ಗಜಲ್
ಎ. ಹೇಮಗಂಗಾ
ಕೈ ಬೀಸಿ ಕರೆವ ಮಧುಶಾಲೆಯತ್ತ ನಾನಿನ್ನು ಬರಲಾರೆ ಸಾಕಿ
ಮತ್ತೇರಿಸುವ ಮಧು ಬಟ್ಟಲಿಗೆ ನಾನಿನ್ನು ಬೇಡಲಾರೆ ಸಾಕಿ
ತಿಳಿಯಾದ ಮನದ ಕೊಳವೇಕೋ ರಾಡಿಯೆದ್ದು ಹೋಗಿದೆ
ಕಹಿನೆನಪ ವಿಷವ ನನಗೇ ನಾನಿನ್ನು ಉಣಿಸಲಾರೆ ಸಾಕಿ
ಒಲವ ವೀಣೆ ನುಡಿಸಿದವಳು ಹೇಳದೇ ಹೋದುದೆಲ್ಲಿಗೆ
ಒಡೆದ ನಂಬಿಕೆ ಕನ್ನಡಿ ನಾನಿನ್ನು ಜೋಡಿಸಲಾರೆ ಸಾಕಿ
ಇರುಳ ಏಕಾಂತವಿಂದು ದುರ್ಭರವೆನಿಸದೇ ಹಿತ ನೀಡಿದೆ
ರಸಘಳಿಗೆಗಳ ಕನಸಲ್ಲೂ ನಾನಿನ್ನು ನೆನೆಯಲಾರೆ ಸಾಕಿ
ನಡೆವ ಹಾದಿಗೆ ಬೆಳಕು ನಿಚ್ಚಳವಾಗಿ ಗೋಚರಿಸುತ್ತಿದೆ
ಜೀವಂತ ಶವವಾಗಿ ದಿನಗಳ ನಾನಿನ್ನು ದೂಡಲಾರೆ ಸಾಕಿ
***************