ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-15

ವಿಷಾದವೊಂದು, ಬಂಧದಿಂದಲೇ ಹುಟ್ಟುತ್ತದೆ
ನೋವೊಂದು, ನಿರೀಕ್ಷೆಯಿಂದಲೇ ಹುಟ್ಟುತ್ತದೆ

ಇತ್ತು, ಈಗಿಲ್ಲ, ಯಾವ ಮಾಯೆಯ ಸತ್ಯ
ಪ್ರತಿ ಜೀವ, ಸಕಾರಣದಿಂದಲೇ ಹುಟ್ಟುತ್ತದೆ

ಸುತ್ತುಗಟ್ಟಿದ ಜಂಜಡಗಳಲಿ ಭೂತ ನರ್ತನ
ನೆಮ್ಮದಿಯ ಕಿರಣ,ನಗುವಿನಲೇ ಹುಟ್ಟುತ್ತದೆ

ಅದೆಷ್ಟು ಕಾಲದಿಂದ ಬೆಳಗುತ್ತಲೇ ಇದ್ದಾನೆ ಸೂರ್ಯ
ಒಲವಿರೆ,ಪ್ರತಿ ಬೆಳಗೂ ಹೊಸತನದಲೇ ಹುಟ್ಟುತ್ತದೆ

ಸುಲಭವಲ್ಲ ಸಮರಸದ ಜೀವನ ಯಾನ “ಮಾಧವ”
ಈಪ್ರೀತಿ ಯುಗಯುಗಕೂ ನಿನ್ನ ಹೆಸರಿನಲೇ ಹುಟ್ಟುತ್ತದೆ

ಸ್ಮಿತಾ ಭಟ್

***

\

ಪ್ರತಿ ಬೆಳಗು ಇರುಳಿನ ಮಡಿಲಿನಲ್ಲೇ ಹುಟ್ಟುತ್ತದೆ
ನಲಿವ ಮೊಳಕೆ ನೋವ ಬೇರಿನಲ್ಲೇ ಹುಟ್ಟುತ್ತದೆ

ದುಗುಡ ಕೂಪದಲ್ಲೇ ಬದುಕು ಮುಗಿಯಬೇಕಿಲ್ಲ
ಅರಳಿ ನಗುವ ಕಮಲ ಕೆಸರಿನಲ್ಲೇ ಹುಟ್ಟುತ್ತದೆ

ಪ್ರತಿಕ್ಷಣಗಳ ಪ್ರೀತಿಸುತ್ತ ಸಾಗಬೇಕಲ್ಲವೇ ಇಲ್ಲಿ
ಅಂತರಂಗದೊರತೆ ಒಲವಿನಲ್ಲೇ ಹುಟ್ಟುತ್ತದೆ

ಪ್ರತೀಕ್ಷೆಯ ದಿನಗಳು ಹಾಗೆ ಕಳೆಯುವುದಿಲ್ಲ
ಕನಸಿನ ಸಾಲು ಭರವಸೆಯಲ್ಲೇ ಹುಟ್ಟುತ್ತದೆ

‘ರೇಖೆ’ಯ ಬದುಕ ಪಯಣ ಬರೀ ಸರಳವೇನು
ಹೊಸದೊಂದು ದಿಕ್ಕು ತಿರುವಿನಲ್ಲೇ ಹುಟ್ಟುತ್ತದೆ

ರೇಖಾ ಭಟ್

*********************************

Leave a Reply

Back To Top