ಮಗುವೆ ನಿನಗೆ ಧನ್ಯವಾದ
ಮಡಿಲು ತುಂಬಿದ ನೀನು
ನಿನ್ನ ಬೆಳದಿಂಗಳಂಥಾ ನಗು
ಮನೆ ಮನೆ ತುಂಬಿದ
ಮರೆಯಲಾರದ ಮಧುರ ಕ್ಷಣ
ಕೊಟ್ಟಿದ್ದಕ್ಕೆ
ಮಗುವೆ ನಿನಗೆ ಧನ್ಯವಾದ
ಆಡೋಡಿ ಬಂದು, ಮಡಿಲಲ್ಲಿ ಬಿದ್ದು
ಹುಡಿ ತುಂಬಿದ ತುಂಟ ಮೊಗವ
ಮನದಂಗಳದ ನೆನಪಿನ ಮೂಸೆಯಲಿ
ಅಚ್ಚೊತ್ತಿದಂಥ ಭಂಗಿ
ನೀಡಿದ್ದಕ್ಕೆ
ಮಗುವೆ ನಿನಗೆ ಧನ್ಯವಾದ
ಮುಗ್ಧತೆಯೆ ಮೈವೆತ್ತ ಬೆರಗು ಕಂಗಳು
ನಿನ್ನ ತೊದಲ್ನುಡಿಯ ಸವಿಯಂಟು
ಹಸಿಯಾಗೆ ಇದೆ ನೆನಪ ಇಡುಗಂಟಲಿ
ಅಂಥಾ ಸಿಹಿಸಿಹಿ ಮೆಲುಕು
ಇತ್ತಿದ್ದಕ್ಕೆ
ಮಗುವೆ ನಿನಗೆ ಧನ್ಯವಾದ
ಶಾಲೆಯ ಸಮ್ಮಾನ ಅಭಿಮಾನದ ಕೂಸು
ಮೂಡಿದ್ದವು ನಿನಗೆರಡು ಕೋಡು
ಆನಂದ ಭಾಷ್ಪದಿ ನನ್ನ ಕಣ್ಣೆರಡು !
ಜೀವನ ಪ್ರೀತಿಯನುಕ್ಕಿಸಿ ಬಾಳು
ಹಸಿರಾಗಿಸಿದ್ದಕ್ಕೆ
ಮಗುವೆ ನಿನಗೆ ಧನ್ಯವಾದ
ನಿನ್ನ ತಿದ್ದುತ್ತಾ, ನಾನೂ ತಿದ್ದಿಕೊಂಡು
ಹೊಂಗನಸು ಬೆನ್ನುಹತ್ತಿದಾಗ
ಆಯಾಸದ ಅರಿವೇ ಆಗಲಿಲ್ಲ
ಬದುಕಲಿ ಬತ್ತದ ಭರವಸೆ
ಮೂಡಿಸಿದ್ದಕ್ಕೆ
ಮಗುವೆ ನಿನಗೆ ಧನ್ಯವಾದ
ನನ್ನ ಬದುಕೇ ನೀನಾಗಿ
ಆ ಬದುಕಿಗೆ ಅನನ್ಯಳಾಗುತ್ತಾ
ಬದುಕು ಬಂದಂತೆ ಸ್ವೀಕರಿಸುವ
ಅನುಭವದ ಆಯಾಮಗಳ ಅರಿಯುವ
ಅವಕಾಶವಿತ್ತಿದ್ದಕ್ಕೆ
ಮಗುವೆ ನಿನಗೆ ಧನ್ಯವಾದ
ಮೂರು ವರ್ಷಕ್ಕೇ ನೂರುವರ್ಷಕ್ಕೆ ಮಿಗುವಷ್ಟು
ನೀ ಮೊಗೆದು ಕೊಟ್ಟಷ್ಟು
ಬಾಚಿಕೊಂಡಿದೆ ಬೊಗಸೆ ತುಂಬಾ
ಬಯಸಬಾರದು ಇನ್ನಷ್ಟು
ಸವಿ ನೆನಪುಗಳ ಪುಳಕು
ಈ ಬದುಕಿಗೆ ಬೇಕು
ಮಗುವೆ ನಿನಗೆ ಧನ್ಯವಾದ
******************
ಅರಿವು
ಹಾದಿಯನ್ನು ಸವೆಸುವುದೇ ಪಯಣವಲ್ಲ
ಗಮನಿಸುತ್ತ ಹಾದಿ ಬದಿಯ ನೋಟವನ್ನು
ಗುರಿ ಸೇರುವುದೆ ಪಯಣ
ಶಿಕ್ಷಣವೆಂದರೆ ಪದವಿಗಳ ಗಳಿಕೆಯಲ್ಲ
ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗುವ
ವೈಚಾರಿಕ ಅರಿವು ಪಡೆವುದೇ ಶಿಕ್ಷಣ
ಪೂಜೆಯೆಂದರೆ ಧೂಪ ದೀಪದಾರತಿಯಲ್ಲ
ಕಾಯಕವೇ ಕೈಲಾಸವೆಂದರಿತ ಭಾವದ
ಅರ್ಪಣಾ ದುಡಿಮೆಯೇ ಪೂಜೆ
ಪ್ರೀತಿಯೆಂದರೆ ನಿರೀಕ್ಷೆಗಳ ಅಗತ್ಯವಲ್ಲ
ತನುವಿನೊಳಗಿರುವ ಆತ್ಮದಂತೆ ಸಮರಸದ
ಬೆಚ್ಚನೆಯ ಭರವಸೆಯೇ ಪ್ರೀತಿ
ಸ್ನೇಹವೆಂದರೆ ಮಾತಿನ ಸಿಹಿ ಲೇಪನವಲ್ಲ
ಕಟುಸತ್ಯದ ನಿಷ್ಠುರತೆಯ ಕಹಿ ಮದ್ದಿನ
ಹಿತೈಷಿ ಭಾವದ ಕಳವಳವೇ ಸ್ನೇಹ
ಸಂತನೆಂದರೆ ಧ್ಯಾನದಿ ಕಣ್ಮುಚ್ಚಿ ಕುಳಿತವನಲ್ಲ
ನಿರಪೇಕ್ಷ ಸೇವೆಯಲಿ ಸದ್ದಿಲ್ಲದೆ ತೊಡಗಿ
ವನಸುಮದಂತೆ ಬದುಕಿದವನೇ ಸಂತ
*****************
ಬಾಲ್ಯ
ಶುಕ್ಲಪಕ್ಷದ ಚಂದ್ರ
ತಾ ಕೊಡುವ ತಂಪನರಿಯದ ಮುಗ್ಧ
ತಂಪು ಬೆಳದಿಂಗಳಲ್ಲಿ
ಬೆಳ್ಮುಗಿಲ ಅಡಿಯಲ್ಲಿ
ತಾಯಿ ಮಡಿಲ ಜೋಗುಳದ ಗುಂಗಿನಲ್ಲಿ
ಕಿನ್ನರನಾಡಿನ ಕೂಸು
ಸವಿಯರಿವ ಮುನ್ನವೇ ಕರಗಿದ ಸಿಹಿ
ಕವಲೊಡೆದ ಕೊಂಬೆಯಲಿ ಕೂತು
ಭುವಿಯೊಳಗಿರುವ ಬೇರ ನೋಡುವಾಸೆ
ಸಿಂಹಾವಲೋಕನದಿ ಸವಿ ಮೆಲುಕಿನ ಜಗಿತ
ಎಂ. ಆರ್. ಅನಸೂಯ
ಮಗು,ಬಾಲ್ಯ,ಅರಿವು ಕವನಗಳು ಸೊಗಸಾಗಿವೆ.ಭಾವನೆಗಳ ಜೊತೆಗೆ ಅರಿವಿನ ತಿರುಳನು ಒಡಲೊಳಗಿಟ್ಟುಕೊಂಡು ರೂಪು ಪಡೆದಿವೆ.
ಧನ್ಯವಾದಗಳು
ಅನಸೂಯಾ..ಉತ್ತಮ ಅಭಿವ್ಯಕ್ತಿ..
ಧನ್ಯವಾದಗಳು