ಧಾರಾವಾಹಿ

ಆವರ್ತನ

ಅದ್ಯಾಯ-35

Novelicious on Twitter: "The blend of #absurd, #surreal and #mundane which  gave rise to the adjective #kafkaesque F Kafka #writerslife Yerka  http://t.co/G5CmQzUq5e"

ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? ಅಂತನೂ ಬಹಳ ಚಿಂತಿಸಿದೆವು. ಕೊನೆಗೆ ಒಂದು ಉಪಾಯ ಹೊಳೆಯಿತು. ಆದರೆ ಅದಕ್ಕೆ ನಿಮ್ಮದೂ ಸಂಪೂರ್ಣ ಸಹಕಾರ ಬೇಕಾಗುತ್ತದೆ. ಮಾಡಬಲ್ಲಿರಾ…?’ ಎಂದು ನಗುತ್ತ ಅಂದವರು, ‘ಹ್ಞಾಂ, ಅದನ್ನು ನೀವು ಪುಕ್ಕಟೆಯಾಗಿ ಮಾಡಬೇಕಾಗಿಲ್ಲ ರೋಹಿತರೇ. ಪ್ರತಿಫಲವಾಗಿ ನಾವೇನು ಕೊಡಬೇಕೆಂದಿದ್ದೇವೋ ಅದು ಕೂಡಲೇ ನಿಮಗೆ ದಕ್ಕುತ್ತದೆ!’ ಎಂದರು ನಯವಾಗಿ. ಆದರೆ ರೋಹಿತ್ ಒಮ್ಮೆಲೇ ಗೊಂದಲಕ್ಕೆ ಬಿದ್ದು, ‘ನನ್ನಿಂದೆಂಥ ಸಹಕಾರ ಸರ್ ನಿಮಗೆ…?’ ಎಂದು ನಕ್ಕವನು, ‘ಪರ್ವಾಗಿಲ್ಲ, ವಿಷಯ ಏನೆಂದು ಬಿಡಿಸಿ ಹೇಳಿ. ಸಾಧ್ಯವಾದರೆ ಮಾಡುತ್ತೇನೆ!’ ಎಂದ.

‘ಅಯ್ಯೋ, ಅದು ಅಂಥ ದೊಡ್ಡ ಕೆಲಸವೇನಲ್ಲ ರೋಹಿತರೇ. ನಾಡಿದ್ದು ಮಸಣದಗುಡ್ಡೆಯಲ್ಲಿ ಒಂದು ದೊಡ್ಡ ನಾಗಬನವು ನಮ್ಮ ಉಸ್ತುವಾರಿಯಲ್ಲಿಯೇ ಜೀರ್ಣೋದ್ಧಾರಗೊಳ್ಳಲಿದೆ. ಅಂದಿನ ನಮ್ಮ ವಿಶೇಷ ಪೂಜೆಯು ಸಂಪನ್ನಗೊಂಡು ಪೂರ್ಣಾಹುತಿಯಾಗುವ ಸಮಯಕ್ಕೆ ಸರಿಯಾಗಿ ನೀವೊಂದು ಏಳೆಂಟು ಅಥವಾ ಅದಕ್ಕಿಂತಲೂ ಹೆಚ್ಚಿದ್ದರೂ ಪರವಾಗಿಲ್ಲ, ದೊಡ್ಡ ದೊಡ್ಡ ನಾಗರಹಾವುಗಳನ್ನು ತಂದು ಭಕ್ತಾದಿಗಳ ನಡುವೆ ಅವರಿಗೆ ತಿಳಿಯದಂತೆ ಬಿಟ್ಟುಬಿಡಬೇಕು. ಆ ಹಾವುಗಳೆಲ್ಲ ಒಮ್ಮೆಲೇ ಜನರ ನಡುವೆ ನುಗ್ಗಿ ಎಲ್ಲರಿಗೂ ಕಾಣಿಸಿಕೊಳ್ಳಬೇಕು. ಆಗಲೇ ನಮ್ಮ ಜನರಲ್ಲಿ ನಾಗನ ಮೇಲೆ ಭಯಭಕ್ತಿ ಹೆಚ್ಚಾಗಲು ಸಾಧ್ಯ! ಜೊತೆಗೆ ಆ ವಿಷಯ ಕೂಡಲೇ ಪ್ರಚಾರವಾಗಿ ಊರಿನ ಒಂದಷ್ಟು ನಾಸ್ತಿಕರ ಬಾಯಿ ಮುಚ್ಚಿಸುವ ಕೆಲಸವೂ ಆಗುತ್ತದೆ. ಅಲ್ಲದೆ ನಾವು ನೀವು ಕೂಡಿಯೇ ಸಮಾಜದ ಧಾರ್ಮಿಕ ಸ್ವಾಸ್ಥ್ಯವನ್ನು ಕಾಪಾಡಿದಂತಾನೂ ಆಗುತ್ತದೆ. ಆದ್ದರಿಂದ ಈ ವಿಶೇಷ ಕಾರ್ಯವನ್ನು ನೀವು ಕೂಡಾ ಇದೇ ಉದ್ದೇಶದಿಂದ ಮಾಡಬೇಕು ಏನಂತೀರೀ…?’ ಎಂದು ಗುರೂಜಿಯವರು ಬಹಳ ಗಂಭೀರವಾಗಿ ಹೇಳಿದರು.

   ಗುರೂಜಿಯವರ ಪ್ರಳಯಾಂತಕ ಯೋಜನೆಯನ್ನು ಕೇಳಿದ ರೋಹಿತ್ ಗೆ ಆಘಾತಯಿತು! ಥೂ! ಈ ಮನುಷ್ಯ ಇಂಥ ವಂಚಕನೇ…? ಹಾಗಾದರೆ ಇಷ್ಟರವರೆಗೆ ಹಿಂದೂಧರ್ಮ, ದೈವ ದೇವರು, ಶಾಸ್ತ್ರ ಸಂಪ್ರದಾಯ ಅಂತೆಲ್ಲ ಸಂಭಾವಿತನಂತೆ ಮಾತಾಡಿದೆಲ್ಲ ಬರೇ ಬೊಗಳೆಯೇ…? ಇವನಂಥವರು ಇರುವವರೆಗೆ ಯಾವ ಧರ್ಮವೂ ಉದ್ಧಾರವಾಗಲು ಸಾಧ್ಯವಿಲ್ಲ. ನಾನಿವನ ಸ್ನೇಹ ಮಾಡಿದ್ದೇ ದೊಡ್ಡ ತಪ್ಪಾಯಿತು. ಈಗಿಂದೀಗಲೇ ಇವನನ್ನು ಇಲ್ಲಿಂದ ಓಡಿಸಿಬಿಡಬೇಕು ಎಂದು ಜಿಗುಪ್ಸೆಯಿಂದ ಅಂದುಕೊಂಡವನು, ‘ಓಹೋ ಇದಾ ಸರ್ ನಿಮ್ಮ ಸಮಾಜ ಸುಧಾರಣೆಯ ಹೊಸ ಉಪಾಯ? ಇದು ಬಹಳ ಮೇಲ್ಮಟ್ಟದ್ದೇ ಬಿಡಿ. ಆಯ್ತು, ಆಯ್ತು. ಈ ಸಹಾಯವನ್ನು ಖಂಡಿತಾ ಮಾಡಬಲ್ಲೆ. ಏಳೆಂಟೇನು ಬೇಕಿದ್ದರೆ ಹತ್ತು, ಹದಿನೈದು ಹಾವುಗಳನ್ನಾದರೂ ತಂದು ನೀವು ಹೇಳಿದಲ್ಲಿ ಕಣ್ಣುಮುಚ್ಚಿ ಬಿಡಬಲ್ಲೆ. ನಾಗಾರಾಧನೆಗೆ ಪ್ರಸಿದ್ಧವಾಗಿರುವ ನಮ್ಮ ಈ ಈಶ್ವರಪುರದಲ್ಲಿ, ನಾಗರಹಾವುಗಳನ್ನು ಕಂಡಕಂಡಲ್ಲಿ ಕೈಮುಗಿದು ಕಾಪಾಡುವ ಮುಗ್ಧ ಭಕ್ತರಿರುವಾಗ ಆ ಹಾವುಗಳಿಗೇನು ಕೊರತೆ ಬಿಡಿ. ಹೌದು ನೀವು ಹೇಳಿದಂತೆ ಈ ನಮ್ಮ ಕೆಲಸದಿಂದ ನಾಗಭಕ್ತರ ಸಂಖ್ಯೆಯೇನೋ ದಿಢೀರ್ ಹೆಚ್ಚಳವಾಗುತ್ತದೆ. ಅದರೊಂದಿಗೆ ನಿಮ್ಮ ಹೆಸರು ಮತ್ತು ಕೀರ್ತಿಪತಾಕೆಯೂ ಎತ್ತರೆತ್ತರಕ್ಕೆ ಹಾರಾಡತೊಡಗುತ್ತದೆ. ಅದೂ ಸಂತೋಷದ ಸಂಗತಿಯೇ! ಆದರೆ ಅದರ ನಡುವೆ ಒಂದೆರಡು ಸಣ್ಣಪುಟ್ಟ ಅನಾಹುತಗಳೂ ನಡೆಯುತ್ತವೆಯಲ್ಲ, ಅದಕ್ಕೆ ಯಾರನ್ನು ಹೊಣೆ ಮಾಡುತ್ತೀರಿ…?’ ಎಂದು ರೋಹಿತ್ ನಗುತ್ತಲೇ ಪ್ರಶ್ನಿಸಿದ. ಅವನ ವ್ಯಂಗ್ಯ ತುಂಬಿದ ಮಾತಿನಿಂದ ಗುರೂಜಿ ತುಸು ಅವಕ್ಕಾದರು. ‘ಅನಾಹುತವೇ… ಅದೆಂಥದು ರೋಹಿತರೇ…?’ ಎಂದರು ಕಳವಳದಿಂದ.

‘ಹಾಗೆ ಕೇಳಿ ಮತ್ತೇ…! ನಿಮ್ಮ ಪೂಜಾಕಾರ್ಯ ಮುಗಿದು ಮಂಗಳಾರತಿಯ ಹೊತ್ತಿಗೆ ನಾನು ಬಿಡುವ ಸರ್ಪಗಳು ಭಯದಿಂದ ಕಂಗೆಟ್ಟು ಓಡುವ ಧಾವಂತದಲ್ಲಿ ಜನರ ನಡುವೆಯೇ ನುಗ್ಗುತ್ತವಲ್ಲವೇ? ಆವಾಗ ಅವುಗಳು ಅವರ ಕಾಲ್ತುಳಿತಕ್ಕೂ ಸಿಲುಕಿ ತೀವ್ರ ಗಾಯಗೊಳ್ಳುತ್ತವೆ. ಆ ನೋವಿನಲ್ಲಿ ಅವು ಸಿಕ್ಕಸಿಕ್ಕವರನ್ನು ಕಚ್ಚುತ್ತಲೂ ತೊಡಗುತ್ತವೆಯಲ್ಲ! ಆದರೆ ಅದರಿಂದ ಹೆಚ್ಚೇನಿಲ್ಲ, ಕೆಲವು ವಯಸ್ಸಾದ ಹಿರಿಯ ನಾಗಭಕ್ತರು ಕೂಡಲೇ ನಾಗದೇವನ ಪಾದ ಸೇರಿ ಪುನೀತರಾಗುವುದು ಖಚಿತ! ಹ್ಞಾಂ, ಅದೇನೂ ದೊಡ್ಡ ವಿಚಾರವಲ್ಲ ಬಿಡಿ. ಅದಕ್ಕಿಂತ ಹೆಚ್ಚಿನ ಭಕ್ತರು ಇಹಲೋಕ ತ್ಯಜಿಸಿದಂತೆ ಮಾಡಲು ನಾವು ಮೊದಲೇ ನಾಲ್ಕೈದು ಆಂಬುಲೆನ್ಸ್ಗಳನ್ನು ತರಿಸಿಕೊಂಡು ದೂರದ ಮರೆಯಲ್ಲೆಲ್ಲಾದರೂ ನಿಲ್ಲಿಸಿಕೊಂಡರಾಯ್ತು!’ ಎಂದು ವಿಷಾದದಿಂದ ನಗುತ್ತ ಅಂದ ರೋಹಿತ್ ನ ಮಾತಿಗೆ ಗುರೂಜಿ ಝಿಲ್ಲನೆ ಬೆವರಿಬಿಟ್ಟರು. ಬಳಿಕ, ‘ಓಹೋ ಹೌದಲ್ಲವಾ…!’ ಎಂದು ಉದ್ಗರಿಸಿದರು.

‘ಅಷ್ಟೇ ಅಲ್ಲ ಸರ್, ಆ ನಂತರ ಇನ್ನೊಂದು ಮಾರಿಹಬ್ಬವೂ ನಡೆಯುತ್ತದೆ ನೋಡಿ. ಅದರ ಬಗ್ಗೆಯೂ ಸ್ವಲ್ಪ ವಿವರಿಸುತ್ತೇನೆ ಕೇಳಿ. ನಾಡಿನ ಪ್ರಸಿದ್ಧ ಧಾರ್ಮಿಕ ಪ್ರಮುಖರಾದ ಶ್ರೀ ಏಕನಾಥ ಗುರೂಜಿಯವರ ವಿಶೇಷವಾದ ಯಾಗ, ಯಜ್ಞಾದಿಗಳಿಂದ ನಾಗದೇವನು ಸಂಪೂರ್ಣ ಸಂತುಷ್ಟನಾಗಿದ್ದಾನೆ. ಆದರೂ ಅವನಿಗೆ ತಾನೇ ಭೂಮಿಗಿಳಿದು ಬಂದು ಗುರೂಜಿಯವರನ್ನೂ ತನ್ನ ಭಕ್ತಾದಿಗಳನ್ನೂ ಆಶೀರ್ವದಿಸಲು ಸಮಯದ ಕೊರತೆಯಿಂದಾಗಿ ಅವನು ತನ್ನ ಗಣಗಳನ್ನು ಕಳುಹಿಸಿಕೊಟ್ಟಿದ್ದಾನೆ. ಆ ಗಣಗಳೆಲ್ಲ ಗುರೂಜಿಯವರ ಪೂಜಾಕಾರ್ಯದ ಅಂತ್ಯದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ತಮ್ಮ ಒಡೆಯನ ಭಕ್ತಾದಿಗಳನ್ನು ಕಂಡಕಂಡಲ್ಲಿ ಹಿಡಿದ್ಹಿಡಿದು ನೀಡಿದ ವಿಷ ಪ್ರಸಾದದ ಮಹಿಮೆಗೆ ಭಕ್ತಾದಿಗಳಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಮತ್ತು ಅವರ ಮನೆಮಂದಿಯೆಲ್ಲ, ‘ಓ ನಾಗದೇವನೇ… ನಿನ್ನನ್ನು ಪೂಜಿಸಲು ಬಂದ ನಮ್ಮಂಥ ಬಡಪಾಯಿಗಳಿಗೆ ನೀನು ನೀಡುವ ಪ್ರತಿಫಲ ಇದೇನಾ…? ದಯವಿಟ್ಟು ನಮ್ಮವರನ್ನು ಕಾಪಾಡು ದೇವಾ…!’ ಎಂದು ಬೊಬ್ಬಿಡುವ ಸುದ್ದಿಯು ನೀವು ಹೇಳಿದ ಹಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರವಾಗುತ್ತದೆ. ಆಗ ಆ ಅಪರೂಪದ ವಿಚಾರವು ಪೊಲೀಸ್ ಇಲಾಖೆಗೂ ತಲುಪದಿರುತ್ತದೆಯೇ?

‘ನಾಗನ ಪೂಜೆಯ ಸಮಯದಲ್ಲಿಯೇ ಅಷ್ಟೊಂದು ಹಾವುಗಳು ಒಟ್ಟಿಗೆ ಕಾಣಿಸಿಕೊಳ್ಳುವುದೆಂದರೇನು? ಅದೂ ಕಿಕ್ಕಿರಿದ ಜನರ ಸಂದಣಿಯ ನಡುವೆಯೇ ಹಾವುಗಳು ನುಗ್ಗಿವೆ ಎಂದರೆ ಯಾರಾದರೂ ನಂಬುವ ವಿಚಾರವೇ..!?’ ಎಂದು ಪೊಲೀಸ್ ಅಧಿಕಾರಿಗಳೂ ಯೋಚಿಸುತ್ತಾರಲ್ಲವೇ. ಆಗ ಅವರಲ್ಲೂ ಆ ಕುರಿತು ಸಣ್ಣದೊಂದು ಅನುಮಾನ ಹುಟ್ಟದಿರುತ್ತದೆಯೇ? ಆಮೇಲೆ ಅವರು ಸುಮ್ಮನಿರುತ್ತಾರೆಯೇ? ಏನಿದರ ಒಳಮರ್ಮ? ಎಂದುಕೊಂಡು ಸತ್ಯಶೋಧನೆಗೆ ಹೊರಟೇ ಬಿಡುತ್ತಾರೆ. ಆಗ ಅವರಿಗೆ ಮೊದಲು ನೆನಪಾಗುವುದು ಯಾರು ಸರ್…? ನೀವು ಈಗಾಗಲೇ ಹೇಳಿದಂತೆ ಹಾವುಗಳ ವಿಷಯದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಾನೇ ಅಲ್ಲವೇ! ಅಷ್ಟಲ್ಲದೇ ಈ ಪ್ರಕರಣವು ವನ್ಯಜೀವಿ ಕಾಯ್ದೆಯಡಿಯಲ್ಲೂ ಬರುವುದರಿಂದ ಪೊಲೀಸ್ ಇಲಾಖೆಯವರು ಅರಣ್ಯಾಧಿಕಾರಿಗಳನ್ನೂ ಜೊತೆಗೂಡಿಸಿಕೊಂಡೇ ನನ್ನ ಮನೆಗೆ ನುಗ್ಗುತ್ತಾರೆ. ಆಮೇಲೇನಾಗುತ್ತದೆಯೆಂದರೆ, ಆವತ್ತು ನೀವು ಬಂದು ನನ್ನನ್ನು ಎಷ್ಟೊಂದು ಗೌರವಾದರದಿಂದ ಸನ್ಮಾನಿಸಿ ಹಣದ ಸಹಾಯವನ್ನೂ ನೀಡಿದ್ದಿರೋ ಅದೇ ಮಾದರಿಯಲ್ಲಿ ಅಲ್ಲದಿದ್ದರೂ ಎರಡೂ ಇಲಾಖೆಯವರು ಕೂಡಿ ನನ್ನ ನೆರೆಕರೆಯವರೆಲ್ಲ ಸಮ್ಮುಖದಲ್ಲಿ ತಮ್ಮದೇ ಆದ ರೀತಿಯಿಂದ ನನ್ನನ್ನು ಸತ್ಕರಿಸುತ್ತಾರೆ. ಆಗ ನನ್ನ ಈ ಘನಕಾರ್ಯದ ರೂವಾರಿಯಾದಂಥ ತಮ್ಮ ನಾಮಧೇಯವನ್ನು ನಾನವರಿಗೆ ತಿಳಿಸದೇ ಇರಲು ಸಾಧ್ಯವೇ? ಆದರೆ ಅವರು ಅಷ್ಟುಬೇಗ ನಿಮ್ಮಂಥ ದೊಡ್ಡ ಮನುಷ್ಯರ ಹೆಸರು ಹಾಳು ಮಾಡಲಿಚ್ಛುಸುತ್ತಾರೆಯೇ ಖಂಡಿತಾ ಇಲ್ಲ! ಹಾಗಾಗಿ ಅದಕ್ಕೆಲ್ಲ ಅವರು ಸಾಕ್ಷಿ, ಪುರಾವೆಗಳನ್ನೂ ಕೇಳುತ್ತಾರೆ. ಆವಾಗ ನಾನೇನು ಕೊಡಬಲ್ಲೆ ಎಂದು ನೀವೂ ಯೋಚಿಸುತ್ತಿರಬಹುದಲ್ಲವೇ? ನಾನದರ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇನೆ ಸರ್. ಏನೆಂದು ಕೇಳುತ್ತೀರಾ…? ಇಷ್ಟರವರೆಗೆ ತಾವು ನನ್ನೊಂದಿಗೆ ಮಾತಾಡುತ್ತಿದ್ದ ವಿಚಾರವನ್ನೆಲ್ಲ ಈ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ. ಹೀಗಿರುವಾಗ ಇದನ್ನು ಅವರಿಗೆ ಒದಗಿಸದೆ ಬೇರೆ ವಿಧಿ ಉಂಟಾ ಹೇಳಿ? ಆಗ ನಮ್ಮಿಬ್ಬರ ಮೇಲೂ ಜಂಟಿ ಕೇಸುಗಳು ದಾಖಲಾಗುತ್ತವೆ. ಅವು ಕೋರ್ಟು ಮೆಟ್ಟಲೇರಿ ನಮ್ಮ ಆರೋಪವೂ ಸಾಬೀತಾಗುತ್ತದೆ ಎಂದಿಟ್ಟುಕೊಳ್ಳಿ. ಆಮೇಲೆ ನಾವಿಬ್ಬರೂ ಬಳ್ಳಾರಿ ಜೈಲಿನಲ್ಲಿ ಒಟ್ಟಿಗೆ ಕುಳಿತುಕೊಂಡು ಒಂದು ಹತ್ತು, ಹದಿನಾಲ್ಕು ವರ್ಷಗಳ ಕಾಲ ಜೀವನದ ಸಕಲ ತಾಪತ್ರಯಗಳನ್ನೂ ಮರೆತು ರಾಶಿ ರಾಶಿ ತೆಂಗಿನ ಸಿಪ್ಪೆಗಳನ್ನು ಬಡಿಬಡಿದು ಹದಗೊಳಿಸಿಕೊಡುವಂಥ ಗುಡಿಕೈಗಾರಿಕೆಯಲ್ಲಿ ತೊಡಗಿಕೊಂಡು ನೆಮ್ಮದಿಯಿಂದ ಬದುಕಬಹುದು ಏನಂತೀರಿ…!?’ ಎಂದು ತಿರಸ್ಕಾರದಿಂದ ನಗುತ್ತ ಹೇಳಿದ.

   ರೋಹಿತ್ ನ ಅಷ್ಟೂ ಮಾತುಗಳನ್ನು ಚಡಪಡಿಸುತ್ತ ಕೇಳಿಸಿಕೊಂಡ ಗುರೂಜಿಯವರಿಗೆ ಕೊನೆಯಲ್ಲಿ ಕೊಂಬರ್ ಚೇಳು ಕುಟುಕಿದಷ್ಟು ವೇದನೆಯಾಯಿತು. ಜೊತೆಗೆ ಅವಮಾನದಿಂದಲೂ ಕುದಿಯುತ್ತ, ‘ಓಹೋ ರೋಹಿತರೇ, ನಮ್ಮ ಆ ಒಂದು ಸಣ್ಣ ಕಾರ್ಯದಿಂದ ಇಷ್ಟೆಲ್ಲ ತೊಂದರೆಗಳಾಗುತ್ತವಾ…? ಇದು ನಮಗೆ ಹೊಳೆದೇ ಇರಲಿಲ್ಲ ನೋಡಿ! ಹಾಗಾದರೆ ಖಂಡಿತಾ ಆ ಕೆಲಸವೇ ಬೇಡ ಬಿಡಿ’ ಎಂದು ಆತಂಕದಿಂದ ಅಂದವರು, ‘ಓ ನಾಗದೇವನೇ…! ನಮ್ಮ ತಪ್ಪನ್ನು ಕ್ಷಮಿಸಿಬಿಡಪ್ಪಾ…!’ ಎಂದು ಬಹಳ ನೊಂದವರಂತೆ ಪ್ರಾರ್ಥಿಸಿಕೊಂಡವರು ಬಳಿಕ, ‘ಏನೋ ನಮ್ಮ ಹಿರಿಯರ ನಂಬಿಕೆ ಆಚರಣೆಗಳಿಗೂ ಮತ್ತು ಈಗಿನ ಜನರಿಗೂ ಒಂದಿಷ್ಟು ಒಳ್ಳೆಯದಾಗಲಿ ಅಂತಲೇ ನಾವು ಹಾಗೆಲ್ಲ ಯೋಚಿಸಿದೆವೆಯೇ ಹೊರತು ಬೇರೆ ಯಾವ ದುರುದ್ದೇಶವೂ ನಮ್ಮಲ್ಲಿಲ್ಲ ರೋಹಿತರೇ. ಆದರೂ ನಿಮಗೆ ನಮ್ಮಿಂದ ನೋವಾಗಿದೆ. ಅದಕ್ಕಾಗಿ ದಯವಿಟ್ಟು ಕ್ಷಮಿಸಬೇಕು. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡುವ!’ ಎಂದು ಚಿಂತೆಯಿಂದ ಹೇಳಿದವರು, ‘ನಮಸ್ಕಾರ ನಾವಿನ್ನು ಹೊರಡುತ್ತೇವೆ. ಆದರೂ ನಮ್ಮ ಸ್ನೇಹ ಇನ್ನು ಮುಂದೆಯೂ ಹೀಗೆಯೇ ಇರಬೇಕೆಂದು ನಮ್ಮಾಸೆ. ಮುಂದೆ ನಮ್ಮಿಂದ ಯಾವ ಸಹಾಯ ಬೇಕಿದ್ದರೂ ಸಂಕೋಚಪಡದೆ ತಿಳಿಸುತ್ತಿರಿ. ನಾವು ಸದಾ ನಿಮ್ಮೊಂದಿಗಿದ್ದೇವೆ!’ ಎಂದು ಹೇಳಿ ಒತ್ತಾಯಪೂರ್ವಕ ನಕ್ಕು ಹೊರಡಲನುವಾದರು. ಅಷ್ಟರಲ್ಲಿ ರೋಹಿತನಿಗೇನೋ ನೆನಪಾಯಿತು. ‘ಹ್ಞಾಂ, ಸ್ವಲ್ಪ ಇರಿ ಸರ್. ಈಗ ಬಂದೆ…’ ಎಂದವನು ಒಳಗೆ ಹೋಗಿ ಮೂರು ಸಾವಿರ ರೂಪಾಯಿಗಳನ್ನು ತಂದು ಅವರ ಕೈಗಿತ್ತು, ‘ಇದು ನಿಮ್ಮ ಹಣ. ಇದರ ಅವಶ್ಯಕತೆ ನನಗೆ ಬೀಳಲಿಲ್ಲ!’ ಎಂದು ಅವರಿಗೆ ಕೊಟ್ಟು, ‘ನಮಸ್ಕಾರ ಹೋಗಿಬನ್ನಿ…!’ ಎಂದು ಕೈಮುಗಿದ. ಅದನ್ನು ತೆಗೆದುಕೊಂಡ ಗುರೂಜಿಯವರು ಅವನನ್ನೊಮ್ಮೆ ಬೇಸರದಿಂದ ದಿಟ್ಟಿಸಿ ಸರಸರನೇ ಹೊರಟು ಹೋದರು. ಆಗ ರೋಹಿತನೂ ವಿಷಾದದಿಂದ ಒಳಗೆ ನಡೆದ.

                                                                              *

ರೋಹಿತ್ನ ಸಹಾಯದಿಂದ ಮಸಣದಗುಡ್ಡೆಯ ಜೀರ್ಣೋದ್ಧಾರವನ್ನು ಊರ ಸಮಸ್ತರು ವಿಸ್ಮಯಪಡುವ ರೀತಿಯಿಂದ ಮಾಡಬೇಕೆಂದುಕೊಂಡಿದ್ದ ಗುರೂಜಿಯವರ ಉಪಾಯ ವ್ಯರ್ಥವಾಯಿತು. ಆದರೂ ಅವರು ಧೃತಿಗೆಡಲಿಲ್ಲ. ಅದಕ್ಕೆ ಬದಲಾಗಿ ಅವರ ಯೋಚನೆ ಹೀಗೆ ಹರಿಯಿತು: ಯಾವುದೇ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಮೇಲೇರಲು ಹೊರಟನೆಂದರೆ ಅವನ ವಿರುದ್ಧ ಅನೇಕ ಶತ್ರುಗಳು ಸೃಷ್ಟಿಯಾಗಿ ಅವನ ಕಾಲೆಳೆಯಲು ಪ್ರಯತ್ನಿಸುವುದು ಸಾಮಾನ್ಯ ಸಂಗತಿ. ಆದ್ದರಿಂದ ರೋಹಿತನೂ ಒಂದು ವೇಳೆ ತಮ್ಮ ಬಗ್ಗೆ ಅಪಪ್ರಚಾರ ಮಾಡಲು ಹೊರಟನೆಂದರೆ ಅವನನ್ನೂ ತಮ್ಮ ಶತ್ರುಗಳ ಪಟ್ಟಿಯಲ್ಲಿ ಸೇರಿಸಿ ತಾವೂ ಅವನ ತೇಜೋವಧೆಯನ್ನು ಮಾಡತೊಡಗಿದರಾಯ್ತು! ಎಂದು ನಿರ್ಧರಿಸಿ ಧೈರ್ಯ ತಂದುಕೊಂಡರು. ಇದಾದ ಮುಂದಿನ ತಿಂಗಳಲ್ಲಿ ಮಸಣದಗುಡ್ಡೆಯ ನಾಗಬನದ ನೂರಾರು ವರ್ಷಗಳಷ್ಟು ಪುರಾತನವಾದ ಹೆಮ್ಮರಗಳನ್ನು ನಿಷ್ಕರುಣೆಯಿಂದ ಕಡಿದುರುಳಿಸಿ ಆ ಜಾಗವನ್ನು ಸಮತಟ್ಟುಗೊಳಿಸಿ ಭವ್ಯವಾದ ನಾಗಭವನವನ್ನು ನಿರ್ಮಿಸಿ ಅದ್ಧೂರಿಯಿಂದ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿ ಮುಗಿಸಿದವರು ಆ ನಾಗಕ್ಷೇತ್ರಕ್ಕೂ ತಾವೇ ಅರ್ಚಕರು ಮತ್ತು ಮೇಲ್ವಿಚಾರಕರೂ ಆಗಿ ಅಧಿಕಾರವಹಿಸಿಕೊಂಡರು. ಪ್ರವೀಣ ಆ ಕ್ಷೇತ್ರದ ಕಜಾಂಚಿಯಾಗಿ ಮತ್ತು ಶಂಕರ ಕಾರ್ಯದರ್ಶಿಯಾಗಿ ಧಾರ್ಮಿಕ ಹುದ್ದೆಗಳನ್ನಲಂಕರಿಸಿದರು. ಆ ನಾಗಭವನವು ಪೇಟೆಗೆ ಸಮೀಪವಿದ್ದುದರಿಂದಲೂ ಮತ್ತದರ ಆಸುಪಾಸು ಸಾವಿರಾರು ನಿರಾಶ್ರಿತರೂ ಮಧ್ಯಮವರ್ಗದವರೂ ಹಾಗೂ ಬಹಳಷ್ಟು ಶ್ರೀಮಂತರೂ ವಾಸಿಸುತ್ತಿದ್ದುದರಿಂದಲೂ ಗುರೂಜಿಯವರು ಆ ನಾಗಮಂದಿರದಲ್ಲಿ ಪ್ರತಿನಿತ್ಯವೂ ಪೂಜಾ ಕೈಂಕರ್ಯಗಳನ್ನು ನಡೆಸತೊಡಗಿದರು. ಆದ್ದರಿಂದ ಈಗ ಅವರ ಕೈಯಲ್ಲಿ ಎರಡು ಬೃಹತ್ ನಾಗಬನಗಳ ಅಧಿಕಾರ ಮತ್ತು ಜವಾಬ್ದಾರಿ ಇತ್ತು. ಅದರಿಂದ ಅವರ ವರಮಾನವೂ ವೃದ್ಧಿಸತೊಡಗಿತು.

 ಆ ಬಗ್ಗೆಯೇ ಸಂತೋಷ, ನೆಮ್ಮದಿಯಿಂದ ತೇಲಾಡಿದ ಗುರೂಜಿಯವರು ಮಸಣದಗುಡ್ಡೆಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪ್ರವೀಣನನ್ನೂ ಶಂಕರನನ್ನೂ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶಾಲು ಹೊದೆಸಿ ವೈಭವದಿಂದ ಸನ್ಮಾನಿಸಿದರು. ತಮ್ಮ ಪ್ರವಚನದಲ್ಲಿ ಅವರಿಬ್ಬರ ಸಹಕಾರ ಮತ್ತು ಸಮರ್ಪಣಾಭಾವಗಳ ಕುರಿತು ಇನ್ನಿಲ್ಲದಂತೆ ಹೊಗಳುತ್ತ ಅವರಿಬ್ಬರೂ ತಾವು ಏಳೇಳು ಜನ್ಮಕ್ಕೂ ಪುನೀತರಾದಂತೆ ಭಾವಿಸಿ ಬೀಗುವಂತೆ ಮಾಡಿದರು. ಇದಾದ ಕೆಲವೇ ಕಾಲದೊಳಗೆ ಪ್ರವೀಣನ ಹುಳಕಚ್ಚಿಯೂ ಗುಣವಾಯಿತು. ಅವನು ತಾನು ನಾಗನಿಗೆ ಮಾಡಿದ ಅಪಚಾರಕ್ಕೆ ಪ್ರಾಯಶ್ಚಿತ್ತವಾಗಿ ಬನವನ್ನು ಜೀರ್ಣೋದ್ಧಾರಗೊಳಿಸಿ ಪೂಜಿಸಲಾರಂಭಿಸಿದ್ದೇ ತನ್ನ ಮನಸ್ಸಿನ ಚಿಂತೆಯ ನಿವಾರಣೆಗೂ ಮತ್ತು ಹುಳಕಜ್ಜಿ ವಾಸಿಯಾಗಲೂ ಕಾರಣ ಎಂದು ಬಲವಾಗಿ ನಂಬಿದವನು ಅದನ್ನೇ ಇತರರೊಡನೆಯೂ ಹೇಳಿಕೊಳ್ಳುತ್ತ ತಿರುಗಾಡತೊಡಗಿದ. ಆದರೆ ತನ್ನ ಹೆಂಡತಿಯು ಒತ್ತಾಯದಿಂದ ಲೇಪಿಸುತ್ತಿದ್ದ ಡಾಕ್ಟರ್ ರಾಜಾರಾಮರ ಮುಲಾಮು ಮತ್ತು ಅವಳು ಒಂದು ಹೊತ್ತೂ ಬಿಡದೆ ನುಂಗಿಸುತ್ತಿದ್ದ ಮಾತ್ರೆಗಳಿಂದಲೂ ತನ್ನ ರೋಗ ಗುಣವಾಗಿರಬಹುದು ಎಂದು ಅವನು ಒಮ್ಮೆಯೂ ಯೋಚಿಸಲಿಲ್ಲ ಮಾತ್ರವಲ್ಲ ಅದನ್ನು ಎಲ್ಲೂ, ಯಾರೊಡನೆಯೂ ಹೇಳಿಕೊಳ್ಳಲೂ ಗುರೂಜಿಯವರ ಪ್ರವಚನವು ಅವನಿಗೆ ಅವಕಾಶ ಕೊಡಲಿಲ್ಲ!

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top