ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ

ಪುಸ್ತಕ ಸಂಗಾತಿ

ತರಹೀಎಂಬಹೆಜ್ಜೆಯನುಡಿಯಗೆಜ್ಜೆಯದನಿ

ಹಿರಿಯ ಗಜಲ್ಕಾರರಾದ ‘ಶ್ರೀಮತಿ. ಪ್ರಭಾವತಿ ಎಸ್. ದೇಸಾಯಿ’ ರವರು ಕನ್ನಡ ಗಜಲ್ ಸಾಹಿತ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಹಲವು ಕೃತಿಗಳನ್ನು ರಚಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಏನಗಿಂತ ಕಿರಿಯರಿಲ್ಲ ಎಂಬ ಶರಣರ ನುಡಿಯಂತೆ ನಡೆಯುತ್ತ,  ಇಳಿವಯಸ್ಸಿನಲ್ಲೂ ಹರೆಯದ ಹುಮ್ಮಸ್ಸು ತೋರುತ್ತ, ಪಕ್ವ ಮನಸ್ಸಿಗೆ ವಯಸ್ಸಿನ ಭೀತಿಯಿಲ್ಲ, ಆಸಕ್ತಿಗೆ  ಎಲ್ಲೆಗಳಿಲ್ಲ ಎಂಬುದನ್ನು “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎಂಬ ‘ತರಹೀ ಗಜಲ್’ ಗಳ ಸಂಕಲನವನ್ನು ಹೊರತರುವುದರ ಮುಖಾಂತರ  ಸಾಬಿತು ಪಡಿಸಿದ್ದಾರೆ.

“ಮೌನದ ಚೂರಿಯಿಂದಿರಿದು ಮಾಡಿದ ಗಾಯ ಎಂದು ಮಾಯದು

ಹೃದಯಕ್ಕೆ ಚುಚ್ಚಿ ಆದ ನೋವು ಅಡಗಿಸುತ್ತ ನಡೆದು ಹೋದೆ”

ಪ್ರಭಾವತಿ ದೇಸಾಯಿ ರವರು ಎಲ್ಲಿಯೂ ಹೆಜ್ಜೆ ತಪ್ಪದಂತೆ, ತುಂಬಾ ಜಾಗರೂಕತೆಯಿಂದ, ಮೂಲ ಗಜಲ್ಕಾರರ ಆಶಯಕ್ಕೆ ಚ್ಯುತಿ ಬಾರದಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾರ್ಥಕತೆಯ ಕಡೆಗೆ ನಡೆದಿದ್ದಾರೆ.

ಈಗಾಗಲೆ ಹಲವು ವರ್ಷಗಳ ಗಜಲ್ ಕೃಷಿಯ ಅನುಭವವುಳ್ಳ ಪ್ರಭಾವತಿ ರವರು ತರಹೀಗೆ ಆಯ್ದುಕೊಂಡ ಮಿಸ್ರಗಳ ಮಾದರಿಯಲ್ಲಿಯೇ ಸ್ವತಂತ್ರ ಗಜಲ್ಗಳನ್ನು ರಚಿಸಿ ಮತ್ತೊಂದು ಕೃತಿಯನ್ನು ತರಬಹುದಿತ್ತು. ಏಕೆಂದರೆ ಹತ್ತು ಹಲವು ಶೇರ್ಗಳನ್ನು ರಚಿಸುವ ಸಾಮರ್ಥ್ಯವಿರುವ ದೇಸಾಯಿರವರಿಗೆ  ಒಂದು ಮಿಸ್ರವನ್ನು ಬರೆಯುವುದು ಕಷ್ಟವೇನಲ್ಲ. ಆದರೆ ಹಾಗೆ ಮಾಡದೆ ಪ್ರಾಮಾಣಿಕತೆಯಿಂದ ತರಹೀಯನ್ನು ರಚಿಸಿರುವುದು ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ.

ಸಂಕಲನದ ಎಲ್ಲಾ ತರಹೀ ಗಜಲ್ಗಳು ಸಪ್ತ ಶೇರ್ಗಳನ್ನು ಹೊಂದಿದ್ದು, ಅವು ‘ದಾವ – ದಲೀಲ್’ ಕ್ರಮದಲ್ಲಿ, ಪ್ರಶ್ನೆಗೆ ಉತ್ತರವಾಗಿ, ನಕಾರಾತ್ಮಕ ಮತ್ತು ಸಕಾರಾತ್ಮಕವಾಗಿ, ಪರ-ವಿರುದ್ಧದ ರಚನೆಗೆ ಒಳಪಟ್ಟಿರುವುದರಿಂದ ತರಹೀಗಳಿಗೆ ಅಪ್ರತಿಮ ಶೋಭೆ ವರಿಸಿದೆ. ಇಂತಹ ಗಝಲ್ಗಳನ್ನು ಓದುವುದೇ ಒಂದು ಖುಷಿ.

ಸಾಮಾನ್ಯವಾಗಿ ತರಹೀ ಮತ್ಲಾಗಳು ಹೆಚ್ಚು ಸಶಕ್ತತೆಯಿಂದ ಕೂಡಿರುತ್ತವೆ. ಆದರೆ ಅವುಗಳಿಗೆ ಅಷ್ಟೇ ಸಶಕ್ತವಾದ ಮಕ್ತಾಗಳನ್ನು ಹೊಂದಿಸುವುದು ಕಷ್ಟವೇ ಸರಿಯಾದರೂ ಪ್ರಭಾವತಿ ದೇಸಾಯಿರವರು ‘ಪ್ರಭೆ’ ಎಂಬ ತಕಲ್ಲೂಸ್ ನಾಮವನ್ನು ಇಲ್ಲಿನ ಗಜಲ್ಗಳಲ್ಲಿ ಸಮರ್ಪಕವಾಗಿ ಬಳಸಿ, ಲೌಕಿಕತೆಯಿಂದ ಪಾರಮಾರ್ಥಿಕತೆಯೆಡೆಗಿನ, ಮೂರ್ತತೆಯಿಂದ ಅಮೂರ್ತದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗಿನ ನಡಿಗೆ, ಆಧ್ಯಾತ್ಮಿಕ ಒಲವಿನ ಹೊಳಹುಗಳನ್ನು ಕಾಣುವಂತೆ ಮಾಡುತ್ತದೆ.

ತರಹೀ ಎಂಬುದು ಭಾರತದ ನೆಲೆಯಲ್ಲಿ ಬೆಳಕು ಕಂಡ ಗಜಲ್ ಕಾವ್ಯದ ಒಂದು ಪ್ರಮುಖ ಪ್ರಕಾರವಾಗಿ ಗುರುತಿಸಿಕೊಂಡು,  ಗಜಲ್ ಗೋಷ್ಠಿ(ಮುಷಾಯಿರ)ಗಳ ಪರಂಪರೆಯಿಂದ ಬೆಳೆದು ಬಂದಿದೆ. ಮುಷಾಯಿರಗಳನ್ನು ‘ತರಹೀ ಮುಷಾಯಿರ’ (ತರಹಿ ಸಹಿತ)  ಮತ್ತು ಗೈರ್ ತರಹೀ ಮುಷಾಯಿರ’ (ತರಹೀ ರಹಿತ) ಎಂದು ಮುಖ್ಯವಾಗಿ ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಮುಷಾಯಿರಗಳು ಇಳಿ ಸಂಜೆಯ ಸಮಯದಲ್ಲಿ ಏರ್ಪಡಿಸಲಾಗುತ್ತಿತ್ತು, ಅಲ್ಲಿ ‘ಸಾಹಿಬ್-ಎ-ಮುಷಾಯಿರ’ ರ ಉಪಸ್ಥಿತಿಯಲ್ಲಿ ಗಜಲ್ ಕವಿಗಳು ಎದುರು ಬದುರಾಗಿ ಇಲ್ಲವೇ ಒಂದು ವೃತ್ತಾಕಾರದಲ್ಲಿ   ಪೆಹೇಲೂನಲ್ಲಿ  ಕುಳಿತುಕೊಳ್ಳುವ ಪದ್ಧತಿ ಇದ್ದು, ಶಮಾವನ್ನು ಬೆಳಗುವುದರ ಮುಖೇನ ಈ ತೆರನಾದ ಗಜಲ್ ಗೋಷ್ಠಿಗಳನ್ನು ಆರಂಭಿಸಲಾಗುತ್ತಿತ್ತು ಎಂಬುದು ಗಜಲ್ನ ಇತಿಹಾಸದಿಂದ ತಿಳಿದುಬರುತ್ತದೆ. ಆವೊಂದು ಗೋಷ್ಠಿಯ ಅಧ್ಯಕ್ಷನಾದವನು ಪ್ರಸಿದ್ಧ ಗಜಲ್ಕಾರರೊಬ್ಬರ ಇಲ್ಲವೇ ಸ್ವರಚಿತ ಗಜಲ್ನ ಒಂದು ಮಿಸ್ರಾವನ್ನು ಮುಷಾಯಿರದಲ್ಲಿ  ಭಾಗವಹಿಸುವ ಕವಿಗಳಿಗೆ ನೀಡುವ ಸಾಂಪ್ರದಾಯವಿದ್ದು, ಒಮ್ಮೊಮ್ಮೆ ತರಹೀ ಮಿಸ್ರವನ್ನು  ಮುಷಾಯಿರಕ್ಕೂ ಮುಂಚಿತವಾಗಿಯೇ ನೀಡಲಾಗುತ್ತಿತ್ತು! ಮತ್ತೆ ಕೆಲವೊಮ್ಮೆ ಗೋಷ್ಠಿಯ ಸಂದರ್ಭದಲ್ಲಿಯೇ ನೀಡಲಾಗುತ್ತಿತ್ತು. ಹೀಗೆ ನೀಡಲಾದ ಮಿಸ್ರವನ್ನು  ಅದು ಒಳಗೊಂಡ ಕಾಫಿಯಾಕ್ಕೆ ಹೊಂದಿಕೆಯಾಗುವಂತೆ ಹಾಗು ಮೂಲ ಗಜಲ್ಕಾರ ಬಳಸಿದ ರದೀಫನ್ನೆ ಎಥಾವತ್ತಾಗಿ, ಬೆಹರನ್ನು ಅಷ್ಟೇ ಮಾತ್ರಗಣಗಳಲ್ಲಿ, ಛಂದಸ್ಸಿನ ರೂಪದಲ್ಲಿ ಶೇರ್ಗಳನ್ನು ಪೂರ್ಣಗೊಳಿಸುವುದರ ಮೂಲಕ ಆಶಅರ್ ಗಳನ್ನು ತನ್ನದೇ ಭಾವಭಿವ್ಯಕ್ತಿಯಲ್ಲಿ ಗಜಲನ್ನು ರಚಿಸುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಯಾವ ಕವಿ ತರಹೀ ರಚಿಸಿ ತನ್ನ ಗಜಲನ್ನು ವಾಚಿಸುತ್ತಾನೊ ಆ ಕವಿಯ ಮುಂದೆ ಶಮಾವನ್ನು ಇರಿಸಲಾಗುತ್ತಿತ್ತು.

ಗಜಲ್ಕಾರನ  ಗಜಲಿಗನುಗುಣವಾಗಿ ಸಭೆಯಲ್ಲಿ ವಾಹ್… ವಾಹ್… ಎಂಬಿತ್ಯಾದಿ ಉದ್ಗಾರಗಳು ಹೊರಡುವುದು, ಆ ಸಾಲುಗಳನ್ನು ಇತರರು ಪುನರಾವರ್ತಿಸಿ ಮೆಚ್ಚುಗೆ ಸೂಚಿಸುತ್ತ ಹುರಿದುಂಬಿಸುವುದು ಇಂತಹ ಮುಷಾಯಿರಗಳಲ್ಲಿ ಸರ್ವೆಸಾಮಾನ್ಯವಾದ ಸಂಗತಿಯಾಗಿತ್ತು. ಹೀಗೆ ಸರತಿಯಲಿ ಮುಷಾಯಿರ ಜಾರಿಯಲ್ಲಿರುತ್ತಿತ್ತು. ಈ ತೆರನಾಗಿ ಎರವಲು ಪಡೆದ, ಪ್ರಭಾವಿಸಿದ ಒಂದು ಮಿಸ್ರದಿಂದ ಹತ್ತು ಹಲವು ಗಜಲ್ಗಳು ಏಕಕಾಲದಲ್ಲಿ ರಚನೆಯಾಗುತ್ತಿದ್ದದ್ದು ನಿಜಕ್ಕೂ  ಪ್ರಸಂಶನೀಯ ಸಂಗತಿ. ಹೀಗೆ ಅಲ್ಲೊಂದು ರಸಕಾವ್ಯ ಸಂಜೆಯ ಮಾಹೋಲ್ ಸೃಷ್ಟಿಯಾಗುತ್ತಿತ್ತು!

ಹಲವು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ತರಹೀ ಗಜಲ್ ಮುಷಾಯಿರ ಸಂಸ್ಕೃತಿ ಮೊಘಲರ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಹೇಳಬಹುದು. ಈ ತೆರನಾದ ಮುಷಾಯಿರಗಳನ್ನು ಆಯೋಜಿಸಲು ಪ್ರಮುಖ ಕಾರಣಗಳೆಂದರೆ, ಗಜಲ್ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಮುಖೀನ ಪ್ರೋತ್ಸಾಹಿಸುವುದರೊಂದಿಗೆ, ಸಮಕಾಲೀನ ಗಜಲ್ಕಾರರಲ್ಲಿ ಸಹೃದಯ ಮನೋಭಾವನೆಯನ್ನು ಹಾಗು ಸಮಾನ ಮನಸ್ಕತೆಯನ್ನು ಬೆಳೆಸುವುದರ ಜೊತೆಗೆ, ಗಜಲ್ ಕವಿಗಳ ನಡುವಿನ ಅಂತರವನ್ನು  ಮತ್ತು ಮನಸ್ತಾಪಗಳನ್ನು ಕಡಿತಗೊಳಿಸುವುದರೊಂದಿಗೆ ಅವರ ನಡುವೆ ಸ್ನೇಹದ ವಾತಾವರಣವನ್ನು ಸೃಷ್ಟಿಸಿ ಆರೋಗ್ಯಕರವಾದ ಸ್ಪರ್ಧೆ ಏರ್ಪಡುವಂತೆ ನೋಡಿಕೊಳ್ಳುವುದಾಗಿತ್ತು. ಆದರೆ ಕೆಲವೊಮ್ಮೆ ಇಂತಹ ಮುಷಾಯಿರಗಳಿಂದಲೇ ಮೇಲಿನ ಅಂಶಗಳಿಗೆ ವಿರುದ್ಧವಾದ ನಡೆಗೆ ಕಾರಣವಾಗುತ್ತಿತ್ತು ಎನ್ನಲಾಗುತ್ತದೆ.

ಇಂತಹ ಗಜಲ್ ಗೋಷ್ಠಿಗಳು ಶ್ರೇಷ್ಠತೆಯ ಸಂಕೇತಗಳಾಗಿ ಅಂದಿನ ಸಮಾಜದಲ್ಲಿ ಬಿಂಬಿತವಾಗುತ್ತಿದ್ದವು. ಹಾಗೆಯೇ ಇದರೊಂದಿಗೆ ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟವಾದ ಪಾನೀಯಗಳು ಹಾಗು ಭೋಜನಕೂಟಗಳನ್ನು ಸಹ ಅಯೋಜಿಸುವುದರೊಂದಿಗೆ ಕವಿಗಳನ್ನು ಸತ್ಕರಿಸಲಾಗುತ್ತಿತ್ತು. ಹೆಚ್ಚಿನ ಮಟ್ಟಿಗೆ ಆಸ್ಥಾನದ ಕವಿಗಳಿಂದಲೇ ಮುಷಾಯಿರಗಳನ್ನು ಜರುಗಿಸುತ್ತಿದ್ದದ್ದು ಇದೆ.

ಇಲ್ಲಿ ‘ತರಹೀ ಎಂದರೆ’ ಪದಶಃ ಅದೇ ತರಹದ, ಆ ಮಾದರಿಯ ಅಥವಾ ಆ ಪ್ರಕಾರದ ಎಂದು ಸರಳಿಕರಿಸಬಹುದಾಗಿದೆ. 

ತರಹೀ ಗಜಲನ್ನು ರಚಿಸ ಬಯಸುವವರು ಆಯ್ದುಕೊಳ್ಳುವ ಮಿಸ್ರಾದೊಂದಿಗೆ ಮೂಲ ಗಜಲ್ಕಾರನ ಹೆಸರನ್ನು ಉಲ್ಲೇಖಿಸುವುದರೊಂದಿಗೆ ಗೌರವ ಸಲ್ಲಿಸುವ, ಸ್ಮರಿಸುವ ಪರಂಪರೆಯೂ ಜಾರಿಯಲ್ಲಿರುವುದನ್ನು ಕಾಣುತ್ತೇವೆ. ಇಂತಹ ಒಂದು ವಿಶಿಷ್ಟವಾದ, ಅಪರೂಪವಾದ ಪರಂಪರೆ ಬೇರೆಲ್ಲೂ ಕಾಣಸಿಗುವುದಿಲ್ಲ! ಹಾಗಾಗಿ ತರಹೀ ಗಜಲ್ ಅದರದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

“ಗಾಲಿಬ್ ತೇರಿ ಜಮೀನ್ ಮೆ ಲಿಖಿ ತೊ ಹೈ ಗಜಲ್

ತೇರೆ ಕದ್-ಎ-ಸುಖ ಕೆ ಬರಾಬರ್ ನಹೀ ಹುಂ ಮೈ”

ಒಬ್ಬ ಕವಿಯನ್ನು ಮತ್ತೊಬ್ಬ ಕವಿ, ಆತನ ಕಾವ್ಯದ ಸಾಲಿನೊಂದಿಗೆ ನೆನೆಯುವ, ಗೌರವ ಸೂಚಿಸುವ, ಪ್ರೀತಿ ವ್ಯಕ್ತಪಡಿಸುವ ಪರಿ ನಿಜಕ್ಕೂ ಅದರಣೀಯವಾದಂತಹುದು.

“ಕವಿಯಾದವನು ತನ್ನದೇ ಅದ ದಾರಿಯೊಂದನ್ನು ಆಯ್ಕೆ ಮಾಡಿಕೊಂಡು ನಡೆದು ಹೆಜ್ಜೆ ಗುರುತುಗಳನ್ನು ಬಿಟ್ಟು ಸಾಗಿರುತ್ತಾನೆ; ಅಂತಹ ಹೆಜ್ಜೆಗುರುತುಗಳನ್ನು ಬಳಸಿ ಮತ್ತೊಬ್ಬ ಕವಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವ ಪ್ರಯತ್ನವೇ ತರಹೀ ಎಂದು ವ್ಯಾಖ್ಯಾನಿಸಬಹುದು.”

ಇಲ್ಲಿ ಮೀರುವುದಕ್ಕೆ ಅವಕಾಶಗಳಿದ್ದರೂ ಸಹ ವಿನಮ್ರತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅದು ಗೌರವದ ಪ್ರತೀಕವಾಗಿದೆ.

ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಇಡಿಯಾಗಿ ಯಾರೂ ಈವರೆಗೆ ಒಂದು ತರಹೀ ಗಜಲ್ ಸಂಕಲನವನ್ನು ತರದಿರುವುದು ಅಚ್ಚರಿ ಮೂಡಿಸುತ್ತದೆ. ‘ಶ್ರೀ. ಗಿರೀಶ್ ಜಕಾಪುರೆ’ ರವರು ಪ್ರಪ್ರಥಮವಾಗಿ ಕನ್ನಡದಲ್ಲಿ ತರಹೀ ಗಜಲ್ ಸಂಕಲನವನ್ನು ತಂದು, ಇಂತಹದ್ದೊಂದು ಪ್ರಯೋಗ ಮಾಡಿ ಯಶಸ್ವಿಯೂ ಆಗಿರುವುದು ಹೆಮ್ಮೆಯ ಸಂಗತಿ.

ಗುರು – ಶಿಷ್ಯ(ಉಸ್ತಾದ್ – ಶಾಗಿರ್ದ್)ರ  ಪರಂಪರೆಯಲ್ಲಿ ತರಹೀ ಪ್ರಕಾರಕ್ಕೆ ಪ್ರಮುಖ ಸ್ಥಾನವಿದೆ. ಗುರು ಎನಿಸಿಕೊಂಡವನು ತನ್ನ ಶಿಷ್ಯನಿಗೆ ಪ್ರಸಿದ್ಧ ಗಜಲ್ಕಾರರ  ಮಿಸ್ರವೊಂದನ್ನು ನೀಡುವುದರ ಮುಖಾಂತರ ತರಹೀ ರಚಿಸಲು, ಅದನ್ನು ಕಲಿಕೆಯ ವಸ್ತುವಾಗಿಸಿ ಬಳಸಿರುವುದು, ಹಿರಿಯ ಗಜಲ್ಕಾರರನ್ನು ಮಟ್ಟ ಅವರ ಕಲಾಂನ್ನು ಆ ಮೂಲಕ ಪರಿಚಯಿಸುವುದು, ಅರ್ಥೈಸುವುದು, ಆ ನಿಟ್ಟಿನಲ್ಲಿ ಗಜಲ್ಗಳನ್ನು ರಚಿಸಲು ಪ್ರೋತ್ಸಾಹಿಸುವ ಪದ್ಧತಿ ಪೂರ್ವದಲ್ಲಿ ಇತ್ತಾದರೂ ಕಾಲಚಕ್ರ ಉರುಳಿದಂತೆ ಈ ತೆರನಾದ ಗುರು ಶಿಷ್ಯ ಪರಂಪರೆ, ಕಲಿಕೆ ನಿಷ್ಕ್ರಿಯಗೊಂಡಿದೆ. ತಿದ್ದಿ ಕಲಿಸುವ(ಇಸ್ಲಾಹ್) ಸಮರ್ಥ ಗುರುವಿಲ್ಲದ ಕಾರಣಕ್ಕೆ , ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಹಲವಾರು ಕಲಿಕಾರ್ಥಿಗಳು ಈ ದಿನಗಳಲ್ಲಿ  ಗೊಂದಲಗಳಿಗೆ ಒಳಗಾಗಿ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವಿಲ್ಲದೆ ಗಜಲ್ನ ಅಮಲೇರಿಸಿಕೊಂಡವರಂತೆ ನಿಯಮ ಬಾಹಿರವಾಗಿ, ಮೃದುತವಿಲ್ಲದೆ, ಗೇಯತೆ ತರದೆ, ಮಾತ್ರಗಣಗಳ ತಿಳುವಳಿಕೆ ಇಲ್ಲದೆ, ‘ನಾವು ಬರೆದದ್ದೆ ಸರಿ’ ಎನ್ನುವ ಮನೋಧೋರಣೆಯಲ್ಲಿ ಕುರುಡಾಗಿ ಸಾಗುತ್ತಿರುವುದು ಗಜಲ್ ಕಾವ್ಯ ಪ್ರಕಾರದ ಬೆಳವಣಿಗೆಗೆ ಮಾರಕವಾಗಿದೆ. ಕನ್ನಡದಲ್ಲಿ ಗುರುಶಿಷ್ಯರ ಈವೊಂದು ಪರಂಪರೆಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರದಾಗಿದೆ.

“ಎಲ್ಲಾ ಬಲ್ಲವರಿಲ್ಲ, ಬಲ್ಲವರೂ ಬಹಳಿಲ್ಲ.”

ಗಜಲ್ ಕಲಿಕಾರ್ಥಿ ಆದವನು ಮೊದಲು ಸಮರ್ಥ ಗುರುವನ್ನು ಹುಡುಕಿಕೊಳ್ಳಬೇಕು. ಗುರುವಿನ ಗುಲಾಮನಾಗುವ ತನಕ ಸಿಗದು ಮುಕ್ತಿ ಎಂಬ  ದಾಸಶ್ರೇಷ್ಠರ ನುಡಿಯಂತೆ, ಗುರುವಿನ  ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಬೇಕು. ಆಗ ಮಾತ್ರ ಯಾವ ಗೊಂದಲಗಳಿಲ್ಲದೆ ಕಲಿಕೆ ಸುಗಮವಾಗಿ ಸಾಗಬಲ್ಲದು. ಆದರೇ ಇಲ್ಲಿ ದ್ರೋಣಾರ್ಜುನರು ಕಡಿಮೆ, ಏಕಲವ್ಯರೆ ಹೆಚ್ಚು ಎಂಬಂತಾಗಿದೆ.

ಕಲಿಕಾರ್ಥಿಯೊಬ್ಬ ಸಮರ್ಥ  ಗುರುವನ್ನು ಹುಡುಕಿಕೊಳ್ಳುವ ಅಗತ್ಯವಿರುವಂತೆ, ಅದೇ ರೀತಿಯಲ್ಲಿ  ಗುರುವು ಸಹ ತನ್ನ ಜ್ಞಾನವನ್ನು ಧಾರೆ ಎರೆಯಲು ಸೂಕ್ತ ಶಿಷ್ಯನೊಬ್ಬನನ್ನು ಆಯ್ದುಕೊಳ್ಳುವ ಅವಶ್ಯಕತೆಯು ಇದೆ. ಹೀಗೆ ಗುರುವೊಬ್ಬ ಎಷ್ಟು ಮಂದಿ ಶಿಷ್ಯರನ್ನಾದರು ಆಯ್ದುಕೊಳ್ಳುವ ಸಾಮರ್ಥ್ಯ ಒಬ್ಬ ಗುರುವಿಗಿರುತ್ತದೆ.

ತರಹೀ ಮಿಸ್ರದ ಆಯ್ಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದನ್ನು ಕಾಣುತ್ತೇವೆ. ಹೆಚ್ಚಿನ ಮಟ್ಟಿಗೆ  ಮತ್ಲಾದ ಮಿಸ್ರಗಳನ್ನೆ ತರಹೀ ರಚನೆಗೆ ಆಯ್ಕೆ ಮಾಡಿಕೊಳ್ಳುವುದಿದೆ. ಹಾಗೆಯೇ ಗಜಲ್ನ ಯಾವುದಾದರೂ ಮಿಸ್ರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವೂ ಸಹ ಇದ್ದೆ ಇದೆ. ಅಷ್ಟೇ ಅಲ್ಲದೆ, ಗಜಲ್ನ ಹೊರತಾಗಿ ನಜಮ್, ನಾತ್ ಮತ್ತಿತರೆ ಕಾವ್ಯ ಪ್ರಕಾರಗಳಿಂದಲೂ ತಮ್ಮನ್ನು ಪ್ರಭಾವಿಸಿದ ಇಲ್ಲವೇ ಇಷ್ಟವಾದ ಸಾಲುಗಳನ್ನು ತರಹೀಗೆ ಆಯ್ಕೆ ಮಾಡಿಕೊಂಡು ಗಜಲ್ ರಚಿಸಿದವರು, ರಚಿಸುವವರೂ ಇದ್ದಾರೆ.

ತರಹೀ ರಚಿಸುವವರು ಆಯ್ಕೆ ಆಡಿಕೊಂಡ ಮಿಸ್ರವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದು ಜಿಜ್ಞಾಸೆಯಾಗಿ ಮಾರ್ಪಟ್ಟಿದೆ. ಸರ್ವೆ ಸಾಮಾನ್ಯವಾಗಿ ಆಯ್ಕೆಯ ಮಿಸ್ರವನ್ನು ತರಹೀ ಗಜಲ್ಕಾರ ತನ್ನ ಗಜಲ್ನ ಮತ್ಲಾದ ಸಾನಿ ಮಿಸ್ರವಾಗಿಸಿ ಬರೆಯುವುದು ವಾಡಿಕೆಯಲ್ಲಿದೆ. ಆದರೆ ಅದನ್ನು ಉಲಾ ಮಿಸ್ರವಾಗಿಸಬೇಕು ಎಂಬುದು ಕೆಲವರ ವಾದವಾಗಿದೆ.

ಗಜಲ್ ಸಾಧಕರಾದ ‘ಅಲ್ಲಮ’ ಗಿರೀಶ್ ಜಕಾಪುರೆ ರವರು ಹೇಳುವಂತೆ, ತರಹೀ ರಚಿಸುವ ಗಜಲ್ಕಾರನ ಮಿಸ್ರ, ತರಹೀಗೆ ಆಯ್ಕೆ ಮಾಡಿಕೊಂಡ ಮಿಸ್ರಕ್ಕಿಂತ ಉತ್ಕೃಷ್ಟವಾಗಿದ್ದರೆ  ಅದನ್ನು ಉಲಾ ಮಿಸ್ರವಾಗಿ ಹಾಗು ತರಹೀ ಮಿಸ್ರವನ್ನು ಸಾನಿ ಮಿಸ್ರವಾಗಿಸಿ ಬಳಸುವುದು ಸೂಕ್ತ ಎಂದಿದ್ದಾರೆ. ಇದಲ್ಲದೆ, ತರಹೀ ಸಾಲನ್ನು ಗಜಲಿನ ಅಶಆರ್ ಗಳಲ್ಲಿ ಹಾಗೂ ಮಕ್ತಾದಲ್ಲೂ ಬಳಸುವವರನ್ನು ಸಹ ಕಾಣಬಹುದು. ಹಾಗಾಗಿಯೇ ಇದೊಂದು ಎಂದಿಗೂ ಬಗೆಹರಿಯದ ಸಮಸ್ಯೆಯಾಗಿ/ಗೊಂದಲವಾಗಿ ಪರಿಣಮಿಸಿದೆ.

ಗಜಲ್ಕಾರನೊಬ್ಬ ಮತ್ತೊಬ್ಬ ಗಜಲ್ ಕವಿಯ ಮಿಸ್ರದ ಪ್ರಭಾವದಿಂದ ತರಹೀ ರಚಿಸಲು  ಯಾರ ಪರವಾನಾಗಿಯನ್ನು ಪಡೆಯುವ ಅವಶ್ಯಕತೆ ಇಲ್ಲ. ಆದರೆ ಮೂಲ ಕವಿಯ ಹೆಸರನ್ನು ಉಲ್ಲೇಖಿಸುವುದರ ಮೂಲಕ ಗೌರವ ಸೂಚಿಸುವುದು ತರಹೀ ಪರಂಪರೆಯ ಅದರ್ಶವಾಗಿದೆ. ಆದರೆ ಈ ಪರಂಪರೆಯನ್ನು ಕನ್ನಡದ ಗಜಲ್ಕಾರರು ಅಷ್ಟಾಗಿ ಸ್ವಾಗತಿಸಿದಂತೆ ಕಾಣುವುದಿಲ್ಲ. ಏಕೆಂದರೆ ಕನ್ನಡದ ಕೆಲವು ಗಜಲ್ಕಾರರು ತಮ್ಮ ಸಾಲನ್ನು ಕೇಳದೆ ಬಳಸಿದರೆಂದು, ಬಳಸುವ ಮೊದಲು ಅನುಮತಿ ಪಡೆಯ ಬೇಕಾಗಿತ್ತೆಂದು (ಮೂಲ ಕವಿಯ ಹೆಸರನ್ನು ಉಲ್ಲೇಖಿಸಿದ್ದರೂ ಸಹ), ನೀವು ನನ್ನ ಮಿಸ್ರಕ್ಕೆ ತರಹೀ ಬರೆಯಕೂಡದೆಂದು ನಿರ್ಬಂಧ ಹೇರುವ, ಆಕ್ಷೇಪ ವ್ಯಕ್ತಪಡಿಸುವ, ಕೃತಿಚೌರ್ಯದ ಪಟ್ಟ ಕಟ್ಟಿ ಹಿಯಾಳಿಸುವ ಇಂತಹ ಕಹಿ ಅನುಭವಗಳನ್ನು ಕೆಲವು ಗಜಲ್ಕಾರರು ನೊಂದ ಮನಸ್ಸಿನಿಂದ ಗಜಲ್ ಗುಂಪುಗಳಲ್ಲಿ ಹೇಳಿಕೊಂಡಿರುವುದು, ಚರ್ಚೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ವಿಷಾದ ಅನುಭವದಿಂದ ನಾನು ಸಹ ಹೊರತಾಗಿಲ್ಲ. ಹಾಗಾಗಿ ಇಂತಹ  ಅನುಭವಕ್ಕೆ ಮುಖಾಮುಖಿಯಾದವರು ತರಹೀ ಗಜಲ್ ರಚಿಸುವತ್ತ ಆಸಕ್ತಿಯನ್ನು ಕಳೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ. ಮತ್ತೆ ಕೆಲವರು ಉರ್ದು/ಹಿಂದಿ ಭಾಷೆಯ ಗಜಲ್ಗಳಿಂದ ತಮಗೆ ಇಷ್ಟವಾದ ಸಾಲನ್ನು ಕನ್ನಡಕ್ಕೆ ಅನುವಾದಿಸಿಕೊಂಡು ತರಹೀ ರಚಿಸುವತ್ತ ತಮ್ಮದೇ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ಈ ತೆರನಾದ ಅನುವಾದಗಳಿಂದ ಮೂಲ ಕಾಫಿಯಾ ಮತ್ತು ರದೀಫ್ ಗಳಿಗೆ ನ್ಯಾಯ ಒಡಗಿಸಲಾರೆವೂ ಅನಿಸುತ್ತದೆ.

—- ಇನ್ನು ಮುಂದಾದರು ತರಹೀ ರಚನೆಗೆ ತೆರೆದ ಬಾಗಿಲಾಗಿ ಮುಕ್ತ ಅವಕಾಶಗಳು ಸೃಷ್ಟಿಯಾಗಿ, ಇಂತಹದ್ದೊಂದು ವಿಶಿಷ್ಟವಾದ ಗಜಲ್ ಪ್ರಕಾರ ಭವಿಷ್ಯತ್ತಿಗೆ ದಕ್ಕಲಿ.

ಹಲವರಿಗೆ ಗುರು ಸ್ಥಾನದಲ್ಲಿರುವ ‘ಶ್ರೀಮತಿ. ಪ್ರಭಾವತಿ ಎಸ್.ದೇಸಾಯಿ’ ರವರ, “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎಂಬ ಕೃತಿ ಇಷ್ಟೆಲ್ಲಾ ಪ್ರಸ್ತಾವನೆಯನ್ನು ಬರೆಸಿತು. ಒಂದು ಕೃತಿಗಿರುವ ತಾಕತ್ತು ಅದು. ಕೃತಿಯೊಂದು ಓದುಗನನ್ನು ಚಿಂತನೆಗೆ ಹಚ್ಚಿದಾಗಲೆ ಅದು ಸಾರ್ಥಕತೆಯನ್ನು ಪಡೆದುಕೊಳ್ಳುವುದು. ಪ್ರಸ್ತುತ ತರಹೀ ಗಜಲ್ಗಳ ಸಂಕಲನಕ್ಕೆ  ಅಪಾರ ಅಧ್ಯಯನಶೀಲರಾದ ಶ್ರೀ. ‘ಅಲ್ಲಮ’ ಗಿರೀಶ್ ಜಕಾಪುರೆ ರವರ ವಿಸ್ತೃತವಾದ ಹಾಗೂ ವಿವರಣಾತ್ಮಕವಾದ ಮುನ್ನುಡಿ ವಸ್ತುನಿಷ್ಠತೆಯಿಂದ ಕೂಡಿದ್ದು, ಗಹನವಾದ ವಿಚಾರಗಳನ್ನು ಒಳಗೊಂಡಿದ್ದು  ಗಜಲ್ ಕಲಿಕಾರ್ಥಿಗಳ ಪಾಲಿಗೆ  ಕೈಪಿಡಿಯಾಗಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಮುನ್ನಡಿಕಾರ ಕೇವಲ ಕೃತಿಯ ಕುರಿತಾಗಿ ಬರೆಯದೆ, ಕೃತಿಯ ಮುಖ್ಯ ದ್ರವ್ಯದ ಬಗೆಗಿನ ಅನುಸಂಧಾನ ನಡೆಸಿರುವುದು ಓಡುಗನಲ್ಲಿ ಬೆರಗು ಹುಟ್ಟಿಸುತ್ತದೆ. ಅದರಿಂದಾಗಿಯೇ “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಕೃತಿಗೆ ಒಂದು ಘನತೆ  ಪ್ರಾಪ್ತವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. 

ಪ್ರಸ್ತುತ ಸಂಕಲನದಲ್ಲಿ ಅನುಭವಿಗಳಾದ ಪ್ರಭಾವತಿ ದೇಸಾಯಿ ರವರು ತರಹೀಗೆ ಸೂಕ್ತವಾದ ಮಿಸ್ರಗಳ ಆಯ್ಕೆಯಿಂದಲೇ ಗೆದ್ದಾಗಿದೆ.ಈ ಆಯ್ಕೆ ಅವರ ಪ್ರಬುದ್ಧ ಮನಸ್ಥಿತಿಗೆ ಸಾಕ್ಷಿಪ್ರಜ್ಞೆಯಾಗಿದೆ.

ಕನ್ನಡ ಗಜಲ್ ಪಿತಾಮಹರಾದ  ‘ಡಾ. ಶಾಂತರಸ ಹೇಂಬೆರಳಾದಿಯಾಗಿ, ಜಾoಪಣ್ಣ ಆಶೀನಾಳದ ರವರೆಗೆ ಎಪ್ಪತ್ನಾಲ್ಕು ತರಹೀ ಗಜಲ್ಗಳನ್ನು, ಹಿರಿಯ ಕಿರಿಯರೆಂಬ ಬೇಧವಿಲ್ಲದೆ, ತಮಗೆ ಇಷ್ಟವಾದ ಸಾಲಿಗೆ ತರಹೀ ರಚಿಸುವುದರ ಮೂಲಕ  ಅವರ ಹೆಸರುಗಳನ್ನು ಉಲ್ಲೇಖಿಸಿ ಎಲ್ಲಾ ಗಜಲ್ಕಾರರಿಗೂ ಗೌರವದೊಂದಿಗೆ ನ್ಯಾಯ ಒದಗಿಸಿದ್ದಾರೆ ಎಂಬುದು ಅವರ ತರಹೀ ಗಜಲ್ಗಳಿಂದಲೇ ಮನದಟ್ಟಾಗುತ್ತದೆ. ಮೊಮ್ಮಕ್ಕಳಿಬ್ಬರ ಮುಖಪುಟ ಹಾಗು ಒಳ ಚಿತ್ರಗಳ ಆಯ್ಕೆಯೊಂದಿಗೆ ಮನಕೆ ಮುತ್ತಿಗೆ ಹಾಕುವ “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಶೀರ್ಷಿಕೆ, ತರಹೀ ಸಂಕಲನಕ್ಕೆ ಅರ್ಥಪೂರ್ಣವಾಗಿದ್ದು, ಇಂತಹ ವಿನೂತನ ಪ್ರಯೋಗಕ್ಕೆ  ಅಣಿಮಾಡಿಕೊಂಡು, ಕನ್ನಡ ಗಜಲ್ ಲೋಕಕ್ಕೆ ಎರಡನೆಯ  ತರಹೀ ಗಜಲ್ ಸಂಕಲನವನ್ನು ಕೊಡುಗೆಯಾಗಿ ನೀಡಿದ ಶ್ರೀಮತಿ. ಪ್ರಭಾವತಿ ದೇಸಾಯಿರವರಿಗೆ ಶುಭಕೋರುತ್ತ ನನ್ನ ಲೇಖನಿಗೆ ವಿಶ್ರಾಂತಿ ನೀಡುವ ಸಮಯ ಸನ್ನಿಹಿತವಾಗಿದೆ.

ಉಪಸಂಹಾರ:

ಬರಹ ಸುದೀರ್ಘವಾದ ಕಾರಣ ಯಾವುದೇ ಶೇರ್ಗಳನ್ನು ಉಲ್ಲೇಖಿಸಿಲ್ಲ. ಒಂದು ಉತ್ತಮ ಕೃತಿಯನ್ನು ಶ್ರದ್ಧೆಯಿಂದ ರಚಿಸಿ, ಪ್ರೀತಿಯಿಂದ ಕಳುಹಿಸಿ, ಕುತೂಹಲದಿಂದ ಓದಿಸಿ, ಚಿಂತನೆಗೆ ಹಚ್ಚಿದ ನಿಮಗೆ ಅಸದ್ ನ ಪ್ರಣಾಮಗಳು.

**********************

ಜಬೀವುಲ್ಲಾ ಎಮ್. ಅಸದ್

Leave a Reply

Back To Top