ಅಂಕಣ ಬರಹ

ಗಾಂಧಿ ಹಾದಿ

ಭಾರತದ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕಕ್ಕೆ

ಗಾಂಧೀಜಿಯವರ  ಭೇಟಿಗಳು

Gandhian Study Centre - MGM College: Gandhiji's Only Visit to Udupi  Remembered after 85 Years

:

ಗಾಂಧೀಜಿ ಹತ್ತಾರು ಸಲ ಕರ್ನಾಟಕಕ್ಕೆ ಬಂದು ನೂರಾರು ಊರುಗಳನ್ನು ಸುತ್ತಿ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದು ಈಗ ಇತಿಹಾಸ. ಇಂದಿನ ಯುವ ಪೀಳಿಗೆಗೆ ಗಾಂಧೀಜಿಯವರು ಕರ್ನಾಟಕದಲ್ಲಿ ಕೈಗೊಂಡ ಪ್ರವಾಸಗಳ ಸಮಗ್ರ ಮಾಹಿತಿ, ಕನ್ನಡ ಮತ್ತು ಕನ್ನಡಿಗರೊಂದಿಗಿದ್ದ ಅವರ ಆವಿನಾಭಾವ ಸಂಬಂಧಗಳನ್ನು ಪರಿಚಯಿಸುವುದು ಅತ್ಯವಶ್ಯವಾಗಿದೆ.

ಮಹಾತ್ಮ ಗಾಂಧಿಯವರು ರಾಷ್ಟ್ರವನ್ನು ಸ್ವಾತಂತ್ರ‍್ಯದತ್ತ ಮುನ್ನಡೆಸುತ್ತಿದ್ದಾಗ, ಅವರು ಜನರ ಬೆಂಬಲವನ್ನು ಸಂಗ್ರಹಿಸಲು ದೇಶದ ಉದ್ದ ಮತ್ತು ಅಗಲದಲ್ಲಿ ಪ್ರವಾಸ ಕೈಗೊಂಡಿದ್ದರು. ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ಅವರು ೧೮ ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು ಮತ್ತು ಇದು ರಾಜ್ಯದೊಂದಿಗೆ ಅವರ ವಿಶೇಷ ಬಾಂಧವ್ಯವನ್ನು ಸ್ಥಾಪಿಸುತ್ತದೆ. ವಾಸ್ತವವಾಗಿ, ಕಳೆದ ವರ್ಷ ಗಾಂಧಿಯವರ ಕರ್ನಾಟಕಕ್ಕೆ ಭೇಟಿ ನೀಡಿದ ಶತಮಾನೋತ್ಸವ ವರ್ಷವನ್ನು ರಾಜ್ಯವು ಮೇ ೮, ೧೯೧೫ ರಂದು ಕರ್ನಾಟಕಕ್ಕೆ ಭೇಟಿ ನೀಡಿತು. ಅದಲ್ಲದೆ, ಈ ಸಂದರ್ಭವನ್ನು ಗುರುತಿಸಲು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗಾಂಧಿಯವರ ಕರ್ನಾಟಕ ಭೇಟಿಯ ಕುರಿತು ವಿವರ ಇಲ್ಲಿದೆ.

ದೇಶ ಕಟ್ಟುವ ಕೆಲಸಕ್ಕಾಗಿ ಧನ – ಜನ ಸಂಗ್ರಹಿಸಲು ಮತ್ತು ನಿದ್ರಿಸುತ್ತಿದ್ದ ಭಾರತವನ್ನು ಎಚ್ಚರಿಸಲು ಗಾಂಧೀಜಿ ದೇಶದ ಉದ್ದಗಲಕ್ಕೂ ಉತ್ಸಾಹದ ಚಿಲುಮೆಯಂತೆ ಓಡಾಡುತ್ತಿದ್ದರು. ವಿಮಾನಯಾನ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ಸಾಧನಗಳಾದ ಕಾಲ್ನಡಿಗೆ, ಎತ್ತಿನಬಂಡಿ, ಕುದುರೆಗಾಡಿ, ರೈಲು, ದೋಣಿ ಹಾಗೂ ಹಡಗುಗಳಲ್ಲಿ ಸಂಚರಿಸಿದರು. ಹಾಗೆಯೇ ಕರ್ನಾಟಕಕ್ಕೂ ಗಾಂಧೀಜಿ ಹಲವು ಸಲ ಬಂದರು. ಕರ್ನಾಟಕದ ಉದ್ದಗಲಕ್ಕೂ ಅವರ ಅಭಿಮಾನಿಗಳು, ಆತ್ಮೀಯ ಸ್ನೇಹಿತರು ಹಾಗೂ ಕಾರ್ಯಕರ್ತರು ಹರಡಿದ್ದರು. ಮೈಸೂರಿನ ಮಹಾರಾಜರಿಗೆ ಹಾಗೂ ದಿವಾನರಿಗೂ ಗಾಂಧೀಜಿಯ ಮೇಲೆ ಅಪಾರ ಗೌರವ, ಗಾಂಧೀಜಿಗೂ ಅವರ ಮೇಲೆ ತುಂಬ ವಿಶ್ವಾಸ. ಕರ್ನಾಟಕ ಆಗ ಹಲವು ರಾಜಕೀಯ ಆಡಳಿತಗಳ ಪಾಲಾಗಿತ್ತು. ಬೊಂಬಾಯಿ, ಹೈದರಾಬಾದ್, ಮದರಾಸು, ಕೊಡಗು ಹಾಗೂ ಮೈಸೂರು ಪ್ರಾಂತಗಳಲ್ಲಿ ಕರ್ನಾಟಕದ ಭಾಗಗಳು ಹಂಚಿ ಹೋಗಿದ್ದವು. ಇಲ್ಲೆಲ್ಲ ಗಾಂಧೀಜಿ ಸಂಚರಿಸಿದರು ಹಾಗೂ ತಮ್ಮ ಸೇವೆ ಮಾಡಿದರು.

ಕರ್ನಾಟಕದಲ್ಲಿ ಪ್ರಥಮ ಪ್ರವಾಸ(ಬೆಂಗಳೂರು):

ಕರ್ನಾಟಕದ ಸಾರ್ವಜನಿಕ ಕ್ಷೇತ್ರದಲ್ಲಿ ಆ ವೇಳೆಗೆ ಪ್ರಾಮುಖ್ಯ ಪಡೆದಿದ್ದ ಡಿ.ವಿ.ಜಿ

(ಡಾ. ಡಿ. ವಿ. ಗುಂಡಪ್ಪ) ಮದರಾಸಿನ ಜಿ. ಎ. ನಟೇಶನ್ ಅವರೊಡನೆ ಪತ್ರವ್ಯವಹಾರ ಇಟ್ಟುಕೊಂಡಿದ್ದರು. ವೃತ್ತಿಯಿಂದ ಇಬ್ಬರೂ ಪತ್ರಕರ್ತರಾಗಿದ್ದರು. ನಟೇಶನ್ ಅವರು ಗಾಂಧೀಜಿಯ ದಕ್ಷಿಣ ಆಫ್ರಿಕದ ಕೆಲಸಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದಾಗ ಬೆಂಗಳೂರಿನಲ್ಲಿದ್ದ ಡಿ. ವಿ. ಜಿ. ಯವರು ಅವರೊಡನೆ ಸಹಕರಿಸಿದ್ದರು. ಡಿ. ವಿ. ಜಿ ಸಂಗ್ರಹಿಸಿ ಕಳುಹಿಸಿದ ೧,೮೦೦/- ರೂಪಾಯಿಗಳಲ್ಲಿ ಆಗ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ೨೦೦/- ರೂ. ಗಳು ಸೇರಿದ್ದವು. ನಂತರದ ದಿನಗಳಲ್ಲಿ ಡಿ. ವಿ. ಜಿ, ಗಾಂಧೀಜಿ ಬೆಂಗಳೂರಿಗೂ ಭೇಟಿ ಕೊಡಲಿ ಎಂದು ನಟೇಶನ್ ಅವರಿಗೆ ಬೇಡಿಕೆ ಕಳಿಸಿಕೊಟ್ಟರು. ಗಾಂಧೀಜಿ ಇದಕ್ಕೆ ಒಪ್ಪಿದರು.

ಮೇ ೮, ೧೯೧೫, ಮಹಾತ್ಮ ಗಾಂಧಿಯವರು ತಮ್ಮ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗ ಬೆಂಗಳೂರಿಗೆ ಭೇಟಿ ನೀಡಿದ್ದರು. ಕಾರ್ಯಕ್ರಮವು ಮೇ ೯ ಕ್ಕೆ ನಿಗದಿಯಾಗಿದ್ದರೂ, ಗಾಂಧಿ ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಮದ್ರಾಸ್ ಮೇಲ್ ಮೂಲಕ ಪತ್ನಿ ಕಸ್ತೂರ್ಬಾ, ಇಬ್ಬರು ಪುತ್ರಿಯರು ಮತ್ತು ಇತರರೊಂದಿಗೆ ಆಗಮಿಸಿದರು. ೧೯೧೫ ರ ಮೇ, ೮ ರಂದು ಬೆಳಿಗ್ಗೆ ಗಾಂಧೀಜಿ, ಕಸ್ತೂರ ಬಾ ಹಾಗೂ ನಟೇಶನ್ ಮದರಾಸು ಮೇಲ್ ರೈಲಿನಲ್ಲಿ ಬಂದಿಳಿದರು. ಕುದುರೆ ಸಾರೋಟು ಮೆರವಣಿಗೆ ಏರ್ಪಾಡಾಗಿತ್ತು. ವಿದ್ಯಾರ್ಥಿಗಳು ಸಾರೋಟಿನ ಕುದುರೆಗಳನ್ನು ಬಿಚ್ಚಿ ತಾವೇ ಬಂಡಿಯನ್ನು ಎಳೆಯಲು ನಿರ್ಧರಿಸಿದ್ದರು. ಆದರೆ ಗಾಂಧೀಜಿ ಒಪ್ಪಲಿಲ್ಲ. ಹತ್ತಿರದಲ್ಲಿಯೇ ಆನಂದರಾವ್ ಸರ್ಕಲ್‌ನಲ್ಲಿ ಏರ್ಪಾಡಾಗಿದ್ದ ತಮ್ಮ ನಿವಾಸಕ್ಕೆ ನಡೆದೇ ಹೋದರು. ಗಾಂಧೀಜಿ ಮತ್ತು ಬಾ ಇಬ್ಬರೂ ಒಂದೊಂದು ಬಟ್ಟೆಯ ಗಂಟು ತೆಗೆದುಕೊಂಡು ಬಂದಿದ್ದರು. ಅವರ ಸ್ನೇಹಿತ ಕೃಷ್ಣ ಅಯ್ಯರ್ ಅವರ ಮನೆಯಲ್ಲಿ ಉಳಿದಿದ್ದರು.  ಸಹಸ್ರಾರು ಜನರ ಜಯಘೋಷದ ನಡುವೆ ಗಾಂಧೀಜಿ ಉತ್ಸಾಹ ತುಂಬಿ ನಡೆದರು. ಮನೆ ಸೇರಿದಾಗ ಅಲ್ಲಿದ್ದವರು ಆರತಿ ಎತ್ತಿ ಬರಮಾಡಿಕೊಂಡರು.

                ಕೆ. ಎಸ್. ಕೃಷ್ಣ ಅಯ್ಯರ್ ಅವರು ಮೊದಲೇ ವಿಚಾರಿಸಿಕೊಂಡು ಗಾಂಧೀಜಿಯವರ ಊಟಕ್ಕೆ ಕಡಲೆಕಾಯಿ ಬೀಜ ಮತ್ತು ಹಣ್ಣುಗಳನ್ನು ತರಿಸಿದ್ದರು. ಇವರು ತರಿಸಿದ್ದ ಹೆಚ್ಚಿನ ಬೆಲೆಯ ಸೇಬಿನ ಹಣ್ಣನ್ನು ನಿರಾಕರಿಸಿ ಗಾಂಧೀಜಿ ಕೇವಲ ಪರಂಗಿ ಹಣ್ಣು ಮಾತ್ರ ತಿಂದರು.

                ಬೆಳಗಿನ ಕಾರ್ಯಕ್ರಮ ಸರಕಾರಿ ಹೈಸ್ಕೂಲ್ ಆವರಣದಲ್ಲಿ ನಡೆಯಿತು. ಮುಖ್ಯ ಕಾರ್ಯಕ್ರಮ, ಭಿನ್ನವತ್ತಳೆಯ ಸಮರ್ಪಣೆ ಮತ್ತು ಗೋಖಲೆ ಅವರ ಭಾವಚಿತ್ರ ಅನಾವರಣ, ಗಾಂಧೀಜಿಗೆ ಇದು ಗೋಖಲೆಯವರನ್ನು ಸ್ಮರಿಸುವ ಸುಸಂದರ್ಭವಾಗಿ ಒದಗಿತ್ತು. “ಗೋಖಲೆ ನನ್ನ ರಾಜಕೀಯ ಗುರುಗಳು” ಎಂದು ಹೇಳಿ ಸೂಕ್ತ ಭಾಷಣ ಮಾಡಿ ಚಿತ್ರದ ಅನಾವರಣ ಮಾಡಿದರು. (ಈಗಲೂ ಈ ಭಾವಚಿತ್ರ ನರಸಿಂಹರಾಜ್ ಕಾಲೋನಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಇದೆ.) ಅವರು ಮೇ ೯ ರಂದು ಲಾಲ್ ಬಾಗ್‌ಗ್ಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಜೆ ಲಾಲ್ ಬಾಗ್ ಗಾಜಿನ ಮನೆಯಲ್ಲಿ ದೊಡ್ಡ ಬಹಿರಂಗ ಸಭೆ ನಡೆಯಿತು. ಗಾಂಧೀಜಿಯವರಿಗೆ ಸಭಾಧ್ಯಕ್ಷರಾಗಿದ್ದ ಸರ್. ಕೆ. ಪಿ. ಪುಟ್ಟಣ್ಣ ಶೆಟ್ಟರು ಮಾನಪತ್ರ ಅರ್ಪಿಸಿದರು. ಗಾಂಧೀಜಿ ಅಪಾರ ಜನಸಂದಣಿ ಉದ್ದೇಶಿಸಿ ಮಾತನಾಡಿದರು. ಎಲ್ಲೆಲ್ಲೂ ಹರ್ಷ ಉಕ್ಕುತ್ತಿತ್ತು. ಬೆಂಗಳೂರಿನಲ್ಲಿ, ಅವರು ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್, ಮಿಥಿಕ್ ಸೊಸೈಟಿ ಯಲ್ಲಿ ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.  ನಂತರ ದೀವಾನ್ ಸರ್. ಎಂ. ವಿಶ್ವೇಶ್ವರಯ್ಯನವರು ಮೈಸೂರಿನಿಂದ ಕಾರಿನಲ್ಲಿ ಬಂದು ಗಾಂಧೀಜಿಯನ್ನು ಭೇಟಿ ಮಾಡಿದರು. ಹೀಗೆ ಅವರನ್ನು ಭೇಟಿ ಮಾಡಿದವರಿಗೆ ಲೆಕ್ಕವೇ ಇಲ್ಲ. ರಾತ್ರಿ ರೈಲಿನಲ್ಲಿ ಗಾಂಧೀಜಿ ವಾಪಸಾದರು. ಗಾಂಧೀಜಿಯವರು ೧೯೧೫ ಮತ್ತು ೧೯೪೦ ರ ನಡುವೆ ಐದು ಬಾರಿ ಬೆಂಗಳೂರಿಗೆ ಭೇಟಿ ನೀಡಿದರು.

ವಿಜಯಪುರ (ಆಗಿನ ಬಿಜಾಪುರ)ಕ್ಕೆ ಕಾಂಗ್ರೆಸ್ ನ ೧೭ ಸಮಾವೇಶಕ್ಕೆಂದು ೧೯೧೮, ಮೇ ೫ರಂದು ಬಂದಿದ್ದರು ಅದಾದ ಬಳಿಕ ಎರಡನೇ ಬಾರಿ ೧೯೨೧, ಮೇ ೨೮ರಂದು ಗುಮ್ಮಟ ನಗರಿಗೆ ಬಂದಿದ್ದರು.

೧೯೨೧, ಅಕ್ಟೋಬರ್ ೧೦ ರಂದು ಅಸಹಕಾರ ಚಳುವಳಿಯ ಪ್ರಚಾರಕ್ಕೆಂದು ಗಾಂಧಿ ಬಳ್ಳಾರಿಗೆ ರೈಲಿನಲ್ಲಿ ಬಂದಿದ್ದರು.

೧೯೨೪ ರ ಬೆಳಗಾವಿ ಕಾಂಗ್ರೇಸ್ ಅಧಿವೇಶನ:

                ಗಾಂಧೀಜಿಯವರ ಕಾಲದಲ್ಲಿ, ಕರ್ನಾಟಕದಲ್ಲಿ ನಡೆದ ಏಕ ಮಾತ್ರ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ೧೯೨೪ರ ಡಿಸೆಂಬರ ಅಂತ್ಯದಲ್ಲಿ ಜರುಗಿತು. ವಿಶೇಷವೆಂದರೆ ಸ್ವತಃ ಗಾಂಧೀಜಿಯವರು ಅಧ್ಯಕ್ಷರಾಗಿ ನಿರ್ವಹಿಸಿದ ಏಕಮಾತ್ರ ಅಧಿವೇಶನವೂ ಇದೇ ಆಗಿತ್ತು. ಡಿಸೆಂಬರ ೨೧ ರಂದೇ ಬೆಳಗಾವಿ ಪುರಸಭೆ ಗಾಂಧೀಜಿಗೆ ಮಾನಪತ್ರ ಕೊಟ್ಟಿತು. ೨೨ ರಿಂದ ೨೫ ರವರೆಗೆ ವಿಷಯ ನಿಯಾಮಕ ಸಮಿತಿಯ ಚರ್ಚೆಗಳು, ಕಾಂಗ್ರೇಸ್ ಅಧಿವೇಶನ ೨೬,೨೭,೨೮ ರಂದು ಮಾತುಕತೆಗಳು ಹಾಗೂ ಡಿಸೆಂಬರ್ ೨೦ ರಂದು ಅಖಿಲಭಾರತ ಹಿಂದೂಸ್ತಾನಿ ಪರಿಷತ್ತಿನ ಸಭೆ ನಡೆಯಿತು.

೧೯೨೪ ರ ಡಿಸೆಂಬರ್ ೨೬ ಮತ್ತು ೨೭ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ೩೯ ನೇ ಅಧಿವೇಶನವನ್ನು ಬೆಳಗಾವಿ ಆಯೋಜಿಸಿತ್ತು. ವಿರೋಧದ ನಡುವೆಯೂ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ್ದರು. ವಾಸ್ತವವಾಗಿ, ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಇದು. ಗಾಂಧಿ ಇಲ್ಲಿಗೆ ಬಂದ ನಂತರ ಅದರ ಮಣ್ಣನ್ನು ಮುಟ್ಟಿದ ವರದಿಗಳಿವೆ ಮತ್ತು ಅದೇ ಸಂದರ್ಭದಲ್ಲಿ ಅವರು ಅಹಿಂಸೆಯ ಅಸಹಕಾರವನ್ನು ಸ್ವಾತಂತ್ರ‍್ಯದ ಮುಖ್ಯ ಉದ್ದೇಶಗಳೆಂದು ಘೋಷಿಸಿದರು. ವಾಸ್ತವವಾಗಿ, ಅವರು “ನನ್ನ ಸಾವು ಮಾತ್ರ ನನ್ನನ್ನು ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಹಾಜರಾಗದಂತೆ ತಡೆಯುತ್ತದೆ” ಎಂದು ಹೇಳಿದ್ದರು.

                                ಈ ಅಧಿವೇಶನದಲ್ಲಿ ಗಾಂಧೀಜಿ ಉದ್ದವಾದ ಭಾಷಣ ಮಾಡಲಿಲ್ಲ. ತಮ್ಮ ಭಾಷಣವನ್ನು ಮೊದಲೇ ಮುದ್ರಿಸಿ ಹಂಚಿದ್ದರು. ಸಮ್ಮೇಳನದಲ್ಲಿ ಸುಮಾರು ಅರ್ಧ ಘಂಟೆ ಮಾತ್ರ ಮಾತನಾಡಿದರು. ಇದೇ ಮೊದಲ ಬಾರಿ ಸಭೆಗಳೆಲ್ಲ ಸಮಯಕ್ಕೆ ಸರಿಯಾಗಿ ಜರುಗಿದವು. ಗಾಂಧೀಜಿಯವರು (ತಮಗೆ ಪ್ರಿಯವಾದ) ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿ, ಹಿಂದೂ, ಮುಸ್ಲಿಂ ಐಕ್ಯತೆ, ಅಸ್ಪೃಶ್ಯತಾ ನಿವಾರಣೆ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದರು.

ವಿಶ್ರಾಂತಿ ಚಿಕಿತ್ಸೆ:-

                ೧೯೨೭ ರಲ್ಲಿ ಗಾಂಧೀಜಿ ಖಾದಿ ಪ್ರಚಾರಕ್ಕೆ ಪ್ರವಾಸ ಹೊರಟರು. ಮಹಾರಾಷ್ಟ್ರ ದಲ್ಲಿ ಅವರಿಗೆ ಬಹಳ ಆಯಾಸವಾಯಿತು. ಶರೀರದ ಎಡ ಭಾಗವೆಲ್ಲ ಮರಗಟ್ಟಿದ ಹಾಗಾಯಿತು. ಪುಣೆಯಲ್ಲಿ ಬೆಂಗಳೂರಿಗೆ ಹೊರಡುವ ರೈಲಿಗೆ ಅವರನ್ನು ಎತ್ತಿಕೊಂಡು ಬರಬೇಕಾಯಿತು.

                ಕರ್ನಾಟಕದ ಪ್ರವಾಸ ನಿಪ್ಪಾಣಿಯಲ್ಲಿ ಆರಂಭವಾಗ ಬೇಕಿತ್ತು. ಡಾ. ಜೀವರಾಜ್ ಮೆಹತಾ ಅಲ್ಲಿಗೆ ಆಗಮಿಸಿ ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ಮಾಡಿದರು. ಗಾಂಧೀಜಿ ಒಪ್ಪಿದರು, ಆದರೆ ನೂಲುವುದನ್ನು ಬಿಡಲಾರೆ ಎಂದು ಹಠ ಹಿಡಿದರು.

                ನಿಪ್ಪಾಣಿಯಲ್ಲಿ ಜನ ಸಹಕರಿಸಿದರು. ಗಾಂಧೀಜಿಯ ದರ್ಶನ ಬೇಡಿ ಕಾಡದೇ ಸಂಗ್ರಹಿಸಿದ್ದ ೮,೪೫೭/- ರೂ.ಗಳನ್ನು ಸರಳ ರೀತಿಯಿಂದ ಸಮರ್ಪಿಸಿದರು. ಅಲ್ಲಿಂದ ಗಾಂಧೀಜಿ ಬೆಳಗಾವಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದರು.

                ಬೆಂಗಳೂರಿಗೆ ೧೯೨೭ ರ ಎಪ್ರೀಲ್ ೨೬ ಕ್ಕೆ ಬಂದರು. ಮೈಸೂರು ಸರ್ಕಾರ ಖುದ್ದಾಗಿ ಗಾಂಧೀಜಿಯನ್ನು ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆಯಲು ಆಹ್ವಾನಿಸಿತು. ಒಂದು ಸ್ವಾಗತ ಸಮಿತಿ ರಚಿಸಲಾಯಿತು. ಅವರ ಚಿಕಿತ್ಸೆಗಾಗಿ ಸರ್ಕಾರಿ ವೈದ್ಯರು ನಿಯುಕ್ತರಾದರು. ಗಾಂಧೀಜಿಯ ರಕ್ತದ ಒತ್ತಡ ಬಹಳ ಹೆಚ್ಚಾಗಿತ್ತು. ನಂದಿ ಬೆಟ್ಟದಲ್ಲಿ ಅವರ ಆರೋಗ್ಯ ಸುಧಾರಿಸಿತು. ಅವರ ಸೇವೆಗಾಗಿ ಬೆಂಗಳೂರಿನಿಂದ ಸ್ವಯಂ ಸೇವಕರ ದಂಡೇ ಸಿದ್ದವಾಗಿತ್ತು. ಕ್ರಮೇಣ ಗಾಂಧೀಜಿ ತಮ್ಮ ಬರವಣಿಗೆ, ವಾಯು ಸಂಚಾರ ಮೊದಲಾದ ಕೆಲಸಗಳನ್ನು ಮತ್ತೆ ಆರಂಭಿಸಿದರು. ನೂಲುವುದನ್ನಂತೂ ನಿಲ್ಲಿಸಿರಲೇ ಇಲ್ಲ.

                ಇದೇ ಅವಧಿಯಲ್ಲಿ ಗಾಂಧೀಜಿಯನ್ನು ಭೇಟಿ ಮಾಡಲು ಅನೇಕ ಜನರು ಬಂದರು. ಅವರಲ್ಲಿ ಹಿರಿಯ ಅಧಿಕಾರಿಗಳು, ನೂರಾರು ಬಡ ಕಾರ್ಯಕರ್ತರು, ಬ್ರಿಜೇಂದ್ರನಾಥ ಸೀಲ್, ಆರ್, ಶ್ಯಾಮಶಾಸ್ತ್ರಿ ಮೊದಲಾದ ಪ್ರಕಾಂಡ ಪಂಡಿತರು, ಸಿ. ವಿ. ರಾಮನ್‌ರಂತಹ ವಿಜ್ಞಾನಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕರು, ಎಲ್ಲರೂ ಬಂದು ಅವರೊಡನೆ ಮಾತನಾಡಿದರು. ಎಲ್ಲರಿಗೂ ಗಾಂಧೀಜಿ ತಮ್ಮ ವಿಚಾರಧಾರೆಯನ್ನು ಎರೆದುಕೊಟ್ಟರು. ಮದರಾಸಿನಿಂದಲೂ ಅನೇಕ ಮುಖಂಡರು ಬಂದು ಮಾತುಕತೆ ನಡೆಸಿದರು.

                ಜೂನ್ ತಿಂಗಳಲ್ಲಿ ಗಾಂಧೀಜಿ ಬೆಂಗಳೂರಿಗೆ ಬಂದು ಕುಮಾರಾ ಪಾರ್ಕ (ಕುಮಾರ ಕೃಪಾ) ದಲ್ಲಿ ತಂಗಿದರು. ಇಲ್ಲಿಯೂ ಜನ ಹಿಂಡು ಹಿಂಡಾಗಿ ಬಂದರು. ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸಿದರು. ಗಾಂಧೀಜಿಗಾಗಿ ಹಾಡಿದರು. ತಿರುಮಲೆ ರಾಜಮ್ಮನವರು, ಹರೀಂದ್ರನಾಥ ಚಟ್ಟೊಪಾಧ್ಯಾಯರು ಹಾಡಿದಾಗ ಗಾಂಧೀಜಿ ಆನಂದಿಸಿದರು. ನಂತರ ಸುಮಾರು ಒಂದು ತಿಂಗಳು ಬೆಂಗಳೂರು, ಮೈಸೂರು ಮತ್ತು ಹಲವಾರು ಊರುಗಳಲ್ಲಿ ಖಾದಿ ಪ್ರಚಾರ ಪ್ರವಾಸ ಮಾಡಿದರು. ಆಗಸ್ಟ ತಿಂಗಳು ಮುಗಿಯುತ್ತಿದ್ದಂತೆ ಗಾಂಧೀಜಿ     ಬೆಂಗಳೂರಿನಿಂದ ತಮ್ಮ ನಿರಂತರ ಪ್ರವಾಸವನ್ನು ಮುಂದುವರೆಸುತ್ತ ಕರ್ನಾಟಕದಿಂದ ಹೊರಹೊರಟರು.

ಮೈಸೂರಿಗೆ ಗಾಂಧೀಜಿ ಮೊದಲು ಭೇಟಿಕೊಟ್ಟಿದ್ದು, ೧೯೨೭ರಲ್ಲಿ, ಇದಾದ ಬಳಿಕ ೧೯೩೪ರಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿಗೆ ಗಾಂಧೀಜಿ ಭೇಟಿ ಕೊಟ್ಟಿದ್ದರು.

೧೯೨೭ರ ಅಗಸ್ಟ್ ನಲ್ಲಿ ಚಿಕ್ಕಮಗಳೂರಿಗೆ ಬಂದಿದ್ದ ಗಾಂಧಿ, ಅಲ್ಲಿನ ಜಿಲ್ಲಾಧಿಕಾರಿ ಪ್ರಾಂಗಣದಲ್ಲಿ ಸಭೆ ನಡೆಸಿದ್ದಾರೆ.

ಮಂಗಳೂರಿಗೆ

ಮದ್ರಾಸ್ ಅಧ್ಯಕ್ಷತೆಯಲ್ಲಿ ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಲಾಯಿತು – ೧೯೨೦, ೧೯೨೭ ಮತ್ತು ೧೯೩೪ ರಲ್ಲಿ. ಖಿಲಾಫತ್ ಪ್ರವಾಸದ ಸಮಯದಲ್ಲಿ, ಗಾಂಧಿ ಸೆಂಟರಲ್ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು (೧೯೨೦), ಮತ್ತು ಕನಿಷ್ಠ ೧೦,೦೦೦ ಜನರು ಕಾರ್ಯಕ್ರಮಕ್ಕೆ ಬಂದಿದ್ದರು. ಗಾಂಧಿ ಜೊತೆ ಶೌಕತ್ ಅಲಿ, ಮತ್ತು ಅವರನ್ನು ಹಂಪನಕಟ್ಟಾ, ಕಾರ್ ಸ್ಟ್ರೀಟ್, ಮಾರ್ಕೆಟ್ ಮತ್ತು ಬಂಡರ್ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕೆನರಾ ಬಾಲಕಿಯರ ಪ್ರೌಡಶಾಲೆಯಲ್ಲಿ, ಅವರು ಕೃಷ್ಣ ಮಂದಿರಕ್ಕೆ ಅಡಿಪಾಯ ಹಾಕಿದರು.

ತುಮಕೂರು

ಗಾಂಧೀಜಿ ಜುಲೈ ೧೪, ೧೯೨೭ ರಂದು ತಮ್ಮ ಪತ್ನಿ ಮತ್ತು ಇತರರೊಂದಿಗೆ ತುಮಕೂರಿಗೆ ಭೇಟಿ ನೀಡಿದರು. ಅವರು ಪಂಚಮ ಬೋರ್ಡಿಂಗ್ ಶಾಲೆಗೆ ಭೇಟಿ ನೀಡಿದರು ಮತ್ತು ಪ್ರಾಣಿ ದಯಾ ಸಂಘದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ತಮ್ಮ ಪ್ರವಾಸದ ಸಮಯದಲ್ಲಿ ಮಧುಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ಬಲ ವರ್ಗದ ಜನರಿಗೆ ನಿಧಿ ಸಂಗ್ರಹಿಸಲು ಸಭೆಯನ್ನುದ್ದೇಶಿಸಿ ಮಾತನಾಡಿದರು.

೧೯೩೪ರಲ್ಲಿ ದೊಡ್ಡ ಬಳ್ಳಾಪುರಕ್ಕೆ ಬಂದಿದ್ದ ಗಾಂಧೀಜಿ ಅಲ್ಲಿ ನೆರೆದಿದ್ದ ೨೫ ಸಾವಿರದಷ್ಟು ಜನರಿಗೆ ದೇಶಪ್ರೇಮದ ಪಾಠ ಮಾಡಿದ್ದರು.

ಉಡುಪಿ

ಹರಿಜನರ ಉನ್ನತಿಗಾಗಿ ಹಣ ಸಂಗ್ರಹಿಸುವ ಪ್ರವಾಸದ ಭಾಗವಾಗಿ, ಗಾಂಧೀಜಿಯವರು ಫೆಬ್ರವರಿ ೨೫, ೧೯೩೪ ರಂದು ಉಡುಪಿಗೆ ಭೇಟಿ ನೀಡಿದರು. ಅಜ್ಜರಕಾಡ್ ಮೈದಾನದಲ್ಲಿ ೩,೦೦೦ ಜನರು ಸೇರಿದ್ದ ಭಾಷಣದಲ್ಲಿ, ದುರ್ಬಲ ವರ್ಗಗಳಿಗೆ ಅವಕಾಶ ನೀಡುವಂತೆ ಗಾಂಧಿ ಜನರಿಗೆ ಸಲಹೆ ನೀಡಿದರು. ದೇವಾಲಯಗಳು ಗಾಂಧೀಜಿ ಕಡಬೆಟ್ಟುವಿನಲ್ಲಿ ಖಾದಿ ಭಂಡಾರವನ್ನು ಉದ್ಘಾಟಿಸಿದ್ದರು.

ನಂದಿ ಬೆಟ್ಟಗಳು

ಗಾಂಧಿಯವರು ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಆಸ್ತಮಾ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಗಾಂಧೀಜಿ ೧೯೩೬ ರಲ್ಲಿ ೪೫ ದಿನಗಳ ಕಾಲ ನಂದಿ ಬೆಟ್ಟದಲ್ಲಿ ತಂಗಿದ್ದರು, ಮತ್ತು ಬೆಟ್ಟಗಳು ನಿಜಕ್ಕೂ ಅವರ ಮೇಲೆ ಮ್ಯಾಜಿಕ್ ಮಾಡಿವೆ ಎಂದು ವರದಿಯಾಗಿದೆ. ಗಾಂಧೀಜಿ ತಮ್ಮ ವಾಸ್ತವ್ಯದ ಸಮಯದಲ್ಲಿ, ನಂದಿಯ ತಪ್ಪಲಿನಲ್ಲಿರುವ ಮಡಕು ಹೊಸಹಾಲ್ ಗ್ರಾಮಕ್ಕೆ ಭೇಟಿ ನೀಡಿ ಭಜನೆಗಳನ್ನು ನಡೆಸಿದರು. ಅವರ ಭೇಟಿಯ ನೆನಪಿಗಾಗಿ, ಗ್ರಾಮವನ್ನು ಗಾಂಧಿಪುರ ಎಂದು ಮರುನಾಮಕರಣ ಮಾಡಲಾಗಿದೆ. ನಂದಿ ಬೆಟ್ಟದಲ್ಲಿದ್ದಾಗ, ಅವರಿಗೆ ತಾಜಾ ಮೇಕೆ ಹಾಲು, ಹಣ್ಣುಗಳು ಮತ್ತು ಮನೆಯಲ್ಲಿ ತಯಾರಿಸಿದ ಬ್ರೆಡ್ನ ಆಹಾರ ಕ್ರಮದಲ್ಲಿರಲು ಸಲಹೆ ನೀಡಲಾಯಿತು. ಅವರ ವೈದ್ಯ ಡಾ.ಜೀವರಾಜ್ ಮೆಹ್ತಾ ಕೂಡ ಅವರಿಗೆ ಯೋಗ ಆಸನಗಳು ಮತ್ತು ಪ್ರಾಣಾಯಾಮವನ್ನು ಆದೇಶಿಸಿದ್ದರು. ಗಾಂಧಿ ನಂದಿ ಬೆಟ್ಟದಲ್ಲಿ ತಂಗಿದ್ದ ಸ್ಥಳವನ್ನು ಇಂದಿಗೂ ಗಾಂಧಿ ನಿಲಯ ಎಂದು ಕರೆಯಲಾಗುತ್ತದೆ. 

ಅಸ್ಪೃಶ್ಯತೆಯ ವಿರುದ್ಧ ಮೈಸೂರು ಗಾಂಧಿಯವರ ಅಭಿಯಾನವು ಅವರನ್ನು ಜನವರಿ ೫, ೧೯೩೪ ರಂದು ಮೈಸೂರಿಗೆ ಕರೆತಂದಿತು. ಅವರು ತಗಡೂರು, ಬದನವಾಳು ಮತ್ತು ನಂಜನಗೂಡಿಗೆ ಭೇಟಿ ನೀಡಿ ಅಸ್ಪೃಶ್ಯತೆಯ ವಿರುದ್ಧ ಜನರನ್ನು ಒತ್ತಾಯಿಸಿದರು. ವಾಸ್ತವವಾಗಿ, ಗಾಂಧೀಜಿ ಈ ಮೊದಲು ಮೈಸೂರಿಗೆ ಭೇಟಿ ನೀಡಿದ್ದರು ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅತಿಥಿಯಾಗಿ. ಬ್ರಿಟಿಷ್ ಆಳ್ವಿಕೆಯಿಂದ ತೀವ್ರ ವಿರೋಧವಿತ್ತು, ಆದರೆ ೧೯೨೭ ಮತ್ತು ೧೯೩೬ ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಗಾಂಧಿಗೆ ಆತಿಥ್ಯ ವಹಿಸಿದರು. ಮೈಸೂರು ರಾಜ್ಯದ ಶಿಕ್ಷಣ, ಕೃಷಿ ಮತ್ತು ಕಲೆಯಲ್ಲಿನ ಪ್ರಗತಿಯಿಂದ ಪ್ರಭಾವಿತರಾದ ಗಾಂಧೀಜಿ ಮಹಾರಾಜರು ‘ರಾಜರ್ಷಿ (ಸಂತ ರಾಜ)’ ಎಂದು ಪ್ರಸಿದ್ಧವಾಗಿ ಹೇಳಿದ್ದರು.

 ಕೇರಳ ಮಾರ್ಗವಾಗಿ ಬಂದಿದ್ದ ಗಾಂಧಿ ಕೊಡಗಿಗೆ ಭೇಟಿಕೊಟ್ಟಿದ್ದರು. ೧೯೩೪ರ ಫೆಬ್ರವರಿ ೨೨ರಂದು ಪೊನ್ನಂಪೇಟೆಗೆ ಬಂದಿದ್ದ ಅವರು ಅಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ತಂಗಿದ್ದರು.

೧೯೩೪ ಮಾರ್ಚ್ ೧ರಂದು ಚಿತ್ರದುರ್ಗ, ಶಿರಸಿ ಮೂಲಕ ಹಾವೇರಿಗೆ ಬಂದಿದ್ದರು.

೧೯೩೪ ಮಾರ್ಚ್ ೨ ರಂದು ದಾವಣಗೆರೆ ಬಂದ ಗಾಂಧಿ, ಅಲ್ಲಿ ಸ್ವಾತಂತ್ರ‍್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದರು. ಅಲ್ಲಿಂದ ಬಳ್ಳಾರಿ, ಹುಬ್ಬಳ್ಳಿಗೆ ಭೇಟಿ ನೀಡಿದರು.

ಕೊನೆಯ ಕರ್ನಾಟಕ ಪ್ರವಾಸ:

                ೧೯೩೯ ರಲ್ಲಿ ಗಾಂಧೀಜಿ ಎರಡನೆ ಬಾರಿ ಹರಿಜನ ನಿಧಿ ಸಂಗ್ರಹಿಸಲು ಅಸ್ಪೃಶ್ಯತಾ ನಿವಾರಣೆಯ ಪ್ರಚಾರ ಮಾಡಲು ಕರ್ನಾಟಕದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದರು. ಹುದಲಿಯ ಗಾಂಧೀ ಸೇವಾ ಸಂಘದ ಸಮ್ಮೇಳನಕ್ಕೆ ಬಂದದ್ದೇ ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ಕೊಟ್ಟ ಕೊನೆಯ ಸಂದರ್ಭವಾಗಿದೆ. ಗಂಗಾಧರರಾವ್ ದೇಶಪಾಂಡೆಯವರ ಊರಾದ ಹುದಲಿ, ಬೆಳಗಾವಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿದೆ. ೧೯೨೨ ರಿಂದ ಇಲ್ಲಿ ರಚನಾತ್ಮಕ ಕಾರ್ಯಕ್ರಮ ನಡೆಯುತ್ತಿದೆ ೧೯೩೭ ಏಪ್ರಿಲ್ ೧೯-೨೦, ಹುದಲಿಯಲ್ಲಿ ನಡೆದ ಗಾಂಧೀ ಸೇವಾ ಸಂಘದ ಸಮ್ಮೇಳನಕ್ಕೆ ಸ್ವತಃ ಗಾಂಧೀಜಿಯವರೇ ಆಗಮಿಸಿ ಚರ್ಚೆಗಳಲ್ಲಿ ಭಾಗವಹಿಸಿದರು. ಎರಡು ಮೂರು ಸಂದರ್ಭಗಳಲ್ಲಿ ಭಾಷಣವನ್ನೂ ಮಾಡಿದರು.

                ಹೀಗೆ ಗಾಂಧೀಜಿಯವರಿಗೂ ಕರ್ನಾಟಕಕ್ಕೂ ಒಂದು ಧೃಡವಾದ ನೆಂಟು ಇತ್ತು. ಅವರ ಚಳುವಳಿಗಳಲ್ಲಿ ಕರ್ನಾಟಕದ ಕಾರ್ಯಕರ್ತರೂ ಸಹ ಸಕ್ರೀಯವಾಗಿ ತಮ್ಮ ನೆರವನ್ನು ಕೊಟ್ಟರು.

                ಕರ್ನಾಟಕ ರಾಜ್ಯದ ಮೇಲಿದ್ದ ಪ್ರೀತಿ, ವಿಶ್ವಾಸಗಳಂತೆ ಕನ್ನಡ ಭಾಷೆಯ ಮೇಲೆಯೂ ಗಾಂಧೀಜಿಗೆ ಅಪಾರವಾದ ಒಲುಮೆಯಿತ್ತು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ‘ಭಾರತ ಬಿಟ್ಟು ತೊಲಗಿ’ ಚಳುವಳಿಯ ಸಂದರ್ಭದಲ್ಲಿ ಸ್ವತಃ ತಮ್ಮ ಹಸ್ತಾಕ್ಷರಗಳಿಂದ ಕನ್ನಡಿಗರನ್ನು ಉದ್ದೇಶಿಸಿ ಬರೆದ ಕನ್ನಡ ಭಾಷೆಯ ಪತ್ರವೇ ಸಾಕ್ಷಿಯಾಗಿದೆ. ಇದೊಂದು ಇತಿಹಾಸಿಕ ದಾಖಲೆ ಎಂದರೂ ತಪ್ಪಾಗಲಾರದು.

****************************

ಡಾ. ಎಸ್.ಬಿ. ಬಸೆಟ್ಟಿ

ಡಾ.ಎಸ್.ಬಿ.ಬಸೆಟ್ಟಿಯವರು ದಾರವಾಡದ ಕರ್ನಾಟಕ ವಿ.ವಿ.ಯ ಗಾಂಧೀ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದಾರೆ. ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆಲೋಕಮಾನ್ಯ ಬಾಲಗಂಗಾದರ ತಿಳಕರ ಸ್ವರಾಜ್ಯ ಕಲ್ಪನೆ,ಲೋಕಮಾನ್ಯ ಬಾಲಗಂಗಾದರ ತಿಳಕರ ದೃಷ್ಠಿಯಲ್ಲಿ ರಾಷ್ಟ್ರೀಯತೆ,ಭಾರತದ ರಾಷ್ಟ್ರದ್ವಜ: ವಿಕಾಸ ಹಾಗು ಸಂಹಿತೆ -ಇವರ ಕೃತಿಗಳು.ಗಾಂಧೀ ಕುರಿತು ೨೦ ಲೇಖನ ಅಂತರಾಷ್ಟ್ರೀಯ, ರಾಷ್ಟ್ರೀಯ ನಿಯತಕಾಲಿಕೆ, ಮಾಸಿಕ ಪತ್ರಿಕೆ ಗಳು ಮತ್ತು ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ

Leave a Reply

Back To Top