ಅಂಕಣ ಬರಹ

ತೊರೆಯ ಹರಿವು

ಆಗದು ಎಂದು ಹೇಳುವ ಮುನ್ನ

1,803,038 Abstract Art Photos - Free & Royalty-Free Stock Photos from  Dreamstime

ಕೈ ಮೀರಿದ್ದು ಎಂದು ವೈದ್ಯರೂ ಕೈ ಚೆಲ್ಲಬಹುದು ಆದರೆ ಆವರೆಗೂ ಮಾಡುವ ಎಲ್ಲಾ ಪ್ರಯತ್ನಗಳನ್ನಂತೂ ಅವರು ಮಾಡಿಯೇ ತೀರಿರುತ್ತಾರೆ ಅಲ್ಲವೆ? ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡೆಂದು ಯಾವ ಸೇನಾನಿಯೂ ಹೇಳುವುದಿಲ್ಲ. ‘ಗೆಲುವು- ಸೋಲು’ ಅಥವಾ ‘ಸಾವು’ ಎಂದು ಯುದ್ಧ ಭೂಮಿಗೆ ಹೋಗುವ ಮುನ್ನವೇ ಬರುವ ಆಯ್ಕೆಗಳಿಗೆ ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. 

   ‘ಆಗದು ಎಂದು ಕೈ ಕಟ್ಟಿ ಕುಳಿತರೆ…’ ಯಾವ ಕೆಲಸ ಕಾರ್ಯಗಳೂ ಮುಂದೆ ಸಾಗುವುದಿಲ್ಲ. ‘ಏನಾದರೂ ಮಾಡುತಿರು..’ ಎಂದು ಹಿರಿಯರು ಹೇಳುವುದು ಸೋಮಾರಿಗಳಿಗೆ ಮಾತ್ರವಲ್ಲ. ಕ್ರಿಯಾಶೀಲರು ಸದಾ ಚಟುವಟಿಕೆಯಿಂದ ಚಲನಶೀಲರಾಗಿರುವವರು ‘ಏನಾಗಲಿ ಮುಂದೆ ಸಾಗು ನೀ..’ ಎನ್ನುವ ತತ್ವ ಪಾಲಿಸುತ್ತಾರೆ. ಅವರು ನಿಂತ ನೀರಾಗುವುದಿಲ್ಲ. ಹರಿವ ನದಿಯಾಗಿ ಕಡಲ ಹಂಬಲ ಹೊಂದಿರುತ್ತಾರೆ. ಕೆಲವರು ವಿತಂಡವಾದ ಮಂಡಿಸುತ್ತಾರೆ. ಕೆಟ್ಟು ನಿಂತ ಗಡಿಯಾರ ಹಾಗೇ ಬಿಟ್ಟರೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುವುದೆಂದು ಹೇಳಿ ಸಮಾಧಾನ ಮಾಡಿಕೊಳ್ಳುವವರಿಗೆ ಬುದ್ಧಿ ಹೇಳುತ್ತಾ ನಮ್ಮ ಸಮಯ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಚಲನೆ ನಿಲ್ಲಿಸಿದ ಗಡಿಯಾರ ಸಮಯ ಕೆಟ್ಟಿದೆ ಎಂಬ ಸತ್ಯ ಮರೆಮಾಚುವುದಿಲ್ಲ. ಆದರೆ, ತಮ್ಮ ಸಮಯ ಸರಿ ಮಾಡಿಕೊಳ್ಳಲು ಬಯಸುವವರು ಗಡಿಯಾರದ ಬ್ಯಾಟರಿಯನ್ನಷ್ಟೇ ಅಲ್ಲ, ತಮ್ಮ ಬದುಕಿನ ದಾರಿಗಳನ್ನೂ ಸರಿಯಾಗಿ ಬದಲಿಸಿಕೊಳ್ಳುತ್ತಾರೆ. 

    ಹಿರಿಯರು ‘ಸೋಲೇ ಗೆಲುವಿನ ಸೋಪಾನ’ ಎಂದಿದ್ದಾರೆ. ಹಾಗೆಂದು ಸತತ ಸೋಲುಗಳನ್ನೇ ಅಪ್ಪಿ ಒಪ್ಪಿಕೊಂಡಿರಬೇಕು ಎಂದು ಅರ್ಥವಲ್ಲ. ಸೋಲನ್ನು ಗೆಲುವಿನ ಶಿಖರ ಏರಲು ಮೆಟ್ಟಿಲು ಆಗಿಸಿಕೊಳ್ಳಬೇಕು ಎನ್ನುವ ಅಂತರಾರ್ಥ ಇದರೊಳಗೆ ಇರುವುದನ್ನು ಅರಿತವರೇ ಗೆಲುವಿನ ದಾರಿಯಲ್ಲಿ ಸಾಗುತ್ತಾರೆ. 

        ನಾಕಾರು ಜನ ಸೇರಿದ ಮೇಲೆ ನಾಕಾರು ಅಭಿಪ್ರಾಯ ಮೂಡುವುದು ಸಹಜ. ಹಾಗೆಂದು   ಎಲ್ಲರ ಮಾತುಗಳಲ್ಲಿ ನಮ್ಮನ್ನು ಕುರಿತ ವಿಚಾರ ಇರುತ್ತದೆಂದು ಭಾವಿಸುವುದು ಮೂರ್ಖತನ. ಹಾಗೊಮ್ಮೆ ಇತರರು ಮಾತನಾಡಿಕೊಂಡರೂ ಅದು ಅವರ ಅಭಿರುಚಿಯಾಗುದ್ದು, ಅವರಿಗೆ ಸಮಯ ಬಹಳ ಅಗ್ಗವಾಗಿ ದೊರಕಿರಬಹುದು. ಹಾಗೆಂದು ನಮ್ಮ ಸಮಯ ಇತರರ ವಿಚಾರಕ್ಕೆ ಹಂಚುವಷ್ಟು ತುಂಬಾ ಅಗ್ಗವಾಗಿರಬಾರದು. ದಿನದ ಇಪ್ಪತ್ನಾಕು ಗಂಟೆಗಳನ್ನು ಅಭ್ಯುದಯಕ್ಕೆ, ಉಳಿದ ಆಸಕ್ತಿಗೆ, ಪ್ರೀತಿಪಾತ್ರರಿಗೆ ಹಂಚಿಕೊಡುವ ಜಾಣತನ ತೋರುವವರು ಬದುಕುತ್ತಾರೆ. 

    ಆಗದು ಎಂದು ಹೇಳುವ ಮುನ್ನ ಶತಪ್ರಯತ್ನ ಮಾಡಬೇಕು. ಆಗಲಿಲ್ಲವಾ..! ಆಗದು ಎಂದು ಖಡಕ್ಕಾಗಿ ಹೇಳಿ ಬಿಡಲೇಬೇಕು. ಸುಮ್ಮನೆ ದಾಕ್ಷಿಣ್ಯಕ್ಕೆ ಬಿದ್ದು ಆಗಲಿ ಎಂದು ಹೇಳಿಕೊಂಡು ಸಮಯ ವ್ಯರ್ಥ, ಶ್ರಮ ವ್ಯರ್ಥ ಮಾಡಿಕೊಂಡು, ಮಾನಸಿಕ ಒತ್ತಡ ಬೋನಸ್ ಪಡೆದರೆ ಏನು ಸಾಧಿಸಿದ ಹಾಗೆ? ಕೆಲವೊಮ್ಮೆ ನಮ್ಮವರಿಗಾಗಿ ನಾವು ರಿಸ್ಕ್ ತೆಗೆದುಕೊಳ್ಳೋದು ತಪ್ಪಲ್ಲ ಬಿಡಿ ಎಂದು ಸಮಜಾಯಿಷಿ ಕೊಡುವವರಿಗೆ ಒಂದು ಎಕ್ಸ್ ಕ್ಯೂಸ್ ಕೊಡೋಣ ಎನಿಸಿದರೂ ಆಮೇಲೆ ಅವರ ಪಾಡು ವೇದನೆ ತಂದಾಗ, ಮೊದಲೇ ಎಚ್ಚರಿಸಬೇಕಿತ್ತು ಎನಿಸುವುದು ಸುಳ್ಳಲ್ಲ. 

   ಆಗದು, ಆಗುವುದು ಎಂಬೀ ಎರಡು ಪದಗಳು ಚಿಂತೆ- ಚಿತೆಯ ಪದಗಳಂತೆಯೇ ಒಂದು ಒಳಗೆ ಬೇಯಿಸಿದರೆ, ಮತ್ತೊಂದು ಹೊರಗೆ ದಹಿಸುತ್ತದೆ. ಕೆಲವರು ಆಗದು ಎಂದು ಹೇಳಿ ಬದುಕಿಕೊಂಡರೆ, ಕೆಲವರು ಆಗುವುದು ಹೇಳಿ ತೊಳಲಿ ಬಳಲಿ ಸಾಯುವುದುಂಟು. ‘ಖಂಡಿತವಾದಿ ಲೋಕ ವಿರೋಧಿ’ ಇರಬಹುದು. ಆದರೆ ಅಂಥ ನಿಷ್ಠುರರು ತಮ್ಮ ಒಳಮನಕ್ಕೆ ಸದಾ ಹತ್ತಿರವಿರುತ್ತಾರೆ. 

   ಕೆಲವೊಮ್ಮೆ ಆಸೆಗಾಗಿ ಆಗುತ್ತದೆ ಎಂದು ಹೇಳಿ ಕೊನೆಗೆ ಅದೇ ಉರುಳಾಗುವುದುಂಟು. ಮತ್ತೆ ಕೆಲವೊಮ್ಮೆ ಯಾವುದೋ ಪ್ರತಿಷ್ಠೆಗೆ, ಮತ್ಯಾವುದೋ ವಾಗ್ದಾನಕ್ಕೆ ಆಗುತ್ತದೆ ಎಂದು ಹೇಳಿ ಪೇಚಾಡುವುದುಂಟು. ಅದರ ಬದಲು ನೇರವಾಗಿ ನಮ್ಮಿಂದ ಸಾಧ್ಯವಿದೆಯಾ ಎಂಬುದನ್ನು ಅರಿತು ವಾಗ್ದಾನ ಕೊಡುವುದು ಮುಖ್ಯ. 

    ಮಾತು ಕೊಡುವುದಕ್ಕೆ ಮತ್ತು ಕೊಟ್ಟ ಮಾತನ್ನು ನಡೆಸಿಕೊಡುವುದಕ್ಕೆ ತುಂಬಾ ಮಹತ್ವ ಕೊಡುತ್ತಿದ್ದ ಕಾಲವೊಂದಿತ್ತು. ಸತ್ಯ ಹರಿಶ್ಚಂದ್ರ, ಮತ್ತವನ ವಂಶದ ದಶರಥ, ರಾಮಚಂದ್ರ ಮೊದಲಾದವರು ಮಾತುಕೊಟ್ಟು ಪಟ್ಟ ಪಾಡನ್ನು ಅವರ ಕುರಿತು ರಚಿತವಾದ ಚರಿತೆಗಳೇ ಹೇಳುತ್ತಿವೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವುದು ಒಂದು ಮೌಲ್ಯದ ಸಮೀಕರಣ ಆಗಿದ್ದರೂ ಸುಮ್ಮನೆ ಮಾತು ಆಡಿದ್ದೇವೆಂದು ಸಂಕಟಕ್ಕೆ ಸಿಲುಕುವುದರಲ್ಲಿ ಅರ್ಥವಿಲ್ಲ. ಹಾಗೆಂದು ಆಡಿದ ಮಾತನ್ನೆಲ್ಲಾ ಉಡಾಫೆಯಿಂದ ನೋಡುವುದೂ ಸರಿಯಲ್ಲ. ಎಲ್ಲಕ್ಕೂ ಮೊದಲು ಮಾತು ಕೊಡುವ ಮುನ್ನ ನೂರು ಬಾರಿ ಯೋಚಿಸಬೇಕು. ಯೋಚಿಸಿ ಆಡುವುದು ಜಾಣ ನಡೆ. 

  ಸಂಬಂಧಕ್ಕೆ, ಸ್ನೇಹಕ್ಕೆ ಕಟ್ಟುಬಿದ್ದು ಮಾತುಕೊಟ್ಟು ಆಮೇಲೆ ಪರದಾಡುವ ಜನರು ನಮ್ಮ ನಡುವೆಯೇ ಇದ್ದಾರೆ. ಅಥವಾ ಅದು ಸ್ವತಃ ನಾವೇ ಆಗಿರಬಹುದು. ಹಾಗೆಂದು ಮಾತುಕೊಡುವುದನ್ನು ಹಗುರಾಗಿ ಪರಿಗಣಿಸುವ ಅಗತ್ಯವಿಲ್ಲ. ಅದೊಂದು ಮೌಲ್ಯ. ಆ ಮೌಲ್ಯದ ಘನತೆಗೆ ತಕ್ಕಂತೆ ನಡೆದುಕೊಳ್ಳುವ ಜವಾಬ್ದಾರಿ ನಮಗೆ ಇದ್ದರೆ ಮಾತ್ರ ಆಗುವುದು ಎಂದು ಹೇಳಬೇಕು. ಸುಮ್ಮನೆ ಹುಸಿ ಆಸೆ ಹುಟ್ಟಿಸುವ, ನಮ್ಮ ದೊಡ್ಡಸ್ತಿಕೆ ಇತರರ ಮುಂದೆ ಮೆರೆಸುವ, ಮಂಕುಬೂದಿ ಎರಚುವ, ನಮ್ಮ ಬೇಳೆ ಬೇಯಿಸಿಕೊಳ್ಳುವ ಕಾರಣಗಳಿಗಾಗಿ ಮಾತ್ರ ಮಾತು ಕೊಡುವುದು ತೀರಾ ಅಸಹ್ಯದ ನಡವಣಿಕೆ ಎನಿಸುತ್ತದೆ.  

   ‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ; ಸಹಾಯ ಹಸ್ತ ಚಾಚುವ ಸಂದರ್ಭಗಳಲ್ಲಿ ಇದು ಅನ್ವಯಿಸಬಹುದೇ ಹೊರತು ಆಡು, ಮಾತನಾಡು, ಮಾತನಾಡಿದ್ದನ್ನು ಮಾಡು ಎಂಬುದನ್ನು ಎಲ್ಲ ವಿಚಾರಕ್ಕೂ ಪರಿಭಾವಿಸಿ ನಡೆದುಕೊಳ್ಳುವುದು ಅಗತ್ಯವಿಲ್ಲ. 

    ‘ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ…’ದ ದೈವವೂ ಹಾಗೂ ಜನರೂ ನಮ್ಮೊಡನಿರುವಾಗ ನಾವು ಆಗುವುದು ಅಥವಾ ಆಗಲಾರದು ಎಂದು ಹೇಳುವ ಮಾತು ನಮ್ಮ ಅಂತರಂಗಕೆ ಮೆಚ್ಚುಗೆ ಆಗುವಂತಿರಬೇಕು. ಆಗದು ಅಥವಾ ಆಗುವುದು ಎಂಬುದನ್ನು ಸರಿಯಾಗಿ ಸ್ಪಷ್ಟಪಡಿಸದಿದ್ದರೆ ಏನೆಲ್ಲಾ ಆಗುವುದು ಎಂಬುದು ನಮ್ಮ ಅರಿವೆಗೆ ಇಷ್ಟರಲ್ಲಿ ಹಲವಾರು ಸಂದರ್ಭಗಳಲ್ಲಿ ಬಂದು ಹೋಗಿರುತ್ತದೆ. ಆದ್ದರಿಂದ ‘ಹೌದು / ಇಲ್ಲ’ ಎನ್ನುವುದು ಎರಡೇ ಅಕ್ಷರವಾದರೂ ಬದುಕಿನಲ್ಲಿ ಅವುಗಳ ಪಾತ್ರ ಬಹಳ ಮಹತ್ವ ಪೂರ್ಣವೇ ಆಗಿರುವುದರಿಂದ ಆ ಎರಡು ಪದಗಳನ್ನು ಬಳಸುವ ಮುನ್ನ ಪ್ರಜ್ಞಾಪೂರ್ವಕವಾಗಿ ಆಲೋಚಿಸಬೇಕೆನ್ನುತ್ತಾ, ಈ ಲೇಖನ ಓದಲು ನಿಮಗೆ ಆಗುವ ಅಥವಾ ಆಗದಿರುವ ಬಗ್ಗೆ  ಲೇಖನದ ಕೊನೆಯಲ್ಲಿ ಜಾಣತನದಿಂದಲ್ಲ, ತುಂಟತನದಿಂದ ಕೇಳುವೆನು… 

*******************

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top