ನೆನಪು
ಮಿಸ್ ಯೂ ಡ್ಯಾಡಿ
ಮೌಲ್ಯಗಳ ಸಂಪುಟ ನನ್ನಪ್ಪ
ಎಪ್ರಿಲ್ ತಿಂಗಳ ಸಮಯ ಬೆಂಗಳೂರಿನ ಸೆಂಟ್ರಲ್ ಸ್ಕೂಲಲ್ಲಿ ಇಂಗ್ಲಿಷ್ ಮೌಲ್ಯಮಾಪನ ನಡೆದಿತ್ತು.ನನ್ನ ತಂದೆ ಮಲ್ಲಣ್ಣ ಭರಮಪ್ಪ ತಿರ್ಲಾಪುರ ಇಂಗ್ಲಿಷ್ ಪ್ರಾಧ್ಯಾಪಕರು, ಮಾಮಲೆ ದೇಸಾಯಿ ಹೈಸ್ಕೂಲ್ ಶಿಗ್ಗಾವಿ, ಮೌಲ್ಯಮಾಪನಕ್ಕೆ ಅಲ್ಲಿ ಹಾಜರಿದ್ದರು. ಬೆಂಗಳೂರಿಗೆ ಬರುವಾಗ ತುಂಬು ಗರ್ಭಿಣಿಯಾದ ಕಿರಿ ವಯಸ್ಸಿನ ಹೆಂಡತಿಯನ್ನು ಅರೆಮನಸ್ಸಿನಿಂದಲೇ ಬಿಟ್ಟು ಬಂದಿದ್ದರು. ಬೆಂಗಳೂರಿಗೆ ಬಂದು ಒಂದು ವಾರಕ್ಕೆ ಅವರಿಗೆ ಒಂದು ಪತ್ರ ಬರುತ್ತದೆ. ಅದು ಮೊದಲ ಮಗುವಿನ ಜನನದ ಕುರಿತಾದ ಪತ್ರ. ಅಕಸ್ಮಾತಾಗಿ ಆ ಪತ್ರ ಮೊದಲು ಗೆಳೆಯರ ಕೈಸೇರುತ್ತದೆ. ಗೆಳೆಯರು ತಾವೇ ಪತ್ರವನ್ನು ಹರಿದು ಓದಿ ಕಂಗ್ರಾಜುಲೇಷನ್ಸ್ ನಿಮಗೆ ಗಂಡು ಮಗುವಾಗಿದೆ ಪಾರ್ಟಿ ಕೊಡಿ ಎಂದು, ದೊಡ್ಡ ಹೋಟೆಲಿಗೆ ಕರೆದೊಯ್ದು ಹೊಟ್ಟೆ ಬಿರಿಯೆ ಪಾರ್ಟಿ ತಿಂದಮೇಲೆ, ಕ್ಷಮಿಸಿ ತಿರ್ಲಾಪುರ ನಿಮಗೆ ಮಗಳು ಹುಟ್ಟಿದ್ದಾಳೆ ಅಂದರಂತೆ. ಆಗ ನನ್ನ ತಂದೆ ಕೊಂಚವೂ ವಿಚಲಿತವಾಗದ ಅರೆ ನನಗೆ ಇನ್ನೂ ಖುಷಿಯಾಯಿತು ಲಕ್ಷ್ಮಿ ನನ್ನ ಮನೆಗೆ ಬಂದಿದ್ದಾಳೆ
ಅವಳಿಗೆ ನಾನು ವಿಜಯಲಕ್ಷ್ಮಿ ಎಂದು ಹೆಸರಿಡುತ್ತೇನೆ ಅವಳನ್ನು ನಾನು ಇಂಗ್ಲೀಷ್ ಪ್ರೊಫೇಸರ್ ಮಾಡುತ್ತೇನೆ ನೋಡುತ್ತೀರಿ ಅಂದಿದ್ದರಂತೆ. ..
ಮುಂದೆ ಅದರಂತೆ ತಮ್ಮ ಮಗಳನ್ನು ಅವರು ಬೆಳಗಾವಿಯ
ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದ ಇಂಗ್ಲೀಷ್ ಉಪನ್ಯಾಸಕಿ ಯನ್ನಾಗಿ ಮಾಡಿದ್ದು ಈಗ ಇತಿಹಾಸ….
ನಾನು ಪ್ರೀತಿಯಿಂದ ಅಪ್ಪನನ್ನು ಡ್ಯಾಡಿ ಡ್ಯಾದೂಸ್, ಗೋಬಸ್ ಏನೆಲ್ಲಾ ವಿಚಿತ್ರ ಹೆಸರುಗಳಿಂದ ಕರೆಯುತ್ತಿದ್ದೆ. ಅವರು ಮಾತ್ರ ನನ್ನನ್ನು, “ಎಸ್ ಮೈ ಡಿಯರ್ ಡಾಟರ್ ವಿಜಯಲಕ್ಷ್ಮಿ” ಎಂದು ಯಾವಾಗಲೂ ಪ್ರೀತಿಯಿಂದಲೇ ಸಂಬೋಧಿಸುತ್ತಿದ್ದರು. ನನ್ನ ಮಗಳು ತುಂಬಾ ಜಾಣೆ, ಪಾಕಪ್ರವೀಣೆ, ಒಳ್ಳೆಯ ಗಾಯಕಿ ಎಲ್ಲದರಲ್ಲಿಯೂ ಅವಳದು ಎತ್ತಿದ ಕೈ ಅವಳನ್ನು ಮದುವೆಯಾಗುವ ತುಂಬಾ ಪುಣ್ಯವಂತ ಎಂದು ಸದಾ ನನ್ನನ್ನು ಒಳ್ಳೆಯ ಮಾತುಗಳಿಂದ ಹುರಿದುಂಬಿಸುತ್ತಿದ್ದರು.
ಅಪ್ಪನೆಂದರೆ ನನ್ನ ಭಾವ, ನನ್ನ ಜೀವ ,ನನ್ನ ಜೀವನ ಕಟ್ಟಿದ ಶಿಲ್ಪಿ, ನನ್ನ ಆತ್ಮೀಯ ಗೆಳೆಯ, ನನ್ನ ತಾಯಿ, ನನ್ನ ಬಂಧು, ನನ್ನ ಸಲಹೆಗಾರ …ಒಂದೇ ಎರಡೇ ಎಲ್ಲಕ್ಕಿಂತ ಹೆಚ್ಚಾಗಿ
ದೊಡ್ಡ ಸಹನಾಮೂರ್ತಿ. ಅವರಲ್ಲಿರುವ ತಾಳ್ಮೆಗೆ ಯಾರು ಸರಿಸಾಟಿ ಅಲ್ಲ ಸಹೃದಯಿ, ಪರೋಪಕಾರಿ, ಕಷ್ಟಸಹಿಷ್ಣು, ಮಕ್ಕಳನ್ನು ಒಂದು ಪೆಟ್ಟು ಹಾಕದೆ ಅತ್ಯಂತ ಪ್ರೀತಿಯಿಂದ ಬೆಳೆಸಿದ ಕರುಣಾಮಯಿ. ತಂದೆಯೆಂದರೆ ನಮಗೆ ಪ್ರೀತಿ, ತಂದೆಯೆಂದರೆ ಸಲುಗೆ ,ಆತ್ಮೀಯತೆ, ಹಠ…..
ಶಿಗ್ಗಾವಿ ಮಾಮಲೆ ದೇಸಾಯಿ ಹೈಸ್ಕೂಲಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ಯಾವಾಗಲೂ ಮಕ್ಕಳಲ್ಲಿ ಉನ್ನತ ವಿಚಾರಗಳನ್ನು ತುಂಬುತ್ತಿದ್ದರು. ಸದಾ ಮನೆಯಲ್ಲಿ ಒಂದು ಆರೋಗ್ಯಕರ ಶೈಕ್ಷಣಿಕ ಧಾರ್ಮಿಕ ಸಾಂಪ್ರದಾಯಿಕ ಗೌರವಯುತವಾದ ಪರಿಸರವನ್ನು ಕಟ್ಟಿಕೊಟ್ಟಿದ್ದರು.”ಸಣ್ಣ ಗುರಿ ಅಪರಾಧ”, “Low aim is crime” ಹಾಗಾಗಿ ಉನ್ನತ ಗುರಿಯನ್ನು ನೀವು ಇಡಬೇಕು ಎಂದು ನಮಗೆ ಯಾವಾಗಲೂ ತಿಳಿಹೇಳುತ್ತಿದ್ದರು. ಹಾಗಾಗಿ ಇವತ್ತು ಅವರ ಹಿರಿಯ ಮಗಳಾದ ನಾನು ಬೆಳಗಾವಿಯ ಮರಾಠ ಮಂಡಳ ಕಾಲೇಜಿನ ನಲ್ಲಿ ಇಂಗ್ಲಿಷ್
ವಿಭಾಗದ ಮುಖ್ಯಸ್ಥೆಯಾಗಿ ಯುಜಿಸಿ ಸಂಬಳವನ್ನು ಪಡೆಯುತ್ತಿದ್ದೇನೆ. ನನ್ನ ಮೊದಲನೆಯ ತಮ್ಮ ರವಿ ಎಂ ತಿರ್ಲಾಪುರ ಈಗ ಸ್ಪೆಷಲ್ ಡಿಸಿ ಆಗಿ ಬೆಂಗಳೂರಿನಲ್ಲಿ
ಉನ್ನತ ಹುದ್ದೆಯಲ್ಲಿ ತಂದೆಯ ಎಲ್ಲ ಆದರ್ಶ ಮತ್ತು ಆಶಯಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಎರಡನೆಯ ತಮ್ಮ ಡಾಕ್ಟರ್ ಮೃತ್ಯುಂಜಯ ತಿರ್ಲಾಪುರ ತಮ್ಮದೇ ನರ್ಸಿಂಗ್ ಹೋಮ್ ನಡೆಸುತ್ತಿದ್ದು ಜೊತೆಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ವೃದ್ದಾಶ್ರಮ ನಡೆಸುತ್ತ ಪತ್ನಿ ಡಾಕ್ಟರ್ ರಾಣಿ ತಿರ್ಲಾಪುರ ಅವರೊಂದಿಗೆ ಸಮಾಜಮುಖಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
1990 ರಲ್ಲಿ ಒಂದು ಘಟನೆ ನಡೆಯುತ್ತೆ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಮೇಜರ್ ತೆಗೆದುಕೊಂಡು ಪ್ರಥಮ ದರ್ಜೆಯಲ್ಲಿ ನಾನು ಬಿಎ ಪಾಸಾಗಿದ್ದೆ. ಮುಂದೇನು? ಎನ್ನುವ ಪ್ರಶ್ನೆಗೆ ನಾನು ಡ್ಯಾಡಿ ನಾನು B.ed ಮಾಡಿ ನಿಮ್ಮಂತೆ ಹೈಸ್ಕೂಲ್ ಶಿಕ್ಷಕಿ ಆಗುತ್ತೇನೆ ಎಂದೆ. ಆದರೆ ನನ್ನ ತಂದೆ ಇಲ್ಲ ನೀನು ನನ್ನಂತೆ ಆಗುವುದು ಬೇಡ ನನಗಿಂತ ಎತ್ತರಕ್ಕೆ ಬೆಳೆಯಬೇಕು ತಂದೆಯನ್ನು ಮೀರಿ ಬೆಳೆದ ಮಗಳಾಗಬೇಕು ಆದ್ದರಿಂದ ನೀನು ಯೂನಿವರ್ಸಿಟಿ ಅಥವಾ ಡಿಗ್ರಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಆಗಬೇಕೆನ್ನುವುದು ನನ್ನ ಆಸೆ ಎಂದರು. ಅವರ ಮಾತನ್ನು ನಾನು ಕೇಳದೆ ಹಠ ಮಾಡತೊಡಗಿದೆ, ಕೊನೆಗೆ ಅನಿವಾರ್ಯವಾಗಿ ಧಾರವಾಡದಲ್ಲಿಯ ಕೆಎಲ್ಇ ಬಿಎಡ್ ಕಾಲೇಜಿಗೆ ನನ್ನ ಕರೆದುಕೊಂಡು ಹೋದರು ಅಲ್ಲಿ ಏನಾಯಿತೋ ಗೊತ್ತಿಲ್ಲ ಆ ಮಹಾವಿದ್ಯಾಲಯದ ಪ್ರಾಚಾರ್ಯರು ಕೂಡ ನೀನು ಬಿ ಎಡ ಮಾಡುವುದು ಬೇಡ ನಿಮ್ಮ ತಂದೆಯ ಮಾತನ್ನು ಕೇಳು ಇಂಗ್ಲಿಷ್ನಲ್ಲಿ MA ಮಾಡು ಎಂದು ಉಪದೇಶಿಸಿದರು..
ಬೇರೆ ದಾರಿ ಕಾಣದೆ ಅವರಿಬ್ಬರ ಮಾತುಗಳಿಗೆ ನಾನು ತಲೆಬಾಗಿ ಮುಂದೆ ಇಂಗ್ಲಿಷ್ನಲ್ಲಿ MA ಮಾಡಿ ಇದೀಗ ಬೆಳಗಾವಿಯ ಪ್ರತಿಷ್ಠಿತ ಡಿಗ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿ ಅದು ಕೂಡ ಈಗ ಇತಿಹಾಸ…
ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಧ್ಯೇಯವನ್ನೇ ಇಟ್ಟುಕೊಳ್ಳಬೇಕು ಎನ್ನುವುದು ನನ್ನ ತಂದೆಯ ಅಭಿಲಾಷೆ ಇದೀಗ ಅವರ ಆಶಯದಂತೆ
ಎಲ್ಲ ಮೊಮ್ಮಕ್ಕಳು ಕೂಡ ನಡೆಯುತ್ತಿದ್ದಾರೆ.
ನನ್ನ 45ನೆಯ ವಯಸ್ಸಿನ ಆಸುಪಾಸಿನಲ್ಲಿ ಕಾಲೇಜಿನ ಕೆಲಸದ ಒತ್ತಡ ಮನೆ ಕೆಲಸಗಳು ಸಾಮಾಜಿಕ ಕಾರ್ಯಕ್ರಮಗಳು ಬೇರೆ ಊರಿಗೆ ವರ್ಗಾವಣೆ ಮನೆಯಲ್ಲಿ ಮಾವನ ಅನಾರೋಗ್ಯ ಚಿಕ್ಕ ಮಕ್ಕಳ ಶಾಲೆ ಪಾಠ ಪ್ರವಚನ ಪತಿಯ ದೂರದ ನೌಕರಿ ಎಲ್ಲವೂ ಸೇರಿ ಒಂಥರಾ ಮಾನಸಿಕ ಮತ್ತು ದೈಹಿಕ ಅನಾರೋಗ್ಯವನ್ನು ಉಂಟು ಮಾಡಿ ನಾನು ಹಾಸಿಗೆ ಹಿಡಿದು ಮಲಗಿ ಬಿಟ್ಟೆ ವಿಷಯ ತಿಳಿದ ನನ್ನ ತಂದೆ ಕಕ್ಕುಲತೆಯಿಂದ ಧಾವಿಸಿಬಂದರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧೋಪಚಾರ ಮಾಡಿಸಿ ಕಾಲೇಜಿಗೆ ಒಂದು ತಿಂಗಳು ರಜೆ ಹಾಕಿಸಿ ಚಿಕ್ಕ ಮಗುವನ್ನು ನೋಡಿಕೊಳ್ಳುವ ಹಾಗೆ ಸತತ ಒಂದು ತಿಂಗಳು ಹಣ್ಣು ಹಾಲು ಔಷದೋಪಚಾರ ಸಮಯಕ್ಕೆ ಸರಿಯಾಗಿ ಊಟ ತಿಂಡಿ ವಿಶ್ರಾಂತಿ ಎಲ್ಲವನ್ನೂ ನನಗೆ ಕೊಟ್ಟು ಒಂದೇ ತಿಂಗಳಿನಲ್ಲಿ ನನ್ನ ಹಿಮೋಗ್ಲೋಬಿನ್ ಹೆಚ್ಚಾಗುವ ಹಾಗೆ ನನ್ನ ಆರೈಕೆ ಮಾಡಿ ಮತ್ತೆ ನನ್ನ ಮುಖದಲ್ಲಿ ನಗು ಅರಳಿಸಿದ್ದು ನನ್ನಪ್ಪ.ಆ ಕಾಳಜಿ ಪ್ರೀತಿ ಕಕ್ಕುಲತೆ ಅಂತಃಕರಣ ಈಗ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಂದೆಯ ಎಲ್ಲ ಗುಣಗಳನ್ನು ಎರಕಹೊಯ್ದು ಮೈಗೂಡಿಸಿಕೊಂಡು ಇಂದಿಗೂ ಬದುಕುತ್ತಿರುವಳು ನಾನು
ಮತ್ತು ನನ್ನ ತಮ್ಮಂದಿರು.
1993 ಮಾಂತೇಶ್ ಪುಟ್ಟಿ ಮೆಕ್ಯಾನಿಕಲ್ ಇಂಜಿನಿಯರ್ ಸಂಪಗಾವಿ ಇವರೊಂದಿಗೆ ನನ್ನ ಮದುವೆಯಾಗಿ ವರ್ಷ ಕಳೆದಿತ್ತು. ಚಿಕ್ಕ ಬಾಡಿಗೆ ಮನೆ ಪುಟ್ಟ ಸಂಬಳ ಆದರೆ ಯಾವುದಕ್ಕೂ ಕೊರತೆ ಇರಲಿಲ್ಲ. ಬಹಳಷ್ಟು ಪ್ರೀತಿ-ವಿಶ್ವಾಸ ನೆಮ್ಮದಿಯಿಂದ ಬದುಕಿದ್ದ ದಿನಗಳು. ಮೇಲಿಂದ ಮೇಲೆ ಅಪ್ಪ-ಅಮ್ಮ ನನ್ನೆಡೆಗೆ ಬಂದು ಹೋಗುತ್ತಿದ್ದರು. ನಾನು ಪಾರ್ಟ್ ಟೈಮ್ ಉಪನ್ಯಾಸಕಿಯಾಗಿ ಕೇವಲ ಎರಡು ನೂರು ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದೆ. ಆಗ ನಮ್ಮ ಹತ್ತಿರ ಟು ವೀಲರ್ ಕೂಡ ಇರಲಿಲ್ಲ. ಆದರೆ
ವಿಚಿತ್ರವೆಂಬಂತೆ ಪದೇಪದೇ ನನಗೊಂದು ಕನಸು
ಬೀಳುತ್ತಿತ್ತು ಮತ್ತು ಕಾಡುತ್ತಿತ್ತು. ಅದನ್ನು ನನ್ನ ತಂದೆಯೊಂದಿಗೆ ಹಂಚಿಕೊಂಡೆ. ” ಡ್ಯಾಡಿ ಯಾಕೋ ಪದೇ ಪದೇ ಕನಸಿನಲ್ಲಿ ನಾನು ಕಾರ್ ಡ್ರೈವಿಂಗ್ ಮಾಡುತ್ತಿದ್ದೇನೆ ನಮ್ಮ ಹತ್ತಿರ ಕಾರು ಬಿಡಿ ಟು ವೀಲರ್ ಕೂಡ ಇಲ್ಲ ಅದೇಕೆ ಹೀಗಾಗುತ್ತದೆ ಗೊತ್ತಾಗುತ್ತಿಲ್ಲ ಅಂದೆ ” ಅದಕ್ಕೆ ಅವರು ನೀನು ಮುಂದೆ ಕಾರ್ ಡ್ರೈವಿಂಗ್ ಮಾಡುವವಳಿದ್ದಿ ಅದು ಒಂಥರಾ ಇಂಟ್ಯೂಷನ್…. ನಾಳೆ ನೇ
ನೀನು ಡ್ರೈವಿಂಗ್ ಕ್ಲಾಸಿಗೆ ಹಚ್ಚು ಎಂದು ನಾಲ್ಕು ಸಾವಿರ ರೂಪಾಯಿಗಳನ್ನು ತೆಗೆದು ಕೈಗಿಟ್ಟರು. ನಾನು ಕೂಡ ತಡಮಾಡದೆ ಮರುದಿವಸವೇ ಡ್ರೈವಿಂಗ್ ಕ್ಲಾಸ್ ಹಚ್ಚಿದೆ.
ಮುಂದೆ ನಡೆದದ್ದು ಮತ್ತೆ ಇತಿಹಾಸವೇ …
ಈಗ ಮನೆಯಲ್ಲಿ ಮೂರು
ಕಾರುಗಳು. ಕಳೆದ 15 ವರ್ಷಗಳಿಂದ ಡ್ರೈವಿಂಗ್ ಮಾಡುತ್ತಿದ್ದೇನೆ.
ಇದು ಕೂಡ ನನ್ನ ಅಪ್ಪನ ಕಾಣಿಕೆ.. ಹೇಗೆ ಮರೆಯಲಾದೀತು ಅದೆಲ್ಲವನ್ನು….?
ನನ್ನ ಮಾವ ಶಿವಜ್ಞಾನಿ ಪುಟ್ಟಿ ಮತ್ತು ನನ್ನ ತಂದೆ
ಇಬ್ಬರು ಬೀಗರಾದರೂ ಅವರಿಬ್ಬರಲ್ಲಿ ಒಂದು ಸಲಿಗೆ ಅನ್ಯೋನತೆ ಅವಶ್ಯಕತೆಗಿಂತ ತುಸು ಹೆಚ್ಚೇ ಇತ್ತು. ಮನೆಯಲ್ಲಿ ಅತ್ತೆ ಇಲ್ಲದ ಕಾರಣ ವಯಸ್ಸಾದ ಮಾವನ ಬಹಳಷ್ಟು ಕೆಲಸವನ್ನು ನಾನೇ ಮಾಡಬೇಕಾಗುತ್ತಿತ್ತು. ಎಷ್ಟು ಸಲ ಬೆಳಗಾವಿಗೆ ಬಂದಾಗ ನನ್ನ ತಂದೆಯವರು, “ಅಕ್ಕವ್ವ ನೀನು ಹೋಗಮ್ಮ ಕಾಲೇಜಿಗೆ, ನಾನು ನಿಮ್ಮ ಮಾವನವರಿಗೆ ಊಟ ಬಡಿಸುತ್ತೇನೆ ನಾನೇ ಚಹ ಮಾಡಿಕೊಡುತ್ತೇನೆ ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಮಗಳ ಕೆಲಸವನ್ನು ಕಡಿಮೆ ಮಾಡಿ ಕಂಫರ್ಟ್ ನೀಡಿದವರು ನನ್ನ ಡ್ಯಾಡಿ.
ಪ್ರತಿಬಾರಿಯೂ ನಮ್ಮ ತಂದೆ ಬೆಳಗಾವಿಗೆ ಬರುವಾಗ 5000 10000 ನೋಟಿನ ಕಂತೆಯನ್ನು ಇಟ್ಟುಕೊಂಡೇ ಬರುತ್ತಿದ್ದರು. ಇಲ್ಲಿ ಬಂದಾಗ ಮಗಳಿಗೆ ಮೊಮ್ಮಕ್ಕಳಿಗೆ ಹೊಸಬಟ್ಟೆ ಕೊಡಿಸುವುದು ಹೋಟೆಲುಗಳಲ್ಲಿ ಉಣಿಸುವುದು ಸಿನಿಮಾ ತೋರಿಸುವುದು ಮಾಡುತ್ತಿದ್ದರು.
ಒಂದು ಬಾರಿ ಒಂದು ಸ್ವಾರಸ್ಯಕರ ಘಟನೆ ನಡೆಯುತ್ತದೆ. ಊರಿನಿಂದ ಅವರು ಬಂದು ನಮ್ಮ ಮಾವನ
(ವಯಸ್ಸಿನಲ್ಲಿ ತುಂಬಾ ಹಿರಿಯರಾದ ಅವರನ್ನು ಅಜ್ಜ ಎಂದು ಕರೆಯುತ್ತಿದ್ದೆ) ರೂಮಿನಲ್ಲಿ ಮಲಗುತ್ತಾರೆ. ಅದೇ ರೂಮಿನಲ್ಲಿದ್ದ ನಮ್ಮ ಮಾವನ ಅಲೆಮಾರಿನಲ್ಲಿ 10000 ರೂಪಾಯಿಗಳನ್ನು ಇಡುತ್ತಾರೆ. ಮುಂದೆ ಎರಡು ದಿನದಲ್ಲಿ ಆ ದುಡ್ಡು ಕಾಣೆಯಾಗುತ್ತದೆ. ಗಾಬರಿಗೊಂಡು ನನ್ನ ತಂದೆ ನನ್ನನ್ನು ಕರೆದು *ಅಲೆಮಾರಿನಲ್ಲಿ ಇಟ್ಟಿದ್ದ ರೂಪಾಯಿ ಕಾಣುತ್ತಿಲ್ಲ 10000 ರೂಪಾಯಿಗಳನ್ನು ನಿನ್ನ ಮಾವನವರೇ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸ ತೊಡಗಿದರು, ಅದಕ್ಕೆ ಪ್ರತ್ಯುತ್ತರವಾಗಿ, ಡ್ಯಾಡಿ,”ಇಲ್ರಿ ನಮ್ಮ ಅಜ್ಜಾರು ಅಂಥವರಲ್ಲ ಅವರು ಬೇರೆಯವರ ದುಡ್ಡಿಗೆ ಆಸೆ ಮಾಡುವುದಿಲ್ಲ ನೀವು ಎಲ್ಲೋ ಇಟ್ಟು ಮರೆತಿರಿ ಗಾಬರಿಯಾಗಬೇಡಿ ನಿಧಾನವಾಗಿ ಹುಡುಕೋಣ” ಎಂದೆ. ನನ್ನ ಮಾತು ಕೇಳಿ ಅವರಿಗೆ ಸಿಟ್ಟು ಬಂತು
ಏನವ್ವ ನೀನು ನಿಮ್ಮ ಮಾವನ್ನ ಮ್ಯಾಲಗಟ್ಟತಿ
ಅಲ್ಲ ,ಅಪ್ಪನಿಗಿಂತ ಅವರು ನಿನಗೆ ಹೆಚ್ಚೇನು? ಅಂದ್ರು, ನಾನು ಏನು ಮಾತನಾಡಲಿಲ್ಲ. ಮುಂದೆ ಮರುದಿವಸ
ಅಕಸ್ಮಾತಾಗಿ ಅವರ ದೊಡ್ಡ ಏರ್ ಬ್ಯಾಗ್ ನಲ್ಲಿ ಇಟ್ಟಿದ್ದ ಡೈರಿಯಲ್ಲಿ 10000 ರೂಪಾಯಿಗಳ ಕಂತೆ ಅವರಿಗೆ ಸಿಕ್ಕಿತು. ತುಂಬಾ ಪಶ್ಚಾತ್ತಾಪ ಪಟ್ಟುಕೊಂಡು ನೀನು ಹೇಳಿದ್ಹೇ ಸರಿ ಮಗಳ, ನಾನೇ ನಿನ್ನ ಅಜ್ಜನನ್ನು ತಪ್ಪು ತಿಳಿದುಕೊಂಡಿದ್ದೆ, ಈಗಿನ ಕಾಲದಲ್ಲಿ ಅತ್ತೆ-ಮಾವ ಎಂದರೆ ಮೂಗು ಮುರಿಯುವವರೇ ಜಾಸ್ತಿ ಅಂತದ್ದರಲ್ಲಿ ನೀನು ತಂದೆಯನ್ನು ಲೆಕ್ಕಿಸದೆ ಮಾವನ ಸ್ವಭಾವವನ್ನು ಎತ್ತಿ ಹಿಡಿದೆ ನೀನು ನನ್ನ ಮಗಳು ಎಂಬ ಹೆಮ್ಮೆ ನನಗಿದೆ ಅಂದಿದ್ದರು ನಮ್ಮ ತಂದೆ, ಅದೆಲ್ಲವೂ ಈಗ ನೆನಪಾಗುತ್ತಿದೆ…..
ನೌಕರಿಗೆ ಸಂಬಂಧಪಟ್ಟಂತ ಏನೇ ಸಮಸ್ಯೆಗಳು ಇರಲಿ ನನಗೆ ಬೆನ್ನೆಲುಬಾಗಿ ಸದಾ ಬೆಂಗಾವಲಾಗಿ ಇರುತ್ತಿದ್ದರು ನನ್ನ
ತಂದೆ. ಎರಡನೆಯ ಪ್ರಮೋಷನ್ ಸಮಯ, ರೆಫ್ರೇಶರ್ ಕೋರ್ಸ ಮಾಡಿಕೊಳ್ಳಬೇಕಿತ್ತು ಹತ್ತಿರದ ಯಾವ ಯೂನಿವರ್ಸಿಟಿಯಲ್ಲಿ ಅವಕಾಶ ಸಿಗಲಿಲ್ಲ ಕೊನೆಗೆ ಪಾಂಡಿಚೇರಿ ಯೂನಿವರ್ಸಿಟಿ ಗೆ ಹೋಗುವುದು ಎಂದಾಯಿತು. ನಾನೊಬ್ಬಳೇ ಹೇಗೆ ಹೋಗಲಿ ಎಂದು ಚಿಂತೆ ಮಾಡುತ್ತ ಕುಳಿತಾಗ, ಮತ್ತೆ ಯಥಾಪ್ರಕಾರ ನನ್ನ ತಂದೆ ನಾನು ಬರುತ್ತೇನೆ ನಡೆಯಮ್ಮ
(ಆಗ ತೀವ್ರವಾದ ಮಂಡಿ ನೋವಿನಿಂದ ಬಳಲುತ್ತಿದ್ದರು) ಎಂದು ಪಾಂಡಿಚೇರಿಯ ವರೆಗೆ ನನ್ನೊಂದಿಗೆ ದೀರ್ಘ ಪ್ರಯಾಣವನ್ನು ಮಾಡಿ ನನ್ನನ್ನು ಯುನಿವರ್ಸಿಟಿಯ ಹಾಸ್ಟೆಲ್ ವರೆಗೆ ಮುಟ್ಟಿಸಿ, ಮರುದಿವಸ ರೆಫ್ರೇಶರ್ ಕೋರ್ಸ ಮೊದಲ ತರಗತಿಯಲ್ಲಿ ಚಿಕ್ಕಮಕ್ಕಳಂತೆ ನನ್ನನ್ನು ಕುಳ್ಳರಿಸಿ ಆಲ್ ದ ಬೆಸ್ಟ್ ಹೇಳಿ ಊರಿಗೆ ಮರಳಿದ್ದರು.ಇವತ್ತು ನಾನು ಅಸೋಸಿಯೇಟ್ ಪ್ರೊಫೆಸರ್ ದೊಡ್ಡ ಸಂಬಳದ ಪ್ರಾಧ್ಯಾಪಕಿ ಕಾರಣ …..
ಮತ್ತೆ ನನ್ನ ತಂದೆ.
ಇಲ್ಲಿಯವರೆಗೆ ಸಾವಿರಾರು ಘಟನೆಗಳು ನಡೆದಿವೆ,ಲೆಕ್ಕಕ್ಕೆ ಸಿಗದ ಅವರ ಸಹಾಯ.ಒಂದೇ-ಎರಡೇ ಯಾವುದನ್ನು ನೆನಪಿಸಿಕೊಳ್ಳಲಿ ಯಾವುದನ್ನು ಉಲ್ಲೇಖಿಸಲಿ ತಿಳಿಯುತ್ತಿಲ್ಲ…..
ಸಂಜೆಯಾದರೆ ಸಾಕು ದಿನಾಲು ಅಪ್ಪನಿಗೆ
ಫೋನ್ ಹಚ್ಚುತ್ತಿದ್ದೆ ವಾಕಿಂಗ್ ನೆಪಮಾಡಿ ಹೊರಹೋಗಿ ಗಂಟೆಗಟ್ಟಲೆ ಮಾತನಾಡುತ್ತಿದ್ದೆ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ
ಎಲ್ಲಾ ಘಟನೆಗಳನ್ನು ಅವರೊಂದಿಗೆ ಹಂಚಿಕೊಳ್ಳುವುದು ನಗುವುದು ಅಳುವುದು ಹರಟೆ ಹೊಡೆಯುವುದು ಆರೋಪಿಸುವುದು…..ಎಲ್ಲವನ್ನು ಮಾಡುತ್ತಿದ್ದೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡದ್ದು ನನ್ನಪ್ಪನ ಎದುರು ಮಾತ್ರ, ಯಾಕೆಂದರೆ ಆತ ನನ್ನೆಲ್ಲ ಮಾತುಗಳನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ಮತ್ತು ಸಾಂತ್ವನ
ಪರಿಹಾರ ನೀಡುತ್ತಿದ್ದ.
ಅವರೊಂದಿಗೆ ಮಾತನಾಡಿದ ನಂತರ ಮನಸ್ಸಿನ ದುಗುಡ ತುಮುಲ ಸಂಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗುತ್ತಿದ್ದವು.
ಈಗ ಬದುಕುತ್ತಿದ್ದೇನೆ ಅಪ್ಪನಿಲ್ಲದ ಬದುಕು ಆದರೆ ಅವರಲ್ಲೂ ಹೋಗಿಲ್ಲ ಇಲ್ಲೇ ಇದ್ದಾರೆ ನಮ್ಮೊಂದಿಗೆ ನಮ್ಮ ನಡೆನುಡಿಗಳಲ್ಲಿ ಮೌಲ್ಯಗಳಲ್ಲಿ ಸಿದ್ಧಾಂತಗಳಲ್ಲಿ ದೇಯ ಗಳಲ್ಲಿ ನಮ್ಮ ಕನಸುಗಳಲ್ಲಿ….
ಈಗ ಆ ಎಲ್ಲ ಅನುಭವಗಳಿಗೆ ಬೆಲೆ ಕಟ್ಟಲಾದೀತೆ ?ಇವತ್ತಿಗೂ ಏಕಾಂತದಲ್ಲಿ ಅವರನ್ನು ಎನಿಸಿಕೊಂಡು ಕಣ್ಣೀರಾಗುತ್ತೇನೆ. ಎರಡು ವರ್ಷಗಳಾಯಿತು ಅವರು ನನ್ನ ಫೋನ್ ರಿಸೀವ್ ಮಾಡುತ್ತಿಲ್ಲ….
ರಿಯಲಿ ಮಿಸ್ ಯೂ ಡ್ಯಾಡಿ
ಪ್ರೊ ವಿಜಯಲಕ್ಷ್ಮಿಮ ಪುಟ್ಟಿ