ಅಂಕಣ ಬರಹ
ಗಜಲ್ ಲೋಕ
ಪ್ರೀತಿ ಮಾಧುರ್ಯವನು ಪಸರಿಸುವುದು ಗಜಲ್
ಆಧ್ಯಾತ್ಮಿಕ ಹಸಿವನು ನೀಗಿಸುವುದು ಗಜಲ್” –
ರತ್ನರಾಯಮಲ್ಲ
ದುಃಖ, ಕೋಪ, ಅಸೂಯೆ, ಈರ್ಷ್ಯೆ, ದ್ವೇಷ… ಮುಂತಾದ ಭಾವ ವಿಕಲ್ಪಗಳನ್ನು ಸಾಮಾನ್ಯವಾಗಿ ಮನುಷ್ಯ ಅನುಭವಿಸಲು ಇಷ್ಟ ಪಡುವುದಿಲ್ಲ. ಆದರೆ ಅದೇ ಭಾವಗಳು ಕಲೆ-ಕಾವ್ಯಗಳಲ್ಲಿ ಮೂರ್ತಗೊಂಡಾಗ ಖುಷಿ ಖುಷಿಯಾಗಿ ಆಸ್ವಾದಿಸುತ್ತಾನೆ!! ಕಾವ್ಯ ಪರಪಂಚ ನಾವು ಬಾಳಿ ಬದುಕುತ್ತಿರುವ ನೈಜ ಜಗತ್ತಿಗಿಂತ ಭಿನ್ನವಾದುದು ಎಂಬ ಪ್ರಜ್ಞೆಯ ಜೊತೆಗೆ ಕಾವ್ಯವನ್ನು ವಾಸ್ತವದಂತೆ ಅನುಭವಿಸಬಲ್ಲ ಸಂವೇದನಾಶೀಲ ಮನಸ್ಸುಗಳಿಗೆ ಮಾತ್ರ ಈ ರಸಸ್ವಾದನೆ ಪಥ್ಯವಾಗುತ್ತದೆ!! ಇದು ಸಾಧ್ಯವಾಗಬೇಕಾದರೆ ಕಾವ್ಯಾಸ್ವಾದನೆ ಪಡೆಯಲು ಬಯಸುವ ಹೃದಯ ಕಲ್ಪನೆ-ವಾಸ್ತವಗಳ ನಡುವೆ ಒಂದು ಸಮಪಾಕ ತಂದುಕೊಳ್ಳುವ ಕೌಶಲ್ಯವನ್ನು ಪಡೆದುಕೊಂಡಿರಬೇಕು!! ಇದು ಕಾವ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ.
‘ಗಜಲ್’ ಎನ್ನುವ ಶಬ್ಧದ ಉಚ್ಚಾರವಾಗುವುದೆ ಹೃದಯದ ಬಡಿತದಿಂದ, ಹೃದಯದ ಬಡಿತಕ್ಕಾಗಿ! ಗಜಲ್ ಚಾಂದಿನಿಯ ಎದೆಯಾಳದಲ್ಲಿ ಇರುವುದು ಸಹಾನುಭೂತಿ-ಕರುಣೆಯೆಂಬ ಪ್ರೇಮದೌಷದಿ. ಈ ನೆಲೆಯಲ್ಲಿ ಗಜಲ್ ತನ್ನನ್ನು ತಾನು ಅವಲೋಕಿಸಿಕೊಳ್ಳುವುದು, ಹಾಗೆ ಅವಲೋಕಿಸಿಕೊಳ್ಳುತ್ತಲೇ, ತಾನು ಇಲ್ಲವಾಗುತ್ತ ಎಲ್ಲವೂ ತಾನಾಗುವುದು-ಎಲ್ಲವನ್ನೂ ಒಳಗೊಳ್ಳುವುದು!! ಇದರಲ್ಲಿ ಕಲೆ, ಸಂಸ್ಕೃತಿ, ಸೌಂದರ್ಯ, ಮನೋವಿಜ್ಞಾನ ಎಲ್ಲವೂ ಇದೆ. ಇದೊಂದು ಬಹುದೊಡ್ಡ ಕ್ಯಾನವಾಸಿನ ಮೇಲೆ ಬಿಡಿಸಿದ ಚಿತ್ರ! ಆದರೆ ಎಷ್ಟು ಬಣ್ಣ ತುಂಬಿದರೂ ಮುಗಿಯದ ದೊಡ್ಡ ಕ್ಯಾನವಾಸ್ ಅದು. ಚಿತ್ರ ಬಿಡಿಸಿದ ನಂತರ ನೋಡಿದರೆ, ಕ್ಯಾನವಾಸಿನ ಮೇಲೆ ಇನ್ನೂ ಜಾಗವಿರುತ್ತದೆ. ಒಂದು ಮೂಲೆಯಲ್ಲಿ ಮಾತ್ರ ಬಿಡಿಸಿದ ಚಿತ್ರವೆಂಬಂತೆ ಭಾಸವಾಗುತ್ತದೆ!! ಈ ಹಿನ್ನೆಲೆಯಲ್ಲಿ ಗಜಲ್ ಎಂದರೆ ಮೌನ ಕಣಿವೆಯೊಂದಿಗಿನ ಅನುಸಂಧಾನ, ಮೌನದೊಂದಿಗಿನ ಸಂವಾದ. ಇದು ಮಾತಾಡುವುದು ಹೆಚ್ಚಾಗಿ ರೂಪಕದ ಭಾಷೆಯಲ್ಲಿಯೆ..! ಇದು ಕೆಲವೊಮ್ಮೆ ಅಮೂರ್ತ ರೂಪದಲ್ಲಿದ್ದರೆ, ಇನ್ನೂ ಹಲವು ಬಾರಿ ಮೂರ್ತ ಸ್ವರೂಪ ಪಡೆದುಕೊಳ್ಳುತ್ತದೆ. ಬೀಜ ಮೊಳೆಯುವುದು, ಇರುಳಲ್ಲಿ ನಕ್ಷತ್ರ ಮಿನುಗುವುದು – ಇಂದ್ರಿಯಾನುಭವಕ್ಕೆ ದಕ್ಕಿಯೂ ಅದರಾಚೆ ಕೈಮಾಡಿ ತೋರುವ, ಸೂಚಿಸುವ ಪಿಸುಮಾತು. ಇಂತಹ ಗಜಲ್ ನಲ್ಲಿ ಗಣಿತ, ಸಿದ್ಧಾಂತಕ್ಕಿಂತಲೂ ಶಾಶ್ವತವಾದ ಸಂಗೀತವಿದೆ!!
ಗಜಲ್ ಶೂನ್ಯದಿಂದ ಅಂದರೆ ಗಜಲ್ ಗೋ ಅವರ ಅಂತರಂಗದಿಂದ ಮೂಡುತ್ತದೆ, ಅವರ ಅಂತರಂಗವನ್ನು ಅನಾವರಣ ಮಾಡುತ್ತದೆ. ಈ ಕಾರಣಕ್ಕಾಗಿಯೋ ಏನೋ ಎಂಬಂತೆ ಇಂದಿನ ಹೆಚ್ಚಿನ ಕವಿ-ಬರಹಗಾರರ ಮನಸುಗಳು ಗಜಲ್ ಪರಿಯತ್ತ ವಾಲುತ್ತಿವೆ. ಸಾರಸ್ವತ ಲೋಕದ ಮಾನಸ ಮಕ್ಕಳೆಲ್ಲರೂ ಗಜಲ್ ಗಂಧವನ್ನು ಉಸಿರಾಡುತಿದ್ದಾರೆ!! ಕಾವ್ಯಕ್ಕಿಂತಲೂ ವಿಶಿಷ್ಟವಾದ ಈ ಗಜಲ್ ತನ್ನದೇ ಆದ ಸ್ವರೂಪ, ಲಕ್ಷಣಗಳನ್ನು ಹೊಂದಿದೆ. ಅದರ ಎಲ್ಲ ಆಯಾಮಗಳನ್ನು ಅರ್ಥ ಮಾಡಿಕೊಂಡು, ಪರಕಾಯ ಪ್ರವೇಶದಂತೆ ಅಸಂಖ್ಯಾತ ಕಲಾರಸಿಕರು ಗಜಲ್ ಬರೆಯುತ್ತ ಗಜಲ್ ಕಾರರಾಗುತಿದ್ದಾರೆ, ಆಗಿದ್ದಾರೆ!! ಭಾರತದ ಎಲ್ಲ ಭಾಷೆಗಳಲ್ಲಿ ಗಜಲ್ ಮೃದು ಭಾಷಿಣಿಯ ಕಲವರ ದಿನೆ ದಿನೇ ಹೆಚ್ಚುತಲಿದೆ. ಈ ಅರಬ್ ನ ಕಿಶೋರಿ ಪರ್ಷಿಯಾದಲ್ಲಿ ಪ್ರೌಢಾವಸ್ಥೆಗೆ ಬಂದು, ಉರ್ದುವಿನಲ್ಲಿ ಪಟ್ಟದರಸಿಯಾಗಿ ಕರುನಾಡಿನಲ್ಲಿ ಮನೆ ಮಗಳಾಗಿ ನಮ್ಮೆಲ್ಲರ ಹೃದಯವನ್ನು ಆಳುತಿದ್ದಾಳೆ!! ತಮ್ಮ ಹೃದಯದ ಬೆಚ್ಚಗಿನ ಗೂಡಿನಲ್ಲಿ ಗಜಲ್ ಕನಕಾಂಗಿಯನ್ನು ಕಾಪಿಡುತ್ತಿರುವ ಗಜಲ್ ಕಾರರೊಂದಿಗೆ ಪ್ರತಿ ವಾರ ರುಬರು ಆಗುವ ಸದಾವಕಾಶ ದೊರಕಿದೆ. ಪ್ರತಿ ಗುರುವಾರ ಒಬ್ಬ ಗಜಲ್ ಗಾರುಡಿಗರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ…!!
*****************************
ರತ್ನರಾಯ ಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ....!