ಹಿರಿಯರು ಹೊರೆಗಳಾಗದಿರಲಿ

ಲೇಖನ

ಹಿರಿಯರು ಹೊರೆಗಳಾಗದಿರಲಿ

ವಿಶ್ವನಾಥ ಎನ್ ನೇರಳಕಟ್ಟೆ

Dubai Police help send 67-year-old man home after overstaying his UAE visa  - The Filipino Times

[6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು.

“ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. ನನ್ನ ಕೈ ಗಟ್ಟಿ ಹಿಡಿದುಕೊಳ್ಳಿ”, ವೃದ್ಧಾಶ್ರಮಕ್ಕೆ ಕರೆತರುವಾಗ ಕಾಳಜಿಯ ಮುಖವಾಡ ಹೊತ್ತು ಮಗನಾಡಿದ ಮಾತು ಅವರ ಕಿವಿ ತಮಟೆಯನ್ನು ಈಗಲೂ ಕತ್ತರಿಸತೊಡಗಿತ್ತು. “ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂಬ ತೋರಿಕೆಯ ಮಾತು ಬೇರೆ. ಯಾವ ಕರ್ಮಕ್ಕೆ ಆರೋಗ್ಯ?” ನಾರಾಯಣರಾಯರು ಗೊಣಗಿಕೊಂಡದ್ದು ಮಾತ್ರ. ಅದ್ಯಾವುದೋ ಮಾಯೆಯಲ್ಲಿ ಪಕ್ಕದಲ್ಲಿದ್ದ ವೃದ್ಧರಿಗೆ ಸ್ಪಷ್ಟವಾಗಿ ಕೇಳಿಸಿತು. “ನಿಮ್ಮ ಮಗನಾದರೋ ನಿಮ್ಮನ್ನು ಇಲ್ಲಿಗೆ ಕರೆತಂದು ಬಿಟ್ಟು ಹೋಗಿದ್ದಾನೆ. ನನ್ನ ಮಗ ರಾತ್ರೆ ಹೊತ್ತಿಗೆ ಮನೆಯಿಂದ ಹೊರದಬ್ಬಿ ಬಾಗಿಲು ಹಾಕಿಕೊಂಡ. ಅದು ಚಳಿಗಾಲ ಬೇರೆ. ನಾನು ಅನುಭವಿಸಿದ ಸಂಕಟ ದೇವರಿಗೇ ಪ್ರೀತಿ…” ಉಕ್ಕಿಬಂದ ಕಣ್ಣೀರು ಅವರ ಮಾತಿಗೆ ಅರೆಕ್ಷಣದ ಬ್ರೇಕ್ ಹಾಕಿತು. “ಐದು ವರ್ಷ ಆಗಿದೆ ನಾನಿಲ್ಲಿಗೆ ಬಂದು. ಒಂದು ದಿನವೂ ಬಂದದ್ದಿಲ್ಲ, ವಿಚಾರಿಸಿದ್ದಿಲ್ಲ. ನಾಳೆ ನಾನು ಸತ್ತರೂ ಬರಲಿಕ್ಕಿಲ್ಲವೇನೋ…” ದುಃಖದ ಮಹಾಪ್ರವಾಹದಲ್ಲಿ ಅವರಿಗೆ ಮಾತು ಮುಂದುವರಿಸಲಾಗಲಿಲ್ಲ.

ನಾರಾಯಣರಾಯರನ್ನೂ ದುಃಖ ಪರವಶಗೊಳಿಸಿತ್ತು. ಮೌನವೇ ನಡೆದುಹೊರಟಂತೆ ತಮ್ಮ ರೂಮನ್ನು ಹೊಕ್ಕರು. ‘ಹೊತ್ತು ಹೋಗುತ್ತಿಲ್ಲ’ ಎಂದು ಅಂದುಕೊಂಡವರು ಬ್ಯಾಗಿನೊಳಗಿದ್ದ ಡೈರಿಯನ್ನು ಎತ್ತಿಕೊಂಡರು. ‘ಒಳ್ಳೆಯದಾಗಲಿ’ ಡೈರಿಯ ಮೊದಲ ಪುಟದಲ್ಲಿ ತಂದೆ ಬರೆದಿದ್ದ ಈ ಪದ ನಾರಾಯಣರಾಯರನ್ನು ಭಾವನಾತ್ಮಕವಾಗಿಸಿತು. “ನನ್ನ ತಂದೆಯನ್ನು ನಾನು ಅಂದು ವೃದ್ಧಾಶ್ರಮಕ್ಕೆ ಕಳಿಸಬಾರದಿತ್ತು. ಚೆನ್ನಾಗಿ ನೋಡಿಕೊಂಡಿದ್ದರೆ ಇಂದು ನನ್ನ ಮಗ ನನ್ನನ್ನು ವೃದ್ಧಾಶ್ರಮದ ಪಾಲಾಗಿಸುತ್ತಿರಲಿಲ್ಲ” ಭೂತಕಾಲದ ಯೋಚನೆ ನಾರಾಯಣರಾಯರ ಸ್ಮøತಿಪಟಲದಲ್ಲಿ ಓಡಾಡತೊಡಗಿತು. ಗೋಡೆಯ ಮೇಲೆ ತೂಗಾಡುತ್ತಿದ್ದ ಕ್ಯಾಲೆಂಡರ್ 2050ನೇ ಇಸವಿಯನ್ನು ಸಾರಿ ಹೇಳುತ್ತಿತ್ತು.

*************************************  

‘ವಸುಧೈವ ಕುಟುಂಬಕಂ’ ಎಂದು ಜಗತ್ತಿಗೇ ಸಾರಿದ ರಾಷ್ಟ್ರ ನಮ್ಮದು. ‘ಭೂಮಿಯೇ ಒಂದು ಕುಟುಂಬ; ಭೂಮಿಯಲ್ಲಿರುವ ಎಲ್ಲರೂ ನಮ್ಮವರು’ ಎನ್ನುವ ಈ ತತ್ತ್ವದ ಮೂಲಕವೇ ಭಾರತ ಗುರುತಿಸಿಕೊಂಡಿದೆ, ಬೆಳೆದಿದೆ; ಜ್ಞಾನದ ಹಣತೆಯನ್ನು ಜಗತ್ತಿನುದ್ದಕ್ಕೂ ಬೆಳಗಿದೆ. ಆದರೆ ಆಧುನಿಕತೆಯ ಕಪಿಮುಷ್ಟಿಗೆ ಸಿಲುಕಿಕೊಂಡ ನಾವು ಇಂದು ತೀರಾ ಭಿನ್ನ ನೆಲೆಯಲ್ಲಿ ಸಾಗುತ್ತಿದ್ದೇವೆ. ಕೌಟುಂಬಿಕ ಬಾಂಧವ್ಯಗಳನ್ನೂ ವ್ಯಾವಹಾರಿಕತೆಯ ದೃಷ್ಟಿಕೋನದಿಂದ ಗಮನಿಸಿಕೊಳ್ಳುತ್ತಿದ್ದೇವೆ. ನಮ್ಮ ಕುಟುಂಬದವರನ್ನೂ ನಮ್ಮವರು ಎಂದು ಅಂದುಕೊಳ್ಳದ ಸಂಕುಚಿತ ಮನಃಸ್ಥಿತಿಗೆ ಒಳಗಾಗುತ್ತಿದ್ದೇವೆ. ‘ಸರ್ವೇಜನಃ ಸುಖಿನೋ ಭವಂತು’ ಎಂದು ಬೋಧಿಸಿದ ರಾಷ್ಟ್ರದ ಕಸದ ತೊಟ್ಟಿಯಲ್ಲಿ ವೃದ್ಧೆಯನ್ನು ಕಾಣುವಂತಾಗುತ್ತದೆ. ಅವರ ಮಕ್ಕಳೇ 50 ಲಕ್ಷದ ಕಾರಿನಲ್ಲಿ ಕರೆತಂದು ಎಸೆದುಹೋಗಿರುತ್ತಾರೆ. ಚಳಿಗೆ ಮರಗಟ್ಟಿರುವ ಅವಳ ಸ್ಥಿತಿ ಸಮಾಜದ ಅದೆಷ್ಟೋ ಜನರ ಕಣ್ಣೀರಿಗೆ ಕಾರಣವಾಗುತ್ತದೆ. ಆದರೆ ಅವರ ಮಕ್ಕಳ ಕಣ್ಣು ತೆರೆಯುವುದೇ ಇಲ್ಲ.   

ಭಾರತವನ್ನು ಕಂಡು ವಿದೇಶಿಯರು ಅಚ್ಚರಿಪಟ್ಟಿದ್ದರು. ಇಲ್ಲಿನ ಕುಟುಂಬ ವ್ಯವಸ್ಥೆ ಅವರಲ್ಲಿ ದಿಗ್ಭಮೆಯನ್ನು, ಕುತೂಹಲವನ್ನು ಹುಟ್ಟುಹಾಕಿತ್ತು. ಹತ್ತಿಪ್ಪತ್ತು ಜನ ಒಂದೇ ಸೂರಿನಡಿಯಲ್ಲಿ ಬಾಳುವುದು ಅವರ ಪಾಲಿಗೆ ಇನ್ನಿಲ್ಲದ ಅದ್ಭುತವಾಗಿತ್ತು. ಭಾರತದ ಕುಟುಂಬ ವ್ಯವಸ್ಥೆಯೊಳಗಿನ ಬಾಂಧವ್ಯ, ಸಂಬಂಧಗಳ ನಡುವಿನ ಪರಸ್ಪರ ನಂಬಿಕೆಯನ್ನು ಕೂಗಿ ಹೇಳುವ ರೀತಿಯಲ್ಲಿ ಬದುಕಿದ ವಿಧಾನ ಒಂದು ಅನುಕರಣೀಯ ಮಾದರಿಯನ್ನು ಹುಟ್ಟುಹಾಕಿತ್ತು. ಕೌಟುಂಬಿಕ ಮೌಲ್ಯಗಳ ಅದಃಪತನವು ಎಂತಹ ತಲೆಮಾರನ್ನು ರೂಪುಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವೆಂಬಂತೆ ಒಂದು ಅರ್ಥಪೂರ್ಣ ಕಥೆಯಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಮನೆಯಿಂದ ಹೊರಹಾಕುತ್ತಾನೆ. ರಕ್ತವನ್ನೂ ಹೆಪ್ಪುಗಟ್ಟಿಸಬಲ್ಲಂತಹ ಚಳಿಗಾಲದ ರಾತ್ರಿಯದು. “ಮೈ ಮುಚ್ಚಿಕೊಳ್ಳುವುದಕ್ಕೆ ಒಂದು ಕಂಬಳಿಯನ್ನಾದರೂ ಕೊಡು” ಎಂದು ಆ ವೃದ್ಧ ತನ್ನ ಮಗನಲ್ಲಿ ಅಂಗಲಾಚುತ್ತಾನೆ. ಅರೆಬರೆ ಹರಿದ, ಹಳೆಯ ಕಂಬಳಿಯೊಂದನ್ನು ಮನೆಯೊಳಗಿಂದ ತಂದ ಮಗ ಋಣವೇ ಮುಗಿಯಿತೆಂಬಂತೆ ತಂದೆಯ ಮುಖಕ್ಕೆ ಅದನ್ನು ಎಸೆಯುತ್ತಾನೆ. ಈ ಎಲ್ಲಾ ವಿದ್ಯಮಾನವನ್ನೂ ಗಮನಿಸುತ್ತಿದ್ದ ಆ ವೃದ್ಧನ ಮೊಮ್ಮಗ, ಎಂಟು ವರ್ಷದವನು, ತಕ್ಷಣ ತನ್ನ ಅಜ್ಜನ ಬಳಿಗೆ ಓಡುತ್ತಾನೆ. ಅಜ್ಜನ ಮೈಮೇಲೆ ಹರಡಿದ್ದ ಕಂಬಳಿಯನ್ನು ಅರ್ಧ ಭಾಗ ಮಾಡಿ ಒಂದು ಭಾಗವನ್ನು ತೆಗೆದುಕೊಳ್ಳುತ್ತಾನೆ. ಆ ಹಳೇ ಕಂಬಳಿ ಏಕೆ ಎಂದು ತಂದೆ ಕೇಳಿದ್ದಕ್ಕೆ ಆ ಪುಟ್ಟ ಹುಡುಗ ಹೇಳಿದ್ದಿಷ್ಟು- “ಇನ್ನು ಸ್ವಲ್ಪ ವರ್ಷಗಳಾದ ಮೇಲೆ ನೀವು ಮುದುಕರಾಗುತ್ತೀರಿ. ಆಗ ನಾನೂ ನಿಮ್ಮನ್ನು ಇದೇ ರೀತಿ ಮನೆಯಿಂದ ಹೊರಹಾಕುತ್ತೇನೆ. ಆಗ ನೀವು ಕಂಬಳಿ ಬೇಕೆಂದು ಕೇಳಿದರೆ ಕೊಡುವುದಕ್ಕೆ ಬೇಕಲ್ಲಾ.” ಮಕ್ಕಳು ಹೇಳಿಕೊಟ್ಟದ್ದನ್ನು ಅನುಸರಿಸುವುದಕ್ಕಿಂತಲೂ ಕಂಡದ್ದನ್ನು ಕಂಡ ಹಾಗೆಯೇ ಅನುಸರಿಸುತ್ತಾರೆ. ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವುದನ್ನು ಇಂದಿನ ಮಕ್ಕಳು ಕಾಣುವಂತಾಗಬಾರದು, ಕಲಿಯುವಂತಾಗಬಾರದು.

ಪ್ರಪಂಚದ ಹಲವು ದೇಶಗಳು ಆರ್ಥಿಕವಾಗಿ ಮುಂದುವರಿದಿವೆ ನಿಜ. ಆದರೆ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಅವುಗಳ ನಡೆ ಪ್ರಶ್ನಾರ್ಹವಾದುದು. ನಮಗೆ ಗೊತ್ತಿದೆ, ಹಲವು ದೇಶಗಳಲ್ಲಿ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ತಮ್ಮ ಹೆತ್ತವರಿಂದ ಹಣವನ್ನು ಅಪೇಕ್ಷಿಸುವಂತಿಲ್ಲ. ಒಂದುವೇಳೆ ಹಣವನ್ನು ಪಡೆದುಕೊಂಡರೆ ಅದನ್ನು ಹಿಂದಿರುಗಿಸಬೇಕು. ಮಕ್ಕಳು ಹಣ ಗಳಿಕೆ- ನಿರ್ವಹಣೆಯ ಮಹತ್ವವನ್ನು ಮನಗಾಣುವಂತಾಗಲು ಈ ವ್ಯವಸ್ಥೆಯನ್ನು ಹೆತ್ತವರು ರೂಪಿಸಿಕೊಂಡಿದ್ದಾರೆ ನಿಜ. ಉದ್ದೇಶ ಒಳ್ಳೆಯದೇ. ಆದರೆ ಅದು ಉಂಟುಮಾಡುವ ಪರಿಣಾಮ? ಹೆತ್ತವರಿಂದಲೇ ಸಾಲ ಪಡೆದುಕೊಂಡ ಮಕ್ಕಳು ಹೆತ್ತವರನ್ನು ವ್ಯಾವಹಾರಿಕತೆಯ ಆಯಾಮದಿಂದಲೇ ಗಮನಿಸಿಕೊಳ್ಳತೊಡಗುತ್ತಾರೆ. ಅವರ ಜೊತೆಗಿನ ಭಾವನಾತ್ಮಕತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಭಾರತ ಹಾಗಲ್ಲ. ಬದುಕಿನ ಬಿಂದು ಬಿಂದುಗಳಲ್ಲಿಯೂ ಭಾವನಾತ್ಮಕತೆಯನ್ನು ಬಚ್ಚಿಟ್ಟುಕೊಂಡ ಭವ್ಯತೆ ಭಾರತದ್ದು. ಆದರೆ ಆಧುನಿಕತೆಯೆಂಬ ಮಾಯೆ ಭಾರತದ ಕೌಟುಂಬಿಕ ವ್ಯವಸ್ಥೆಯೊಳಗಿನ ಭಾವನಾತ್ಮಕತೆಯನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವುದು ಸತ್ಯ. ಆಧುನಿಕತೆಯ ಪರಿಣಾಮವಾಗಿ ವೃದ್ಧರು ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ.

ಕುಟುಂಬದ ಬೆಂಬಲವನ್ನು ಕಳೆದುಕೊಂಡ ಹಿರಿಯರ ಬದುಕಿನಲ್ಲಿ ಭರವಸೆಯನ್ನು ಹುಟ್ಟಿಸಬೇಕಾದದ್ದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ವೃದ್ಧಾಶ್ರಮಗಳ ಮುಖ್ಯಸ್ಥರು, ಸಿಬ್ಬಂದಿಗಳ ಸೇವೆ ಗಮನಾರ್ಹವಾದದ್ದು. ನೆಲೆ ಕಳೆದುಕೊಂಡವರ ಮನಸ್ಸಿನ ಅಲೆಯನ್ನು ಕಾಪಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಂಚಿತರ ಬದುಕನ್ನು ಪ್ರೀತಿಯ ಹಾದಿಯಲ್ಲಿಯೇ ಮುನ್ನಡೆಸಲು ಶ್ರಮಿಸುವ ಅವರ ಕಾಯಕ ನಿಷ್ಠೆಗೆ ಸಲಾಂ ಹೇಳಬೇಕಾಗಿದೆ.


Leave a Reply

Back To Top