಕುವಾಲಂಗಕರ್ ಮನೆಗೆ ಪರಿಚಿತರೊಬ್ಬರ ಮೂಲಕ ಹೋಗಿ, ಅವರ ಸಾಕು ಮಗಳಾದ ರಮಾಬಾಯಿಯನ್ನು ಭೀಮನಿಗೆ ತಂದು ಕೊಳ್ಳಲು ನೋಡಿಕೊಂಡು ಬರುತ್ತಾರೆ. ರಮಾಬಾಯಿ ಸರಳ ಸಜ್ಜನಿಕೆಯ ಒಂಬತ್ತು ವರ್ಷ ತುಂಬಿದ ಹೆಣ್ಣು ಮಗಳು ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೆ ಬೆಳೆದು ಬಂದವಳು. ತಂದೆ – ತಾಯಿ ಆಗಲೆ ತೀರಿ

ಹೋಗಿದ್ದರು. ಅನಾಥ ಮಗಳನ್ನು ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳಲು ನಿಶ್ಚಯಿಸಲಾಗಿತ್ತು. ಅಸ್ಪೃಶ್ಯರಿಗೆ  ಮದುವೆ ಮಾಡಿಕೊಳ್ಳಲು ಸವರ್ಣಿಯರು ಅಂದು ಮದುವೆ ಮಂಟಪಗಳನ್ನು ಕೊಡುತ್ತಿರಲಿಲ್ಲ. ಬೈಕುಳ ಎಂಬ ಸ್ಥಳದಲ್ಲಿ ಸ್ಥಳ ಹಗಲಿನಲ್ಲಿಮೀನುಮಾರಾಟದ ಸಂತೆ ನಡೆಯುತ್ತಿತ್ತು. ರಾತ್ರಿ ವೇಳೆ ಬೇಕುಳದ ಶೆಡ್ ಒಂದರಲ್ಲಿ ಭೀಮರಾವ ಅಂಬೇಡ್ಕರ್ರ ಮದುವೆ ರಮಾಬಾಯಿಯೊಂದಿಗೆ ನೆರವೇರಿತು. ಮೀನಿನ ಕೊಳಚೆ ವಾಸನೆಯಲ್ಲಿಯೆ  ಗತ್ಯಂತರವಿಲ್ಲದೆ ಬೆಳಕು ಮೂಡುವುದರೊಳಗೆ ಆರತಕ್ಷತೆಯ ಕಾರ್ಯ ಮುಗಿಸಲಾಯಿತು.

      ಮಕ್ಕಳ ಮದುವೆ ನಂತರ ಪರೇಳ ಡಾಬಕ ಚಾಳದಿಂದ  ಪರೇಳದ ನಗರಾಭೀವೃದ್ಧಿ ಮಂಡಳಿ ವಠಾರದ ಮಹಡಿಯೊಂದರಲ್ಲಿ ಎದುರುಬದರು ಇರುವ ಎರಡು ಕೋಣೆಗಳನ್ನು ಬಾಡಿಗೆ ಹಿಡಿದು ರಾಮಜಿ ಸ್ಥಳಾಂತರ ಗೊಂಡರು. ಇನ್ನು ಹೆಚ್ಚು ಹೆಚ್ಚು ಓದಬೇಕೆಂಬ ಅಂಬೇಡ್ಕರ್ರ ಮಹತ್ವಾಕಾಂಕ್ಷೆಗೆ ಮದುವೆ ಅಡ್ಡಿಯಾಗುವುದಿಲ್ಲ. ಎಲ್ಪಿನ್ ಸ್ಟನ್ ಕಾಲೇಜು ವಿಭಾಗದಲ್ಲಿ ಇಂಟರ್ ಮಿಡಿಯೇಟ್ ತರಗತಿಗೆ ಸೇರಿ ಅಂಬೇಡ್ಕರರು ಓದು ಮುಂದುವರೆಸಿದರು. ಭೀಮನ ವಿಧ್ಯಾಭ್ಯಾಸಕ್ಕೆ ರಾಮಜೀ ಬೆನ್ನೆಲುಬಾಗಿ ನಿಂತರು. ಅಣ್ಣಂದಿಯರಿಬ್ಬರೂ ಕಲಿಯುದನ್ನು ಬಿಟ್ಟು ಕೆಲಸಕ್ಕೆ ತೊಡಗಿ ತಮ್ಮನ  ವಿಧ್ಯಾಭ್ಯಾಸಕ್ಕೆ ಕುಟುಂಬ ನಿರ್ವಹಣೆಗೆ ಆಸರೆಯಾದರು. ಅಂಬೇಡ್ಕರ್ ರ ಆರೋಗ್ಯ ಹದಗೆಟ್ಟಿದ್ದರಿಂದ ಒಂದು ವರ್ಷ ಅವರ ಶಿಕ್ಷಣ ಕುಂಠಿತಗೊಂಡಿತು, ಆದರೂ ಊಟ ತಿಂಡಿ, ಅನಾರೋಗ್ಯ, ಬಡತನ ಯಾವುದನ್ನು ಲೆಕ್ಕಿಸದೇ ಕಠಿಣ ಪರಿಶ್ರಮ ಪಟ್ಟು ಓದಿ ಇಂಟರ್ ಮಿಡಿಯೇಟ್ ಶಿಕ್ಷಣ ಪೂರ್ಣಗೊಳಿಸುತ್ತಾರೆ. ರಾಮಜಿ ಸಕ್ಪಾಲರಿಗೆ ವಯಸ್ಸಾಗುತ್ತಾ ಬಂದಿದ್ದರಿಂದ ದುಡಿಯುವ ಶಕ್ತಿ ಇಲ್ಲದಂತಾಗಿ ಆದಾಯವು ಕಡಿಮೆಯಾಗುತ್ತ ಆರ್ಥಿಕ ಮುಗ್ಗಟ್ಟು ಹೆಚ್ಚಿತು. ಭೀಮನ ಬುದ್ದಿ ಮತ್ತು ಅಪಾರ ಜ್ಞಾನದಾಹ, ಕಲಿಯುವ ಆಸಕ್ತಿ ಗಮನಿಸಿದ ರಾಮಜಿ ಸಕ್ಪಾಲರು ಹೇಗಾದರೂ ಮಾಡಿ ಭೀಮನಿಗೆ ಪದವಿ ಶಿಕ್ಷಣ ಕೊಡಿಸಬೇಕೆಂದು ತಿರ್ಮಾನಿಸಿ, ಗೆಳೆಯ ಕೇಳುಸ್ಕರವರನ್ನು ಭೇಟಿಮಾಡಿ ಮಗನ ವಿಧ್ಯಾಭ್ಯಾಸದ ಕುರಿತು ಚರ್ಚಿಸಿದರು. ರೋಗಿ ಬಯಸಿದ್ದು ಅದೇ ವೈದ್ಯ ಹೇಳಿದ್ದು ಅದೇ ಎಂಬಂತೆ ಬರೋಡಾದ ಮಹಾರಾಜರು ನಿಮ್ನ ವರ್ಗದ ವಿಧ್ಯಾರ್ಥಿಗಳಿಗೆ ಕಲಿಯಲು ಧನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದರು, ಇದನ್ನು ಸದುಪಯೋಗ ಪಡಿಸಿಕೊಂಡು ಕೇಳುಸ್ಕರರು ಬರೋಡದ ಮಹಾರಾಜರು ಮುಂಬಯಿಗೆ ಬಂದಾಗ ಅವರನ್ನು ಸಂಪರ್ಕಿಸಿ ಅಂಬೇಡ್ಕರರನ್ನು ಕರೆದುಕೊಂಡು ಹೋಗಿ ಭೇಟಿಮಾಡಿಸಿದರು. ಸಂದರ್ಶನದಲ್ಲಿ ಬರೋಡಾ ಮಹಾರಾಜರು ಕೇಳಿದ  ಎಲ್ಲ ಪ್ರಶ್ನೆಗಳಿಗೆ ಅಂಬೇಡ್ಕರರು ಸಮರ್ಪಕವಾಗಿ ಉತ್ತರಿಸಿದ್ದರಿಂದ ಮಹಾರಜರು ಸಂತೃಪ್ತರಗೊಂಡು ಅಂಬೇಡ್ಕರ್ ಅವರಿಗೆ  ಮಾಸಿಕ 25 ರೂಪಾಯಿ ಶಿಷ್ಯವೇತನ ಮಂಜೂರು ಮಾಡಿದರು. ಅವರು ವಿಧ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡಿದ ಬರೋಡದ ಮಹಾರಾಜರು ಅಂಭೇಡ್ಕರ್ ರಿಗೆ ಎಂದೆಂದಿಗೂ ಆಪದ್ಬಾಂಧವರಾದರು.

    ಭಾರತದ ಸ್ವಾತಂತ್ರ್ಯ ಚಳವಳಿ ತೀವೃಗೊಂಡಿತು, ಬ್ರಿಟೀಷರ ದಬ್ಬಾಳಿಕೆ ಹೆಚ್ಚುತ್ತಾ ಸಾಗಿತು, ಬ್ರಟೀಷ ಸರ್ಕಾರ ಟಿಳಕರನ್ನು ಮಾಂಡಲೆ ಸೆರೆಮನೆಯಲ್ಲಿ,ಸಾವರ್ಕರ ಸಹೋದರರನ್ನು ಅಂಡಮಾನ್ ಜೈಲಿನಲ್ಲಿ ಬಂಧನಕ್ಕೊಳಪಡಿಸಿದ್ದರು.  ಯುವ ಅಂಬೇಡ್ಕರರ ಮನಸ್ಸಿನ ಮೇಲೆ ಸ್ವಾತಂತ್ರ್ಯ ಚಳುವಳಿ ಮತ್ತು ಅಸ್ಪೃಶ್ಯತೆಯ ಕರಾಳ ಅವಮಾನಗಳು ಪರಿಣಾಮ ಬೀರಿದವು.ಅತ್ತ್ಯೂನ್ನತ ಶಿಕ್ಷಣ ಪಡೆದು, ಅಪಾರ ಜ್ಞಾನ ಸಂಪಾದಿಸಿದಾಗ ಮಾತ್ರ ಜನರು ತನ್ನ ಮಾತು ಕೇಳುತ್ತಾರೆ.  ಆಗ ಸಮಾಜ ಬದಲಾವಣೆ ಮಾಡಲು, ದೇಶದ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬುದನ್ನು ಅರಿತುಕೊಂಡರು. ಅಂಬೇಡ್ಕರರು ಜೀವನದ ಹಂಗು ತೊರೆದು ಓದತೊಡಗಿದರು.  ಇಂಗ್ಲೀಷ್, ಪರ್ಷಿಯನ್ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಪರಿಶ್ರಮ ಪಟ್ಟು 1912ರಲ್ಲಿ ಬಿ.ಎ. ಪದವಿ ಪಾಸು ಮಾಡಿದರು.  ಅಂಬೇಡ್ಕರರು ಓದುವ ವಿದ್ಯಾರ್ಥಿಗಳಿಗೆ ಆದರ್ಶರಾಗಿದ್ದಾರೆ.  ನಿಮ್ನ ವರ್ಗದ ವಿದ್ಯಾರ್ಥಿಯೊಬ್ಬ ಮೊದಲ ಬಾರಿಗೆ ಬಿ.ಎ. ಪದವಿ ಪಡೆದಿದ್ದು, ಅಸಾಮಾನ್ಯ ಸಾಧನೆಯಾಯಿತು. 

      ಶಿಷ್ಯವೇತನ ಪಡೆದ ವಿದ್ಯಾರ್ಥಿ ಬರೋಡಾ ಮಹಾರಾಜರಲ್ಲಿ ಕೆಲಸ ನಿರ್ವಹಿಸಬೇಕೆಂಬ ಒಪ್ಪಂದದಂತೆ ಬಿ.ಎ. ಪಧವೀಧರರಾಗಿದ್ದ ಅಂಬೇಡ್ಕರರು ಬರೋಡಾ ಸಂಸ್ಥಾನದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದರು.  ರಾಮಜೀ ಸಕ್ಪಾಲ್ ರಿಗೆ ನೌಕರಿಗೆ ಹೋಗುವುದು ಇಷ್ಟವಿರುವುದಿಲ್ಲ. ಭಿಮನು ಇನ್ನೂ ಹೆಚ್ಚಿಗೆ ಓದಬೇಕು ಎಂಬುದು ಅವರ ಬಯಕೆಯಾಗಿತ್ತು.  ಆದರೆ, ಅಂಬೇಡ್ಕರರು ಬರೋಡಾಗೆ ಹೋಗಲು ಸಿದ್ದರಾದರು . ವಯೋವೃದ್ಧ ರಾಮಜೀ ಸಕ್ಪಾಲರಿಗೆ ಮಗ ತಮ್ಮನ್ನು ಬಿಟ್ಟು ನೌಕರಿಗೆ ದೂರ ಹೋಗುತ್ತಿದ್ದಾನೆಂದು ದು:ಖಿತರಾದರು. ಇತ್ತ ಅಂಬೇಡ್ಕರರಿಗೂ ಮೊದಲಬಾರಿಗೆ ವಯಸ್ಸಾದ ತಂದೆಯನ್ನು, ಮಡದಿಯನ್ನು, ಬಂದು-ಬಳಗವನ್ನು ಅಗಲಿ ದೂರದ ಊರಿಗೆ ಹೋಗುತ್ತಿರುವುದು ದು:ಖ ತುಂಬಿ ಕಣ್ಣಲ್ಲಿ ನೀರು ತಂದುಕೊಂಡು ಹೊರಟರು. ರಾಮಜೀ ಸಕ್ಪಾಲರು ಹೃದಯಭಾರದಿಂದ ಅಂತಿಮವಾಗಿ ಏನೋ ಅನ್ನುವಂತೆ ಕೈ ಎತ್ತಿ ಮಗನನ್ನು ಬಿಳ್ಕೋಟ್ಟರು.

    ಅಂಬೇಡ್ಕರರ ಮೇಲಿನ ಅಪಾರ ಪ್ರೀತಿ ಮಗನನ್ನು ಬರೋಡಕ್ಕೆ ಕಳುಹಿಸಿ ಕೊಟ್ಟನಂತರ ರಾಮಜೀ ಸಕ್ಪಾಲ್ ರಿಗೆ ಹೆಚ್ಚಿನ ಚಿಂತೆಗೀಡುಮಾಡಿತು. ಅದೇ ಚಿಂತೆಯಲ್ಲಿ ಅವರು ಹಾಸಿಗೆ ಹಿಡಿದರು ಅತ್ತ ಬರೋಡಾಕ್ಕೆ ಹೋದ  ಅಂಬೇಡ್ಕರರು ಪದೆಪದೆ ತಂದೆಯ ನೆನಪನ್ನು ತಂದುಕೊಂಡು ಅವರ ತಂದೆಯ ಆರೋಗ್ಯದ ಬಗ್ಗೆ

ಚಿಂತಿಸತೊಡಗಿದರು. ಅಂಬೇಡ್ಕರರು ಬರೋಡಕ್ಕೆ ಬಂದು ಹದಿನೈದು ದಿನಗಳು ಉರುಳಿದ್ದವು, ಆಗಲೇ ತಂದೆಯ ಆರೋಗ್ಯ ಹದಗೆಟ್ಟಿದೆ ಕೂಡಲೇ ಅಲ್ಲಿಂದ ಹೊರಟು ಬರಬೇಕೆಂದು ತಂತಿ ಸಂದೇಶ ಬಂದಿತು. ಇದರಿಂದ ವ್ಯಾಕುಲಗೊಂಡ ಅಂಬೇಡ್ಕರರು ತಂದೆಯನ್ನು ಕಾಣುವ ಕಾತುರದಿಂದ ಆತುರಾತುರವಾಗಿ ಬಂದು ರೈಲು ಹತ್ತಿ ಕುಳಿತರು. ಅನಾರೋಗ್ಯದಿಂದ ಹಾಸಿಗೆ ಹಿಡಿದ ತಂದೆಯನ್ನು ಕಾಣಲು ಹೊರಟಿದ್ದ ಅಂಬೇಡ್ಕರರು ದಾರಿಮಧ್ಯ ಸೂರತ್ ರೈಲು ನಿಲ್ದಾಣದಲ್ಲಿ ಹಣ್ಣು ಹಂಪಲು ಕೊಂಡುಕೊಳ್ಳಲು ರೈಲಿನಿಂದ ಕೆಳಗಿಳಿದು ಹಣ್ಣು ಹಂಪಲು ಮಾರುವ ಅಂಗಡಿಯೊಂದರ ಬಳಿ ಬರುತ್ತಾರೆ. ಇನ್ನೇನು ಅಂಗಡಿಯವನು ಹಣ್ಣು ಹಂಪಲು ಕಟ್ಟಿಕೊಡುವುದರೊಳಗೆ ರೈಲು ಹೊರಟುಬಿಟ್ಟಿತು. ಸ್ವಲ್ಪದರಲ್ಲಿಯೆ ರೈಲು ತಪ್ಪಿಸಿಕೊಂಡು ನಂತರದ ರೈಲು ಹಿಡಿದು ಮುಂಬಯಿಗೆ ಮರುದಿನ ಬೆಳಿಗ್ಗೆ ಮನೆಗೆ ಬಂದು ತಲುಪಿದರು.

      ಮಗ ಮನೆಗೆ ಬಂದ ಸುದ್ದಿ ಕೇಳಿ ಮಲಗಿದ್ದ ಹಾಸಿಗೆಯಿಂದಲೆ ಕಣ್ಣರಳಿಸಿ ಭೀಮನತ್ತ ರಾಮಜೀ ಸಕ್ಪಾಲರು ನೋಡಿದರು. ಹಾಸಿಗೆಯಿಂದ ಮೇಲೆಳಲು ಪ್ರಯತ್ನಿಸಿದರು ಆದರೆ ತೀರ ನಿತ್ರಾಣಗೊಂಡಿದ್ದರು ಮೇಲೆ ಎದ್ದು ಕೂಡ್ರಲು ಆಗಲಿಲ್ಲ.ಅವರ ಹಾಸಿಗೆ ಪಕ್ಕದಲ್ಲಿಯೆ ಬಂದು ಕುಳಿತ ಭೀಮನನ್ನು ಕಣ್ ತುಂಬಾ ನೋಡಿ ಏನೋ ಹೇಳಬೇಕು,ಏನೋ ಮಾತಾಡಬೇಕು ಅಂತಾ ಪ್ರಯತ್ನಿಸಿದರು, ಆದರೆ ಮಾತನಾಡಲು ಅವರಿಗೆ ಆಗಲಿಲ್ಲ. ಆರೋಗ್ಯ ತೀರ ಹದಗೆಟ್ಟಿತು ಬಹಳ ಪ್ರಯತ್ನಮಾಡಿ ಕೈ ಮೇಲೆತ್ತಿ ಅಂಬೇಡ್ಕರರನ್ನು ನೋಡುತ್ತಾ, ತಲೆ ಸವರುತ್ತಾ, ಬೆಣ್ಣು ಸವರುತ್ತಾ ಜಗಕ್ಕೆ ಬೆಳಕಾಗು ಎಂಬಂತೆ ಆಶೀರ್ವಾದ ಮಾಡಿದರು.ಸ್ವಲ್ಪ ಸಮಯದಲ್ಲಿಯೆ ಅವರ ಪ್ರಾಣಪಕ್ಷಿ ಹಾರಿಹೊಯಿತು. ರಾಮಜೀ ಸಕ್ಪಾಲರು 1913 ರ ಪೇಬ್ರುವರಿ 2 ರಂದು ಕೊನೆಯುಸಿರು ಎಳೆದರು. ತಂದೆಯ ಸಾವು ಅಂಬೇಡ್ಕರರಿಗೆ ಆಘಾತವನ್ನುಂಟುಮಾಡಿತು. ಬಿಕ್ಕಿ ಬಿಕ್ಕಿ ಅತ್ತರು. ತಂದೆಯ ಸಾವು ಅವರಿಗೆ ಆಕಾಶವೆ ಕಳಚಿ ಬಿದ್ದಂತೆಯಾಯಿತು.ಜೀವನ ಪೂರ್ತಿ ಬೆನ್ನೆಲುಬಾಗಿ ನಿಂತ ಏಕೈಕ ಜೀವ ಎಂದರೆ ರಾಮಜೀ ಸಕ್ಪಾಲರಾಗಿದ್ದರು. ತಂದೆಯ ಆಸರೆ ಮಾರ್ಗದರ್ಶನ ಇನ್ನಿಲ್ಲವಾಯಿತು. ಸೂರ್ಯಚಂದ್ರರಿರುವರೆಗೂ ಹೆಸರನ್ನುಳಿಸುವ ಮಹಾಪುರುಷ ಮಗನೊಬ್ಬನನ್ನು ಈ ಪ್ರಪಂಚಕ್ಕೆ ಕೊಟ್ಟ ರಾಮಜೀ ಸಕ್ಪಾಲರ ಹೆಸರು ಅಜರಾಮರವಾಯಿತು.

                                                 (ಮುಂದುವರೆಯುವುದು)

             ……….           —————————

         ಸೋಮಲಿಂಗ ಗೆಣ್ಣೂರ               

Leave a Reply

Back To Top