ಗಜಲ್
ಅರುಣಾ ನರೇಂದ್ರ
ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿ
ತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ
ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನು
ಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ
ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸು
ಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ
ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್
ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ
ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆ
ಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ